ಫ್ರಾನ್ಸ್‌ನ ಅದ್ಭುತ ಕಣಿವೆ

ಆಗ್ನೇಯ ಫ್ರಾನ್ಸ್‌ನ ‘ಆಲ್ಪ್ಸ್ ಡಿ ಹಾಟ್’ ಪ್ರಾವಿನ್ಸ್ ಮತ್ತು ‘ವರ್’ ನಡುವೆ ‘ವರ್ಡಾನ್ ಜಾರ್ಜ್’ ಎಂಬ ಅದ್ಭುತ ನದಿ ಕಣಿವೆಯಿದೆ. ಫ್ರೆಂಚ್ ಭಾಷೆಯಲ್ಲಿ ಇದಕ್ಕೆ ‘ಗಾರ್ಜಸ್ ಡು ವರ್ಡಾನ್’ ಅಥವಾ ‘ಗ್ರಾಂಡ್ ಕ್ಯಾನಾನ್ ಡು ವರ್ಡಾನ್’ ಎನ್ನುತ್ತಾರೆ. ಯೂರೋಪಿನ ಅತ್ಯಂತ ಸುಂದರ ಕಣಿವೆ ಇದು. ಸುಮಾರು 25 ಕಿಲೋಮೀಟರ್ ಉದ್ದ ಹಾಗೂ 700 ಮೀಟರ್ ಆಳ ಹೊಂದಿದೆ. ಫ್ರಾನ್ಸ್‌ನ ಈ ನೈಸರ್ಗಿಕ ಅದ್ಭುತವನ್ನು ಪ್ರಿಗೊರ್ಜೆಸ್ (ಪ್ರಿಜಾರ್ಜ್)-ಕ್ಯಾಸ್ಟಲ್ಲೇನ್‌ನಿಂದ ಪಾಂಟ ಡಿ ಸೊಲೈಸ್‌ವರೆಗೆ, ಜಾರ್ಜ್‌ನ ಆಳವಾದ ಭಾಗ-ಪಾಂಟ ಡಿ ಸೊಲೈಸ್‌ನಿಂದ ಎಲ್ ಇಂಬುಟ್ ಮತ್ತು ಎಲ್ ಇಂಬುಟ್‌ನಿಂದ ಪಾಂಟ್ ಡಿ ಗ್ಯಾಲೆಟಾಸ್‌ವರೆಗಿನ ಕಣಿವೆ ಎಂಬುದಾಗಿ ಮೂರು ವಿಭಿನ್ನ ಭಾಗಗಳಾಗಿ ವಿಂಗಡಿಸಲಾಗಿದೆ. ವರ್ಡಾನ್ ಜಾರ್ಜ್ ಕಣಿವೆಯು ಕಿರಿದಾಗಿ ಮತ್ತು ಆಳವಾಗಿದ್ದು 250 ರಿಂದ 700 ಮೀಟರ್ ಆಳ ಮತ್ತು 6ರಿಂದ 100 ಮೀಟರ್ ಅಗಲವನ್ನು ನದಿಮಟ್ಟದಲ್ಲಿ ಹೊಂದಿದೆ. ಶೃಂಗಗಳಲ್ಲಿ ಜಾರ್ಜ್‌ನ ಒಂದು ಬದಿಯಿಂದ ಇನ್ನೊಂದು ಬದಿಗೆ 200 ರಿಂದ 1500 ಮೀಟರ್ ಅಗಲವಿದೆ.ಈ ಕಣಿವೆಯು ವರ್ಡಾನ್ ನದಿಯಿಂದ ರೂಪುಗೊಂಡಿದೆ. ಚಕಿತಗೊಳಿಸುವ ಹಸಿರುಬಣ್ಣದ ಕಾರಣದಿಂದಾಗಿ ನದಿಗೆ ಈ ಹೆಸರನ್ನಿಡಲಾಗಿದೆ. ಕ್ಯಾಸ್ಟೆಲ್ಲೇನ್ ಮತ್ತು ಮೌಸ್ಟಿರಿಯಸ್ ಸೇಂಟ್ ಮೇರಿ ನಗರಗಳ ನಡುವೆ ಅತ್ಯಂತ ವಿಶಿಷ್ಟವಾದ ಭಾಗವಿದೆ. ಅಲ್ಲಿ ನದಿಯು ಸುಣ್ಣದ ರಾಶಿಯ ಮೂಲಕ 700 ಮೀಟರ್ ಕೆಳಗೆ ಕಂದರವನ್ನು ಕತ್ತರಿಸಿದೆ. ಕ್ಯಾಸ್ಟೆಲ್ಲೇನ್‌ನಿಂದ ರೂಗನ್ಸ್‌ ಹಳ್ಳಿಯವರೆಗೆ ಈ ನದಿಯು ಸ್ವಚ್ಛ ಹಾಗೂ ವೇಗವಾಗಿ ಹರಿಯುತ್ತದೆ. ದಡಗಳ ಉದ್ದಕ್ಕೂ ರಸ್ತೆಯಿದೆ. ಈ ಕಣಿವೆಯು 20ನೇ ಶತಮಾನದ ಆರಂಭದವರೆಗೂ ಅನ್ವೇಷಣೆಯಾಗಿರಲಿಲ್ಲ. ಅರ್ಮಾಂಡ್ ಜಾನೆಟ್ ಎಂಬಾತ 1896ರಲ್ಲಿ ನಾವೆ ಆನ್ವೇಷಣೆ ಕೈಗೊಂಡರೂ ಭಯಾನಕ ಪ್ರವಾಹದ ಕಾರಣ ಅದನ್ನು ಕೈಬಿಟ್ಟ. 1905ರ ಆಗಸ್ಟ್‌ನಲ್ಲಿ ಸ್ಪಿಲಿಯಾಲಜಿಸ್ಟ್ (ಗುಹಾ ವಿಜ್ಞಾನಿ) ಎಡ್ವರ್ಡ್ ಆಲ್ಫ್ರೆಡ್ ಮಾರ್ಟೆಲ್ ಮೂರು ದಿನಗಳ ಯಾತ್ರೆಯಲ್ಲಿ ಕಮರಿಗಳ ಸಂಪೂರ್ಣ ಪರಿಶೋಧನೆ ಮಾಡಿದರು.

author- ವಿದ್ಯಾ ವಿ. ಹಾಲಭಾವಿ

courtsey:prajavani.net

https://www.prajavani.net/artculture/article-features/france-rivers-and-mountains-698936.html

Leave a Reply