ಹೇಗೆ ಅರ್ಚಿಸಲಿ, ಹೇಗೆ ಮೆಚ್ಚಿಸಲಿ

ಹೇಗೆ ಅರ್ಚಿಸಲಿ,ಹೇಗೆ ಮೆಚ್ಚಿಸಲಿ
ಅರ್ಥಾನುಸಂಧಾನ :-

ದಾಸವ್ಯಾಸ ಸಾಹಿತ್ಯ ಅಜ್ಞಾನದ ಕತ್ತಲೆಯನ್ನು ಓಡಿಸುವ ಜ್ಞಾನದ ದೀವಟಿಗೆಯಾಗಿದೆ. ಎಲ್ಲ‌ ಮಹನೀಯರ ಸಾಹಿತ್ಯವನ್ನು ಅವಲೋಕಿಸಿದಾಗ ವೇದ‌, ಉಪನಿಷತ್, ಭಾಗವತಾದಿ ಗ್ರಂಥಗಳ ಸಾರವನ್ನು ; ನಮ್ಮಂತಹ ಪಾಮರರಿಗೆ
ತಿಳಿಯಲು ಕನ್ನಡದಲ್ಲಿ ಕೀರ್ತನೆಗಳು, ಉಗಾಭೋಗ, ಸುಳಾದಿ ಹೀಗೆ ಹಲವು ಪ್ರಕಾರದಲ್ಲಿ ಬರೆದು ನಮಗೆ ಭಗವದ್ ಚಿಂತನೆಯಲ್ಲಿ ತೊಡಗಿಸಿ ಅಂತರ್ಯದ ಚಕ್ಷುವನ್ನು ತೆರೆಯುವಂತೆ ಮಾಡಿದ್ದಾರೆ. ಆದರೂ
ನಾವು ಮೂಢರು ನಾವುಗಳು ಮಾಡುವ ಪ್ರತಿ ಕರ್ಮವನ್ನು ಅಹಂಕಾರದಿಂದ ಮಾಡುತ್ತಲೆ ಬಂದಿದ್ದೇವೆ.

“ಹೇಗೆ ಅರ್ಚಿಸಲಿ; ಮೆಚ್ಚಸಲಿ”ಅನ್ನುವ ಕೃತಿಯಲ್ಲಿ  ನಾವು ಭಗವಂತನ  ಪೂಜೆ ಮಾಡುವ ಮೊದಲು , ದೇವಾದಿದೇವತೆಗಳ ಮೂಲಕ ,  ಪ್ರೇರ್ಯ, ಪ್ರೇರ್ಯಕನಾಗಿ ಸರ್ವೋತ್ತಮನಾದ ಭಗವಂತ ಅಣುತೃಣುವಿನಲ್ಲಿ
ವ್ಯಾಪಿಸಿ, ತನ್ನ ತಾನೇ ಪೂಜೆಗೊಂಡರು, ಕಿಂಚಿತ್ತು ಗರ್ವ ಪಡದೇ , ಅನಂತಗುಣಗಣಗಳ ಮಹಿಮನಾದ ಚಿದಾನಂದಾತ್ಮಕನಾದ ಭಗವಂತನಲ್ಲಿ ವಿನಮ್ರದಿಂದ ಮೊರೆ ಹೋಗಿದ್ದಾರೆ.

ಹರಿಕಥಾಮೃತಸಾರದ ಮೂರನೇ ಸಂಧಿಯಾದ “ವ್ಯಾಪ್ತಿಸಂಧಿ” ಯಲ್ಲಿ ಹದಿನಾಲ್ಕು ಲೋಕಗಳ ಒಡೆಯನಾದ ಅನಿತ್ಯ ಭಂಧುವಾದ ಭಗವಂತ ಸಮಸ್ತ ಸೃಷ್ಟ್ಯಾದಿಗಳಲ್ಲಿ ನಿಂತು ನಿತ್ಯ ಯಾವ ರೀತಿ ಪೂಜೆಗೊಂಬು ವದನ್ನು  ಸುಂದರವಾಗಿ ವರ್ಣಿಸಿದ್ದಾರೆ.

ಪಲ್ಲವಿ

ಹೇಗೆ ಅರ್ಚಿಸಲಿ ಮೆಚ್ಚಿಸಲಿ ನಿನ್ನನಾಗಶಯನ
ನಾರದವಂದಿತನೆ ದೇವಾ/ ಪ

ಅರ್ಥ:-

ಪಲ್ಲವಿಯಲ್ಲಿ ದಾಸರು ನವವಿಧ ಭಕ್ತಿಗಳಾದ*ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಮ್/ ಅರ್ಚನಂ ವಂದನಂ ದಾಸ್ಯಂ ಸಖ್ಯಮಾತ್ಮನಿವೇದನಮ್//
ಒಂದಾದ “ಅರ್ಚನೆ” ವಿಷಯದಲ್ಲಿ ಪ್ರಸ್ತಾಪನೆ ಮಾಡಿದ್ದಾರೆ.  ಯಾವುದೇ ಜೀವರಾಶಿ ಯಲ್ಲಿ ಹುಟ್ಟಿರಲಿ , ಅರ್ಚನೆ ಅನ್ನುವುದು ಅವುಗಳ ನಿಲುಕುವ ಭಾಷೆಯಲ್ಲಿ ಭಗವಂತನ ಶ್ರವಣ, ಸ್ಮರಣ ಮಾಡುತ್ತ ತಮ್ಮ‌ ಪ್ರಾರಬ್ದ ಕರ್ಮಗಳನ್ನು ಕಳೆದು, ಭಗವಂತನ ಕರುಣೆ,ಒಲುಮೆ ಪಡೆಯುವುದೆ ಅರ್ಚನ ಭಕ್ತಿಯಾಗಿದೆ. ಉದಾಹರಣೆಗೆ ಹೇಳಬೇಕೆಂದರೆ ಧರ್ಮರಾಜ ರಾಜಸೂಯಾಗ ಮಾಡಿದಾಗ ಕೃಷ್ಣನಿಗೆ ಮಾಡಿದ ಅಗ್ರ ಪೂಜೆ. ಇನ್ನು ಗಜೇಂದ್ರ ಮೋಕ್ಷದಲ್ಲಿ ಬರುವ ಆನೆಯು ಮೊಸಳೆಯ‌ ಬಾಯಿಂದ ಬಿಡಿಸಿಕೊಳ್ಳಲು ತನ್ನದೇ ಭಾಷೆಯಲ್ಲಿ ಘೇಂಕಾರ (ವೇದಗಳ ಮುಖಾಂತರ ಸ್ತ್ರೋತಿಸುತ್ತದೆ.)ಹಾಕುತ್ತ, ಕಮಲದರ್ಪಣೆ ಮಾಡಿದ, ಕೂಡಲೆ ಭಗವಂತ ಓಡೊಡಿ ಬಂದ ಕಾಪಾಡಿದ. ಹೀಗೆ ಬಹಳಷ್ಟು ಉದಾಹರಣೆಗಳು.

ಪ್ರತಿ ಅವತಾರದಲ್ಲೂ ಭಗವಂತನ ಜೊತೆ ಶೇಷದೇವರು ತಾವು ಅವತಾರ ಮಾಡಿ ಸೇವೆ ಮಾಡುತ್ತಿರುವರು.ವೈಕುಂಠದಲ್ಲಿ ಶೇಷತಲ್ಪನಾಗಿರುವನು. ಇನ್ನು ನಾರದರು ಬ್ರಹ್ಮನ ಮಾನಸ ಪುತ್ರರರು. ವಿದ್ವತ್ತು, ಅನುಭವ, ಜ್ಞಾನ, ಕರ್ಮಕ್ಷೇತ್ರ, ಗಂಭೀರ ಘಟನೆ, ವಿನೋದ ಪ್ರಸಂಗ , ಇವರಿಗೆ ಯಾರು ಸಮರಿಲ್ಲ ಅಂತಹ ವ್ಯಕ್ತಿತ್ವ ಇವರದು. ವಿಶೇಷತಃ ಭಕ್ತಿ ಸಾಮ್ರಾಜ್ಯದಲ್ಲಿ ಈತ ಸಾಮ್ರಾಟನೆಂದೇ ಹೇಳಬೇಕು. ತಂಬೂರಿ ತಾಳವನ್ನು ಹಿಡಿದುಕೊಂಡು, ಕಾಲಿಗೆ ಗೆಜ್ಜೆಗಳನ್ನು ಕಟ್ಟಿಕೊಂಡು ಹಾಡುತ್ತಾ ಕುಣಿಯುತ್ತಾ, ತ್ರಿಭುವನ ಸಂಚಾರ ಮಾಡುತ್ತ ದೇವಮಾನವರಲ್ಲಿಯ, ದೇವದೇವತೆಗಳಲ್ಲಿಯ ತೊಡಕುಗಳನ್ನು ಬಿಗಿಯುತ್ತ ಸಡಲಿಸುತ್ತ ಹೋಗುತ್ತಿರುವ ಭಕ್ತಾಗ್ರೇಸರ ಈತ. ನಾರಂ ಜಲಂ ದದಾತಿ, ನೀರನ್ನು ಕೊಡುವವ; ನಾರಂ ಜ್ಞಾನಂ ದದಾತಿ, ಜ್ಞಾನವನ್ನು ಕೊಡುವವ; ನರಸ್ಯ ಇದು ನಾರಂ ಮನುಷ್ಯತ್ವಂ ದದಾತಿ, ಮನುಷ್ಯತ್ವವನ್ನು ಉಪದೇಶಿಸುವವ ಎಂಬುದಾಗಿ  ಹೇಳಿದ್ದಾರೆ. ಇಂತಹ ನಾರದರಿಂದ ವಂದಿತನಾದ ಮತ್ತು ಸದಾ ಕೀರ್ತನೆಗಳಿಂದ ಸ್ತುತಿಸಲ್ಪಡುವನು ಭಗವಂತ.

ಮೊದಲ ನುಡಿ
ಮಂಗಳಾಭಿಷೇಕಕೆಉದಕತರುವೆನೆನೆ*ಗಂಗೆಯ ಅಂಗುಟದಿ ಪಡೆದಿಹೆಯೊ* || ಸಂಗೀತ *ಕೀರ್ತನೆ ಪಾಡುವೆನೆಂದರೆಹಿಂಗದೆ*ತುಂಬುರ ನಾರದರು ಪಾಡುವರೊ/1

ಅರ್ಥ:-
    
ನಾವುಗಳು ದೇವರ ಪೂಜೆ ಮಾಡಬೇಕಾದರೆ ಶೋಡಷ ಉಪಚಾರದಿಂದ ಪೂಜಿಸುತ್ತೇವೆ. ಅಭಿಷೇಕವು ಒಂದು ಭಾಗವಾಗಿದೆ.
ಹೀಗಾಗಿ ಅಭಿಷೇಕಕ್ಕೆ ಉದಕ(ನೀರು) ತರಬೇಕೆಂದರೆ ; ನಿನ್ನ ಪಾದದ ಅಂಗುಷ್ಟದಿಂದ ಬಂದ ಸರಗಂಗೆಯು ಪಾವನಳು .ಸ್ಕಂದ ಪುರಾಣದಲ್ಲಿ ಹೇಳಿದಂತೆ ಗಂಗೆಯನ್ನು ಭೂಮಿಗೆ ತಂದ  ಭಗೀರಥ ರಾಜನು. ಇಕ್ಷ್ವಾಕು ವಂಶದ ಸಗರರಾಜನೆಂಬ ಚಕ್ರವರ್ತಿ ಅಶ್ವಮೇಧವೆಂಬ ಯಜ್ಙಕ್ಕಾಗಿ ಕುದುರೆಯನ್ನು ಬಿಟ್ಟಿದ್ದ. ಅಶ್ವಮೇಧ ಯಜ್ಞ ಮುಗಿದರೆ, ಇಂದ್ರ ತನ್ನ ಪದವಿ ಹೋಗುವ ಭಯದಿಂದ ಅದನ್ನು ಕದ್ದು ಕಪಿಲ ಮುನಿ ಆಶ್ರಮದಲ್ಲಿ ಕಟ್ಟಿದ್ದ. ಕುದುರೆಗಾಗಿ ಅಲ್ಲಿಗೆ ಬಂದ ಸಗರರಾಜ ೬೦೦೦೦ ಪುತ್ರರು, ಧ್ಯಾನಸ್ಥರಾಗಿದ್ದ ಕಪಿಲ ಮಹರ್ಷಿಗಳನ್ನು ಅವಹೇಳನ ಮಾಡತೊಡಗಿದರು. ಅದರಿಂದ ಕೋಪಗೊಂಡ ಮುನಿಗಳು ಅವರನ್ನು ಭಸ್ಮಗೊಳಿಸಿದರು. ಅವರಿಗೆ ಮುಕ್ತಿ ಸಿಗದೆ ಮೃತ್ಯುಲೋಕದಲ್ಲಿಯೇ ಅಲೆಯತೊಡಗಿದರು. ಈ ಸಂಧರ್ಭದಲ್ಲಿ ಭಗೀರಥ ಗಂಗೆಯನ್ನು ಭೂಮಿಗೆ ತಂದು ಸಗರರಾಜನ ೬೦೦೦೦ ಪುತ್ರರಿಗೆ ಶಾಪ ವಿಮೋಚನೆ ಮಾಡಿಸಿದನು. ಇಂತಹ‌ ಗಂಗೆಯು ನಿನ್ನ ಸದಾ ಜಲಾಭಿಷೇಕ ಮಾಡುತ್ತಿರುವಳು

ಎರಡನೇ ನುಡಿ

ಪುಷ್ಪವ ತಂದು ನಿನಗರ್ಪಿಸುವೆನೆಂದರೆ
ಪುಷ್ಪ ಫುಲ್ಲಯಿಸಿದೆ ಹೊಕ್ಕುಳಲಿ ||
ಮುಪ್ಪತ್ತು ಮೂರ್ಕೋಟಿ ದೇವತೆಗಳು
ನಿನಗೊಪ್ಪಯಿಸೆ ನೈವೇದ್ಯ ನಿತ್ಯತೃಪ್ತನು ನೀನು/ 2*

ಅರ್ಥ:-

ಈ ವಿವಿಧ ದೇವತೆಗಳಿಗೂ ವಿಭಿನ್ನವಾದ ಹೂವುಗಳು ಪ್ರಿಯವಾದ್ದು, ವಿಶೇಷ ಹೂವುಗಳ ಅಲಂಕಾರ ಹಾಗೂ ಪ್ರಿಯವಾದ ವಿಷಯಗಳ ಬಗ್ಗೆ ಪುರಾಣಕಾವ್ಯಗಳಲ್ಲಿ ಉಲ್ಲೇಖ ಕಾಣಬಹುದು. ಮಲ್ಲಿಗೆ ಹೂ, ದತ್ತೂರ ಹೂ ಕಮಲ,ಪಾರಿಜಾತ,ಚೆಂಡ ಹೂ,ಕೆಂಪು ದಾಸವಾಳ,ಪಲಾಶ,ತುಳಸಿ. ಮಲ್ಲಿಗೆ ಹೂ ಎಲ್ಲ ದೇವತೆಗಳಿಗೂ ಪ್ರಿಯ, ದತ್ತೂರ ರುದ್ರದೇವರಿಗೆ ಪ್ರಿಯ, ಕಮಲ ಲಕ್ಷ್ಮೀ ದೇವಿಗೆ ಪ್ರಿಯ, ಪಾರಿಜಾತ  ಎಲ್ಲ ದೇವತೆಗಳಿಗೆ ಪ್ರಿಯ,ಚೆಂಡು ಹೂ ಮತ್ತು ಕೆಂಪು ದಾಸವಾಳ‌ಗಣಪತಿಗೆ ಪ್ರಿಯ, ಎಲ್ಲ ಬಿಳಿ ಹೂ  ಮತ್ತು ಪಲಾಶ ಸರಸ್ವತಿ ದೇವಿಗೆ ಪ್ರಿಯ, ತುಲಸಿ ವಿಷ್ಣು ಮತ್ತು ಲಕ್ಷ್ಮೀಗೆ ಪ್ರಿಯ, ತುಳಸಿ ಇಲ್ಲದ ಪೂಜೆ ನೈವೇದ್ಯ ಬರೋಲ್ಲ, ಇಂತಹ ವಿಹಿತ ಅವಿಹಿತಗಳು ನೀನೆ ಇಟ್ಟು ನೀನೆ ಪೂಜೆಗೊಂಬುವೆ, ಆದರೂ ನಾನು ಮಾಡುವ ಪೂಜೆ ದೊಡ್ಡದೆಂದು ಅಹಂಕಾರ ಪಡೆಯುವೆ.
ಮತ್ತು ನಾವು ಬುಂಜಿಸುವ ಮೊದಲು  ಆಹಾರವನ್ನು ವಿಹಿತ ಕರ್ಮಗಳನ್ನಾಚರಿಸಿ ನೈವೇದ್ಯ ಬಲಿಹರಣ, ಗೋಗ್ರಾಸ, ತಗೆದಿಟ್ಟು ನಾವು ಭಗವಂತನಿಗೆ ಅರ್ಪಿಸಿ ತಿನ್ನಬೇಕು. ಹಾಗೇ ನಾವುಗಳು ಎಂದೋ ಒಂದು ದಿನ ಮಾಡಿ ನನ್ನಂತಹ ಭಕ್ತರು ಯಾರಿದ್ದಾರೆ ಅಂತಹ ಗರ್ವ ಪಡೆಯುತ್ತೇವೆ. ಆದರೆ ಅನಿಮಿಷರಾದ ಮೂವತ್ಮೂರು ಕೋಟಿ ದೇವತೆಗಳು ನಿತ್ಯ ರಮಾ ನೈವೇದ್ಯ ಮಾಡುವರು.ಅವರಿಂದ ನಿತ್ಯ ಪೂಜೆ ಮತ್ತು ನೈವೇದ್ಯ ಗೊಳ್ಳುವ ನಿತ್ಯತೃಪ್ತನು.

ಮೂರನೇ ನುಡಿ

ಕೋಟಿಸೂರ್ಯರ ಕಾಂತಿ ಮಿಗಿಲಾದವನಿ
ಗೊಂದುಮೋಟು ದೀವಿಗೆ ಬೆಳಗೆ ಬೆಳಕಹುದೆ? ||
ಸಾಟಿಗಾಣದಸಿರಿಉರದೊಳು ನೆಲಸಿರೆ
ಪೋಟುಗಾಸನು ಎಂತು ಕಾಣಿಕೆಯಿಡಲಯ್ಯ/ 3

ಅರ್ಥ
ಸೂರ್ಯಚಂದ್ರರರಿಗೂ ಬೆಳಕು‌ನೀಡಿ ಅವರಿಂದಲೂ ದೀಪದಂತೆ ಬೆಳಗಿಸಿಕೊಳ್ಳುವೆ. ಇನ್ನು ನಿನ್ನ ಮುಂದೆ ನಾನು ಹಚ್ಚುವ ಕುರುಡ ದೀಪಕ್ಕೆ ಅಹಂಕಾರ ಪಡುವೆ , ಇದೆಂಥಾ ಹುಚ್ಚುತನ. ದೀಪದ ಬುಟ್ಟಿಯಲ್ಲಿ ಬ್ರಹ್ಮ, ಸ್ತಂಭದಲ್ಲಿ ನಕ್ಷತ್ರ,ಎಣ್ಣೆಯಲ್ಲಿ ಲಕ್ಷ್ಮೀ,ನಾಳಿಕೆಯಲ್ಲಿ ವಾಸುಕಿ,ಬತ್ತಿಯಲ್ಲಿ ವಾಸುದೇವ, ದೀಪದ ಬಿಳಿಯಲ್ಲಿ ವಾಯು ದೇವರು,ಕಪ್ಪಿನಲ್ಲಿ ರುದ್ರದೇವರು, ಪ್ರಭೆಯಲ್ಲಿ ಇಂದ್ರ. ಹೀಗೆ ಸಮಸ್ತ ದೀಪಾಂತರ್ಗತನಾಗಿ ನೀನೇ ಇದ್ದು ಪೂಜೆಗೊಳ್ಳುವೆ ಎಂದಿದ್ದಾರೆ.

ಇನ್ನು ಸಮಸ್ತ ಐಶ್ವರ್ಯಕ್ಕೆ ಅಧಿಪತಿಯಾದ  ದೇವತೆಯು ಲಕ್ಷ್ಮೀ ಪತಿ ಅವಳ ಜೊತೆ ವಾಸ ಅಂತಹ ವೃಕ್ಷಸ್ಥಳವಾಸಿಯನ್ನೇ ನಿನ್ನಲ್ಲಿ‌ ಧರಿಸಿರುವೆ ಅಂತಹ ಸರ್ವೋತ್ತಮನೇ ನಿನಗೆ ಬಿಡಿಗಾಸು ಕಾಣಿಕೆ ಕೊಟ್ಟು , ಅದರಲ್ಲಿ ಹೆಸರು ಬರೆಯಿಸಿ ಜಂಭ ಕೊಚ್ಚುಕೊಳ್ಳುವ ನಾನೆಂಥ ತಿಳಿಗೇಡಿ ಅಂದಿದ್ದಾರೆ. ಪೋಟುಗಾಸು/ಬಿಡಿಗಾಸು

ನಾಲ್ಕನೇ ನುಡಿ

ಹಾಸಿಗೆಯನು ನಿನಗೆ ಹಾಸುವೆನೆಂದರೆ
ಶೇಷನ ಮೈಮೇಲೆ ಪವಡಿಸಿಹೆ ||
ಬೀಸಣಿಕೆಯ ತಂದು ಬೀಸುವೆನೆಂದರೆ
ಆಸಮೀರಣ ಚಾಮರವ ಬೀಸುತಿಹನೋ/4

ಅರ್ಥ:-

ಕಕ್ಷಾತಾರತಮ್ಯದಲ್ಲೂ ಬರುವ ಶೇಷದೇವರು , ಭಗವಂತನ ಪ್ರತಿ ಅವತಾರದಲ್ಲಿ ಶೇಷದೇವರು ಅವತರಿಸಿದ್ದಾರೆ .ಭಗವಂತನ ಹಾಸಿಗೆಯಾಗಿ ಮಂಚ ಸೇವೆಯಲಿ ನಿರತರಾದವರು. ನಾವೊಂದು ಮಂಚ ಬೆಳ್ಳಿಯದೋ,ಬಂಗಾರದೋ, ಮಾಡಿಸಿದರೆ ಹೇಳಿಕೊಂಡು ತಿರುಗಾಡುತ್ತೇವೆ. ಇಂತಹವರ ಸೇವೆಯ ಮುಂದೆ ನಾವು ಮಾಡಿವ ಸೇವೆ ನಗಣ್ಯ. ಇನ್ನು ಅಸಮೀರಣ ಎಂದರೆ; ಗರುಡದೇವರು ಭಗವಂತನ ಹೊತ್ತು ತಿರುಗಾಡುತ್ತಾರೆ ,ಅಂತಹ‌ ಗರುಡದೇವರು ಭಗವಂತನ‌ ಸ್ಪರ್ಶಕ್ಕಗಾಲಿ ಅಥವಾ ತಮ್ಮ ರೆಕ್ಕೆಯಿಂದ ಚಾಮರ ಬೀಸುತ್ತಿರುತ್ತಾರೆ. ಇಂತಹವರು ಮಾಡುವ ಸೇವೆಯ ಮುಂದು ನಾಲ್ಕು ಕ್ಷಣಕ್ಕೆ ಚಾಮರ ಹಾಕಿ ದೊಡ್ಡ ಸೇವೆ ಮಾಡಿದ್ದೇವೆ ಎಂದು ಬಿಗುತ್ತೇವೆ. ಇದೋಂದು ದುರಂಹಕಾರದ ಪ್ರತೀಕ.

ಐದನೇ ನುಡಿ

ನಿತ್ಯಗುಣಾರ್ಣವ ನಿಜಸುಖ ಪರಿಪೂರ್ಣ
ಸತ್ತು ಚಿತ್ತಾನಂದ ಸನಕಾದಿ ವಂದ್ಯ || ಮುಕ್ತಿದಾಯಕ ನಮ್ಮಪುರಂದರವಿಠಲನು
ಭಕ್ತಿಪ್ರಿಯನು ಎಂದು ಭಜಿಸಿ ಕೊಂಡಾಡುವೆ

ಅರ್ಥ

ಆದಿಅನಂತವಿಲ್ಲದ ಆನಂದಗುಣ ಪೂರ್ಣನಾದ ಅನಿಮಿತ್ಯ ಸಖನಾದ ಸುಖನಾದ , ಪರಿಪೂರ್ಣನಾದ
ಸನಕಾದಿ ವಂದ್ಯರು ,ನಾರದರು ಸಮಸ್ತ ಜೀವರಾಶಾದಿಗಳಿಗೂ ಮುಕ್ತಿದಾಯಕ ನೀನೆ ಎಂದು ದಾಸರು ಹೇಳಿದ್ದಾರೆ.

ತಾತ್ಪರ್ಯ:-

ಅಣುತೃಣುವಿನಲ್ಲಿ ವ್ಯಾಪಿಸಿರುವ ಭಗವಂತ ಎಲ್ಲರೊಳು ತಾನಿದ್ದು ಮನವೆಂದೆನಿಸಿ ಸಕಲ ಕರ್ಮಗಳನ್ನು ಮಾಡಿಸಿಕೊಳ್ಳುತ್ತಾನೆ, ಪೂಜೆಗೊಳ್ಳುತ್ತಾನೆ, ಸೃಷ್ಟಿಯಲ್ಲಿ ತನ್ನಷ್ಟಕ್ಕೆ ತಾನೇ ಗೊಳ್ಳುವ ಪ್ರತಿಯೊಂದು ಪ್ರಕ್ರಿಯೆ ನಿತ್ಯ ನಿರಂತರ, ಆದರೆ ಅವುಗಳಿಗೆ ಯಾವ‌ ಅಹಂಕಾರವಿಲ್ಲ , ಇನ್ನು ಸ್ವಾರ್ಥ ಕಾಮನೆಗೆ ಮಾಡುವ , ಕ್ಷುಲ್ಲಕ ಸೇವೆ ಪೂಜೆ ಮಾಡುವ ನಾವುಗಳು ವೃಥಾ ಹೇಳಿಕೊಳ್ಳುತ್ತೇವೆ, ಅಥವಾ ತೋರಿಸಿ ಕೊಳ್ಳುತ್ತೇವೆ. ಒಣ ಜಂಭ ಪಡುತ್ತೇವೆ. ಅದಕ್ಕೆ ದಾಸರು ಸೃಷ್ಟ್ಯಾದಿಯಲ್ಲಿ ನಡೆಯುವ ಕ್ರಿಯೆಗೆ ನಾವು ಮಾಡುವ ಪೂಜಾ ಕರ್ಮಕ್ಕೆ ಉಪಮೇಯನ್ನಾಗಿ ಬಳಸಿದ್ದಾರೆ.

ಇನ್ನಾದರೂ ಗರ್ವ ಮರೆತು ಭಗವಂತನ ಅರಿತು , ನಿಸ್ವಾರ್ಥದ ಸರಿತೆ ಹರಿಯಲಿ ಎನ್ನೋಣ.

Leave a Reply