ಎರಿಯಪ್ಪ ಎನ್ನುವ ಸಿಹಿ ಭಕ್ಷ್ಯ…!
ಚಿತ್ರದಲ್ಲಿರುವ ಈ ಪರಿಕರ, ಎರಿಯಪ್ಪ ಎನ್ನುವ (ಕೆಲವು ಪ್ರದೇಶಗಳಲ್ಲಿ ಎರಿಯವ್ವ ಎಂದೂ ಹೆಸರಿಸುವರು ) ಸಿಹಿ ಭಕ್ಷ್ಯ ತಯಾರಿಸುವ ಬಂಡಿ (ಬಾಣಲೆ), ಎರಿಯಪ್ಪ ಅಜ್ಜಿ ಕಾಲದ ಅಡುಗೆಯ ಒಂದು ಬಗೆ; ಸಾಂಪ್ರದಾಯಿಕ ತಿನಿಸು. ಈ ಸಿಹಿ ಭಕ್ಷ್ಯ ಹವ್ಯಕ ಸಮುದಾಯದವರ ಮನೆಗಳಲ್ಲಿ ತಯಾರಿಸುವ ಜನಪ್ರಿಯವಾದ ಒಂದು ದೇಸಿ ತಿಂಡಿ. ಅಕ್ಕಿ, ಗೋಧಿ, ಅರಳು/ಅವಲಕ್ಕಿ, ಬೆಲ್ಲ, ಉಪ್ಪು, ನೀರು – ಈ ಪದಾರ್ಥಗಳ ಸರಿಯಾದ ಪ್ರಮಾಣದ ಮಿಶ್ರಣದ ಹಿಟ್ಟನ್ನು (ದೋಸೆ ಹಿಟ್ಟಿನ ಹದ ) ಎಣ್ಣೆಯಲ್ಲಿ ಕರಿದು ಈ ಸಿಹಿಭಕ್ಷ್ಯ ತಯಾರಿಸುವರು. ಆಹಾರ ಪದ್ಧತಿಗಳು ಸಂಸ್ಕೃತಿಯ ದ್ಯೋತಕ; ಪ್ರತಿಯೊಂದು ಸಂಸ್ಕೃತಿಯಲ್ಲೂ ವೈವಿಧ್ಯಮಯವಾದ ಆಹಾರ ಪಾನೀಯಗಳನ್ನು ಕಾಣಬಹುದು. ಅವು ತಮ್ಮದೇ ಆದ ವೈಶಿಷ್ಟ್ಯ ಹೊಂದಿದ್ದು ಆಯಾ ಕಾಲ, ದೇಶ, ಜನಾಂಗಗಳ ಅಭಿರುಚಿ, ಅಗತ್ಯಗಳಿಗೆ ಅನುಗುಣವಾಗಿ ಭಿನ್ನವಾಗುತ್ತ ಸಾಗಿವೆ. ಇಂದಿನ ಬಹುತೇಕ ಮಕ್ಕಳಿಗೆ ಈ ಹಳ್ಳಿ ತಿನಿಸುಗಳ ಪರಿಚಯವೇ ಇಲ್ಲ.
ಹೊಸ್ಮನೆ ಮುತ್ತು