ಹದಿ ಹರೆಯದ ಸಮಸ್ಯೆಗಳು..

ಹದಿ ಹರೆಯದ ಸಮಸ್ಯೆಗಳು..

ಹದಿ ಹರೆಯ ಎಂಬುದು ಎಲ್ಲರ ಜೀವನದ ಒಂದು ಮಹತ್ವದ ಘಟ್ಟ. ಅಲ್ಲಿ ಆಶೆಗಳಿವೆ, ಕನಸುಗಳಿವೆ, ಅವುಗಳನ್ನು ಕೈಗೂಡಿಸಿಕೊಳ್ಳಲೋಸುಗ ಮಾಡುವ ವಿಫಲ ಹಾಗೂ ಸಫಲ ಯತ್ನಗಳಿವೆ.. ವಿಫಲರಾದಾಗ ಜೀವದ ಮೇಲಿನ ಆಶೆ ತೊರೆಯುವ, ಸಫಲರಾದಾಗ ಪ್ರಪಂಚವನ್ನೇ ಮರೆಯುವ ಘಟ್ಟವದು. ಮಕ್ಕಳ ಸಮಸ್ಯೆಗಳನ್ನು ಪಾಲಕರು ತಮ್ಮದೇ ಆದ ಒಂದು ಅಳತೆಗೋಲಿನಿಂದ ಅಳೆಯುತ್ತಾರೆ. ತಾವು ಆ ಪರಿಸ್ಥಿತಿಯಲ್ಲಿದ್ದಾಗ ತಮ್ಮ ತಂದೆ ತಾಯಿಯರು ಏನು ಮಾಡಿದ್ದರೋ ಅದನ್ನೇ ತಮ್ಮ ಮಕ್ಕಳಿಗೂ ಮಾಡುತ್ತ ತಾವು ಸರಿಯಾದ ಮಾರ್ಗದಲ್ಲಿಯೇ ಮುಂದುವರಿಯುತ್ತಿದ್ದೇವೆ ಎಂದು ಎಂದುಕೊಳ್ಳುತ್ತಾರೆ. ಈಗ ಕಾಲ ಬದಲಾಗಿದೆ. ಅದಕ್ಕೆ ತಕ್ಕಂತೆ ಮಕ್ಕಳ ಸುತ್ತು ಮುತ್ತಲಿನ ವಾತಾವರಣವೂ ಬದಲಾಗಿದೆ. ಈಗ ಮಕ್ಕಳಿಗೆ ಜ್ಞಾನವನ್ನು ನೀಡುವ ಟಿ. ವಿ. ಗಳು, ಕಂಪ್ಯೂಟರುಗಳು, ಮೊಬೈಲುಗಳು ಮುಂತಾದವು ಮಕ್ಕಳನ್ನು ಅಷ್ಟೇ ಬೇಗ ಕೆಟ್ಟ ಮಾರ್ಗಕ್ಕೂ ಎಳೆಯುತ್ತವೆ. ಅಲ್ಲದೆ, ಈಗ ತಂದೆ ತಾಯಿಯರು ಮಕ್ಕಳಿಗೆ ಕೊಡುವ ಸ್ವಾತಂತ್ರ್ಯವೂ ಸ್ವೇಚ್ಛೆಯಲ್ಲಿ ಬದಲಾದದ್ದು ತಿಳಿಯುವಷ್ಟರಲ್ಲಿ ಮಕ್ಕಳು ಕೈ ತಪ್ಪಿ ಹೋಗಿರುತ್ತಾರೆ.. ಮೊದಲೆಲ್ಲ ಮಕ್ಕಳಿಗೆ ಕೈಯಲ್ಲಿ ಪಾಕೆಟ್ ಮನಿ ಇರುತ್ತಿರಲಿಲ್ಲ.. ಕಿವಿಗಿಟ್ಟುಕೊಳ್ಳಲು ಫೋನ್, ಓಡಾಡಲು ಗಾಡಿ ಇವ್ಯಾವುದೂ ಇರುತ್ತಿರಲಿಲ್ಲ.. ಅಲ್ಲದೆ ಈಗಿನ ಮಕ್ಕಳ ಮನೋಸ್ಥಿತಿಯೂ ಕೂಡ ಬಹಳ ನಾಜೂಕು. ಹೀಗಾಗಿ ಅವರನ್ನು ಹೆಚ್ಚಿಗೆ ಬೈಯುವ ಹಾಗಿಲ್ಲ, ದಂಡಿಸುವ ಹಾಗಿಲ್ಲ. ಹಾಗೆಂದು ಅವರು ಹೋದ ಹಾದಿಗೆ ಅವರನ್ನು ಬಿಡುವ ಹಾಗೂ ಇಲ್ಲ. ಹಾಗಾದರೆ ಹದಿ ಹರೆಯದವರ ಜೊತೆಗೆ ಹೇಗೆ ಮಾತಾಡಬೇಕು…
ರಾಗಿಣಿ ಹಾಗೂ ಆಕೆಯ ಪತಿ ಸರ್ವೇಶ ಇಬ್ಬರೂ ತಮ್ಮ ಒಬ್ಬಳೇ ಮಗಳಾದ ಸ್ಮಿತಾಳನ್ನು ತಾವು ತುಂಬ ಚೆನ್ನಾಗಿ ಬೆಳೆಸುತ್ತಿದ್ದೇವೆ, ಅವಳೊಂದಿಗೆ ತಮ್ಮ ಸಂಬಂಧ ಬಹಳ ಚೆನ್ನಾಗಿದೆ ಎಂದು ತಿಳಿದಿದ್ದರು. ಆದರೆ ೧೫ ವರ್ಷದ ಸ್ಮಿತಾಳಲ್ಲಿ ಒಮ್ಮಿಂದೊಮ್ಮೆಲೆ ಆದ ಬದಲಾವಣೆಗಳು ಅವರನ್ನು ಚಕಿತಗೊಳಿಸಿದ್ದವು. ಮೊದಲೆಲ್ಲ ತನ್ನ ಕ್ಲಾಸುಗಳು, ಅಭ್ಯಾಸ ಇವುಗಳಲ್ಲಿಯೆ ಮನಸಿಟ್ಟಿರುತ್ತಿದ್ದ ಆಕೆ ಈಗ ಕನ್ನಡಿಯ ಮುಂದೆ ತಾಸುಗಟ್ಟಲೆ ಕಾಲ ಕಳೆಯತೊಡಗಿದ್ದಳು. ಮಾರ್ಕೆಟ್ಟಿನಲ್ಲಿ ದೊರೆಯುವ ಸೌಂದರ‍್ಯ ವರ್ಧಕಗಳೆಲ್ಲವೂ ತನಗೆ ಬೇಕೆಂದು ಹಟ ಮಾಡತೊಡಗಿದ್ದಳು. ರಾಗಿಣಿ ಅವಳಿಗೆ ನೀನಿನ್ನೂ ಚಿಕ್ಕವಳು.. ಹದಿನೆಂಟು ವರ್ಷಗಳ ವರೆಗೆ ಇವನ್ನೆಲ್ಲ ಉಪಯೋಗಿಸಿದರೆ ನಿನ್ನ ಚರ್ಮ ಹಾಳಾಗುತ್ತದೆ ಎಂದಾಗ ಸಿಟ್ಟಾಗಿ ಊಟ ಬಿಟ್ಟಳು. ಅಮ್ಮನ ವಸ್ತುಗಳನ್ನು ಉಪಯೋಗಿಸತೊಡಗಿದ್ದಳು. ಚಿತ್ರ-ವಿಚಿತ್ರವಾಗಿ ಹೇರ್ ಸ್ಟೈಲ್ ಮಾಡುವುದು.. ರಾಗಿಣಿ ಆಫೀಸಿಗೆ ಹೋದ ನಂತರ ಗೆಳತಿಯರ ಚಿಕ್ಕ ಚಿಕ್ಕ ಡ್ರೆಸ್ ಧರಿಸಿ ಶಾಲೆಗೆ ಹೋಗುವುದು ಮಾಡತೊಡಗಿದಳು. ಅಷ್ಟೇ ಅಲ್ಲ.. ಅಚ್ಛೆಯಿಂದ ತಂದೆ ಅಥವಾ ತಾತ, ಮಾಮ ಯಾವಾಗಲಾದರೂ ತನ್ನ ಗಲ್ಲ ಹಿಡಿದರೆ, ಬೆನ್ನ ಮೇಲೆ ಕೈ ಇಟ್ಟರೆ ಅವಳಿಗೆ ಸಿಟ್ಟೂ ಬರುತ್ತಿತ್ತು.. ಯಾರು ಏನೇ ಬುದ್ಧಿ ಹೇಳಲು ಹೋದರೂ ತಾನೂ ಈಗ ದೊಡ್ಡವಳಾಗೊದ್ದೇನೆ, ತನಗೂ ತನ್ನ ಬಗೆಗಿನ ನಿರ್ಣಯ ತೆಗೆದುಕೊಳ್ಳುವ ಹಕ್ಕಿದೆ. ತಾನೇನು ಚಿಕ್ಕ ಮಗುವಲ್ಲ..ಎಂದೆಲ್ಲ ಹೇಳುತ್ತಿದ್ದಳು. ಹಾಗೆಂದು ಕೆಲವು ಚಿಕ್ಕ-ಪುಟ್ಟ ಜವಾಬ್ದಾರಿಗಳನ್ನು ವಹಿಸಿದರೆ ಆಗೆಲ್ಲ ಚಿಕ್ಕ ಮಕ್ಕಳಂತೆ ವರ್ತಿಸುತ್ತಿದ್ದಳು. ಯಾವಾಗಲೂ ತನ್ನನ್ನು ಎಲ್ಲರೂ ಓಲೈಸಬೇಕೆಂದು ಬಯಸುತ್ತಿದ್ದಳು.
ಇನ್ನೊಂದು ಉದಾಹರಣೆ. ಕೀರ್ತಿ.. ಅವಳು ೧೪ ವರ್ಷದವಳು. ಕೀರ್ತಿ ಇಲ್ಲಿಯವರೆಗೆ ಒಬ್ಬಳೇ ಎಲ್ಲಿಗೂ ಹೋಗಲು ಹೆದರುವವಳು… ಯಾವಾಗಲೂ ಅಮ್ಮ ಜೊತೆಯಲ್ಲಿರಬೇಕು. ಎಂದು ಬಯಸುವವಳು ಈಗ ಒಮ್ಮೆಲೆ ಬದಲಾಗಿದ್ದಳು.. ಅಮ್ಮನ ಜೊತೆ ಎಲ್ಲಿಗೂ ಹೋಗುವುದು ಈಗ ಅವಳಿಗೆ ಸರಿಬರುತ್ತಿರಲಿಲ್ಲ. ಅಮ್ಮ ಎಲ್ಲಿಗಾದರೂ ಬಾ ಎಂದು ಕರೆದರೆ ‘ಅಮ್ಮಾ ನೀ ಹೋಗಿ ಬಾ.. ನಾನು ಒಬ್ಬಳೇ ಇರ‍್ತೀನಿ” ಎಂದು ತಾನೊಬ್ಬಳೇ ಏಕಾಂತದಲ್ಲಿ ಕಾಲಕಳೆಯಲು ಬಯಸುತ್ತಿದ್ದಳು.
ಇವು ಕೇವಲ ಎರಡು ಉದಾಹರಣೆಗಳು ಅಷ್ಟೇ. ಮಕ್ಕಳು ಹತ್ತು-ಹನ್ನೊಂದು ವರ್ಷದವರಾಗುವ ವರೆಗೆ ಮಕ್ಕಳು ತಮ್ಮನ್ನು ತಮ್ಮ ತಂದೆ-ತಾಯಿಯರೊಡನೆ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ತಾರುಣ್ಯದ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆ ತಮ್ಮ ಸ್ವಂತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳತೊಡಗುತ್ತಾರೆ. ಆಗೆಲ್ಲ ಅವರಿಗೆ ತಂದೆ-ತಾಯಿಯರಿಗಿಂತ ತಮ್ಮ ಸಮವಯಸ್ಕರೊಡನೆ ಇರುವುದರಲ್ಲಿ ಸಂತೋಷವೆನ್ನಿಸತೊಡಗುತ್ತದೆ.
ಮನೋವಿಜ್ಞಾನದ ಸಂಶೋಧಕರ ಪ್ರಕಾರ ತಂದೆ-ತಾಯಿಯರ ಅತಿಯಾದ ಹಸ್ತಕ್ಷೇಪವು ತಾರುಣ್ಯದಲ್ಲಿ ಮಕ್ಕಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಹದಿಹರೆಯದ ಸಮಯದ ಒಂದು ಕಟುಸತ್ಯವೆಂದರೆ ಈ ಮಕ್ಕಳು ಹಾಗೂ ಪೋಷಕರಿಗೆ ಇದು ಒಂದು ಅತಿ ಸಂದಿಗ್ಧ ಪರಿಸ್ಥಿತಿ. ಇಂಥ ಸಂದರ್ಭದಲ್ಲಿ ಈ ಕಂದಕವನ್ನು ಉಂಟು ಮಾಡುವದರ ಕಾರಣಗಳನ್ನು ತಿಳಿದುಕೊಂಡು ಮಕ್ಕಳ ಸಮಸ್ಯಗಳನ್ನು ನಿವಾರಿಸುವುದಕ್ಕೆ ಇಲ್ಲಿ ಕೆಲವು ಸಲಹೆಗಳಿವೆ..
೧. ಮಾತು ಕೇಳುವಂಥ ಪರಿಸ್ಥಿತಿಯನ್ನು ಸೃಷ್ಟಿಸಬೇಕು:
ಮಕ್ಕಳು ಏನು ಹೇಳುತ್ತಿರುವರು ಎಂಬುದನ್ನು ಕೇಳುವ ಸಹನೆಯು ಪೋಷಕರಲ್ಲಿರಬೇಕು. ಮಕ್ಕಳು ಹದಿಹರೆಯಕ್ಕೆ ಕಾಲಿಡುತ್ತಿರುವಂತೆಯೇ ದೈಹಿಕ ಪರಿಸ್ಥಿತಿಯಲ್ಲಿ ಉಂಟಾಗುತ್ತಿರುವ ಬದಲಾವಣೆಗಳಿಂದ ಒಂದು ಅತಿಯಾದ ಅಸಂತುಷ್ಟತೆ ಅವರನ್ನು ಕಾಡುತ್ತದೆ. ಆ ಸಮಯದಲ್ಲಿ ಅವರನ್ನು ಒಂದು ಸಾಮಾನ್ಯ ಪ್ರಶ್ನೆಯನ್ನು ಕೇಳಬಹುದು..”ಶಾಲೆಯಲ್ಲಿ ಏನು ನಡೆಯಿತು ಇವತ್ತು?” ಎಂದು. ಮಕ್ಕಳು ತಮ್ಮ ಜೀವನದಲ್ಲಿ ಏನು ನಡೆಯತ್ತಿದೆ ಎಂಬುದರ ಬಗ್ಗೆ ತಾತ್ಪೂರ್ತಿಕ ಅಥವಾ ಪ್ರಾಯೋಗಿಕ ಸೂಚನೆಗಳನ್ನು ಕೊಡಬಹುದು. ಅದರ ಪರಿಣಾಮವು ತಮ್ಮ ಪೋಷಕರ ಮೇಲೆ ಹೇಗಾಗುತ್ತದೆ ಎಂದು ಪರೀಕ್ಷಿಸಲೂಬಹುದು. ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದರ ಮೇಲೆ ಪೋಷಕರ ಜೊತೆಗೆ ಸಂಬಂಧವನ್ನು ಬೆಳೆಸಬೇಕೋ ಬೇಡವೋ ಎಂಬುದನ್ನು  ಹಾಗೂ ಅವರ ಜೊತೆಗೆ ಏನನ್ನು ಹೇಳಬಹುದು, ಯಾವ ವಿಷಯವನ್ನು ಹಂಚಿಕೊಳ್ಳಬಹುದು ಎಂದು ನಿರ್ಧರಿಸುತ್ತಾರೆ. ಹದಿಹರೆಯದ ಮಕ್ಕಳು ಹೇಳಿದುದನ್ನು ಕೇಳಲು ಪ್ರತಿದಿನ ಮನೆಯಲ್ಲಿ ಒಂದು ವಿಶೇಷ ಸಮಯವನ್ನು ಇಟ್ಟುಕೊಳ್ಳುವುದು ಒಂದು ಒಳ್ಳೆಯ ಮಾರ್ಗ.
ಒಬ್ಬ ಮನೋವಿಜ್ಞಾನಿ ತಾನು ಒಬ್ಬ ತಾಯಿಯೂ ಆಗಿ ತನ್ನ ಹದಿಹರೆಯದ ಮಕ್ಕಳ ಜೊತೆಗೆ ಹೇಗೆ ವ್ಯವಹರಿಸುತ್ತೇನೆ ಎಂದು ಹೇಳುತ್ತ, “ನಾನು ಅವರು ಚಿಕ್ಕವರಾಗಿದ್ದಾಗಿನಿಂದಲೂ ಅವರಿಗಾಗಿ ಪುಸ್ತಕವನ್ನು ಓದುತ್ತೇನೆ.. ಅವರು ಅದನ್ನು ಕಾತುರದಿಂದ ಕಾಯುತಿರುತ್ತಾರೆ. ಒಮ್ಮೊಮ್ಮೆ ಓದಿದ ನಂತರ ಇನ್ನೂ ಹೆಚ್ಚಿನ ಸಮಯ ಕಳೆಯಲು ಇಷ್ಟಪಡುತ್ತಾರೆ.. ಆಗೆಲ್ಲ ಅವರು ತಮ್ಮ ದಿನ ಹೇಗೆ ಕಳೆಯಿತು ಎಂದು ವಿವರಿಸುತ್ತಾರೆ. ನಾನು ಅವರಿಗಾಗಿ ಆರಿಸುವ ಪುಸ್ತಕಗಳಲ್ಲಿ ನೈತಿಕತೆ ಹಾಗೂ ಚರ್ಚೆಗೆ ಯೋಗ್ಯವಾದ ಪಾತ್ರಗಳಿರುತ್ತವೆ. ಕುಟುಂಬದವರೆಲ್ಲ ಜೊತೆಗೂಡಿ ಆಟವಾಡುತ್ತೇವೆ. ಇಂಥ ಸಮಯದಲ್ಲಿ ಅವರಿಗೆ ಮಾತಾಡಲು ಒಂದು ವಾತಾವರಣ ನಿರ್ಮಾಣವಾಗುತ್ತದೆ. ಅಲ್ಲದೆ ರಾತ್ರಿ ಊಟವನ್ನು ಕುಟುಂಬದ ಸದಸ್ಯರೆಲ್ಲ ಜೊತೆಗೂಡಿ ಮಾಡುವುದರಿಂದ ಪರಸ್ಪರ ಆತ್ಮೀಯತೆ ನಿರ್ಮಾಣವಾಗುತ್ತದೆ. ಇಂದಿನ ಗಡಿಬಿಡಿಯ ಜೀವನದಲ್ಲಿ ಇದು ಸ್ವಲ್ಪ ಕಷ್ಟವಾದರೂ ಅಗತ್ಯ.. ಇದರಿಂದಾಗಿ ತಮ್ಮ ತಮ್ಮ ದಿನಗಳು ಹೇಗೆ ಕಳೆದುವೆಂಬುದನ್ನು ಚರ್ಚಿಸಲು ಸಹಜ ಅವಕಾಶವುಂಟಾಗುತ್ತದೆ. .ಆದರೆ ಈ ಸಮಯವನ್ನು ಉಪದೇಶ ಮಾಡಲು ಉಪಯೋಗಿಸಬಾರದು ಎಂಬುದನ್ನು ಗಮನದಲ್ಲಿಡುವುದು ಅಗತ್ಯ” ಎಂದು ಹೇಳುತ್ತಾರೆ.
೨. ಪರಸ್ಪರ ಸಮಾನ ಸಂಭಾಷಣೆಯ ಕಲೆಯನ್ನು ಸಿದ್ಧಿಸಿಕೊಳ್ಳಬೇಕು.
ಏನಾದರೂ ಕೆಲಸ ಮಾಡುವಾಗ, ಜೊತೆ ಜೊತೆಯಲ್ಲಿ ಕುಳಿತಿರುವಾಗ ಮಾಡುತ್ತಿರುವ ಕೆಲಸದಲ್ಲಿಯೇ ಹೆಚ್ಚಿನ ಆಸಕ್ತಿ ವಹಿಸಿದಂತೆ ತೋರಿಸುತ್ತ ಅವರತ್ತ ನೋಡದೆ ಮಾತಾಡುವುದರಿಂದ ಸಂಭಾಷಣೆ ಸರಳವಾಗುತ್ತದೆ.. ಮಾತಾಡುವಾಗ ತಾಯಿ-ಮಕ್ಕಳಂತೆಯಲ್ಲ ಗೆಳತಿಯರಂತೆ, ಗೆಳೆಯರಂತೆ ಮಾತಾಡಬೇಕು. ಅವರು ಎದುರಿಸುತ್ತಿರುವ ಸಮಸ್ಯೆಗಳು ಸಾಮಾನ್ಯವಾಗಿ ಎಲ್ಲರ ಜೀವನದಲ್ಲಿಯೂ ಬಂದಂಥವೇ. ಮಕ್ಕಳು ಪೋಷಕರೂ ಇಂಥ ಅನುಭವವನ್ನು ಕಂಡವರೇ ಎಂದು ಅರಿವಾದಾಗ ತಮ್ಮ ಸಮಸ್ಯೆಗಳನ್ನು ಅವರಲ್ಲಿ ಹೇಳಿಕೊಳ್ಳಲು ಸಂಕೋಚಪಡುವುದಿಲ್ಲ. ಅಲ್ಲದೆ ತಾಯಿಯು ತಂದೆಗಿಂತ ಮಕ್ಕಳಿಗೆ ಹೆಚ್ಚು ಆತ್ಮೀಯರಾಗಿರುತ್ತಾರೆ. ತಂದೆ ಅಧಿಕಾರಯುತವಾಗಿ ಮಾತಾಡಿದರೆ ತಾಯಿ ಭಾವಪೂರ್ಣವಾಗಿ ಮಕ್ಕಳ ಕಾಳಜಿ ವಹಿಸುತ್ತಾರೆ. ಆದರೂ ಒಮ್ಮೊಮ್ಮೆ ತಂದೆ ಕಲಿತವರು, ಮುಂದುವರಿದ ಜನಾಂಗದ ಸಮಸ್ಯಗಳನ್ನು ಅರಿತವರಾಗಿದ್ದಲ್ಲಿ ತಂದೆಯೂ ಆತ್ಮೀಯನಾಗುತ್ತಾನೆ.
೩. ಮಕ್ಕಳ ಜೊತೆಗೆ ಒಬ್ಬ ಆತ್ಮೀಯ ಸಲಹೆಗಾರರಾಗಿ ವರ್ತಿಸಬೇಕು.
ಮಕ್ಕಳಿಗೆ ಅಧಿಕಾರಯುತವಾಗಿ ಹೇಳುವುದು ಸರಿಬರುವುದಿಲ್ಲ. ಅವರು ತಮ್ಮ ನಿರ್ಣಯಗಳನ್ನು ತಾವೇ ತೆಗೆದುಕೊಳ್ಳಬಯಸುತ್ತಾರೆ. ಆವರಿಗೆ ಅಂಥ ಸಂದರ್ಭಗಳಲ್ಲಿ ಸಹಾಯ ಮಾಡಬೇಕು. ಅವರ ಜೊತೆಗೆ ಚರ್ಚಿಸಬೇಕು. ಇದು ಮುಂದೆ ಒಂದು ಪದ್ಧತಿಯಾಗಿ ಮಾರ್ಪಡುತ್ತದೆ. ಈ ವಯೋಮಾನದಲ್ಲಿ ಮಕ್ಕಳ ಮೆದುಳು ಬೆಳವಣಿಗೆಯ ಸ್ಥಿತಿಯಲ್ಲಿರುತ್ತದೆ. ಅವರಿಗೆ ಇಂಥ ಸಂದರ್ಭದಲ್ಲಿ ಸರಿಯಾದ ಮಾರ್ಗದರ್ಶನ ನೀಡಿದರೆ ಸ್ವಂತ ರಚನಾತ್ಮಕತೆ ಮತ್ತು ಚುರುಕುತನದಿಂದ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ. ಒಟ್ಟಿನಲ್ಲಿ ಅವರಿಗೆ ತಾವು ಇಚ್ಛಿಸಿದ ಕೆಲಸಗಳನ್ನು ಮಾಡಬೇಕೋ ಬೇಡವೋ ಎಂಬುದನ್ನು ತಿಳಿಯಲು ಅವಕಾಶ ಕೊಡಬೇಕು.
೪. ಮಕ್ಕಳ ಸಂಗಾತಿಯಂತೆ ವರ್ತಿಸಬೇಕು.
ಪ್ರತಿಯೊಂದು ಮಗುವೂ ತಾಯಿಯ ವಿರುದ್ಧ ತಂದೆಯನ್ನೋ ತಂದೆಯ ವಿರುದ್ಧವಾಗಿ ತಾಯಿಯನ್ನೋ ಉಪಯೋಗಿಸುವುದು ಸಹಜ. ಏನಾದರೂ ಮಾಡಬೇಡವೆಂದು ಹೇಳಿದರೆ “ಮತ್ತೆ
ಪಪ್ಪಾ ಹೂಂ ಅಂದಾರಲ್ಲ ” ಎಂದು. ಕಿಶೋರರು ಇದರಲ್ಲಿ ಇನ್ನೂ ಒಂದು ಹೆಜ್ಜೆ ಮುಂದುವರಿದಿರುತ್ತಾರೆ. ಅದರಲ್ಲೂ ಅಪ್ಪ ಅಮ್ಮ ಜಗಳಾಡುತ್ತಿದ್ದರೆ ಇನ್ನೂ ಅನುಕೂಲ. ಅದಕ್ಕೇ ಮಕ್ಕಳ ಎದುರು ಜಗಳವಾಡಬಾರದೆಂದು ಹಿರಿಯರು ಹೇಳುವುದು. ಮಕ್ಕಳ ಪಾಲನೆ ಇಬ್ಬರಿಗೂ ಸೇರಿದ ಒಂದು ಜವಾಬ್ದಾರಿ. ಮಕ್ಕಳ ಎದುರಿಗೆ ಇಬ್ಬರದೂ ಒಂದೇ ಅಭಿಪ್ರಾಯವಾಗಿರಬೇಕು. ಇಬ್ಬರೇ ಇರುವಾಗಲೇ ಭಿನ್ನಾಭಿಪ್ರಾಯಗಳಿದ್ದರೆ ಬಗೆಹರಿಸಿಕೊಳ್ಳಬೇಕು. ಅಲ್ಲದೆ ಮಕ್ಕಳಿಗೆ ಒಂದಿಷ್ಟು ಏಕಾಂತವೂ ಬೇಕು. ಹದಿಹರೆಯದ ಮಕ್ಕಳು ಹಿರಿಯರ ಒಂದು ಕಿರುರೂಪ. ಮಕ್ಕಳ ಡಾಯರಿಯನ್ನು ಓದುವುದು ತಾಯಿಯ ಒಂದು ಕಾಳಜಿಯನ್ನು ತೋರುವುದಾದರೂ ಇದು ಸರಿಯಲ್ಲ. ಅವರಿಗೆ ಇದರಿಂದ ಅವಮಾನವಾಗುತ್ತದೆ. ಮಕ್ಕಳು ಚಿಕ್ಕವರಿದ್ದಾಗ ಅವರ ಮೇಲೆ ಕಣ್ಣಿಡುವುದು ಸರಿಯಾದರೂ ದೊಡ್ಡವರಾದಾಗ ಅದು ಕಿರಿಕಿರಿಯಾಗುತ್ತದೆ. ಮಕ್ಕಳ ಇಚ್ಛೆಗಳನ್ನು ಪೂರೈಸುವುದು ತಂದೆ ತಾಯಿಯರ ಕರ್ತವ್ಯವಾದರೂ ಒಮ್ಮೊಮ್ಮೆ ಅವು ಸರಿಯೆನ್ನಿಸದಾದಾಗ ಅವರಿಗೆ ತಿಳಿಹೇಳುವುದೂ ಕಷ್ಟವೆನ್ನಿಸುತ್ತದೆ. ರವಿ ತಂದೆ ತಾಯಿಯರ ಒಬ್ಬನೇ ಮಗ. ಅವನಿಗೆ ಬೈಕ್ ಬೇಕಾಗಿತ್ತು. ಆತನ ಗೆಳೆಯರೆಲ್ಲ ಬೈಕ್ ಮೇಲೆ ತಿರುಗಾಡುವಾಗ ತಾನು ಮಾತ್ರ ಅಪ್ಪನ ಕಾರಿನಲ್ಲೋ, ಅಥವಾ ಗೆಳೆಯರ ಪಿಲಿಯನ್ ಸೀಟಿನಲ್ಲೋ ಕೂಡ್ರುವುದು ಅವಮಾನೆನ್ನಿಸುತ್ತಿತ್ತು. ಆದರೆ ತಂದೆಗೆ ಮಗನಿಗೆ ಅದನ್ನು ಸುರಕ್ಷಿತವಾಗಿ ನಡೆಸಲು ಬಾರದೆಂದು, ಇನ್ನೂ ಸ್ವಲ್ಪ ಸಮಯ ಹೋಗಲಿ ಎಂದು ಎನ್ನಿಸುತ್ತಿತ್ತು. ಇದರಿಂದಾಗಿ ಮನೆಯಲ್ಲಿ ಜಗಳ. ಅದರೆ ತಾಯಿ ಮಗನಿಗೆ ನಿನಗೆ ಇನ್ನೂ ಹದಿನೆಂಟು ವರ್ಷವಾಗಿಲ್ಲ. ಲೈಸೆನ್ಸ್ ಸಿಗಲು ಸಮಯ ಬೇಡವೇ.. ನೀನು ಅಲ್ಲಿಯವರೆಗೆ ಚೆನ್ನಾಗಿ ಬೈಕ್ ನಡೆಸುವುದನ್ನು ಕಲಿ. ತಂದೆ ಒಪ್ಪಿಯೇ ಒಪ್ಪುತ್ತಾರೆ ಎಂದು ತಿಳಿಹೇಳಿ ತಾತ್ಕಾಲಿಕವಾಗಿ ಜಗಳವನ್ನು ಬಗೆಹರಿಸಿದ್ದಳು.
ಮಕ್ಕಳನ್ನು ಪ್ರತಿಯೊಂದು ಸಮಯದಲ್ಲಿಯೂ ಬಲವಂತದಿಂದ ನಿಮ್ಮ ಅಭಿಪ್ರಾಯವನ್ನು ಮನ್ನಿಸುವಂತೆ ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಲೂಬಾರದು. ಒಟ್ಟಿನಲ್ಲಿ ಕಿಶೋರಾವಸ್ಥೆಯ ಮಕ್ಕಳನ್ನು ನಿರ್ವಹಿಸುವುದು ಬಹಳ ಜವಾಬ್ದಾರಿಯ ಕೆಲಸ. ಪೋಷಕರಿಬ್ಬರೂ ಒಮ್ಮತದಿಂದ ವಿಚಾರವಿನಿಮಯ ಮಾಡಿ, ಮಕ್ಕಳೊಡನೆ ಮುಕ್ತ ಮತುಕಥೆಯಿಂದ ವ್ಯವಹರಿಸಿದರೆ ಮಾತ್ರ ಸಮಸ್ಯಗಳನ್ನು ಬಗೆಹರಿಸಲು ಸಾಧ್ಯ. ಕೆಲವೊಮ್ಮೆ ಮಕ್ಕಳ ದೃಷ್ಟಿಕೋನಗಳನ್ನು ನಮ್ಮದಾಗಿಸಿಕೊಳ್ಳಬೇಕಾಗುತ್ತದೆ. ಇನ್ನು ಕೆಲವು ಬಾರಿ ಅವರಿಗೆ ಎಚ್ಚರವನ್ನೂ ಹೇಳಬೇಕಾಗಿತ್ತದೆ. ಸಂದರ್ಭಕ್ಕೆ ತಕ್ಕಂತೆ ಬದಲಾಗುವ ಉಪಾಯಗಳನ್ನೂ ಅನುಸರಿಸಬೇಕಾಗುತ್ತದೆ. ಒಮ್ಮೆ ಫಲಿಸಿದ ಉಪಾಯ ಯಾವಾಗಲೂ ಅದೆ ತರದ ಪರಿಣಾಮ ಮಾಡೀತೆಂದು ತಿಳಿಯಬಾರದು.
ಒಟ್ಟಿನಲ್ಲಿ ಕಿಶೋರಾವಸ್ಥೆಯೆಂದರೆ ಅದು ಸಂಕ್ರಮಣ ಕಾಲ. ಇಲ್ಲಿ ಕೇವಲ ಮಗು ಬೆಳೆಯುವುದಿಲ್ಲ. ಅದರೊಡನೆ ಪೋಷಕರೂ ಬೆಳೆಯುತ್ತಾರೆ. ಹೀಗಾಗಿ ಇಲ್ಲಿ ಸಮತೋಲನದ ಮಾರ್ಗದ ಅವಶ್ಯಕತೆಯಿದೆ. ಅವರನ್ನು ಪ್ರೀತಿಸಿ, ಅವರ ಕಷ್ಟ-ಸುಖಗಳಲ್ಲಿ ಭಾಗಿಯಾದಾಗಲೇ ಈ ಸಂಬಂಧವು ಬಲವಾಗುತ್ತದೆ. ಇಲ್ಲವಾದಲ್ಲಿ ಕಂದಕವು ಆಳವಾಗುತ್ತಹೋಗುತ್ತದೆ.
**

Leave a Reply