ಗೊರಬು
ಗೊರಬು, ಗೊರಗ ಅಥವಾ ಕೊರಂಬು ಎಂದೆಲ್ಲಾ ಹೆಸರಿಸುವ ಈ ಪರಿಕರ, ಮಲೆನಾಡಿನ ಜಡಿ ಮಳೆಯ ಸಂದರ್ಭಗಳಲ್ಲಿ ಉಳುಮೆ ಮಾಡುವಾಗ, ಗದ್ದೆ ನಾಟಿ ಮಾಡುವಾಗ, ತೋಟದ ಕೆಲಸ ಮಾಡುವಾಗ ರಭಸವಾಗಿ ಅಪ್ಪಳಿಸುವ ಮಳೆಯಿಂದ ರಕ್ಷಿಸಿಕೊಳ್ಳಲು ಬಳಕೆಯಾಗುತ್ತಿತ್ತು. ಬೆಳಿಗ್ಗೆಯಿಂದ ಸಂಜೆವರೆಗೆ ರೈತಾಪಿ ಜನರನ್ನು ಬೆಚ್ಚಗಿಡುತ್ತಿದ್ದ ಗೊರಬು ಶತ ಶತಮಾನಗಳ ಇತಿಹಾಸ ಹೊಂದಿದ್ದು, ಒಂದು ಕಾಲದಲ್ಲಿ ಬೇಸಾಯ ಬದುಕಿನ ಒಂದು ಅವಿಭಾಜ್ಯ ಅಂಗವೇ ಆಗಿತ್ತು. ಗೊರಗ ಅಥವಾ ಗೊರಬನ್ನು ತಾಳೆ ಅಥವಾ ಈಚಲು ಮರದ ಒಣಗಿದ ಎಲೆಗಳನ್ನು (ಕೆಲವು ಭಾಗದಲ್ಲಿ ಧೂಪದ ಮರದ ಎಲೆ ) ಬಳ್ಸಿ ತ್ರಿಭುಜಾಕೃತಿಯ ಮಾದರಿಯಲ್ಲಿ ತಯಾರಿಸುತ್ತಿದ್ದರು. ಕಾಲ ಉರುಳಿದಂತೆ ಗೊರಬು ನೇಪಥ್ಯಕ್ಕೆ ಸರಿದು ಹೋಯಿತು. ಕಾರಣ, ಮಲೆನಾಡಿನಲ್ಲಿ ಕೃಷಿ ಚಟುವಟಿಕೆಯ ಜೊತೆಗೆ ಮಳೆಯ ಪ್ರಮಾಣ ಕೂಡಾ ಕಡಿಮೆಯಾಗಿದ್ದು, ಅರಣ್ಯ ನಾಶದಿಂದ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳ ಕೊರತೆ, ಕಡಿಮೆ ಬೆಲೆ ಮತ್ತು ಸುಲಭವಾಗಿ ಲಭಿಸುವ ರೈನ್ ಕೋಟ್ ಗಳು, ಕೊಡೆ, ಪ್ಲಾಸ್ಟಿಕ್ ಕೊಪ್ಪೆಗಳು, ಗೊರಬಿನಾಕೃತಿಯಲ್ಲಿಯೇ ಹೊಲೆದ ರೆಡಿಮೇಡ್ ಕವಚಗಳಿಗೆ ಜನ ಆಕರ್ಷಿತರಾಗಿ ಗೊರಬು ತನ್ನ ಬೇಡಿಕೆಯನ್ನು ಕಳೆದುಕೊಂಡಿತು. ಈಗ ಗೊರಬುಗಳ ನೋಟ ಕಾಣುವುದೇ ಅಪರೂಪ.
ಹೊಸ್ಮನೆ ಮುತ್ತು