ಎತ್ತಿಂದೆತ್ತ?

ಎತ್ತಿಂದೆತ್ತ?
ಹೊತ್ತೊತ್ತಿಗೆ ಉಣುವಾಗ ನಿತ್ಯ ನಿನ್ನದೇ ಧ್ಯಾನ
ಬಿಟ್ಟುಣ್ಣುವಾಗ ಬರೆ ಬಿಕ್ಕಳಿಕೆ ನೆನೆನೆನೆದು ನಿನ್ನ
ದಿನ ದಿನವೂ ನೆತ್ತಿಘತ್ತುವುದು ನೋಡ ಉಂಡನ್ನ
ನುಂಗಲಾರೆ ಉಗುಳಲಾರೆ ಮಾಡುವುದು ಇಂತೆನ್ನ

ನಡೆದಾಡುವಾಗ ಜೊತೆಗೆ ಜೋಡೆತ್ತು ನಮ್ಮ ಜೋಡಿ
ಪ್ರೀತ್ಯಾಗ ಮುಳುಗಿದರೆ ಜೋಡಿ ಪಾರಿವಾಳದ ಮೋಡಿ
ಇದಾವ ಜನ್ಮದ ನಂಟು ಕಾಣೆ ಗಂಧರ್ವದ ಜಾಡು ನೋಡಿ
ಕಳಿಸಿದನವ್ವ ಎಣಿಸಲಾರದ ಕನಸಿನ ರಾಶಿ ಮಾಡಿ

ಎಂಥಾ ನಂಟು ಕಾಣೆನವ್ವ ಹೇಳಲು ಮಾತೆ ಇಲ್ಲ
ಹೃದಯದ ಜಾಗದಾಗ ಅರಮನೆಯ ಮಾಡಿದನಲ್ಲ
ಮನಸಿನ ಅಂಗಳದೊಳಗೆ ಹಂದರ ಹಾಕಿದನಲ್ಲ
ಕಲ್ಪನೆಯ ಹೂವಿನ ಕಾನನದೊಳಗೆ ಹಕ್ಕಿ ಸೋ ಎಂದವಲ್ಲ

ಎಂದೋ ಬೆಸೆದ ಜನುಮದ ನಂಟು ಇಂದು
ಮತ್ತ ಎರಡು ಮನಗಳ ಬಿಗಿಹಿಡಿದು ತಂದು
ಪ್ರೀತಿ ಸಾಗರದಾಗ ದೋಣಿಯೊಂದು ಬಂದು
ಒಯ್ಯುತಿದೆ ಅರಿಯೆ ಎತ್ತ ದಾರಿಯೆಂದು.

ಉಮಾ ಭಾತಖಂಡೆ

Leave a Reply