ಎನ್ನ ಮನ್ನಿಸೋ…
ಇದೊಂದು ಚುನಾವಣಾ ಸಮಯದ ಕಥೆ ಎನ್ನುವುದಕ್ಕಿಂತ ಮನೆ ಮನೆ ಕಥೆ ಎಂತಲೇ ಹೇಳಬಹುದೇನೋ… ಆ ಸಮಯದಲ್ಲಿ ನಡೆದ, ನಡೆಯಬಹುದಾದ ಅವಾಂತರಗಳನ್ನು ನುರಿತ ಲೇಖಕಿಯಾದ ಶ್ರೀಮತಿ ಬಿ ಟಿ ಲಲಿತಾ ನಾಯಕರವರು ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಶಿಕ್ಷಣದ ಕೊರತೆಯೇ ಈ ಎಲ್ಲ ಅಜ್ಞಾನಕ್ಕೂ ಮೂಲಕಾರಣ ಎನ್ನುವುದು ಓದುಗನಿಗೆ ಮೇಲ್ನೋಟಕ್ಕೆಯೇ ವ್ಯಕ್ತವಾಗುತ್ತದೆ.
ಇಲ್ಲಿ ಲಂಬಾಣಿ ಜನರ ಸಮಾಜದಲ್ಲಿ ಶೈಕ್ಷಣಿಕ ಕೊರತೆಯಿಂದಾಗಿ ಚುನಾವಣೆಯ ಸಮಯದಲ್ಲಿ ಆಗುವ, ಆಗಬಹುದಾದ ಅನಾಹುತಗಳ ಬಗ್ಗೆ ಚಿತ್ರಿಸಿದ್ದಾರೆ.ಇಲ್ಲಿ ಲಂಬಾಣಿ ಜನರ ಸಮಾಜದಲ್ಲಿ ಶೈಕ್ಷಣಿಕ ಕೊರತೆಯಿಂದಾಗಿ ಚುನಾವಣೆಯ ಸಮಯದಲ್ಲಿ ಆಗುವ, ಆಗಬಹುದಾದ ಅನಾಹುತಗಳ ಬಗ್ಗೆ ಚಿತ್ರಿಸಿದ್ದಾರೆ.
ಎನ್ನ ಮನ್ನಿಸೋ…
ಇದೊಂದು ಚುನಾವಣಾ ಸಮಯದ ಕಥೆ ಎನ್ನುವುದಕ್ಕಿಂತ ಮನೆ ಮನೆ ಕಥೆ ಎಂತಲೇ ಹೇಳಬಹುದೇನೋ… ಆ ಸಮಯದಲ್ಲಿ ನಡೆದ, ನಡೆಯಬಹುದಾದ ಅವಾಂತರಗಳನ್ನು ನುರಿತ ಲೇಖಕಿಯಾದ ಶ್ರೀಮತಿ ಬಿ ಟಿ ಲಲಿತಾ ನಾಯಕರವರು ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಶಿಕ್ಷಣದ ಕೊರತೆಯೇ ಈ ಎಲ್ಲ ಅಜ್ಞಾನಕ್ಕೂ ಮೂಲಕಾರಣ ಎನ್ನುವುದು ಓದುಗನಿಗೆ ಮೇಲ್ನೋಟಕ್ಕೆಯೇ ವ್ಯಕ್ತವಾಗುತ್ತದೆ.
ಇಲ್ಲಿ ಲಂಬಾಣಿ ಜನರ ಸಮಾಜದಲ್ಲಿ ಶೈಕ್ಷಣಿಕ ಕೊರತೆಯಿಂದಾಗಿ ಚುನಾವಣೆಯ ಸಮಯದಲ್ಲಿ ಆಗುವ, ಆಗಬಹುದಾದ ಅನಾಹುತಗಳ ಬಗ್ಗೆ ಚಿತ್ರಿಸಿದ್ದಾರೆ.
ಬಿಟಿ ಲಲಿತಾ ನಾಯಕರವರು ತಾವು ಕಂಡುಂಡ ಸನ್ನಿವೇಶಗಳಿಗೇ ಇಲ್ಲಿ ಕಲಾತ್ಮಕತೆಯ ಮೆರುಗನ್ನು ಇತ್ತಿರುವುದರಿಂದ ನೈಜತೆ ಈ ಕಥೆಯಲ್ಲಿ ಹಾಸುಹೊಕ್ಕಾಗಿದೆ.
ಚುನಾವಣಾ ಸಮಯದಲ್ಲಿ ಎಲ್ಲರೂ ಬಂಧುಗಳಾಗಿ ಬಿಡುತ್ತಾರೆ… ಅವ್ವಾ, ಅಕ್ಕಾ, ಅಣ್ಣಗಳಾಗಿಬಿಡುತ್ತಾರೆ. ಅಭ್ಯರ್ಥಿಗಳು, ಕಾರ್ಯಕರ್ತರು ಮತದಾರರ ಒಲವು ಗಳಿಸಲು ಏನೇನು ಕಸರತ್ತು ಮಾಡುವರೆಂಬುದು ಎಲ್ಲರಿಗೂ ಅನುಭವವೇದ್ಯವೇ.
ಕೆಲವರಂತೂ ತಮ್ಮ ವಾಹನಗಳಲ್ಲಿಯೇ ಏನೇನೋ ಮಾರಲೆಂದು ಬುಟ್ಟಿ ಹೊತ್ತು ತಾಂಡಾದಿಂದ ಪೇಟೆಗೆ ಹೊರಟ ಅವರನ್ನು, ಅವರ ಬುಟ್ಟಿ ಸಮೇತವಾಗಿ ಕೂಡ್ರಿಸಿಕೊಂಡು ಅವರು ಹೋಗಬೇಕಾದ ಸ್ಥಳಗಳಿಗೆ ಬಿಡುತ್ತಾರೆ ಅಂತ ಹೇಳುವ ಈ ಮಾತಿನಲ್ಲಿ ಕಾರ್ಯ ವಾಸಿ ಭಾವ ಎದ್ದು ಕಾಣುತ್ತದೆ.
ಇದಕ್ಕಿಂತ ಬೇರೆಯಾಗಿ ತೆಗ್ಗಿ ತಾಂಡಾದ ಕಥೆಯೇನೂ ಇಲ್ಲ. ಸೀತಿಬಾಯಿ ಅದೇ ತಾಂಡೇದ ಹೆಣ್ಣು ಮಗಳು. ಕೆಲ ಅಭ್ಯರ್ಥಿಗಳು ಕೆಲ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೂ ಬಹಳಷ್ಟು ಅಭ್ಯರ್ಥಿಗಳು ಈ ಬಡ ಅಶಿಕ್ಷಿತ ಜನರನ್ನು ಸೆರೆದ ಪಾಕೀಟು, ಬಟ್ಟೆ ಬರೆ, ಗಾಂಜಾದಂಥ ಕ್ಷಣಿಕ ಆಮಿಷ ತೋರಿಸಿ ಒಲಿಸಿಕೊಳ್ಳುವುದಲ್ಲದೆ ಧರ್ಮ-ದೇವರುಗಳ ಮೇಲೆ ಆಣೆ ಪ್ರಮಾಣ ಮಾಡಿಸಿಕೊಂಡು ಹೇಗೆ ತಮ್ಮ ಕಾರ್ಯ ಸಾಧಿಸಿಕೊಳ್ಳುತ್ತಾರೆ ಎನ್ನುವುದನ್ನು ಅತ್ಯಂತ ನೈಜವಾಗಿ ಚಿತ್ರಿಸಿದ್ದಾರೆ.
ನಮ್ಮ ಜನರಲ್ಲಿ ಅಭ್ಯರ್ಥಿಗಳ ಯೋಗ್ಯತೆಗೆ, ಅವರ ಜನೋಪಯೋಗಿ ಕಾರ್ಯಗಳಿಗೆ ಯಾವುದೇ ಮಹತ್ವ ವೂ ಇಲ್ಲ… ಚುನಾವಣೆಗೂ ಮುನ್ನಾ ದಿನಗಳಲ್ಲಿ ಅಭ್ಯರ್ಥಿ ಅಥವಾ ಪಕ್ಷ ಕೊಡುವ ಸಾರಾಯಿ, ಬಟ್ಟೆ ಬರೆ, ಮುಂತಾದವುಗಳ ಮೇಲೇ ಮತದಾನ ಅವಲಂಬಿಸಿರುತ್ತದೆ ಎನ್ನುವುದನ್ನು ಲೇಖಕಿ ಇಲ್ಲಿ ಉದಾಹರಣೆಗಳ ಮೂಲಕ ಒತ್ತಿ ಹೇಳುತ್ತಾರೆ. ಅಷ್ಟೇ ಅಲ್ಲ, ಚುನಾವಣೆಗಳು ಎಲ್ಲೆಡೆಯೂ ಧರ್ಮ ದೇವರುಗಳನ್ನೇ ದಾಳ ಮಾಡಿಕೊಳ್ಳುತ್ತವೆ ಎನ್ನುವುದನ್ನು ಬೇವಿನ ಸೊಪ್ಪಿನ ಮೇಲೆ ಕೈಯಿರಿಸಿ ಆಣೆ ಮಾಡಿಸಿಕೊಂಡದ್ದನ್ನು, ನಮ್ಮ ಜನರ ಮೂಢನಂಬಿಕೆ ಎನ್ನುವುದನ್ನು ಸೀತೀಬಾಯಿಯಲ್ಲಿ ಉಂಟಾದ ಮನೋಕ್ಲೇಶಗಳ ಮೂಲಕ ಹೇಳುತ್ತಾರೆ.
ಈ ಬಡ ಕುಟುಂಬಗಳಲ್ಲಿ ಹಗಲಿಡೀ ಮೈಮುರಿಯ ದುಡಿದ ಗಂಡಸರು ಬಹು ಬೇಗನೆ ಕುಡಿತದ ದಾಸರಾಗಿ ಬಿಡುತ್ತಾರೆ. ಹೆಂಗಸರ ಮೇಲೆಯೇ ಕೌಟುಂಬಿಕ ಜವಾಬ್ದಾರಿ ಬೀಳುತ್ತದೆಯಾದರೂ ಗಂಡಸು ಕಂಠಮಟ್ಟ ಕುಡಿದು ಬಂದು ತನ್ನ ಮನಸಿಗೆ ವಿರುದ್ದವಾಗಿ ಹೆಂಗಸರು ಮಾತನಾಡಿದರೆ ಅವರನ್ನು ಮೈಹುಳೆ ಹೊಡೆಯುವುದರಲ್ಲೇನೂ ಹಿಂದಿಲ್ಲ.. ಇದೇ ಈ ಕಥೆಯಲ್ಲಿಯೂ ನಡೆಯುತ್ತದೆ. ಬೇವಿನಸೊಪ್ಪಿನ ಮೇಲೆ ಆಣೆ ಮಾಡಿಸಿಕೊಂಡು ದೇವಲ್ಯಾ ಎಂದರೆ ಸೀತೀಬಾಯಿಯ ಗಂಡನಿಗೆ ಕುಡಿಯಲು ಸೆರೇದ ಪಾಕೀಟು ಕೊಟ್ಟರೆ, ಸೀತೀಬಾಯಿಗೆ, ಮಕ್ಕಳಿಗೆ ಬಟ್ಟೆ ಬರೆ ಕೊಟ್ಟು ಬೇವಿನಸೊಪ್ಪಿನ ಮೇಲೆ ಆಣೆ ಮಾಡಿಸಿಕೊಳ್ಳುತ್ತಾರೆ. ಮಗನಾದ ರುಕ್ಮ್ಯಾನಿಗೂ ಪುಕ್ಕಟೆ ಸೆರೆ ಸಿಕ್ಕಿದೆ… ಅವನೂ ತನ್ನ ಕುಟುಂಬದ ಎಲ್ಲಾ ಮತಗಳನ್ನು ಆ ಪಕ್ಷಕ್ಕೇ ಹಾಕುವುದಾಗಿ ಬೇವಿನಸೊಪ್ಪಿನ ಮೇಲೆ ಆಣೆ ಮಾಡಿದ್ದಾನೆ. ಇನ್ನು ಅಜ್ಜನೂ ಇದರಲ್ಲಿ ಹಿಂದೆ ಬಿದ್ದಿಲ್ಲ. ಅವನಿಗೂ ಕೂಡ ಬಣ್ಣಬಣ್ಣದ ಬಾಟಲಿಗಳು, ಬಟ್ಟೆ ಬರೆ, ಬೀಡಿಯ ಕಟ್ಟುಗಳು ದೊರೆತಿವೆ… ಅವನೂ ಆಣೆ ಮಾಡಿಯೇ ಬಿಟ್ಟಿದ್ದಾನೆ! ಇದರ ಸಲುವಾಗಿ ತಂದೆ ಮಗನ ಹೊಡೆದಾಟವೂ ಆಗಿ, ದೇವಲ್ಯಾ ಹಾಗೂ ರುಕಮ್ಯಾ ಇಬ್ಬರೂ ಸೆರೆಯ ಅಮಲು ಹೆಚ್ಚಾಗಿ ಬಿದ್ದಿದ್ದಾರೆ.
ಸೀತೀಬಾಯಿಯ ಮನದಲ್ಲಿ ತಾವೆಲ್ಲರೂ ಬೇವಿನ ಸೊಪ್ಪು ಮುಟ್ಟಿ ಆಣೆ ಮಾಡಿದ್ದೇವೆ. ಮಾತಿಗೆ ತಪ್ಪಿದರೆ ತಮ್ಮ ವಂಶಕ್ಕೇ ವಿನಾಶ ಎಂಬ ವಿಷಯ ಕೊರೆಯುತ್ತದೆ. ಈ ಆತಂಕ ಅಭದ್ರತೆಗಳೇ ಉಮೇದುವಾರರ ಮತ ಕಕ್ಕುವ ಯಂತ್ರಗಳಿದ್ದಂತೆ!
ಧರ್ಮ ದೇವರುಗಳನ್ನು ಉಪಯೋಗಿಸಿಕೊಂಡು ಮುಗ್ಧ ಜನತೆಯ ಮೌಢ್ಯವನ್ನು ಬೆಳೆಸುವ ಈ ರಾಜಕಾರಣಿಗಳು ಐದು ವರ್ಷಕ್ಕೊಮ್ಮೆ ಉಪಕಾರ ಮಾಡುವವರಂತೆ ಸೋಗು ಹಾಕುವ ಊಸರವಳ್ಳಿಗಳೆಂದೂ ಅರಿಯದವರು ಈ ಮುಗ್ಧ ಜನರು!
ಅಷ್ಟರಲ್ಲಿ ಮನೆಗೆ ಗಾಡಿಯಲ್ಲಿ ಬಂದ ಸೀತೀಬಾಯಿಯ ಸೋದರ… ಅವನೂ ಇದೇ ರೀತಿಯ ಕಾರ್ಯ ಕರ್ತರ ಗುಂಪಿಗೆ ಸೇರಿದವ. ಇಂಥ ಸಮಯದಲ್ಲಿಯೇ ಕೆಲ ದಲ್ಲಾಳಿಯಂಥ ಜನರು ಒಂದಿಷ್ಟು ದುಡ್ಡು ಮಾಡಿಕೊಳ್ಳಲು ಹವಣಿಸುತ್ತಾರೆ. ಅಂಥವ ಈ ಅಣ್ಣ! ಅವನು ಸುಳ್ಳು ಸಟ್ಟೆ ಇರದೆದ್ದರ ಇಲೆಕಸನ್ನೇ ಆಗಂಗಿಲ್ಲಂತ ಹೇಳಿ ಅವಳಿಗೆ ತಾನು ಬೆಂಬಲಿಸೋ ಪಕ್ಷ ಕ್ಕೇ ಮತ ಹಾಕು ಎಂದು ಹೇಳಿ ಎಲ್ಲರೂ ಕುಡಿದು ಬಿದ್ದುದರಿಂದ ತನ್ನ ತಂಗಿಯನ್ನು ಮಾತ್ರ ಮತದಾನಕ್ಕೆ ಗಾಡಿಯಲ್ಲಿ ಕರೆದೊಯ್ದು ತಿಂಡಿ ತಿನ್ನಿಸಿ ಪಾಳಿಯಲ್ಲಿ ನಿಲ್ಲಿಸುತ್ತಾನೆ. ಇದೂ ಆಮಿಷವೇ… ಒಂದು ದಿನ ಹೊಟ್ಟೆ ತುಂಬಿದರೆ ಸಾಕು ಎನ್ನುವವರನ್ನು ಉಪಯೋಗಿಸಿಕೊಳ್ಳುವುದೇನೂ ದೊಡ್ಡ ಮಾತಲ್ಲ ಎಂದು ಲೇಖಕಿಯು ಇಲ್ಲಿ ಹೇಳಲೆತ್ನಿಸಿದ್ದಾರೆ. ಅಷ್ಟರಲ್ಲಿ ಅಪ್ಪ, ಅಜ್ಜ, ಅಣ್ಣ ಎಲ್ಲರೂ ವಾಂತಿ ಮಾಡಿಕೊಳ್ಳುತ್ತಲಿದ್ದಾರೆ ಎಂಬ ಮಗಳು ತಂದ ಸುದ್ದಿ ಅವಳನ್ನು ಕಂಗೆಡಿಸಿ ದೇವರು ತಮ್ಮ ಕೈಬಿಟ್ಟನೆಂದು ಮನೆಯ ಕಡೆಗೆ ಓಡತೊಡಗುತ್ತಿದ್ದವಳನ್ನು ಹಿಡಿದು ನಿಲ್ಲಿಸಿ ಅವಳ ಅಣ್ಣ ಮತದಾನ ಮಾಡಿ ಬಂದಕೂಡ್ಲೆ ಅವಳನ್ನು ಸ್ವತಃ ಗಾಡಿಯಲ್ಲಿ ಮನೆಗೆ ಕರೆದೊಯ್ಯುವುದಾಗಿ ಹೇಳಿ ಒಳಗೆ ಕಳಿಸುತ್ತಾನೆ. ಇಲ್ಲಿ ಸೋದರಿಯ ಸಂಸಾರವು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಆತನಿಗೆ ಯಾವುದೇ ಚಿಂತೆ ಇಲ್ಲ. ತನ್ನದೇ ಆದ ಸ್ವಾರ್ಥ … ಹಣದ ಹಿಂದೆ ಬಿದ್ದವರಿಗೆ ಏನೂ ಅರಿವಾಗದು ಎಂಬುದನ್ನು ಇಲ್ಲಿ ಈ ಒಂದು ವ್ಯಕ್ತಿತ್ವದ ಮೂಲಕ ಹೇಳಿದ್ದಾರೆ ಲೇಖಕಿ.
ಇನ್ನು, ಒಳಹೋದ ಅವಳಿಗೆ ಯಾರ್ಯಾರು ಯಾವ್ಯಾವ ಗುರುತುಗಳನ್ನು ಹೇಳಿದ್ದರೆನ್ನುವುದೇ ಮರೆತುಹೋಗಿ, ಪೋಲಿಂಗ್ ಆಫೀಸರು ಗಡಿಬಿಡಿ ಮಾಡಿದಾಗ ನಾಲ್ಕೂ ಬಟನ್ ಒತ್ತಿ, ಮನೆಯ ಎಲ್ಲಾ ಮತಗಳನ್ನು ಎಲ್ಲರಿಗೂ ಹಾಕಿದ್ದೇನೆ” ಎಂದು ದೇವರಿಗೆ ಕೈಮುಗಿದು ಹೊರಬಂದು ಅಣ್ಣನನ್ನು ಹುಡುಕುತ್ತಾಳೆ…. ಮನೆಗೆ ಕರೆದುಕೊಂಡು ಹೋಗುವೆನೆಂದು ಮಾತು ಕೊಟ್ಟಿದ್ದುದು ನೆನಪಾಗಿ! ಆದರೆ ಅವನು ಸ್ವಾಮಿಗಳ ಜೊತೆಗೆ ಹೊರಟು ಹೋಗಿರುತ್ತಾನೆ!
ಅವನೇ ಹೇಳಿದ ಮಾತು… ಸುಳ್ಳು ದಗಲ್ಬಾಜಿ ಮಾಡಲಿಲ್ಲಾಂದ್ರೆ ಎಲಕ್ಷನ್ ನಡಿಯೋದಿಲ್ಲ” ಎಂಬುದು ನೆನಪಾಗುತ್ತದೆ! ತನ್ನ ಕುಟುಂಬದ ಆಸರೆಯೇ ಮುರಿದು ಬೀಳುತ್ತಿದೆ ಎಂದು ಕೊಂಡು ತಳಮಳಿಸುತ್ತ ಮನೆಯತ್ತ ಓಡುತ್ತಾಳೆ ಎಂಬಲ್ಲಿಗೆ ಕಥೆ ಮುಗಿಯುತ್ತದೆ.
ಶೈಲಿ ಅತ್ಯಂತ ಸರಳಸುಂದರ. ಇಲ್ಲಿ ಕಾಲ್ಪನಿಕತೆಗಿಂತ ನೈಜತೆಗೇ ಹೆಚ್ಚಿನ ಪ್ರಾಶಸ್ತ್ಯವಿದೆ. ನಮ್ಮ ದೇಶದಲ್ಲಿ ನಡೆಯುವ ಚುನಾವಣಾ ಚಿತ್ರ ಇದಕ್ಕಿಂತ ಭಿನ್ನವಾಗೇನಿಲ್ಲ… ಲೇಖಕಿಯ ಕಥನಕೌಶಲದಿಂದಾಗಿ ಎಲ್ಲಿಯೂ ಇದು ನೈಜತೆಯ ಎಲ್ಲೆಯನ್ನು ದಾಟುವುದಿಲ್ಲ. ಒಟ್ಟಿನಲ್ಲಿ ಇದೊಂದು ಅತ್ತ್ಯುತ್ತಮ ಕಥೆ ಎಂದು ಹೇಳಬಹುದು.