ಕರ್ನಾಟಕ ಗಾನಕಲಾ ಪರಿಷತ್ತಿನ ಸುವರ್ಣ ಮಹೋತ್ಸವ ಸಂಗೀತ ಸಮ್ಮೇಳನವು 16 ದಿನಗಳ ಕಾಲ (ಫೆ.1ರಿಂದ 16ರವರೆಗೆ) ಬೆಂಗಳೂರಿನಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ‘ಕಲಾವಿದರಿಂದ ಕಲಾವಿದರಿಗಾಗಿ ಇರುವ ಏಕೈಕ ಸಂಸ್ಥೆ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಪರೂಪದ ಸಂಸ್ಥೆಯೇ ಗಾನಕಲಾ ಪರಿಷತ್. 1996ರ ಕ್ರಿಸ್‌ಮಸ್ ಹಬ್ಬದಂದು ಉದ್ಘಾಟನೆಯಾದ ಪರಿಷತ್, ರಾಜ್ಯದ ಸಂಗೀತ ಕ್ಷೇತ್ರದಲ್ಲಿ ಹೊಸದೊಂದು ಮಜಲಿಗೆ ನಾಂದಿಯಾಯಿತು. ಅಂದು ಜಸ್ಟಿಸ್ ಸೋಮನಾಥ ಅಯ್ಯರ್ ನಾದಜ್ಯೋತಿ ಬೆಳಗಿಸಿ ಪರಿಷತ್ತಿಗೆ ಚಾಲನೆ ನೀಡಿದರು. ಪ್ರಾರಂಭದ ದಿನಗಳಲ್ಲಿ ಹಿರಿಯರಾದ ತೀ.ತಾ. ಶರ್ಮ ಮತ್ತು ಡಾ. ಅ.ನ.ಕೃಷ್ಣರಾಯರು ನೀಡಿದ ಮಾರ್ಗದರ್ಶನಗಳೂ ಇಲ್ಲಿ ಸ್ಮರಣಾರ್ಹ.ಸಂಗೀತ-ಸಂಗೀತಗಾರರ ಕ್ಷೇಮಾಭಿವೃದ್ಧಿ, ರಾಜ್ಯದ ಸಂಗೀತ ಕ್ಷೇತ್ರದಲ್ಲಿ ಹೊಸ ಚೈತನ್ಯ ಮೂಡಿಸುವುದು, ಕ್ರಮಾನುಗತ ಕಾರ್ಯಕ್ರಮಗಳ ಮೂಲಕ ಸಂಗೀತ ಸಂಪ್ರದಾಯ-ಪರಂಪರೆಗಳ ಪ್ರಸಾರ-ಪ್ರಚಾರ ಮಾಡುವುದು- ಮುಂತಾದ ಧ್ಯೇಯಗಳಿಂದ ಪ್ರಾರಂಭವಾದ ಪರಿಷತ್ ಕಳೆದ 5 ದಶಕಗಳಲ್ಲಿ ತನ್ನ ಗುರಿಯತ್ತ ದಾಪುಗಾಲು ಹಾಕುತ್ತಾ ರಾಜ್ಯದ ಸಂಗೀತ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ. ರಾಜಧಾನಿಯಿಂದ ದೂರದ ಜಿಲ್ಲಾ-ತಾಲ್ಲೂಕು ಕೇಂದ್ರಗಳಲ್ಲೂ ಸಂಗೀತ ಸಮ್ಮೇಳನಗಳನ್ನು ನಡೆಸುತ್ತಾ, ಪರಿಷತ್ ನಾದರಥವನ್ನು ಮನೆ ಬಾಗಿಲಿಗೇ ತೆಗೆದುಕೊಂಡು ಹೋಗುವ ಕಾಯಕವನ್ನು ಮಾಡುತ್ತಿದೆ. ಈವರೆಗೆ ಬೆಂಗಳೂರಲ್ಲದೆ ಶಿವಮೊಗ್ಗ, ವಿಜಯಪುರ, ಹಾಸನ, ನಂಜನಗೂಡು ಮುಂತಾದ ಕಡೆ ನಡೆಸಿರುವ ಸಮ್ಮೇಳನಗಳಿಗೆ ಜನಗಳ ತುಂಬು ಪ್ರೋತ್ಸಾಹ ದೊರಕಿದೆ. ಈವರೆಗೆ ಬಿ.ಎಸ್. ರಾಜಯ್ಯಂಗಾರ್, ಡಾ. ವಿ.ದೊರೆಸ್ವಾಮಿ ಅಯ್ಯಂಗಾರ್, ಪ್ರೊ. ವಿ. ರಾಮರತ್ನಂ, ಡಾ. ಎಂ.ಎಸ್. ಸುಬ್ಬಲಕ್ಷ್ಮಿ, ಕುಮಾರಗಂಧರ್ವ, ಬಾಳಪ್ಪ ಹುಕ್ಕೇರಿ- ಇಂತಹ ನೂರಾರು ಹಿರಿಯ ಕಿರಿಯ ಕಲಾವಿದರುಗಳು ಹಾಡಿ-ನುಡಿಸಿ ಕೇಳುಗರನ್ನು ಸಂತೋಷಗೊಳಿಸಿದ್ದಾರೆ. ಗಾನಕಲಾ ಪರಿಷತ್ತಿನ ಕಾರ್ಯಕಾರಿ ಸಮಿತಿಯಲ್ಲಿ ಮೂರನೇ ಎರಡು ಭಾಗದಷ್ಟು ಸಂಗೀತಗಾರರೇ ಇರಬೇಕು- ಎಂಬ ನಿಯಮವಿರುವುದಲ್ಲದೇ ಸಂಗೀತದ ತಾಂತ್ರಿಕ ಅಂಶಗಳಲ್ಲಿ ಮಾರ್ಗದರ್ಶನ ಮಾಡಲು ಗಣ್ಯ ವಿದ್ವಾಂಸರುಗಳಿಂದ ಕೂಡಿದ ತಜ್ಞರ ಸಮಿತಿ ಇರುವುದೂ ಉಪಯುಕ್ತವಾಗಿದೆ. ಚಿಂತಕರ ಚಾವಡಿ ವರ್ಧಿಷ್ಣು ಕಲಾವಿದರಿಂದ ಕೂಡಿದ ಪ್ರತ್ಯೇಕ ‘ಯುವಜನ ವಿಭಾಗ’ವನ್ನು ಹೊಂದಿರುವುದು ಪರಿಷತ್ತಿನ ಇನ್ನೊಂದು ಗಮನಾರ್ಹ ಸಂಗತಿ. ಯುವಜನ ವಿಭಾಗವು ಅಧ್ಯಯನ ಗೋಷ್ಠಿಗಳನ್ನು ನಡೆಸುತ್ತ ಚಿಂತಕರ ಚಾವಡಿಯಾಗಿ, ಕೆಲಸ ಮಾಡುತ್ತಿರುವುದೇ ಅಲ್ಲದೇ, ಅರಳುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ‘ಪ್ರತಿಭಾ ವಿಕಸನ ಕೇಂದ್ರ’ವಾಗಿಯೂ ಮುನ್ನಡೆಯುತ್ತಿದೆ. ಪ್ರತಿವರ್ಷ ನಡೆಸುವ ಯುವ ಕಲಾವಿದರ ಸಮ್ಮೇಳನದಲ್ಲಿ ಪ್ರತಿಭಾವಂತ ಯುವ ಕಲಾವಿದರೊಬ್ಬರಿಗೆ ‘ಗಾನಕಲಾಶ್ರೀ’ ಬಿರುದನ್ನು ನೀಡಿ ಗೌರವಿಸುತ್ತಾ ಬಂದಿದೆ. ವರ್ಷಪೂರ್ತಿ ಪರಿಷತ್ ನಡೆಸುವ ಕಾರ್ಯಕ್ರಮಗಳಿಗೆ ಕಳಶಪ್ರಾಯವಾಗಿ ಸಂಗೀತ ಸಮ್ಮೇಳನವು ಕಲಾವಿದರ ಗಮನ ಸೆಳೆಯುತ್ತದೆ. ರಾಜ್ಯದ ಹಿರಿಯ-ಕಿರಿಯ ಕಲಾವಿದರ ಸಂಗೀತ ಕಛೇರಿಗಳಲ್ಲದೇ, ನೆರೆಯ ರಾಜ್ಯಗಳ ಗಣ್ಯ ಕಲಾವಿದರ ಕೆಲ ಕಾರ್ಯಕ್ರಮಗಳು ಮೇಳೈಸುವುದು. ಕರ್ನಾಟಕಿ, ಹಿಂದುಸ್ತಾನಿ, ಸುಗಮ ಸಂಗೀತ, ಲಯವಾದ್ಯ ಗೋಷ್ಠಿ, ರಂಗ ಸಂಗೀತ, ಜಾನಪದ ಕಾರ್ಯಕ್ರಮಗಳು ಸಂಗೀತ ರಸಿಕರಿಗೆ ರಸದೌತಣ ಬಡಿಸಿದಂತೆಯೇ! ಸಮ್ಮೇಳನದಲ್ಲಿ ಗಾಯನವಲ್ಲದೇ, ವೀಣೆ, ಕೊಳಲು, ತನಿ ಪಿಟೀಲು, ಜಲತರಂಗ್, ಹಾರ್ಮೋನಿಯಂ, ಸ್ಯಾಕ್ಸೋಫೋನ್, ಜುಗಲ್-ಬಂದಿ ಮುಂತಾದ ಕಾರ್ಯಕ್ರಮಗಳಿಂದ ಸರಸ್ವತಿಯ ಬಹುಮುಖ ದರ್ಶನ ಮಾಡಿಸುತ್ತದೆ. ಸಮ್ಮೇಳನದಲ್ಲಿ ಬೇರೆ ಬೇರೆ ಪದ್ಧತಿ-ವಿಚಾರಧಾರೆಗಳಿಗೆ ಸೇರಿದ ಕಲಾಭಿಜ್ಞರು, ಕಲಾವಿದರು, ಕಲಾನುರಾಗಿಗಳು, ಭಾಗವಹಿಸಿ ಶ್ರಾವ್ಯ ಸುಖ ನೀಡುತ್ತಾರೆ. ಬಿ.ಎಸ್. ರಾಜಯ್ಯಂಗಾರ್ ಮೊದಲ ಸಮ್ಮೇಳನದ ಅಧ್ಯಕ್ಷರಾದರೆ ಮುಂದೆ, ಹೊನ್ನಪ್ಪ ಭಾಗವತರು, ಚೊಕ್ಕಮ್ಮ, ಆರ್.ಕೆ.ಪದ್ಮನಾಭ, ಸೋಸಲೆ ಶೇಷಗಿರಿದಾಸ್ – ಮುಂತಾದವರು ಸಮ್ಮೇಳನಾಧ್ಯಕ್ಷರಾಗಿ ‘ಗಾನಕಲಾ ಭೂಷಣ’ ಬಿರುದಾಂಕಿತರಾದರು. ಸಮ್ಮೇಳನದ ಅಂಗವಾಗಿ ನಡೆಯುವ ವಿದ್ವತ್‌ಗೋಷ್ಠಿಯಲ್ಲಿ ರಾಜ್ಯ, ರಾಷ್ಟ್ರದ ಶಾಸ್ತ್ರಜ್ಞರು – ವಿದ್ವಾಂಸರು, ಪಾಲ್ಗೊಂಡು ಚರ್ಚೆ, ಪ್ರಾತ್ಯಕ್ಷಿಕೆ, ವಿಚಾರ-ವಿನಿಮಯಗಳ ಮೂಲಕ ಜ್ಞಾನಾರ್ಜನೆಗೆ ಕೈದೀವಿಗೆಯಾಗುತ್ತಾರೆ. ‘ಕರ್ನಾಟಕ ಸಂಗೀತ ಪರಂಪರೆ ಮಾಲೆ’ಯಲ್ಲಿ ಗೀತಗೋಪಾಲ, ಗೀತ ಗಂಗಾದಾರ, ಭ್ರಮರ ಗೀತೆ, ಶಿವಶರಣರ ರಚನೆಗಳು ಮುಂತಾದ ವಿಷಯಗಳ ಮೇಲೆ ನಡೆದಿರುವ ಪ್ರಾತ್ಯಕ್ಷಿಕೆಗಳು ಬಹು ಅಪರೂಪವಾದವು. ಪರಿಷತ್‌ನಲ್ಲಿ ಮಂಡಿತವಾದ, ಪ್ರಬಂಧಗಳನ್ನು ಕನ್ನಡ ಸಂಸ್ಕೃತಿ ನಿರ್ದೇಶನಾಲಯ ಪ್ರಕಟಿಸಿ (ಗಾನಕಲಾ ಮಂಜರಿ, 2 ಭಾಗ) ಸಂಗೀತ ಕ್ಷೇತ್ರಕ್ಕೆ ಮಹದುಪಕಾರ ಮಾಡಿದೆ. ಗಾನಕಲಾ ಮಂಜರಿಯ 3ನೇ ಭಾಗವೂ ಪ್ರಕಟಣೆಗೆ ಸಿದ್ಧವಾಗುತ್ತಿರುವುದು ಸಂತೋಷದ ವಿಷಯ. ಗಾನಕಲಾಭೂಷಣ ಸಂಗೀತ ವಿದ್ವಾಂಸರೇ ಚುನಾಯಿಸುವ ಸಮ್ಮೇಳನದ ಅಧ್ಯಕ್ಷರಿಗೆ ಪ್ರತಿಷ್ಠಿತ ‘ಗಾನಕಲಾ ಭೂಷಣ’ ಬಿರುದು ನೀಡಿ, ಗೌರವಿಸುವುದಲ್ಲದೇ ನಾದಲೋಕಕ್ಕೆ ಸೇವೆ ಮಾಡಿರುವ ಕೆಲವು ಹಿರಿಯರಿಗೆ (ಗಾಯಕರು, ವಾದ್ಯಗಾರರು, ನಿರ್ದೇಶಕರು, ರಾಗ ಸಂಯೋಜಕರು, ಶಾಸ್ತ್ರಜ್ಞರು, ಸಭೆ-ಸಂಸ್ಥೆಗಳ ಪ್ರತಿನಿಧಿಗಳು) ‘ಸದಸ್ ಸನ್ಮಾನ’ ಸಲ್ಲಿಸಲಾಗುವುದು. ಸಮ್ಮೇಳನದ ಇನ್ನೊಂದು ಆಕರ್ಷಣೆಯೇ, ವಸ್ತು ಪ್ರದರ್ಶನ. ಈವರೆಗೆ ಇದರಲ್ಲಿ ಪುರಂದರದಾಸರ ಲಭ್ಯ ಪುರಾತನ ಚಿತ್ರ, ತಾನ್‌ಸೇನ್, ತ್ರಿಮೂರ್ತಿಗಳು, ಅಕಾಡೆಮಿಯ ಪ್ರಶಸ್ತಿ ವಿಜೇತರುಗಳು- ಮುಂತಾದ ಹತ್ತು ಹಲವಾರು ಚಿತ್ರಗಳು, ಪ್ರದರ್ಶನವನ್ನು ಬೋಧಪ್ರದವಾಗಿಸಿವೆ. ದೀಕ್ಷಿತರ ವೀಣೆ, ಶ್ರೀ ಚಕ್ರ, ತ್ಯಾಗರಾಜರ ಪಾದುಕೆಗಳು, ಪರಿಷತ್ ಸಮ್ಮೇಳನದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡವು. ನಾದಕ್ಕೆ ದೃಶ್ಯರೂಪ ನೀಡುವ ಈ ಪ್ರದರ್ಶನಗಳು ಬೃಹತ್ ಸಂಖ್ಯೆಯ ಕಲಾವಿದರು-ಕಲಾಭಿಮಾನಿಗಳನ್ನು, ಪ್ರತಿವರ್ಷ ಆಕರ್ಷಿಸುತ್ತಿರುವುದು ಸಹಜವೇ. ಹೀಗೆ ಪರಿಷತ್ ರಂಜನೆ, ಚಿಂತನೆಗಳೆರಡನ್ನೂ ಮೇಳೈಸುತ್ತಾ ಸಂಗೀತ ಕ್ಷೇತ್ರದಲ್ಲಿ ತನ್ನ ನೈತಿಕ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಕರ್ನಾಟಕ ಗಾನಕಲಾ ಪರಿಷತ್ತಿನ ಮೊದಲ ಅಧ್ಯಕ್ಷರು ವಿದ್ವಾನ್ ಎಲ್.ಎಸ್.ಶೇಷಗಿರಿರಾಯರು. ಮುಂದೆ ಇ.ಆರ್.ಸೇತುರಾಮ್, ಹೊನ್ನಪ್ಪ ಭಾಗವತರು, ವಿಮಲಾ ರಂಗಾಚಾರ್, ಡಾ.ಎ.ಎಚ್.ರಾಮರಾಯರು, ಎ.ವೀರಭದ್ರಯ್ಯ ಪರಿಷತ್ತನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಹಿರಿಯ ಲಯ ವಾದ್ಯಗಾರ ಬೆಂಗಳೂರು ಕೆ.ವೆಂಕಟರಾಮ್ ಅವರು ಸಂಸ್ಥೆಯ ಪ್ರಾರಂಭದ ದಿನಗಳಿಂದಲೂ ಸಲ್ಲಿಸಿದ ಸೇವೆ ಎಂದೂ ಸ್ಮರಣಾರ್ಹ. ಕಳೆದ ಕೆಲ ವರ್ಷಗಳಿಂದ ಜನಪ್ರಿಯ ಗಾಯಕ ಆರ್.ಕೆ. ಪದ್ಮನಾಭ ಸಾರಥ್ಯ ವಹಿಸಿ, ಪರಿಷತ್ತನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ತಜ್ಞರ ಸಮಿತಿಯ ಅಧ್ಯಕ್ಷರಾಗಿ, ಗಣ್ಯ ವಿದುಷಿ ಡಾ. ಟಿ.ಎಸ್.ಸತ್ಯವತಿ ಹಾಗೂ ಯುವ ಜನ ವಿಭಾಗದ ಸಂಚಾಲಕರಾಗಿ ವಿದ್ವಾನ್ ಕೆ.ವಿ.ಕೃಷ್ಣ ಪ್ರಸಾದ್ ಹೊಣೆ ಹೊತ್ತಿದ್ದಾರೆ. ಐವತ್ತನೇ ವರ್ಷದ ಸಂಗೀತ ಸಮ್ಮೇಳನವನ್ನು 16 ದಿನಗಳ ನಿರಂತರ ನಾದ ಝರಿಯನ್ನು ಹರಿಸುವುದರ ಮೂಲಕ ನಡೆಸಿ ಗಾನಕಲಾ ಪರಿಷತ್ ಇನ್ನೊಂದು ದಾಖಲೆಯನ್ನು ನಿರ್ಮಿಸುತ್ತಿದೆ. ಅಂತರರಾಷ್ಟ್ರೀಯ ಖ್ಯಾತಿಯ ಯುಗಳ ಪಿಟೀಲು ವಾದಕರಾದ ಮೈಸೂರು ನಾಗರಾಜ್ ಮತ್ತು ಡಾ.ಮಂಜುನಾಥ್ ಅವರು ಈ ವರ್ಷ ‘ಗಾನಕಲಾ ಭೂಷಣ’ ಸ್ವೀಕರಿಸಿದರೆ, ಜನಪ್ರಿಯ ಲಯವಾದ್ಯಗಾರರಾದ ಜಿ.ಗುರುಪ್ರಸನ್ನ ಮತ್ತು ಉಳ್ಳೂರು ಗಿರಿಧರ ಉಡುಪ ‘ಗಾನಕಲಾಶ್ರೀ’ ಬಿರುದಿಗೆ ಪಾತ್ರರಾಗಲಿದ್ದಾರೆ. ರಾಜ್ಯದ ಸಂಗೀತಗಾರರು ಸಂಘಟಿತ ಪ್ರಯತ್ನವಾಗಿ ಉದಯಿಸಿರುವ ಕರ್ನಾಟಕ ಗಾನಕಲಾ ಪರಿಷತ್ ಶಾಸ್ತ್ರೀಯ ಸಂಗೀತ ಕ್ಷೇತ್ರದ ದಾರಿದೀಪವಾಗಿ ಬೆಳಗಲಿ ಎಂಬುದೇ ಕಲಾವಿದರೆಲ್ಲರ ಆಶಯ.
courtsey:prajavani.net
https://www.prajavani.net/artculture/music/ganakala-parishat-702042.html