ಪರಿಸರ ಸಾಹಿತ್ಯದಲ್ಲಿ ವಿನೂತನ ಪ್ರಯೋಗ
ಮಾತಿಗಿಳಿದ ಮಾಯಾಮೃಗ: ವನ್ಯವಿಸ್ಮಯದ ಕೌತುಕÀ ಕಥೆ !
-ಪ್ರಸನ್ನ ಕರ್ಪೂರ್
ಸಾಮಾನ್ಯವಾಗಿ ನಾವೆಲ್ಲ ಓದಿರೋದು ಮನುಷ್ಯರ ಆತ್ಮಚರಿತೆ ಅಥವಾ ಕಥೆ. ಆದರೆ ವನ್ಯಜೀವಿಯದ್ದೂ ಆತ್ಮಕಥೆ ಬಂದಿದೆ ಎಂದರೆ ಆಶ್ಚರ್ಯವಷ್ಟೇ ಅಲ್ಲ ಕುತೂಹಲಕಾರಿಯೂ ಹೌದು. ಹಲವರಲ್ಲಿ ಅದ್ಹೇಗೆ ಎನ್ನುವ ಪ್ರಶ್ನೆ ಉದ್ಭವಿಸೋದು ಸಹಜ. ಆಶ್ಚರ್ಯ ಹಾಗೂ ಅಪರೂಪವೆನಿಸಿದರೂ ಅದು ಸತ್ಯ. ವನ್ಯಜೀವಿಯೊಂದಿಗೆ 15 ವರ್ಷಗಳ ಒಡನಾಟದ ಪ್ರಸಂಗಗಳಿಗೆ ಅಕ್ಷರರೂಪ ನೀಡುವ ಸಾಹಸಕ್ಕೆ ಕೈ ಹಾಕಿ ಹೀಗೂ ಉಂಟೇ ಎಂದೆನೆಸಿಕೊಂಡವರು ಕೃಷಿ, ಪರಿಸರ ಬರೆಹಗಾರ ಶಿವಾನಂದ ಕಳವೆ.
ವರ್ಷವಿಡೀ ಕಾಲಿಗೆ ಚಕ್ರ ಕಟ್ಟಿಕೊಂಡು ಸಿಂಧನೂರು, ಚಿಂಚೋಳಿ, ಪುತ್ತೂರು ಅಂತ ನಾಡಿನ ಮೂಲೆ ಮೂಲೆ ತಿರುಗುವ ಶಿವಾನಂದರು ಈ ಕೃತಿ ಮೂಲಕ ಪರಿಸರ ಜಾಗೃತಿಯ ದಾರಿಯಲ್ಲಿ ವಿನೂತನ ಯತ್ನ ಮಾಡಿದ್ದಾರೆ. ಅವರೇ ಹೇಳುವಂತೆ ಅವರ ಕಾನು ಮೇಡಂ (ಗೌರಿ)ಪರಿಸರ ಕಥೆಗಳ ಕಣಜ.ಈ ಹಿಂದೆ ಈ ಗೌರಿಗೆ ಚುಕ್ಕಿ ಜನಿಸಿದಾಗ ಕಾನಗೌರಿ ಪುಸ್ತಕ ಬರೆದು ಇಂದಿಗೂ ಮಕ್ಕಳ ನೆಚ್ಚಿನ ಕಥಾಪುಸ್ತಕವಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಅದರ ಮುಂದುವರಿದ ಭಾಗವಾಗಿ ಗೌರಿಯ ಆತ್ಮಕಥೆಯನ್ನು ನಮ್ಮೆದುರಿಗೆ ತಂದಿದ್ದಾರೆ ಶಿವಾನಂದ. ಏನಿದೆ ಈ ಆತ್ಮಕಥೆಯಲ್ಲಿ ಅದ್ಹೇಗೆ ಓದಿಸುತ್ತ ಹೋಗುತ್ತೆ ಎಂಬ ಕುತೂಹಲಕ್ಕೆ ಇಲ್ಲಿದೆ ವಿವರ….
ಕಾಡಿನಲ್ಲಿ ಹುಲ್ಲು, ಸೊಪ್ಪು ಕಾಡುಹಣ್ಣು ತಿನ್ನುತ್ತ ಬದುಕಬೇಕಿದ್ದ ಜಿಂಕೆಯೊಂದು ಸೀಳುನಾಯಿಗಳ ದಾಳಿಗೆ ಸಿಕ್ಕಾಗ ತಾಯಿಯಿಂದ ಬೇರ್ಪಡಬೇಕಾಗುತ್ತದೆ. ಆಗ ಗಾಯಗೊಂಡ ಜಿಂಕೆಯನ್ನು ಅನಂತಗೌಡ ತಂದೊಪ್ಪಿಸಿದಾಗ ಆಶ್ರಯ ಕೊಟ್ಟಿದ್ದು ಕಳವೆ ಮನೆ. ಅಮ್ಮನ ಹಾಲು ಕುಡಿಯಬೇಕಾ ವಯಸ್ಸಿನಲ್ಲಿ ಮನುಷ್ಯರ ಸಹವಾಸ ಹೊಸತಾದರೂ ಅನಿವಾರ್ಯ.ಮನೆ ಮಕ್ಕಳ ಹಾಗೆ ಅಕ್ಕರೆ ತೋರಿಸಿ ಕಾಳಜಿ ಮಾಡಿದ ಮನೆ ಮಂದಿ ಈ ಜಿಂಕೆಗೆ ಗೌರಿ ಅಂತ ನಾಮಕರಣ ಕೂಡ ಮಾಡ್ತಾರೆ. ನಾಯಿಗಳಿಂದಾಗಿ ತಾಯಿಯಿಂದ ದೂರವಾಗಿದ್ದ ಈ ಗೌರಿಗೆ ಮನೆಯವರು ನಾಯಿ ಸಾಕಲು ಮುಂದಾದಾಗ ಒಂದೆಡೆ ಆತಂಕವೆನಿಸಿದರೂ ದನಕರುಗಳ ಜತೆಗಿನ ಕಾಡಿನ ಓಡಾಟ ಧೈರ್ಯ ತುಂಬಿತ್ತು.ಹಾಗಂತ ಅಪಾಯಗಳ ಸಂಜ್ಞೆಗಳನ್ನು ಗಮನಿಸುವುದನ್ನು ಬಿಡುವುದಿಲ್ಲ. ಹಾಯಾಗಿ ಎಮ್ಮೆಗಳ ಜತೆ ಕಾಡಿಗೆ ಹೋಗಿ ಬಂದು ದೋಸೆ ,ಸ್ವೀಟ್ ತಿನ್ನುವ ಪರಿಪಾಠ ಬೆಳೆಸಿಕೊಂಡ ಗೌರಿಯ ಬಾಲ್ಯದ ದಿನಗಳನ್ನು ಕಣ್ಣು ಕಟ್ಟುವ ಹಾಗೆ ಈ ಕೃತಿಯಲ್ಲಿ ನಿರೂಪಿಸುವಲ್ಲಿ ಲೇಖಕ ಯಶಸ್ವಿಯಾಗಿದ್ದಾರೆ. ಇದಕ್ಕೆ ಪೂರಕವಾಗಿ ಸಾಥ್ ನೀಡಿದ್ದು ಗೌರಿಯ ಅದ್ಭುತ ಫೆÇಟೋಗಳು. ಸ್ವತ: ಜಿಂಕೆಯೇ ಜೀವ ಸಂಕುಲದ ಕತೆ ಹೇಳುವಂತೆ ನವಿರು ಹಾಸ್ಯ ಶೈಲಿಯ ಪರಿಸರ ವಿಜ್ಞಾನ ಬರಹ ಈ ಕೃತಿಯ ವಿಶೇಷತೆ.
ಹೀಗೆ ದಿನಗಳುರುಳಿದಂತೆ ಯೌವ್ವನಾವಸ್ಥೆಗೆ ತಲುಪುವ ಗೌರಿ ಅರಸಿ ಬರುವ ಇನಿಯನ ಕರೆಗೆ ಓಗೊಟ್ಟು ಕಾಡು ಸೇರ್ತಾಳೆ. ನನ್ನನ್ನು ಮದುವೆಯಾಗ್ತೀಯಾ ಎಂದಾಗ ನಾಚಿ ನೀರಾಗಿದ್ದ ಗೌರಿ ತನಗೆ ಗೊತ್ತಿಲ್ಲದೇ ಆತನ ಪ್ರೇಮಪಾಶದಲ್ಲಿ ಸಿಲುಕುತ್ತಾಳೆ. ಮುಂದೆ ಮದುವೆಯೂ ಆಗ್ತಾಳೆ. ಆದರೆ ಮದುವೆಗೆ ಕಳವೆ ಜನರನ್ನ ಕರೀಯೋಕೇ ಆಗದೇ ಇರುವುದಕ್ಕೆ ವಿಷಾದ ವ್ಯಕ್ತಪಡಿಸುವ ಗೌರಿಯ ಸಂಸಾರ ಬಂಡಿ ಸಾಗುತ್ತಿರುವಾಗ ಮತ್ತೊಬ್ಬ ನ ಪ್ರವೇಶವಾಗುತ್ತದೆ. ಇಲ್ಲೂ ಗೌರಿ ಮನುಷ್ಯರಂತೆ ಡೈವೋರ್ಸ್ ನೀಡ್ತಾಳೆ. ಹೊಸ ಗಂಡನ ಜತೆ ರೈಟ್ ಅಂತಾಳೆ. ಮುಂದೆ ಹೆಣ್ಣು ಮಗುವಿಗೆ ಜನ್ಮ ನೀಡ್ತಾಳೆ. ಹಳ್ಳಿಗೆ ಬರುವ ಗೌರಿಯ ಮಗಳಿಗೆ ಚುಕ್ಕಿ ಅಂತ ನಾಮಕರಣವೂ ನಡಿಯುತ್ತದೆ. ಈ ಸಂಭ್ರಮವನ್ನು ಗ್ರಾಮಸ್ಥರು ಐಶ್ವರ್ಯ ರೈಗೆ ಮಗಳು ಹುಟ್ಟಿದಂಗಾಯ್ತು ಎಂದು ಹೋಲಿಸಿದ್ದು ಐಶ್ವರ್ಯ ಮತ್ತು ಗೌರಿಯ ಚೆಲುವಿನ ಸಾಮ್ಯತೆಗೆ ಹಿಡಿದ ಕೈಗನ್ನಡಿ.
ಮತ್ತದೇ ನಾಯಿಗಳ ಬಾಯಿಗೆ ತನ್ನ ಮಗಳು ಚುಕ್ಕಿ ಆಹಾರವಾದಳೆನ್ನುವ ಸುದ್ದಿ ಕೇಳಿ ಪರಿತಪಿಸುವ ಗೌರಿ ಕೆಲದ ದಿನಗಳ ನಂತರ ಅಂದರೆ ಗಾಂಧಿಜಯಂತಿಯಂದು ಗಂಡುಮಗುವಿಗೆ ಜನ್ಮ ನೀಡ್ತಾಳೆ. ಗಣೇಶ ಹೆಸರಿನ ಈ ಗಂಡುಗಲಿ ಹೆತ್ತ ಗೌರಿ ಮತ್ತು ಆಕೆಯ ಗಂಡನ ನಡುವಿನ ಸರಸದ ಸನ್ನಿವೇಶಗಳನ್ನು ಬಹಳ ರಸವತ್ತಾಗಿ ಕಟ್ಟಿಕೊಟ್ಟಿದ್ದು ಲೇಖಕರ ಬರವಣಿಗೆಯ ಶಕ್ತಿ. ಗೌರಿ ಮಗ ಕೋಡುಗಳನ್ನು ತಿಕ್ಕುವ ಮೂಲಕ ಪತ್ರ ಬರೆಯಹತ್ತಿದ ಕೂಡಲೇ ಆತನಿಗೆ ಲಕ್ಷ್ಮೀ ಜತೆ ಮದುವೆ ಕೂಡ ನಡೆಯುತ್ತದೆ. ಮದುವೆಯಾದ ನಂತರ ಕೋಡು ಕಳೆದುಕೊಂಡು ಹೈರಾಣಾದ ಗಣೇಶನ ಕಥೆಯೂ ಅಷ್ಟೇ ಸ್ವಾರಸ್ಯಕರವಾಗಿದೆ. ಹೀಗೆ ಮಕ್ಕಳೊಂದಿಗೆ 15 ವರ್ಷ ಸಂಸಾರ ಸಾಗಿಸಿದ ಗೌರಿ ಕಾಡಿನಲ್ಲಿ ಮಕ್ಕಳ ಲಾಲನೆ ಪಾಲನೆ ಮಾಡಿದ ಪರಿ ಅನನ್ಯ.
ಕಳವೆ ಮನೆಯವರೊಡಗಿನ ಈ ಜಿಂಕೆ ಒಡನಾಟ ವನ್ಯಜೀವಿ ಸಂರಕ್ಷಣೆಗೆ ಹೇಳಿಮಾಡಿಸಿದ ಯೋಜನೆಯಂತಿದೆ. ತನ್ನ ಬದುಕಿನ ಕಥೆ ಮೂಲಕ ಗೌರಿ ಪರಿಸರದ ಒಂದಿಷ್ಟು ಸತ್ಯ ದರ್ಶನ ಮಾಡಿಸಿದ್ದಾಳೆ.ವನ್ಯಜೀವಿಗಳೆಂದರೆ ಕೀಳಾಗಿ ಅಥವಾ ಅಸಡ್ಡೆಯಾಗಿ ಕಾಣುವ ಹಲವರ ಬಗ್ಗೆ , ಭೂಮಿ ನಮ್ಮ ಕುಲದ ಸ್ವಂತ ಆಸ್ತಿಯೆನ್ನುವಂತೆ ವರ್ತಿಸುವ ಜನರ ಬಗ್ಗೆ ಗೌರಿಯ ಬೇಸರ ಇಂದಿಗೂ ಅಷ್ಟೇ ಪ್ರಸ್ತುತ. ಕಳವೆಯವರನ್ನು ಕಂಡಾಕ್ಷಣ ಬರುವ ಜಿಂಕೆಗಳ ಅಕ್ಕರೆಗೆ ಪದಗಳೇ ಸಾಲದು. ಒಂದು ವೇಳೆ ಅದನ್ನು ನೋಡಬೇಕೆಂದಿದ್ದರೆ ಅದಕ್ಕೆ ಕಳವೆಗೆ ಹೋಗುವುದೊಂದೇ ಮಾರ್ಗ. ಹಳ್ಳಿ-ಕಾಡಿನ ನಡುವಿನ ಜೀವ ಸೇತುವೆಯಾಗಿ ಬೆಳೆದ ಗೌರಿ ತೆರೆದಿಟ್ಟ ವನ್ಯಲೋಕದ ವಿಸ್ಮಯಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟ ಶಿವಾನಂದರ ಶ್ರಮ ಸ್ತುತ್ಯರ್ಹ.
ಗೌರಿ ಕಳವೆಗೆ ಭೇಟಿ ನೀಡುವ ಎಲ್ಲರ ಗಮನಸೆಳೆಯುವ ಸೆಲೆಬ್ರೆಟಿ.ಜತೆಗೆ ಶಿವಾನಂದರಿಗೆ ಕಾಡಿನಗರ್ಭದಲ್ಲಡಗಿರುವ ರಹಸ್ಯಗಳನ್ನರಿಯಲು , ವಿಸ್ಮಯಗಳನ್ನು ತಿಳಿಯಲು ಗೈಡ್ ಕೂಡ ಹೌದು. ಬಗಲಿಗೆ ಕ್ಯಾಮೆರಾ ಹಾಕಿಕೊಂಡು ಬೆನ್ನಟ್ಟಿ ಕಾಡುಭಾಷೆ ಒಲಿಸಿಕೊಂಡ ಕಳವೆಗೆ ಎಂದೂ ನಿರಾಸೆಮಾಡದ ಗೌರಿ ಮೂಲಕ ವನ್ಯಲೋಕದ ವಿಸ್ಮಯವನ್ನು ಈ ಕೃತಿ ಸಾರುವುದರಲ್ಲಿ ಯಶಸ್ವಿಯಾಗಿದೆ. 40 ವರ್ಣಪುಟಗಳಲ್ಲಿ ಜಿಂಕೆಗಳ ಬದುಕಿನ ವಿಶೇಷಗಳನ್ನು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಸೆರೆಹಿಡಿಯಲಾಗಿದೆ. ಕನ್ನಡದ ಖ್ಯಾತ ಪರಿಸರ ಬರಹಗಾರ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ನೆನಪಿಗೆ ಕೃತಿಯನ್ನು ಅವರಿಗೆ ಅರ್ಪಿಸಲಾಗಿದೆ.