ಹಿಡಿದೆನೊಂದು ಲೇಖನಿ ಇಂದು
ಕ್ಷಣ ಕಣ್ಣ ರೆಪ್ಪೆ ಮುಚ್ಚಿ
ನೆನೆದೆ ಬೇಂದ್ರೆ, ಕುವೆಂಪು ನರಸಿಂಹರ ಹಾಗೆ ಸುಮ್ಮನೆ
ಇಳಿಯುತಿತ್ತು ಆಳಕೆ ಯೋಚನೆ
ಮಿಡಿಯಿತು ಹೃದಯ ಝೆಂಕಾರದಿ
ನೆನೆದು ಮಾಸ್ತಿ, ಅನಂತ ಡಿ.ವಿ.ಜಿ ಯರ ಹಾಗೆ ಸುಮ್ಮನೆ
ಬರೆವ ಇಚ್ಛೆಯೊಂದು ಬಂದು
ಸಾಗಿತು ಕೈ ಮುಂದೆ ಮುಂದೆ
ಕೋಣೆಯೊಂದು ಸೇರಿ ಹಿಡಿದೆನೊಂದು ರಟ್ಟನು ಬಿಳಿಯ ಹಾಳೆ ಹಾಗೆ ಸುಮ್ಮನೆ
ಮನದ ಮಾತು ಹೊರಗೆ ಇಣಕಿ
ತೋರುತಿತ್ತು ಹಲವು ಮಾರ್ಗ
ಸಿದ್ದಳಾಗೆಂದಿತು ಚಿತ್ತ ಹಾಗೆ ಸುಮ್ಮನೆ
ಗಹನ ವಿಷಯದಾಳದಲ್ಲಿ
ಮನವು ಯುದ್ದ ಕಾಯುತಿತ್ತು
ಗೆಲವೆನೇ? ಎಂಬುದೊಂದು ಪ್ರಶ್ನೆ ಹಾಗೇ ಸುಮ್ಮನೆ
ಸುತ್ತ ಮೌನ ಆವರಿಸಿತ್ತು
ಚಿಂತೆಗಳ ಮಥನ ಮೆದುಳಿಗಾಗುತ್ತಿತ್ತು
ಸ್ವಚ್ಛದೊಂದೇ ಒಂದು ಕಿರಣ ಹೊಮ್ಮಿತಾಗ ಹಾಗೆ ಸುಮ್ಮನೆ
ಕಳೆದ ಕಾಲದಳುವ ನೆನೆದು
ಇರುವ ಕಾಲದಲಿ ಸಂತೈಸುವರ ತಡೆದು
ಹೊಸ ಹಾದಿಯ ಕಂಡು ನಲಿಯಿತು ಹಾಗೆ ಸುಮ್ಮನೆ
ಇಂದು ಪಡೆದ ಸ್ಪೂರ್ತಿಯಿಂದ
ಧನ್ಯಳೆಂದು ನಾನೇ ಬಗೆದು
ನಮಿಸಿದೆ ವೆಂಕಟೇಶ, ಆನಂದ, ಲಕ್ಷ್ಮಣರ ಹಾಗೆ ಸುಮ್ಮನೆ
– ಉಮಾ ಭಾತಖಂಡೆ
1 Comment
ಕವನ ಚೆನ್ನಾಗಿದೆ