ಎರಡು ಪತ್ರಗಳು
ಮಾಲತೀ ಅಕ್ಕಾ,
ನೀವು ಬರದ ಕಾಗದ ತಲುಪೇದ ಮತ್ತ ನೀವು ಹೇಳಿದ ಧಾರವಾಡ ನೆನದ ಮನಸ ಮತ್ತ ಚಿತ್ತೀ ಮಳಿಯಾಂಗ ಅತ್ತು ತೋದ ತೊಪ್ಪೀ ಆಗೇದ. ಸಟ್ಟ ಸರಹೊತ್ತಿನಲ್ಲಿ, ಹೊತ್ತಲ್ಲದ ಹೊತ್ತಿನಲ್ಲಿ ನೆನಪಾಗುವ ನನ್ನ ಧಾರವಾಡದ ನೆತ್ತಿಯ ಮೇಲೆ ಆ ಮೊದಲಿನಂತೆಯೇ ಮಳೆ ಸುರಿಯುತ್ತದೆಯೇ ? ಕರ್ನಾಟಕ ಕಾಲೇಜು ಹಿಂಭಾಗದ ಕಳ್ಳ ಕಿಂಡಿಯಂತಹ ದಾರಿಯ ಮರದ ನೆರಳಿಗೇ ಕತ್ತಲೆಯಾಗುವ ಕಾಲುದಾರಿಯಲ್ಲಿ ಆ ಹುಡುಗಿ ಅಂಜುತ್ತಲೇ ಬಾಟನೀ ಕ್ಲಾಸಿಗೆ ಬಂದು ಹಾಜರೀ ಹಾಕುತ್ತಾಳೆಯೇ ? ಮಿಸ್ಕಿನ್ ಕಲರ್ ಲ್ಯಾಬಿನಲ್ಲಿ ಅದೇ ಆ ಮಾವುಗಲ್ಲದ ಹುಡುಗಿಯ ನೆಗೆಟಿವ್ ಫಿಲ್ಮಗಳು ಪಾಸಿಟವ್ ಮಾಡಿಸಿಕೊಂಡು ಹೋದಳೆ? ತಲೆ ಚಚ್ಚಿಕೊಂಡರೂ ತಿಮ್ಮನಗೌಡರ ಸರ್ ರ ಟ್ರಿಗ್ನಾಮೇಟ್ರೀ ಅರ್ಥವಾಗದೇ ಓದು ಅರ್ಧಕ್ಕೇ ನಿಲ್ಲಿಸಿದ ಮುಧೋಳದ ರಾಜಪ್ಪ ಬಿ .ಎ.ಪಾಸುಮಾಡಿಕೊಂಡನೇ ? ಅದೇ ಮಿಚಿಗನ್ ಕಂಪೌಂಡಿನ ಡಾ.ಪಾಂಡುರಂಗಿ ಆಸ್ಪತ್ರೆ ಗೆ ಕೆಲಗೇರಿಯಿಂದ ಬರಿಗಾಲಲ್ಲೇ ಬಂದು ಮಾವಿನ ಕಾಯಿ ಮಾರಿದ ದುಡ್ಡಿನಲ್ಲಿ ಗುಳಿಗೆ ತಗೊಂಡು ಹೋಗುತ್ತಿದ್ದ ಮಲ್ಲಪ್ಪನ ಹುಚ್ಚು ವಾಸಿಯಾಯಿತೆ ? ಹೇಗಿವೆ ನನ್ನ ಕಾಲೇಜಿನ ಬೀದಿಗಳು ? ಕಾಲಕಾಲಕ್ಕೆ ಡಾಂಬರು ಮೆತ್ತಿಕೊಂಡು ಹೇಮಾಮಾಲಿನಿಯ ಗಲ್ಲದಂತಾಗುತ್ತವೆಯೇ ಅಥವ ಆಗಿನಂತೆಯೇ ಹೈ ಹೀಲ್ಡ್ ಹುಡುಗಿಯ ಸೊಂಟ ಮುರಿಯುವ ಗುಂಡಿಗಳು ಹಾಗೆ ಇವೆಯೇ ? ಬಸವೇಶ್ವರ ಮೆಸ್ಸಿನ ಉಪ್ಪಿನಕಾಯಿ ರುಚಿ ಬದಲಾಗಿದೆಯೇ ? ಹೇಗಿರುವೆ ನನ್ನ ಪ್ರೀತಿಯ ಧಾರವಾಡವೇ ….. ನಿನ್ನ ಸೀಮೆಯ ಸೊಂಟಕ್ಕೆ ಬಳಸಿಕೊಂಡಂತಹ ಮಾವಿನ ತೋಟಗಳೀಗ ಘಮಘಮಾಡಸತಿರಬೇಕಲ್ಲ ? ಮತ್ತು ಆ ಆಕಾಶವಾಣಿ ರಸ್ತೆಯ ನಿಲಗೀರಿ ತೋಪಿನ ಕಸಗುಡಿಸುವ ಮುದುಕಿ ಈಗಲೂ ಬೆಳ್ ಬೆಳಿಗ್ಗೆ ತರಗೆಲೆಗೆ ಬೆಂಕಿ ಇಟ್ಟು ಬೆನ್ನು ಕಾಯಿಸಿಕೊಳ್ಳುತ್ತಾಳೆಯೇ ?
****
ಅಕ್ಕ ಪತ್ರ ಬರೆದಿದ್ದಾರೆ …
ಲಕ್ಷ್ಮಣ,
ವಂದನೆಗಳು.
ನಿನ್ನ ಪತ್ರ ತಲುಪಿತು. ಮಜಕೂರು ತಿಳಿಯಿತು. ಇಲ್ಲಿ ಎಲ್ಲರೂ ಕುಶಲವಾಗಿದ್ದಾರೆ. ನಿಮ್ಮೆಲ್ಲರ ಕ್ಷೇಮದ ಬಗ್ಗೆ ಆಗಾಗ್ಗೆ ತಿಳಿಸುತ್ತಿರಬೇಕು. ಈಗ ಪತ್ರ ಬರೆಯಲು ಕಾರಣವೆಂದರೆ ನೀನು ಧಾರವಾಡವನ್ನು ಬಿಟ್ಟು ಹೋಗಿ ಬಹಳ ದಿನಗಳಾದುದರಿಂದ ಇಲ್ಲಿಯ ಬದಲಾವಣೆಗಳ ಬಗ್ಗೆ ಆಸಕ್ತಿಯಿಂದ ವಿಚಾರಿಸಿದ್ದೀ .
ಈಗ ಅನೇಕ ವರ್ಷದಿಂದ ಧಾರವಾಡದಾಗ ಮಳೀ ಅಗದೀ ಕಡಿಮಿ ಆಗಲಿಕ್ಕತ್ತಿತ್ತು. ನಾವ ಸಣ್ಣವರಿದ್ದಾಗಿನ ಮಳೀ ನೆನಪು! ಏನ ಅನಾಹುತ ಮಳೀನಪಾ ಅದು! ನಾನೂ ರೈಟರ ಗಲ್ಲಿಂದ ಮಾಳಮಡ್ಡಿ ಮಿಶನ್ ಹೈಸ್ಕೂಲಿಗೆ ಹೋಗಬೇಕಾದರ ಮಳ್ಯಾಗನ ಹೋಗಬೇಕಾಗತಿತ್ತು. ಗುಬ್ಬಚ್ಚಿ ಹಂಗ ರೇನಕೋಟ ಹಾಕ್ಕೊಂಡ ಹೋಗತಿದ್ವಿ. ಈಗ ಕೆಲ ವರ್ಷದಾಗ ಮಾತ್ರ ಮಳಿ ಮೊದಲಿನ ಧಾರವಾಡ ನೆನಪ ಮಾಡೇದ.
ಇನ್ನ ಕರ್ನಾಟಕ ಕಾಲೇಜಿನ ಸುದ್ದಿ. ಈಗಿನ ಹುಡಿಗ್ಯಾರು ಯಾರೂ ಅಂಜೋದು ಅಳುಕೋದು ಸುಳ್ಳ ಮಾತು. ಅಗದೀ ಬಿಂದಾಸ್. ಆ ಮರದ ನೆರಳಿಗೆ ಕತ್ತಲಿ ಆಗಲಿಕ್ಕೇ ಸಾಧ್ಯ ಇಲ್ಲಾ. ಯಾಕಂದ್ರ ಎಲ್ಲಾ ಮರಾನೂ ನೆಲಾ ಕಂಡಾವ. ಈಗ ದೊಡ್ಡ ದೊಡ್ಡ ಬಿಲ್ಡಿಂಗ ಎದ್ದಾವ ಆ ಜಾಗಾದಾಗ. ಹುಡುಗೂರು ಹುಡಿಗ್ಯಾರ ದಂಡು ಈಗ ಮುಚ್ಚು ಮರಿ ಇಲ್ದ ಮಸ್ತ್ ಆಗಿ ಮಾತಾಡತಾವು… ಬೆನ್ನು ಮ್ಯಾಲ ಗುದ್ದತಾವು.. ಸಮಾನತಿ ಬಂದಬಿಟ್ಟದ!
ಆಯ್ಯ ಮಾರಾಯಾ, ನೀ ಕೇಳಿದ ಮಿಸ್ಕಿನ್ ಕಲರ ಲ್ಯಾಬ ಈಗ ಬರೇ ಮದುವೀ ಅಲ್ಬಮ್ಮು, ಪಾಸ್ಪೋರ್ಟ್ ಫೋಟೋಕ್ಕಷ್ಟ ಸೀಮಿತ ಆಗೇದ. ಇನ್ನ ಆ ಮಾವುಗಲ್ಲಾ ಈಗ ಉಪ್ಪನೀರಾಗಿನ ಅಪ್ಪೀಮಿಡೀ ಆಗ್ಯಾವು. ಮೊನ್ನೆ ಭೆಟ್ಟಿ ಆಗಿದ್ಲೂ. ಮೂರ ಮಮ್ಮಕ್ಕಳ ಜೋಡಿ ಪಾರ್ಕಿಗ ಬಂದಿದ್ಲು. ನಿನ್ನ ನೆನಸಿದ್ಲು. ನೀ ಅಕೀಗೆ ಲೈನ್ ಹೊಡಿಯೋದನ ಹೇಳೂ ಮುಂದ ಆ ಅಪ್ಪಿಮಿಡಿ ಗಲ್ಲದಾಗೂ ಕೆಂಪ ಗೆರೀ ಕಂಡ್ತೂ! ಎಲಾ ಕಳ್ಳಾ, ಪಾಪ ಆ ಮುದಕೀ ಮನಸಿನ್ಯಾಗಿಂದ ಇನ್ನಾತನಕಾ ಜಾಗಾ ಖಾಲ ಮಾಡಿಲ್ಲಾ ನೀ?
ಅಂದ್ಹಂಗ ಆ ರಾಜಪ್ಪಾ ಈಗ ರಾಜಕೀಯ ಪುಢಾರಿನಪಾ. ಭಾರಿ ಆಗ್ಯಾನ. ಅಂವಾ ಮುಂದ ಕಲೀಲೇ ಇಲ್ಲಾ. ಆದರ ಈ ಸರೆ ಇಲೆಕ್ಶನಕ ನಿಂತ ಆರಿಸಿಬಂದಾನ! ಶಿಕ್ಷಣ ಮಂತ್ರಿ ಆಗಾಂವಂತ!
ಪಾಂಡುರಂಗಿ ಡಾಕ್ಟರ್ ಕಡೆ ಬರತಿದ್ದ ಮಲ್ಲಪ್ಪಾ ಈಗ ಇಲ್ಲಪಾ. ಅವನ ಮಾವಿನ ಕಾಯಿ ನೆನಪಾಗತಾವ. ಆದರ ಈಗ ಆ ಕಾಯಿಗೆ ಮದಲಿನ ರುಚಿ ಇಲ್‍ಬಿಡೂ… ಹುಡಿಗೇರು ಪೌಡರ ಹಚಿಗೊಳ್ಳೂದು ಗೊತ್ತಿತ್ತು… ಈಗ ಈ ಹಣ್ಣಿಗೂ ಪೌಡರ್ ಹಾವಳಿ! ರುಚಿ ಎಲ್ಲಿಂತ ಬಂದೀತು?
ನಮ್ಮ ಕಾಲೇಜಿನ ರಸ್ತೆ! ದಿನಾ ನಮ್ಮ ವಾಕಿಂಗು ಅದೇ ರಸ್ತಾದಾಗ… ಅವು ಹೆಂಗವ ಹಂಗನ ಅವ. ಅಡ್ಯಾಡವ್ರು ಬದಲಾದ್ರು. ಅವರ ಇರಸರಿಕಿ ಬದಲಾತೂ.. ಅಷ್ಟ. ಮ್ಯಾಲ ಒಂದಷ್ಟು ಉಸುಕು, ಸಿಮೆಂಟ್ ಬಿದ್ವು. ಟಾರ ಆದ್ವೂ. ಕೆತ್ತಿ ಹೋದ್ವು. ಮತ್ತದ ಕಥಿ. ಹೇಮಾಮಾಲಿನಿ ಗಲ್ಲಧಂಗನ ಅವ! ಆದರ ಈಗ ಅವಲಾ ಹಂಗ!
ಬಸಪ್ಪನ ಮೆಸ್ಸಿನ ಉಪ್ಪಿನ ಕಾಯಿಗೆ ಈಗ ತಾಳಿಕಿ ಬರಲಂತ ವಿನೆಗರ ಬಳಸತಾರ. ಹಿಂಗಾಗಿ ಅಡವಾಸನಿ. ಆ ಮೊದಲಿನ ಸ್ವಾದಾ ಮಿಸ್ಸಿಂಗೂ!
ನಿನ್ನ ಪ್ರೀತಿಯ ಧಾರವಾಡ ಈಗ ಭಾಳ ಬದಲಾಗೇದ. ಎಲ್ಲಾ ಕಡೆ ಧೂಳಾ. ಛಂದಾಛಂದನೀ ಹಳೇ ಮನೀ, ಸುತ್ತಿನ ತ್ವಾಟಾ ಎಲ್ಲಾ ಹೋಗಿ ಈಗ ಎಲ್ಲೆ ನೋಡತೀ ಅಲ್ಲೆ ಅಪಾರ್ಟ್ಮೆಂಟ್. ಒಂದ ಮನಿ ಇದ್ದಲ್ಲೆ ಐವತ್ತು ಮನೀ. ಅದಕ್ಕ ತಕ್ಕಂಗ ಜನವಸತಿ. ಸರಳ ಸಾಲಾ ಕೊಡತಾರ ಹಿಂಗಾಗಿ ರಗಡೋಷ್ಟ ಕಾರು.. ನೀ ಹೇಳೂ ಮಾವಿನ ಮರ ಎಲ್ಲಾ ಮಂಗಮಾಯ! ಆ ಮಂಗ್ಯಾ ಎಲ್ಲಾ ಈಗ ಊರಾಗನ ದಾಳಿ ಮಾಡತಾವ ದಿನಬೆಳಗಾದರ! ಅವನ್ನ ಬೈತಾರ… ಹಾಳ ಮಾಡತಾವ… ಚಿಗರಿಗ ಚಿಗರ ತಿಂತಾವ… ಹೂವಿಗ ಹೂವ ತಿಂತಾವ ಅಂತ! ನಾವು ಹಸರ ಕಾಡ ಕಡದು ಕಾಂಕ್ರೀಟ್ ಕಾಡು ಮಾಡೇವಿ! ಅವು ಹೊಟ್ಟಿಗಿಲ್ದ ಒದ್ದಾಡತಾವನ್ನೂದು ಯಾರಿಗಿ ಹೊಳೀಬೇಕೂ!
ಆಕಾಶ ವಾಣಿ ರಸ್ತೆ ಕಾಂಕ್ರೀಟ್ ಮಾಡೂಮುಂದ ಆ ಮುದಕೀದು ಗುಡಸಲಾ ಎತ್ತಂಗಡಿ ಮಾಡಿದ್ರು. ಅಕಿನ್ನ ಒಯ್ದು ವೃದ್ಧಾಶ್ರಮಕ್ಕ ಹಾಕಿದ್ರು. ಪಾಪ! ಹೊಟಿಬ್ಯಾನಿ ಹಚಿಗೊಂಡ ಸತ್ತಹೋತಪಾ.
ಬಾಕಿ ಎಲ್ಲಾ ನ್ಯಟ್ಟಗದ. ನಿಮ್ಮ ಮನ್ಯಾಗಿನ ಚಿ. ಮಂಡಳೀಗೆ ನನ್ನ ಆಶೀರ್ವಾದ ಹೇಳು.
ಇಂತಿ ನಿನ್ನ ಅಕ್ಕ.
(ಇದೊಂದ ಪತ್ರಾ… ಭಾಳ ದಿನಾ ಮದಲ ಬರದದ್ದು… ಹಳೇ ಕಡತದಾಗ ಸಿಕ್ತೂ… )
ಮಾಲತಿ ಮುದಕವಿ