ಸಮಾಜದಲ್ಲಿ ನಾವು ಬದುಕುವಾಗ ಯಾರ ಸಹಕಾರವೂ ಇಲ್ಲದೆ ಬದುಕುವುದು ಅಸಾಧ್ಯ. ಅವರಲ್ಲಿ ಕೆಲವು ವ್ಯಕ್ತಿಗಳು ಮನಸ್ಸಿಗೆ ಹತ್ತಿರವಾಗುತ್ತಾರೆ. ಅವರೊಡನೆ ನಮಗೆ ಗೆಳೆತನವು ಬೆಳೆಯುತ್ತದೆ. ಇದಕ್ಕೆ ಆ ವ್ಯಕ್ತಿಗಳ ನಡುವೆ ಇರುವ ಸಮಾನವಾದ ಸ್ವಭಾವ, ಆಸಕ್ತಿ, ಹವ್ಯಾಸ ಇತ್ಯಾದಿಯೇ ಮೂಲ. ಇದನ್ನೇ ತಿಳಿದವರು ‘ಸಮಾನಶೀಲವ್ಯಸನೇಷು ಸಖ್ಯಮ್’ ಎಂದಿದ್ದಾರೆ. ವ್ಯಸನಶಬ್ದಕ್ಕೆ ಆಪತ್ತು ಎಂದೂ ಅರ್ಥವಿದೆ. ಒಂದೇ ತೆರನಾದ ಆಪತ್ತಿಗೆ ಗುರಿಯಾದವರಲ್ಲಿ ಆ ಕಷ್ಟದ ತೀವ್ರತೆಯ ಅರಿವಿರುತ್ತದೆ. ಉದಾಹರಣೆಗೆ ಸೀತೆಯನ್ನು ಕಳೆದುಕೊಂಡ ಶ್ರೀರಾಮನ ದುಃಖದ ತೀವ್ರತೆಯು ಪತ್ನಿಯಿದ್ದೂ ಅವಳ ಸಾಹಚರ್ಯದ ಸೊಗವಿಲ್ಲದ ಸುಗ್ರೀವನಿಗೆ ಅರಿವಾಗುತ್ತದೆ. ಆದ್ದರಿಂದ ತಾನು ಶ್ರೀರಾಮನಿಗೆ ನೆರವಾಗುವ ಮನಸ್ಸಾಗುತ್ತದೆ. ಇಂತಹ ಗೆಳೆತನದ ಸಂಬಂಧವಿಲ್ಲದ ಬದುಕಿನ ಸ್ವರೂಪವನ್ನು ಊಹಿಸುವುದೂ ಕಷ್ಟ. ಅದನ್ನೇ ಡಿ.ವಿ.ಜಿ. ಅವರು ಕಗ್ಗದಲ್ಲಿ ‘ಮಾನುಷಸಖನ ಕೋರುವುದು ಬಡಜೀವ’ ಎಂದಿದ್ದಾರೆ. ಸ್ನೇಹನ್ನು ಬೆಳೆಸಲು ಕಿರಿಯರು, ಹಿರಿಯರು, ಬಡವರು, ಬಲ್ಲಿದರು ಮೊದಲಾದ ಯಾವುದೇ ಭೇದವು ಅಡ್ಡ ಬಾರದು. ಹದಿನಾರು ವರ್ಷಗಳು ತುಂಬಿದ ಮೇಲೆ ಮಕ್ಕಳೊಂದಿಗೆ ಮಿತ್ರರಂತೆ ನಡೆದುಕೊಳ್ಳಬೇಕು ಎಂಬುದು ಬಲ್ಲವರ ಮಾತು. ಅಷ್ಟೇಕೆ, ವಿವಾಹಸಂಸ್ಕಾರದಲ್ಲಿ ಪತ್ನಿಯನ್ನು ಗೆಳತಿಯನ್ನಾಗಿ ಕಾಣುವ ಸಂಸ್ಕೃತಿ ನಮ್ಮದು. ಗೀತೋಪದೇಶವನ್ನು ಮಾಡಿದ ಶ್ರೀಕೃಷ್ಣನನ್ನೇ ಗೆಳೆಯನನ್ನಾಗಿ ಪಡೆದ ಅರ್ಜುನನು ಸ್ನೇಹದಿಂದೊದಗುವ ಆತ್ಮಸಂಸ್ಕಾರಕ್ಕೆ ಮಿಗಿಲಾದ ನಿದರ್ಶನ. ಗೆಳೆತನಕ್ಕಿರುವ ಇನ್ನೊಂದು ಶಬ್ದ ಸ್ನೇಹ. ಸ್ನೇಹವೆಂದರೆ ಎಣ್ಣೆಯ ಜಿಡ್ಡು. ಹಿಟ್ಟು ಮೊದಲಾದುವುಗಳು ಒಟ್ಟಾಗಲು ಕಾರಣವಾಗುವ ಗುಣವೇ ಸ್ನೇಹ ಎಂದಿದ್ದಾರೆ ತರ್ಕಶಾಸ್ತ್ರದಲ್ಲಿ. ಎಣ್ಣೆಯ ಜಿಡ್ಡು ಹೇಗೆ ಹಿಟ್ಟನ್ನು ಒಟ್ಟುಗೂಡಿಸುತ್ತದೋ ಹಾಗೆಯೇ ಗೆಳೆತನ ಕೂಡ ಮನಸ್ಸುಗಳನ್ನು ಬೆಸೆಯುತ್ತದೆ. ಜಿಡ್ಡಿನಂತೆಯೇ ನಂಟು ಕೂಡ ಅಂಟಿಕೊಂಡಷ್ಟು ಸುಲಭವಾಗಿ ಹೋಗುವಂಥದ್ದಲ್ಲ. ಭರ್ತೃಹರಿಯ ನೀತಿಶತಕದಲ್ಲಿರುವ ಈ ಪದ್ಯಕ್ಕಿಂತ ಸೊಗಸಾಗಿ ಗೆಳೆತನದ ಸವಿಯನ್ನು, ಸಾರ್ಥಕ್ಯವನ್ನು ವರ್ಣಿಸಲು ಬರಲಾರದು ಎನಿಸುತ್ತದೆ. ಕ್ಷೀರೇಣಾತ್ಮಗತೋದಕಾಯ ಹಿ ಗುಣಾ ದತ್ತಾಃ ಪುರಾ ತೇಖಿಲಾಃ ಕ್ಷೀರೇ ತಾಪಮವೇಕ್ಷ್ಯ ತೇನ ಪಯಸಾ ಸ್ವಾತ್ಮಾ ಕೃಶಾನೌ ಹುತಃ | ಗಂತುಂ ಪಾವಕಮುನ್ಮನಸ್ತದಭವದ್ ದೃಷ್ಟ್ವಾ ತು ಮಿತ್ರಾಪದಂ ಯುಕ್ತಂ ತೇನ ಜಲೇನ ಶಾಮ್ಯತಿ ಸತಾಂ ಮೈತ್ರೀ ಪುನಸ್ತ್ವೀದೃಶೀ || ಹಾಲಿನೊಂದಿಗೆ ನೀರನ್ನು ಬೆರೆಸಿದಾಗ ಅದು ನೀರಿನಲ್ಲಿ ತನ್ನೆಲ್ಲ ಗುಣಗಳನ್ನು ಒಡಮೂಡಿಸಿತು. ಅದನ್ನು ಕಾಯಿಸಲೆಂದು ಒಲೆಯ ಮೇಲಿಟ್ಟಾಗ (ತನ್ನ ಗೆಳೆಯನಾದ) ಹಾಲು ಬೆಂಕಿಯಲ್ಲಿ ಕಾಯುತ್ತಿರುವುದನ್ನು ನೋಡಿ ನೀರು ತನ್ನನ್ನು ಬೆಂಕಿಗೆ ಆಹುತಿಯನ್ನಾಗಿ ಮಾಡಿಕೊಂಡಿತು (ಹಾಲು ಕಾಯುವಾಗ ನೀರಿನಂಶ ಆವಿಯಾಗಿ ಮೇಲೆ ಹೋಗುವುದು ಸಹಜವಷ್ಟೆ). ತನ್ನ ಗೆಳೆಯನಾದ ನೀರಿಗೆ ಆ ತೆರನಾದ ಆಪತ್ತು ಒದಗಿದ್ದನ್ನು ನೋಡಿ ಹಾಲು ತಾನೂ ಬೆಂಕಿಗೆ ಹಾರಲು ಮುಂದಾಯಿತು (ಕ್ರಮೇಣ ಹಾಲು ಉಕ್ಕುಕ್ಕಿ ಮೇಲೆ ಬಂದು ಬೆಂಕಿಗೆ ಬೀಳುವಂತಾಗುತ್ತದೆ). ಆ ಹೊತ್ತಿಗೆ ಅದಕ್ಕೆ ನೀರನ್ನು ಸೇರಿಸಿದಾಗ ಹಾಲು (ತನ್ನ ಗೆಳೆಯ ಮರಳಿ ತನ್ನನ್ನು ಸೇರಿಕೊಂಡನೆಂದು) ಮತ್ತೆ ಪಾತ್ರೆಯ ತಳೆದೆಡೆಗೆ ಸಾಗಿತು. ಸಜ್ಜನರ ಗೆಳೆತನವೂ ಹೀಗೆಯೇ ಇರುತ್ತದೆ. ಈ ಪದ್ಯದಲ್ಲಿ ಸ್ನೇಹಿತರ ನಡುವೆ ನಡೆಯುವ ಗುಣವಿನಿಮಯ, ಅವರಲ್ಲಿ ಒಬ್ಬನಿಗೆ ಆಪತ್ತು ಬಂದಾಗ ಅದಕ್ಕಾಗಿ ತಾನು ಮರುಗುವುದು ಮತ್ತು ಆ ಸ್ಥಿತಿಯಲ್ಲೂ ಅವನಿಗೆ ಒಡನಾಡಿಯಾಗುವುದೇ ಮೊದಲಾದ ಅಂಶಗಳನ್ನು ರಮಣೀಯವಾಗಿ ಸೂಚಿಸಲಾಗಿದೆ. ನಿತ್ಯದ ಜನಜೀವನದಲ್ಲಿ ನಡೆಯುವ ಒಂದು ಸಾಮಾನ್ಯವಾದ ಘಟನೆಯಲ್ಲಿ ಸ್ನೇಹಪಾರಮ್ಯಸ್ವರೂಪವನ್ನು ಗಮನಿಸುವ ಕವಿಯ ಕಾಣ್ಕೆಯು ಅಪೂರ್ವವೇ ಸರಿ.
author – ಮಹೇಶ ಭಟ್ಟ ಆರ್. ಹಾರ್ಯಾಡಿ
courtsey:prajavani.net
https://www.prajavani.net/artculture/article-features/importance-of-friendship-703218.html