ಓಂ ಶ್ರೀ ಗುರುಭ್ಯೋ ನಮಃ
ವ್ಯಾಸಾಯ ವಿಷ್ಣು ರೂಪಾಯ
ವ್ಯಾಸ ರೂಪಾಯ ವಿಷ್ಣವೇ
ನಮೋ ವೈ ಬ್ರಹ್ಮನಿಧಯೇ
ವಾಸಿಷ್ಠಾಯ ನಮೋ ನಮಃ
ಎಂದು ವ್ಯಾಸ ಮಹರ್ಷಿಯನ್ನು ನೆನೆಸುತ್ತಾ ಎಲ್ಲರಿಗೂ ಗುರುಪೂರ್ಣಿಮೆಯ ಶುಭಾಶಯಗಳು.
ಅಂಧಕಾರವನ್ನು ಹೋಗಲಾಡಿಸುವವರು ನಮ್ಮ ಗುರು , ನಮ್ಮ ಗುರು ಎಂದರೆ ನಮಗೆ ಯಾರು ಬುದ್ಧಿ ಮಾತು ತಿಳಿಮಾತನ್ನು ಹೇಳುತ್ತಾರೋ ಅವರೆಲ್ಲರೂ ನಮ್ಮ ಗುರುಗಳು. “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂದು ಪುರಂದರದಾಸರು ಸತ್ಯವನ್ನೇ ಹೇಳಿದ್ದಾರೆ. ಭಾರತದಲ್ಲಿ ಗುರುವಿಗೆ ಪ್ರಥಮ ಸ್ಥಾನವಿದೆ ನಮ್ಮೆಲ್ಲರ ಮೊದಲ ಗುರು ತಾಯಿ. ಒಂದು ಗಾದೆ ಮಾತಿದೆ ‘ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು’ ಎಂದು.
ರಾಮ, ಕೃಷ್ಣನನ್ನು ಹಿಡಿದು ಎಲ್ಲರಿಗೂ ಗುರುಗಳು ಇದ್ದೆ ಇರುತ್ತಾರೆ. ಗುರುವು ಭಗವಂತನ ಸ್ವರೂಪನು, ಜ್ಞಾನವನ್ನು ಬಿತ್ತುವವನು, ನಮ್ಮನ್ನು ಪೋಷಿಸುವನು, ನಮ್ಮ ಅಜ್ಞಾನವನ್ನು ಹೋಗಲಾಡಿಸುವವನು ಗುರುವಾಗಿದ್ದಾನೆ. ಗುರು ಮತ್ತು ಭಗವಂತ ಇಬ್ಬರಲ್ಲಿ ಗುರುವೇ ಶ್ರೇಷ್ಠನು. ಗುರುವು ನಮಗೆ ಭಗವಂತನನ್ನು ತಿಳಿಯಲು ಸಹಾಯ ಮಾಡುವನು. ಪ್ರತಿಯೊಬ್ಬ ಜೀವಿಯ ಜೀವನದಲ್ಲಿ ಅವನ ಸಾಧನೆಯ ಹಿಂದೆ ಗುರುವಿನ ಪಾತ್ರ ಮಹತ್ವದ್ದಾಗಿದೆ. ರಾಮನಿಗೆ ವಶಿಷ್ಠ- ವಿಶ್ವಾಮಿತ್ತರು, ಕೃಷ್ಣನಿಗೆ ಸಾಂದೀಪನಿ ಮಹರ್ಷಿಗಳು, ಚಂದ್ರ ಗುಪ್ತ ಮೌರ್ಯನಿಗೆ ಚಾಣಕ್ಯನು , ಅಲೆಕ್ಸಾಂಡರ್ ನಿಗೆ ಅರಿಸ್ಟಾಟಲ್ ನು, ನರೇಂದ್ರನಾಥ ದತ್ತನಿಗೆ ಸ್ವಾಮಿ ವಿವೇಕಾನಂದನಾಗುವಲ್ಲಿ ರಾಮಕೃಷ್ಣ ಪರಮಹಂಸರು ಮುಂತಾದ ಗುರುಗಳ ಮಹತ್ವದ ಪಾತ್ರವಿದೆ.
ಹೀಗೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಗುರುವಿನ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅಂತಹ ಮಹಾನ್ ಗುರುಗಳಿಗೆ ಕೋಟಿ ಕೋಟಿ ವಂದನೆಗಳು.
ನಚಿಕೇತ ಪಾಟೀಲ