ಮುಂಜಾವಿನ ಚುಮುಚುಮು ಬೆಳಕಲ್ಲಿ
ನಾ ಸಾಗುತ್ತಿದ್ದ ಸಮಯದಲ್ಲಿ
ದೀರ್ಘ ಕಾಲು ಹಾದಿಯಲ್ಲಿ
ಹಸುರಿನ ಸಾಲು ಇಕ್ಕೆಲದಲ್ಲಿ
ಬುಲ್ ಬುಲ್, ಕಾಜಾಣ, ಗಿಳಿ, ಶಿಳ್ಳು ಹಕ್ಕಿಗಳ ಕೂಜನವಿಲ್ಲಿ
ಹಿತವಾದ ಮಾರುತದ ಸೊಂಕಿನಲ್ಲಿ
ಕಣ್ಣಿಗೆ ಹಬ್ಬದ ಸಂಭ್ರಮ ಅಕ್ಕಪಕ್ಕದಲ್ಲಿ
ಆಗಾಗ ಇಣುಕುತ್ತಿದ್ದ ಸೂರ್ಯನ
ಮಂದ ಬೆಳ್ಳಿ ಕಿರಣಗಳ ಕಳ್ಳ ನೋಟದಲ್ಲಿ
ಹೂವಿನ ಹಾಸಿಗೆಯ ಸ್ವಾಗತವಿತ್ತು
ಗುಲ್ ಮೊಹರ ಗಿಡಗಳ ಸಾಲಿನಲ್ಲಿ
ಸುತ್ತ ಮೌನವಾವರಿಸಿರಲಾಗಿ
ಜೀರುಂಡೆಗಳ ಗುಂಯ್ ಗುಡುವ ನಿನಾದದಲ್ಲಿ
ಹೆಜ್ಜೆ ಹೆಜ್ಜೆಗೂ ಆಸರೆಯ ಬಯಸಿ
ಬಳುಕಿ ನಲಿಯುತ್ತಿದ್ದ ತರುಲತೆಗಳಲ್ಲಿ
ಸೌಗಂಧಿ ಪುಷ್ಪಗಳ ಸುವಾಸನೆಯಲ್ಲಿ
ಮಧುಹೀರುವ ಭ್ರಮರ, ಜೀರುಂಡೆಗಳ ಝೆಂಕಾರದಲ್ಲಿ
ಕಲ್ಲುಬಂಡೆಗಳ ನಡುನಡುವೆ ಹರಿವ
ಝುಳು ಝುಳು ನೀರಿನ ಸಂಗೀತಸ್ವರದಲ್ಲಿ
ಚಿತ್ತಕ್ಕೆ ಪ್ರಶಾಂತತೆಯ ಭೋಜನವಿಲ್ಲಿ
ಬಯಸಿತ್ತು ಮನಸ್ಸು ಹೀಗೇ ದೀರ್ಘವಾಗಲಿ
ನನ್ನ ಹಾದಿಯು ನಿಸರ್ಗದ ಮಡಿಲಲ್ಲಿ
ಮಗುವಾಗಿ ಬಚ್ಚಿಟ್ಟುಕೊಳ್ಳುವಾಸೆ
ಈ ಅಡವಿದೇವಿಯ ಸೆರಗಲ್ಲಿ
– ಉಮಾ ಭಾತಖಂಡೆ