ಹಬ್ಬದ ದಿನವಾದರೂ ಕನ್ನಡಿಗರಂತೆ ಉಂಡು ಉಟ್ಟು ಕನ್ನಡದಲ್ಲೇ ಮಾತನಾಡೋಣ
– ಡಾ. ಆರತೀ ವಿ.ಬಿ.
ಪರಾಶಕ್ತಿಯ ಪೂಜಾಪರ್ವ ಪ್ರಾರಂಭವಾಗಿದೆ. ಜಗನ್ಮಾತೆಯ ಬಗೆಬಗೆಯ ನಾಮರೂಪಗಳನ್ನು ಬಗೆಬಗೆಯ ವಿಧಿವಿಧಾನ ಗೀತ ನೃತ್ಯ ಉತ್ಸವಾದಿಗಳಿಂದ ಪೂಜಿಸಲಾಗುತ್ತಿದೆ. ಭಾರತೀಯನ ಪಾಲಿಗೆ ದೇವರೆಂದರೆ ‘ಮೋಡದ ಮೇಲೆ ಕುಳಿತು ಶಾಸಿಸುವ ಕಾಣದ ಶಕ್ತಿ’ ಅಲ್ಲ. ನಮ್ಮ ಪಾಲಿಗೆ ದೇವರೆಂದರೆ ನಮ್ಮ ಆತ್ಮಸ್ವರೂಪ! ನಮ್ಮ ಸುತ್ತಲ ಪ್ರಕೃತಿ! ನಮ್ಮನ್ನು ಪೋಷಿಸುವ ನೆಲ ಜಲ ಭೂ ಗಗನ ಗಾಳಿಗಳು! ದವಸ ಧಾನ್ಯ ಹಣ್ಣು ತರಕಾರಿಗಳನ್ನಿತ್ತು ಪಾಲಿಸುವ ಮರಗಿಡ ವನಸ್ಪತಿ ನದನದಿಗಳು! ಹಾಲೂಡುವ ಗೋಮಾತೆ! ನಮ್ಮ ಹೆತ್ತವರು! ದಾರಿ ತೋರುವ ಗುರುಗಳು! ತಾಯ್ನಾಡು! ತಾಯ್ನುಡಿ! ನಮ್ಮನ್ನು ಉದ್ಧರಿಸುವ ಧರ್ಮ! ಮುದವೀಯುವ ಕಲೆ ಕಾವ್ಯ ವಿನೋದಗಳು! ಮನೋಬುದ್ಧಿಗಳಿಗೆ ಪಾಕವೀಯುವ ಶಾಸ್ತ್ರಗಳು, ವಿದ್ಯಾಪ್ರಕಾರಗಳು! ಇವೆಲ್ಲವೂ ದೇವಿಯದೇ ನಾನಾ ರೂಪಗಳು! ಒಟ್ಟಿನಲ್ಲಿಜೀವನದ ಎಲ್ಲವಿವರಗಳೂ ಜಗನ್ಮಾತೆಯದೇ ಅಭಿವ್ಯಕ್ತಿ!
‘ಸರ್ವಸ್ವರೂಪೇ ಸರ್ವೇಶೇ ಸರ್ವಶಕ್ತಿ ಸಮನ್ವಿತೇ’ ಎಂದೇ ಅವಳನ್ನು ಸ್ತುತಿಸುತ್ತದೆ ದುರ್ಗಾಸಪ್ತಶತಿ. ‘ತ್ವಮೇವ ಪ್ರತ್ಯಕ್ಷಂ ಬ್ರಹ್ಮಾಸಿ’ ಎಂದು ಪಂಚಭೂತಗಳಲ್ಲೇ ದೈವವನ್ನು ಕಾಣುತ್ತದೆ ವೇದ. ‘ಪ್ರಕೃತ್ಯೈ ನಮಃ, ಚರಾಚರಾತ್ಮಿಕಾಯೈ ನಮಃ’ ಎನ್ನುತ್ತ ಸ್ತುತಿಸಿವೆ ಅಷ್ಟೋತ್ತರ ಶತನಾಮಾದಿಗಳು. ಜಾನಪದ ಹೃದಯವಂತೂ ಭೂತಾಯಿ, ಗಂಗೆ, ಧಾನ್ಯರಾಶಿ, ಬೀಸೋಕಲ್ಲು, ನೇಗಿಲು, ಹೆತ್ತವ್ವ, ನಾಡು, ನುಡಿಗಳೆಲ್ಲದರಲ್ಲೂ ತಾಯಿಯ ಅನುಗ್ರಹವನ್ನೇ ಕಾಣುತ್ತದೆ! ಗ್ರಾಮದೇವತೆಗಳ ರೂಪಗಳನ್ನು ನೋಡಿ- ಮಕ್ಕಳಾದ ನಮಗೆ ಉಣ್ಣಲಿಕ್ಕಲು ಅನ್ನಪಾತ್ರೆಯನ್ನು ಹಿಡಿದ ತಾಯಿ, ಧಾನ್ಯಲಕ್ಷ್ಮಿ!ದುಷ್ಟರನ್ನು ನಿಗ್ರಹಿಸಲು ಖಡ್ಗ ಹಿಡಿವ ಕಾಳಿ! ನಿಸರ್ಗವನ್ನು ಕಲುಷಿತಗೊಳಿಸುವ ಮೂರ್ಖರಿಗೆ ‘ಸಾಂಕ್ರಾಮಿಕ’ವಾಗಿ ಕಾಡಿ, ಬುದ್ಧಿ ಕಲಿಸುವ ಮಹಾಮಾರಿ!
ಇವೆಲ್ಲ ಮೂಢನಂಬಿಕೆಗಳಲ್ಲ. ಸುಂದರ ಉದಾತ್ತ ದರ್ಶನಗಳು. ಪ್ರಕೃತಿಯೇ ಪ್ರತ್ಯಕ್ಷ ದೇವತೆ. ಅವಳನ್ನು ಗೌರವಿಸಿ ಪ್ರೀತಿಸಿ ಹಿತವರಿತು ಬಳಸುತ್ತ ಒಲಿಸಿಕೊಂಡರೆ ‘ತಾಯಿ’ಯಾಗಿ ಸಲಹುತ್ತಾಳೆ. ಅಪಬಳಕೆ ಮಾಡಿದರೆ ಮುನಿದು ‘ಮಾರಿ’ಯಾಗುತ್ತಾಳೆ ಅನ್ನುವುದನ್ನು ಭಾರತೀಯ ಹೃದಯ ಎಂದೋ ಅರಿತಿದೆ! ಹಾಗಾಗಿಯೇ ನಮ್ಮ ಪೂಜೆ ಉತ್ಸವ ಊಟ ಉಪಚಾರಗಳಲ್ಲಿ ನಿಸರ್ಗದತ್ತ ವಸ್ತುಗಳನ್ನು ಪರಿಸರಸ್ನೇಹಿ ಮಾದರಿಯಲ್ಲೇ ಬಳಸುತ್ತ ಬಂದಿದ್ದೇವೆ. ಪರಿಸರವನ್ನು ಲೂಟಿಗೈದು ಬೇಗನೆ ಹಣ ಮಾಡಿಕೊಳ್ಳುವ ಆತುರವೂ, ರಾಸಾಯನಿಕಗಳ ಬಳಕೆಯಿಂದ ಕೃತಕ ಉತ್ಪಾದನೆಗಳನ್ನು ಮಾಡುವುದೂ ನಮ್ಮ ದೇಶದ ಮೂಲ ಧರ್ಮ ಸಂಪ್ರದಾಯ ಜೀವನಶೈಲಿಗಳಲ್ಲಿ ಕಾಣಬರುವುದಿಲ್ಲ. ನಿಸರ್ಗಕ್ಕೆ ನಿಕಟವರ್ತಿಯಾಗಿಯೇ ಬಾಳಿದ ಭಾರತೀಯನ ವಿಜ್ಞಾನ ತತ್ವಜ್ಞಾನ ಕಲೆ ಆವಿಷ್ಕಾರಗಳೆಲ್ಲವೂ ನಿಸರ್ಗಕ್ಕೆ ಸಂವಾದಿಯಾಗಿ ಅರಳಿವೆ. ಆರ್ಷ ಮನಸ್ಸು ಕಣ್ಮುಚ್ಚಿ ಮಾಡುವ ಪರದೇವಿಯ ಧ್ಯಾನವನ್ನು ಕಣ್ದೆರೆದಾಗಲೂ ಮುಂದುವರೆಸಿದೆ! ಕಣ್ಣಿಗೆ ಕಾಣುವ ಸೃಷ್ಟಿಯಲ್ಲಿ ಎಲ್ಲದರಲ್ಲೂ ತಾಯಿಯದೇ ಅಸ್ತಿತ್ವವನ್ನು ಕಾಣುತ್ತೇವೆ! ನಮ್ಮ ಆಚಾರಸಂಹಿತೆಗಳೂ ವ್ರತ ಉತ್ಸವಗಳೂ ಪ್ರಾಂತೀಯ ನಂಟನ್ನು ಹೊಂದಿವೆ.
ತಾನೇ ಬೆಳೆದ ಹೂ ಹಣ್ಣು ತರಕಾರಿಗಳನ್ನು ದೇವರಿಗೆ ಅರ್ಪಿಸಬೇಕೆಂದು ಭಕ್ತಿಶಾಸ್ತ್ರಗಳು ಹೇಳುತ್ತವೆ. ಅದಾಗದಿದ್ದರೆ, ಕನಿಷ್ಟ ಮತ್ತೊಬ್ಬರ ಮನೆಯ ಅಂಗಳದ ಹೂವನ್ನು ಕದ್ದು ತರದೆ, ತನ್ನ ಸಂಪಾದನೆಯ ಬೆವರಿನಿಂದ ಕೊಂಡು ತಂದ ಹೂಹಣ್ಣುಗಳನ್ನೇ ಅರ್ಪಿಸಬೇಕು ಎನ್ನುತ್ತಾರೆ ರಾಮಾನುಜಾಚಾರ್ಯರು! ದೇವಿಯ ಪೂಜೆಗೆ ಬಳಸುವ ವಸ್ತುಗಳೂ ಅಷ್ಟೇ ನಿಸರ್ಗದತ್ತ ದ್ರವ್ಯಗಳಾಗಿರಬೇಕು. ಪರಿಸರದಲ್ಲಿ ಹೊಂದಿಕೊಂಡು ಲೀನವಾಗುವಂತಹವುಗಳು- ಅರಸಿನ, ಕುಂಕುಮ, ಹೂ, ಹಣ್ಣು, ದವಸಧಾನ್ಯ, ತೆಂಗಿನಕಾಯಿ, ನೀರು, ಹಾಲು, ತುಪ್ಪ, ಎಣ್ಣೆ, ಹತ್ತಿ, ಸಮಿತ್ತು, ಕಟ್ಟಿಗೆ, ಕಲ್ಲಿನ ಪುಡಿಯಿಂದ ಮಾಡಿದ ರಂಗೋಲಿಪುಡಿ, ಕೆಮ್ಮಣ್ಣು, ಅಕ್ಕಿಹಿಟ್ಟು ಮುಂತಾದವನ್ನೇ ಬಳಸುವುದು ಸಂಪ್ರದಾಯ.
ಕಲಶ ಸ್ಥಾಪನೆಗೆ ಬೆಳ್ಳಿ, ತಾಮ್ರ ಅಥವಾ ಮಣ್ಣಿನ ಕುಂಭಗಳು. ಅದರೊಳಗೂ ಜಲ, ಧಾನ್ಯ ಅಥವಾ ಮಂಗಳದ್ರವ್ಯಗಳನ್ನೇ ತುಂಬಲಾಗುತ್ತದೆ. ಬಾಗಿನಕ್ಕೆ ಕೊಡುವ ಮೊರವಾಗಲಿ, ಮಡಿಲಕ್ಕಿಗೆ ತುಂಬುವ ವಸ್ತುಗಳಾಗಲಿ ಎಲ್ಲವೂ ಪರಿಸರಸ್ನೇಹಿ. ಹತ್ತಿ ಅಥವಾ ರೇಶ್ಮೆ ಸೀರೆ, ರವಿಕೆ ಬಟ್ಟೆಗಳನ್ನೇ ಪೂಜೆಗೆ ಇರಿಸಬೇಕು. ಉಡುವ ಪಂಚೆಯೂ ಸೀರೆಯೂ ಹತ್ತಿ ರೇಶ್ಮೆಗಳದ್ದೇ ಆಗಿರಬೇಕು. ಮುಡಿವ ಹೂವು, ಧರಿಸುವ ಒಡವೆ ಎಲ್ಲವೂ ಚಿನ್ನ ಬೆಳ್ಳಿ ತಾಮ್ರ ಅಥವಾ ಮರದ ಗಾಜಿನ ಮಣಿಗಳ, ಜೊಂಡಿನ ಅಥವಾ ಹೂಚಿಗುರುಗಳಂತಹ ವಸ್ತುಗಳಿಂದಲೇ ಆಗಿರಬೇಕು. ವಾಯನದಾನಕ್ಕೆ ಪೊಟ್ಟಣ ಕಟ್ಟುವಾಗಲೂ ಬಾಳೆಲೆಯಲ್ಲಿ ಹರಡಿ ಅಥವಾ ಎಲೆ/ಅಡಿಕೆ ಪಟ್ಟೆಯ ದೊನ್ನೆಗಳಲ್ಲಿಕೊಡಲಾಗುತ್ತದೆ. ಅರಸಿನವನ್ನು ಅರಸಿನದ ಕೊಮ್ಮುಗಳಿಂದ ತಯಾರಿಸಲಾಗುತ್ತದೆ. ಕುಂಕುಮವನ್ನು ಅರಸಿನ ಸುಣ್ಣ ಸ್ಫಟಿಕಗಳಿಂದ ತಯಾರಿಸಲಾಗುತ್ತದೆ. ಅಂಗಣವನ್ನು ಸ್ವಚ್ಛಗೊಳಿಸಲು ಸೆಗಣಿ, ಗೋಮೂತ್ರಗಳನ್ನೂ ಶುದ್ಧ ಜಲವನ್ನೂ ಬಳಸಲಾಗುತ್ತದೆ. ಅಲಂಕಾರಕ್ಕೆ ಮಾವಿನೆಲೆ, ಬಾಳೆಕಂಬ, ಅಡಿಕೆ ಕಾಯಿ, ತೆನೆ, ಎಳನೀರಿನ ಗುಚ್ಚ, ಬಾಳೆಗೊನೆ, ತೆಂಗಿನ ಗರಿ. ಪೂಜೆ ಉತ್ಸವಗಳೆಲ್ಲ ಮುಗಿದ ಮೇಲೆ, ಎಲ್ಲವನ್ನೂ ಗುಡಿಸಿ ತೊಟ್ಟಿಗೆ ತಳ್ಳಿದರಾಯ್ತು, ಕೆಲವೇ ದಿನಗಳಲ್ಲಿಗೊಬ್ಬರವಾಗಿ ಮತ್ತೆ ಮಣ್ಣಿಗೆ ಸೇರುತ್ತವೆ.
ಆದರೆ ಈಚಿನ ದಶಕಗಳಿಂದ ನಾವು ಸಂಪ್ರದಾಯದಲ್ಲಿನ ಈ ನಿಸರ್ಗಪ್ರೇಮದ ಮೂಲಾಂಶವನ್ನೇ ಮರೆತಂತಿದೆ! ವಿದೇಶೀಯರು ಉತ್ಪಾದಿಸಿದ ಕೃತಕ ವಸ್ತುಗಳನ್ನೆಲ್ಲ ಪ್ರಶ್ನಿಸದೆ ಪ್ರಮಾಣಿಸದೆ ನಮ್ಮೊಳಗೆ ಪ್ರವೇಶಿಸಗೊಟ್ಟಿದ್ದೇ ಇದಕ್ಕೆ ಕಾರಣ! ಬಾಳೆಲೆ, ಅಡಕೆ ದೊನ್ನೆಗಳ ಜಾಗದಲ್ಲಿ ಪ್ಲಾಸ್ಟಿಕ್ ತಟ್ಟೆ, ದೊನ್ನೆ- ಡಬ್ಬಗಳು ಬಂದಿವೆ. ಈ ಪ್ಲಾಸ್ಟಿಕ್ಗಳನ್ನು ದೇವಿಯ ಪೂಜೆಯಲ್ಲಿ ಬಳಸುವುದು ಸಂಪ್ರದಾಯ ವಿರೋಧಿ, ಪರಿಸರಕ್ಕೂ ಹಾನಿಕರ. ಅರಸಿನ ಕುಂಕುಮ ಅಕ್ಷತೆ, ಹೂವು ಹಣ್ಣು ತರಕಾರಿಗೂ ಪ್ಲಾಸ್ಟಿಕ್ ಚೀಲ ಬಳಕೆ ಸಿಕ್ಕಾಪಟ್ಟೆ ಹೆಚ್ಚಿದೆ. ನೈವೇದ್ಯಕ್ಕೂ ಭೋಜನಕ್ಕೂ ಉಪಾಯನದಾನಕ್ಕೂ ಪ್ಲಾಸ್ಟಿಕ್ ಅಥವಾ ಮೆಲಮೈನ್ ತಟ್ಟೆ ಬಟ್ಟಲುಗಳೇ! ದೇವರ ವಿಗ್ರಹದ ಮೈಮೇಲೂ ಪ್ಲಾಸ್ಟಿಕ್ ಹೂವು, ಒಡವೆ ಹಾಕುವ ಮಟ್ಟಕ್ಕೂ ಹೋಗಿದ್ದೇವೆ! ತೀರ್ಥಸ್ನಾನಕ್ಕೆಂದು ಭಕ್ತಿಯಿಂದ ಹೋಗುತ್ತೇವೆ. ಅದೇನೋ ಸರಿ. ಆದರೆ ನದಿಗಿಳಿಯುವಾಗ ಕಡಲೆಹಿಟ್ಟು ಅರಸಿಣ ಅಳಲೇಕಾಯಿಗಳನ್ನೇ ಬಳಸುವ ಸಂಪ್ರದಾಯವನ್ನು ಮಾತ್ರ ಪಾಲಿಸುವುದಿಲ್ಲ. ರಾಸಾಯನಿಕ ಸಾಬೂನು ಶ್ಯಾಂಪೂ ಬಳಸಿ ನದಿಯ ನೀರಲ್ಲಿನ ಬಡಪಾಯಿ ಮೀನು ಕಪ್ಪೆ ಕೀಟಗಳಿಗೆ ಸಾವುನೋವು ಉಂಟುಮಾಡುತ್ತೇವೆ! ದೇವಿಯು ನಮ್ಮ ಭಕ್ತಿಗೆ ವರವನ್ನೀಯಬೇಕೋ? ನಮ್ಮ ಈ ಪರಿಸರದ್ರೋಹಕ್ಕೆ ಶಾಪವನ್ನೀಯಬೇಕೊ?
ಈ ನವರಾತ್ರೋತ್ಸವದಲ್ಲಿ ನಾವೆಲ್ಲ ಒಂದು ನವಸಂಕಲ್ಪವನ್ನು ಮಾಡೋಣ. ನಮ್ಮ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳನ್ನು ಸಂಪ್ರದಾಯದಂತೆಯೇ ಪರಿಸರಸ್ನೇಹಿ ಮಾದರಿಯಲ್ಲೇ ಆಚರಿಸೋಣ. ಈಗಾಗಲೇ ನಾವು ಕನ್ನಡಿಗರು ಇಡೀ ದೇಶದಲ್ಲೇ ಎಲ್ಲರಿಗಿಂತ ಮುಂದಾಗಿ, ವೇಗವಾಗಿ ಪರಿಸರಸ್ನೇಹಿ ಗಣಪತಿಯನ್ನೇ ಆರಾಧಿಸಲಾರಂಭಿಸಿಲ್ಲವೆ?! ಪಿಒಪಿ ಹಾಗೂ ರಾಸಾಯನಿಕ ಬಣ್ಣಗಳ ಗಣಪತಿ ಮೂರ್ತಿಗಳನ್ನು ಮಾರುಕಟ್ಟೆಯಿಂದ ಓಡಿಸುತ್ತಿಲ್ಲವೆ? ಇದೇ ಸಸ್ಕಾರಂತಿಯನ್ನು ನವರಾತ್ರಕ್ಕೂ ಇತರ ಹಬ್ಬಗಳಿಗೂ ಮುಂಬರೆಸೋಣ! ಈ ನವರಾತ್ರವು ಪ್ಲಾಸ್ಟಿಕ್ ರಹಿತ ನವರಾತ್ರವಾಗಲಿ.
ಆದರೆ ಪ್ಲಾಸ್ಟಿಕ್ ವಸ್ತುಗಳಿಗೆ ಪರ್ಯಾಯಗಳೇನು ಎನ್ನುವಿರೋ? ನವರಾತ್ರದ ಬೊಂಬೆಗಳನ್ನು ಜೋಡಿಸುವಾಗ ಕೇವಲ ಮಣ್ಣಿನ ಬೊಂಬೆಗಳನ್ನೇ ಜೋಡಿಸಬೇಕು, ಅದನ್ನೇ ಪಾಲಿಸೋಣ. ಬೇಕಾದರೆ ಮರದ, ಜೊಂಡಿನ, ಗಾಜಿನ ಮಣಿಯ ಹಾಗೂ ನೈಸರ್ಗಿಕ ವಸ್ತುಗಳ ಬೊಂಬೆಗಳನ್ನೂ ಜೊತೆಗೆ ಇಡಬಹುದು. ಆದರೆ ಚೀನಾದಿಂದ ಬರುವ ಆಗಮ ಶಾಸ್ತ್ರ ವಿರೋಧಿಯಾದ ಆಕಾರ ಬಣ್ಣಗಳ ರಾಸಾಯನಿಕಗಳ ಬೊಂಬೆಗಳು ಬೇಡ.
ಬಟ್ಟೆ, ಸೆಣಬು ಅಥವಾ ದಾರಗಳಿಂದ ಹೆಣೆದಿರುವ ಕಲಾತ್ಮಕ ಚೀಲಗಳನ್ನು ಬಳಸಲು ವಿಪುಲಾವಕಾಶವಿದೆ. ಮರದಲ್ಲಿ ಮಾಡಿದ ಅಥವಾ ಅಡಕೆಪಟ್ಟೆ, ಲೋಹ, ಬೆತ್ತಗಳಿಂದ ತಯಾರಿಸಿದ ಸುಂದರ ಬಟ್ಟಲು ತಟ್ಟೆಗಳು ಲಭ್ಯವಿವೆ. ಅರಸಿನ ಕುಂಕುಮಗಳನ್ನಿಟ್ಟು ಕೊಡಲು ಪುಟ್ಟ ಮರದ, ಮಣ್ಣಿನ, ಬೆತ್ತದ ಲೋಹದ ಡಬ್ಬಗಳೂ ಸಿಗುತ್ತವೆ.
ಬಾಗಿಲಲ್ಲಿ ಪ್ಲಾಸ್ಟಿಕ್ ತೋರಣ ಕಟ್ಟುವುದು ಬೇಡ. ದಶಕಗಳ ಹಿಂದೆ ಮನೆಯವರೆಲ್ಲ ಕೂಡಿ ಸಣ್ಣ ಗೋಣಿದಾರಕ್ಕೆ ಮಾವಿನ ಎಲೆ ಪೋಣಿಸಿ ಕಟ್ಟುತ್ತಿದ್ದೆವಲ್ಲ! ಆ ಸುಂದರ ಕಲೆಯನ್ನು ಪುನರುಜ್ಜೀವಿಸಬಾರದೇಕೆ? ಮಕ್ಕಳು ಸಡಗರದಿಂದ ಇವನ್ನೆಲ್ಲ ಮಾಡುತ್ತಾರೆ! ಅಲಂಕಾರಕ್ಕೆ ಪ್ಲಾಸ್ಟಿಕ್ ಕೈಟ್ ಬಂಟಿಂಗ್ ಬಳಕೆ ನಿಲ್ಲಿಸೋಣ. ಹೂಮಾಲೆ, ಮಾವಿನೆಲೆ, ಬಾಳೆಕಂಬ, ಅಡಕೆ ತೆನೆಗಳನ್ನೇ ಬಳಸೋಣ. ರೆಡಿಮೇಡ್ ಪ್ಲಾಸ್ಟಿಕ್ ರಂಗೋಲಿಗಳ ಹುಚ್ಚು ಸಾಕು. ಸ್ಟೆನ್ಸಿಲನ್ನಾದರೂ ಬಳಸಿ ನಿಜವಾದ ರಂಗವಲ್ಲಿ ರಚಿಸೋಣ. ಗರಿಕೆ, ಹೂವು, ಎಲೆ, ಧಾನ್ಯಗಳಿಂದ ರಂಗೋಲಿ ತುಂಬುವ ಕೆಲಸವನ್ನು ಮಕ್ಕಳು ಉತ್ಸಾಹದಿಂದ ಮಾಡದಿದ್ದರೆ ಕೇಳಿ! ದೇವಿಗೆ ಉಡಿಸುವ ಸೀರೆಯು ಹತ್ತಿ ಅಥವಾ ರೇಶಿಮೆಯದಾಗಿರಲಿ, ಅಲಂಕಾರಕ್ಕೆ ಜೊಂಡು, ಗಾಜಿನ ಮಣಿ, ಮರ, ಬೆತ್ತ, ಶಂಖ, ಗೋಧಿತೆನೆ, ಎಲೆ, ಹೂವು, ಲೋಹ ಮುಂತಾದವುಗಳಿಂದ ತಯಾರಾದ ವಸ್ತುಗಳನ್ನೇ ಬಳಸೋಣ. ಬಂಗಾಳದಲ್ಲಂತೂ ಜೊಂಡಿನ ಕಲಾಕೃತಿಗಳ ಜಗತ್ತೇ ಸೃಷ್ಟಿಯಾಗಿದೆ! ನಾವೂ ನಮ್ಮ ಪ್ರದೇಶದ ಅಡಕೆಪಟ್ಟೆ ಬಾಳೆಲೆಗಳನ್ನು ಬಳಸಿ ಅಂತಹ ಕಲಾಪ್ರಪಂಚವನ್ನೇ ಸೃಜಿಸಬಾರದೇಕೆ?
ಹಬ್ಬದಂದು ಸಿಂಥೆಟಿಕ್ ಅಥವಾ ಪಾಶ್ಚಾತ್ಯ ಉಡುಗೆ ಬಿಟ್ಟು ಭಾರತೀಯ ಉಡುಗೆಗಳನ್ನು ತೊಡೋಣ. ದೇಶೀ ಸೊಬಗನ್ನು ಅಂದಗೆಡಿಸುವ ವಿದೇಶೀ ಉಡುಪುಗಳನ್ನು ಹಬ್ಬದಂದಾದರೂ ಅತ್ತ ಎಸೆದು, ದೇವ ದೇವಿಯರಂತೆ ಸಾಂಪ್ರದಾಯಿಕ ವೇಷಭೂಷಗಳಲ್ಲಿ ಸಂಭ್ರಮಿಸೋಣ. ಲೋಹ, ಟೆರಕೋಟಾ, ಗಾಜಿನ ಮಣಿ, ಬಿದಿರುಗಳ ವೇಷಭೂಷಗಳನ್ನೇ ಧರಿಸೋಣ. ತಲೆಗೂ ಪ್ಲಾಸ್ಟಿಕ್ ಕ್ಲಿಪ್ಗಳ ಬದಲು, ಲೋಹದ ಗಾಜಿನ ಮಣಿಗಳ ಕ್ಲಿಪ್ ಧರಿಸೋಣ. ಊಟಕ್ಕೆ ಪ್ಲಾಸ್ಟಿಕ್ ಬಟ್ಟಲುಗಳ ಬದಲು, ಬೆಳ್ಳಿ ತಾಮ್ರ ಅಥವಾ ಸ್ಟೀಲ್ ಬಳಸೋಣ. ಅತಿಥಿ ಅಭ್ಯಾಗತರಿಗೂ ಅದನ್ನೇ ಬಳಸೋಣ.
ನೋಡುತ್ತಿರಿ, ನಾವು ಸಾಂಪ್ರದಾಯಿಕ ವಿನ್ಯಾಸಗಳ ಪರಿಸರಸ್ನೇಹಿ ವಸ್ತುಗಳನ್ನೇ ಹೆಚ್ಚಾಗಿ ಬಳಸುತ್ತ ಹೋದಂತೆ, ಮಾರುಕಟ್ಟೆಯಲ್ಲೂಆ ಉತ್ಪನ್ನಗಳೇ ಹೆಚ್ಚುತ್ತ ಹೋಗುತ್ತವೆ. ಉತ್ಪನ್ನಗಳು ಹೆಚ್ಚಿದಂತೆ ದರವೂ ಕುಗ್ಗುತ್ತದೆ. ಭಾರತೀಯತೆಯ ಸೊಗಡೂ ಹೆಚ್ಚುತ್ತದೆ! ನಮ್ಮ ಸಾಂಸ್ಕೃತಿಕ ಅಸ್ಮಿತೆಯು ಎದ್ದು ಕಾಣುತ್ತದೆ! ಹಬ್ಬದ ದಿನವಾದರೂ ಮನೆಯಲ್ಲಿಕನ್ನಡಿಗರಂತೆ ವೇಷ ಧರಿಸಿ, ಕನ್ನಡದ ಅಡುಗೆ ಮಾಡಿ, ಕನ್ನಡದಲ್ಲೇ ಮಾತನಾಡುವುದನ್ನು ಮರೆಯದಿರೋಣ!
ಕೃಪೆ:ವಿಜಯಕರ್ನಾಟಕ