ಹೆಸರಿನಿಂದೇನಾಗುತ್ತೆ…!?

ಹೆಸರಿನಿಂದೇನಾಗುತ್ತೆ…!?
ಒಂದೇ ದಿನದಲ್ಲಿ ಮುಗಿಸಬೇಕಾದ ಅಫೀಸಿನ ತುರ್ತು ಕೆಲಸವೊಂದು ನನ್ನ ಹೆಗಲಿಗೇರಿತ್ತು. ಅದೂ ಎಪ್ಪತ್ತು ಕಿ.ಮೀ. ಅಂತರದ ಎರಡು ನಗರಗಳ ಸರ್ಕಾರಿ ಕಚೇರಿಯಲ್ಲಿ. ಮೊದಲ ಕಚೇರಿ ತೆರೆಯುವ ಹೊತ್ತಿಗೆ ಅಲ್ಲಿದ್ದು, ಆಗಬೇಕಾದ ಕೆಲಸದ ವ್ಯವಸ್ಥೆ ಮಾಡಿದೆ. ಸಂಬಂಧಿಸಿದ ನೌಕರ ಇವತ್ತು ಸಂಜೆ ಐದರೊಳಗೇ ಬರಬೇಕು, ಇಲ್ಲದಿದ್ದರೆ ಒಂದು ವಾರ ಕಳೆದೇ ಬರಬೇಕೆಂಬ ಎಚ್ಚರಿಕೆ ಮಾತು ಹೇಳಿದ್ದ. ನಂತರ ಪ್ರಯಾಣಿಸಿದ್ದು ಅಲ್ಲಿಂದ ಎಪ್ಪತ್ತು ಕಿ.ಮೀ ಅಂತರದ ಮತ್ತೊಂದು ಕಚೇರಿಗೆ.
ಆ ಕಚೇರಿಯ ಕೆಲಸ ಮುಗಿಸಿ, ಅಗತ್ಯ ದಾಖಲೆ ಪಡೆದು ಅವಸರದಲ್ಲಿ ಸಿಕ್ಕ ಬಸ್ಸು ಹಿಡಿದು ಹೊರಟರೆ ಗ್ರಹಚಾರಕ್ಕೆ ಆ ಬಸ್ಸು ಮಧ್ಯ ದಾರಿಯಲ್ಲೇ ಮುನಿಸಿಕೊಂಡಿತು. ಹೇಗೋ ಮತ್ತೊಂದು ವಾಹನದ ವ್ಯವಸ್ಥೆ ಮಾಡಿಕೊಂಡು ಮೊದಲ ಊರಿಗೆ ಬಂದಾಗ ಇಳಿ ಸಂಜೆ; ನಿಗದಿ ಸಮಯಕ್ಕೆ ಇದ್ದದ್ದು ಕೇವಲ ಎರಡೇ ನಿಮಿಷ. ಕಚೇರಿಗೆ ಹತ್ತಿರವೆಂದು ಹಿಂದೆಲ್ಲೋ ಇಳಿದುಕೊಂಡು ಮೂರ್ಖನಾಗಿದ್ದೆ. ನೋಡಿದರೆ ಆ ಜಾಗ ಅಷ್ಟು ಸನೀಹದ ದಾರಿಯಾಗಿರಲಿಲ್ಲ. ಅಲ್ಲಿಂದ ಎರಡೇ ನಿಮಿಷದಲ್ಲಿ ತಲುಪಲೇಬೇಕಾದ ತುರ್ತಿಗಾಗಿ ಅದೇ ದಾರಿಯಲ್ಲಿ ಸಾಗುವ ವಾಹನಕ್ಕೆಲ್ಲಾ ಕೈ ಚಾಚುತ್ತಲೇ ಓಡುನಡಿಗೆಯಲ್ಲಿ ಸಾಗುತ್ತಿದ್ದೆ.
ಈ ಗಡಿಬಿಡಿಯಲ್ಲಿರುವಾಗಲೇ ಹಿಂದಿನಿಂದ ಯಾರೋ ಕೂಗಿದ ದನಿ; ತಿರುಗಿ ನೋಡಿದೆ, ವ್ಯಕ್ತಿಯೊಬ್ಬರು ನನ್ನ ಬಳಿ ಬಂದು, “ಏನೋ…! ಅರ್ಜೆಂಟಿನಲ್ಲಿರುವಂತಿದೆ….!” ಚಿಂತೆ ಮಾಡಬೇಡಿ, “ನನ್ ಸ್ಕೂಟರ್ ಇದೆ, ನಿಮಗೆ ಎಲ್ಲಿಗೆ ಹೋಗಬೇಕು..!” ಎನ್ನುತ್ತಾ, ನನ್ನ ಯಾವುದೇ ಮಾತಿಗೂ ಕಾಯದೇ ನಾನು ತಲುಪಬೇಕಿದ್ದ ಕಚೇರಿಗೆ ಆ ತಕ್ಷಣಕ್ಕೆ ತಲುಪಿಸಿದರು.
ವಾಹನವಿಳಿದು ಕಚೇರಿಯ ಎರಡನೇ ಮಹಡಿಯತ್ತ ದೌಡಾಯಿಸುತ್ತಿದ್ದ ನನ್ನನ್ನು ಕೂಗಿ “ಇಲ್ಲೇ ಇರ್ತೀನಿ…! “ಕೆಲಸ ಮುಗಿಸಿಕೊಂಡು ಬನ್ನಿ. ನಿಮ್ಮನ್ನು ಮತ್ತೆ ಬಸ್ ಸ್ಟ್ಯಾಂಡ್`ಗೆ ಬಿಡ್ತೇನೆ…!” ಎಂದರು. ಎದ್ದು ಹೊರಡಲು ಸಿದ್ಧನಾಗಿದ್ದ ನೌಕರನನ್ನು ತಡೆದು ಓಲೈಸಿ, ಸಿದ್ದ ಮಾಡಿಟ್ಟಿದ್ದ ದಾಖಲೆ ಪಡೆದುಕೊಂಡೆ. ಒಂದು ವಾರ ಕಾಯಬೇಕಾಗಬಹುದೆಂಬ ದುಗುಡದಿಂದ ಆ ಕ್ಷಣದಲ್ಲಿ ನಿರಾಳವಾದೆ.
ಕಚೇರಿಯಿಂದ ಹೊರಬಂದರೆ ಅದೇ ವ್ಯಕ್ತಿ ನಗುಮೊಗದಿಂದ ಕಾಯುತ್ತಿದ್ದರು. ಮನಸ್ಸಿಗೆ ಒಮ್ಮೆ ಪಿಚ್ಚೆನಿಸಿತು. ಅವರು ಪರಿಚಿತರಲ್ಲ, ಈ ಹಿಂದೆಂದೂ ನಾನು ಅವರನ್ನು ನೋಡಿರಲಿಲ್ಲ. ವಿನಮ್ರತೆಯಿಂದ ನಿಧಾನಕ್ಕೆ ‘ನಿಮ್ಹೆಸರು ಸಾರ್‌’ ಎಂದೆ. “ನಿಮ್ಮ ಕೆಲಸವಾಯ್ತಲ್ಲ ಬಿಡಿ, ಹೆಸರಿನಿಂದೇನಾಗುತ್ತೆ…!?” ಎಂದವರೇ, ನನ್ನನ್ನು ಬಸ್ ಸ್ಟ್ಯಾಂಡ್`ಗೆ ತಂದು ಬಿಟ್ಟರು.
ಬದುಕಿನ ಪಯಣದಲ್ಲಿ ಹೀಗೆ ಅಚಾನಕ್ಕಾಗಿ ಎದುರಾದ ಅವರಿಗೊಂದು ಕೃತಜ್ಞತೆ ಸಲ್ಲಿಸಲು ಎರಡೂ ಕೈ ಜೋಡಿಸಿ ಹಣೆಗೆ ಹಚ್ಚುವುದಕ್ಕೂ ಅವಕಾಶ ಕೊಡದೇ, ಗಾಳಿಯಲ್ಲಿ ಕೈ ಬೀಸುತ್ತಾ ಪಕ್ಕದ ತಿರುವಿನಲ್ಲಿ ಮರೆಯಾದರು. ಆ ಅನಾಮಿಕ ಅವಧೂತನ ಮುಖ ಮನದಲ್ಲಿ ಕಲ್ಲಲ್ಲಿ ಕೊರೆದಂತೆ ಉಳಿದುಬಿಟ್ಟಿದೆ…! ಇಂಥ ಅಸಂಖ್ಯ ಋಣಗಳನ್ನು ಹುಲುಮಾನವನಾದ ನಾನು ಯಾರಿಗೆ…? ಎಲ್ಲಿ…? ಹೇಗೆ…? ಸಂದಾಯ ಮಾಡಬೇಕೆಂದು ತಿಳಿಯದೇ ಪುಟ್ಟ ಋಣ ಸಂದಾಯ ಮಾಡಲು ಅಂದಿನಿಂದಲೂ ಜನಜಂಗುಳಿ ನಡುವೆ ಆ ಮುಖ ಹುಡುಕುತ್ತಿದ್ದೇನೆ. ಇಲ್ಲ, ಅವರು ಸಿಗುತ್ತಿಲ್ಲ. ಸಿಗಲಾರರೂ ಕೂಡಾ. ಲೋಕೋಪಕಾರಿಗಳೇ ಹಾಗೆ, ಏನನ್ನೂ ಬಯಸದೇ ಕೈಲಾದದ್ದನ್ನು ಮಾಡಿ ಮರೆಯಲ್ಲೇ ನಿಲ್ಲುತ್ತಾರೆ. ಸಹಜ ಮಾನವ ಪ್ರೀತಿ ಕೊನೆಯಾಗದಿರಲಿ…

ಹೊಸ್ಮನೆ ಮುತ್ತು

Leave a Reply