ಎಲ್ಲವನ್ನೂ ಮಾಡಿಯೂ ನಾನು ಅಕರ್ತಾ
‘ಕರ್ಮದಲ್ಲಿ ತೊಡಗಿದ್ದರೂ ತಾನು ‘‘ಅಕರ್ತಾ’’. ಏಕೆಂದರೆ ‘‘ನಾನು ಕರ್ತಾ’’ ಎಂಬ ಮಮಕಾರವನ್ನೂ ಹೊಂದದೆ, ಕರ್ಮಫಲದಲ್ಲಿ ಆಸಕ್ತಿಯಿರದೇ ಇರುವವನು ತಾನು’ ಎಂದು ಶ್ರೀಕೃಷ್ಣನು ವಿವರಿಸುತ್ತಿದ್ದ. ‘ನನ್ನ ಈ ಕರ್ಮಯೋಗದ ಮರ್ಮವನ್ನು ಅರಿತವನು ತಾನೂ ಹಾಗೆಯೇ ಕರ್ಮಫಲಕ್ಕೆ ಅಂಟಿಕೊಳ್ಳದೆ ಮುಕ್ತನಾಗುತ್ತಾನೆ’ ಎಂದೂ ಹೇಳಿದ್ದ. ಮುಂದುವರೆಸುತ್ತಾನೆ: ‘ಪೂರ್ವಕಾಲದಲ್ಲೂ ಮುಮುಕ್ಷುಗಳಾದವರು (ಕರ್ಮಬಂಧದಿಂದ ಮುಕ್ತಿಯನ್ನು ಬಯಸುವ ಮಹಾತ್ಮರು), ಹೀಗೆಂದು (ಬುದ್ಧಿಯೋಗದ ಪರಿಯನ್ನು ತಿಳಿದು) ಕರ್ಮವನ್ನು ಮಾಡಿದ್ದರು. ಹಿಂದಿನವರು ಮಾಡಿದ ಬಗೆಯಲ್ಲೇ ನೀನೂ ಈ ಕರ್ಮವನ್ನು ಮಾಡು.’ (ಭ.ಗೀ.: 4, 15)
‘ಬಹುಕಾಲ ಪ್ರಯೋಗಗಳಿಂದ ಮಹಾತ್ಮರು ಈ ‘‘ಬುದ್ಧಿಯೋಗ’’ವೆಂಬ ಪಕ್ವವಾದ ಸಿದ್ಧಮಾರ್ಗವನ್ನು ಕಂಡುಹಿಡಿದ್ದಾರೆ. ಅದನ್ನೇ ಅನುಸರಿಸು, ಮುಕ್ತನಾಗು’ ಎನ್ನುವುದು ಕೃಷ್ಣನ ಮಾತಿನಿಂಗಿತ. ಪರಿಚಯವಿಲ್ಲದ ಪ್ರದೇಶದಲ್ಲಿ ಸಂಚರಿಸುವಾಗ, ಆ ಊರಲ್ಲಿ ವಾಸಿಸುವವರ ಮಾರ್ಗದರ್ಶನವು ನಮಗೆ ಅನುಕೂಲಕರವಾಗುತ್ತದೆ, ಮೈಲಿಗಲ್ಲುಗಳು ಸಹಾಯಕವಾಗುತ್ತವೆ. ಆತ್ಯಂತಿಕ ಸತ್ಯದ ವಿಷಯದಲ್ಲೂ ಹಾಗೆಯೇ! ಸತ್ಯದ ದರ್ಶನ ಅನುಭವಗಳು ನಮ್ಮ ನಮ್ಮ ಅಂತರಂಗದಲ್ಲೇ ಆಗಬೇಕಾದದ್ದು ಎನ್ನುವುದು ನಿಜವಾದರೂ, ಅಂತಮುಖತೆಯವರೆಗಾದರೂ ದಾರಿ ತೋರಲು, ಬಾಹ್ಯಜಗತ್ತಿನಲ್ಲಿರುವ ಸತ್ಯದರ್ಶಿಗಳ ಅನುಭವಪೂರ್ಣ ನಡೆ-ನುಡಿಗಳು ನಮಗೆ ಬಹಳ ಸಹಾಯಕವಾಗುತ್ತವೆ. ನಾವಾಗಿ ಎದ್ದು ಬಿದ್ದು ಎದ್ದು ಕಲಿಯುವ ಪ್ರಯಾಸವೂ ಅದೆಷ್ಟೋ ಕಡಿಮೆಯಾಗುತ್ತದೆ. ಹಾಗಾಗಿ ‘ಮಹಾತ್ಮರು ಚರಿಸಿದ ಸಿದ್ಧಮಾರ್ಗವನ್ನೇ ಅನುಸರಿಸು’ ಎಂಬ ಕಿವಿಮಾತನ್ನು ಅರ್ಜುನನಿಗೆ ಹೇಳುತ್ತಿದ್ದಾನೆ ಕೃಷ್ಣ.
‘ಯಾವುದು ‘‘ಕರ್ಮ’’? ಯಾವುದು ‘‘ಅಕರ್ಮ’’? ಎನ್ನುವ ವಿಷಯದಲ್ಲಿ ಕವಿಗಳೂ ಇಲ್ಲಿ ಗೊಂದಲಕ್ಕೊಳಗಾಗಿದ್ದಾರೆ. ಹಾಗಾಗಿ, ಯಾವುದರಿಂದ ಅಶುಭದಿಂದ (ಬಂಧನದಿಂದ) ಮುಕ್ತಿಯನ್ನು ಪಡೆವೆಯೋ, ಅಂತಹ ವಿಷಯವನ್ನು ನಾನೇ ನಿನಗೆ (ಸ್ಪಷ್ಟಪಡಿಸುವ ಸಲುವಾಗಿ) ಹೇಳುತ್ತಿದ್ದೇನೆ.’ (ಭ.ಗೀ.: 4, 16)
ಕವಿಗಳು ಎಂದರೆ ‘ತಿಳಿದವರು’, ‘ಪಂಡಿತರು’ ಎಂದರ್ಥ. ಅಂಥವರಿಗೂ ಈ ಕರ್ಮ-ಅಕರ್ಮಗಳ ವಿಷಯದಲ್ಲಿ ಗೊಂದಲವಿದೆ ಎನ್ನುತ್ತಿದ್ದಾನೆ ಕೃಷ್ಣ! ಅಂತಮುಖ ಅನುಸಂಧಾನಕ್ಕಿಳಿಯದೇ, ಕೇವಲ ಬುದ್ಧಿಯ ಸ್ತರದಲ್ಲೇ ನಿಂತು, ತರ್ಕದಿಂದಲೇ ಎಲ್ಲವನ್ನೂ ‘ಪ್ರತಿಷ್ಠಾಪಿಸುವ’ ಪಂಡಿತರು ವಿದ್ವತ್ ಪ್ರದರ್ಶನಕ್ಕಾಗಿಯೋ, ವಾದಚಾಪಲ್ಯದಿಂದಲೋ ತರ್ಕಗಳ ಮೂಲಕ ಯಾವುದೇ ಸಿದ್ಧಾಂತಕ್ಕೂ ಹಲವು ಅರ್ಥ-ಅಪಾರ್ಥಗಳನ್ನು ಕಲ್ಪಿಸುತ್ತ ಸಾಗಲು ಸಾಧ್ಯವಿದೆ. ಅಂತಮುಖತೆಯನ್ನು ಸಿದ್ಧಿಸಿಕೊಳ್ಳುವವರೆಗೂ ಇವರುಗಳ ಮತಿ-ಮನಗಳೂ ಬಾಹ್ಯಜಗತ್ತಿನ ಆಗುಹೋಗುಗಳ, ಸುಖ-ದುಃಖ, ಲಾಭಾಲಾಭಗಳ ಪ್ರಭಾವಕ್ಕೊಳಪಡುತ್ತಲೇ ಇರುತ್ತವೆ. ಹೀಗಾಗಿ ಇವರ ಬುದ್ಧಿಯು ವಿದ್ವತ್ತಿನಿಂದ ತೀಕ್ಷ ್ಣ ವಾಗಿದ್ದರೂ, ಅನುಭವದ ನೆಲೆಗೆ ಬೇಕಾದ ಸೂಕ್ಷ್ಮತೆಯನ್ನು ಹೊಂದಿರುವುದಿಲ್ಲ. ಎಲ್ಲರನ್ನೂ ‘ತೂಗಿ ಅಳೆದು ವಿಶ್ಲೇಷಿಸಬಲ್ಲ’ ಇವರುಗಳು ತಮ್ಮೊಳಗೇ ಇಣುಕಿ ನೋಡುವ ಸಹನೆಯನ್ನೂ ವಿವೇಕವನ್ನೂ ಪಡೆದಿರುತ್ತಾರೆ ಎನ್ನಲಾಗದು! ಹೀಗಾಗಿ ಇವರಲ್ಲೂ ಶ್ರದ್ಧಾಜಾಡ್ಯವೇಳುವುದು ಸಹಜವೆ! (ಶ್ರದ್ಧಾಜಾಡ್ಯವೆಂದರೆ ‘ನಾನು ಒಪ್ಪಿರುವ ಮಾರ್ಗ-ಸಿದ್ಧಾಂತ-ಮತ-ಪಥಗಳೇ ಸರಿ, ಅದೇ ಸವೋಚ್ಚ’ ಎಂಬ ಸೈದ್ಧಾಂತಿಕ ಮಮಕಾರ) ವ್ಯಕ್ತಿ, ವಸ್ತು, ಸ್ಥಾನಮಾನಗಳ ಮಮಕಾರದಿಂದ ಕಳಚಿಕೊಂಡ ಮಹಾತ್ಮರೂ ಈ ‘ಸೈದ್ಧಾಂತಿಕ ಮಮಕಾರ’ದ ಜಾಲದಿಂದೇಳಲು ಕಷ್ಟಪಡುತ್ತಾರೆ! ಹೀಗಾಗಿ ಆ ಮೋಹವನ್ನೂ ಮೀರಿ ನಿಂತು ನಿಶ್ಚಲಮತಿಯಿಂದ ಕರ್ವಕರ್ಮಗಳ ಸೂಕ್ಷ್ಮತಮ ಸತ್ಯವನ್ನು ರ್ತಸುವುದು ಎಂತಹ ವಿದ್ವನ್ಮಣಿಗಳಿಗೂ ಸುಲಭವಲ್ಲ. ಮನೋಬುದ್ಧಿಗಳಾಚೆಗಿನ ಧ್ಯಾನಾನುಭವಕ್ಕೇರಬಲ್ಲ ಯೋಗಿಗೆ ಮಾತ್ರವೇ ಈ ಕರ್ವಕರ್ಮಗಳ ಮರ್ಮ ಗ್ರಾಹ್ಯವಾದೀತು. ಅಂತಹವರು ಮಾತ್ರವೇ ‘ಅಕರ್ತಾ’ಭಾವವನ್ನು ಸಿದ್ಧಿಸಿಕೊಳ್ಳಬಲ್ಲರು. ಈ ನೆಲೆಗೇರಲು ‘ನಾನು ಮಾಡಿದೆ’, ‘ಇದು ನನ್ನದು’ ಎನ್ನುವ ಕರ್ತೃತ್ವಭಾವವನ್ನು ಬುದ್ಧಿ-ಮನಃಪೂರ್ವಕವಾಗಿ ಭಗವಂತನ ಶ್ರೀಚರಣಗಳಿಗರ್ಪಿಸಿ ಭಕ್ತಿಯಲ್ಲಿ ಬಾಗುತ್ತ ಅಹಮಿಕೆಯನ್ನು ಶಮನಗೊಳಿಸಿಕೊಳ್ಳುವುದೊಂದೇ ಉತ್ತಮೋಪಾಯ!
‘ತಾನು ಯೋಗದೆತ್ತರದಲ್ಲಿ ನೆಲೆನಿಂತವನಾದ್ದರಿಂದ ಈ ವಿಷಯವನ್ನು ಅರ್ಜುನನಿಗೆ ಗೊಂದಲವಿಲ್ಲದಂತೆ ಮನಮುಟ್ಟಿಸಬಲ್ಲೆ’ ಎಂಬ ಸಾತ್ವಿಕಾಭಿಮಾನವು ಕೃಷ್ಣನಲ್ಲಿ ಕಾಣಬರುತ್ತದೆ ಇಲ್ಲಿ. ಹೀಗೆ ಹೇಳಿಕೊಳ್ಳಲೂ ಯಾರೆಂದವರಿಗೆ ಧೈರ್ಯ ಬಾರದು ಬಿಡಿ. ರೂಪ-ವಿದ್ಯೆ-ಐಶ್ವರ್ಯ-ಸ್ಥಾನಮಾನಗಳ ಬಗ್ಗೆ ‘ತಾನೇ ಉನ್ನತೋನ್ನತಸ್ತರಕ್ಕೇರಿದವನು’ ಎಂದು ಯಾರು ಬೇಕಾದರೂ ಕೊಚ್ಚಿಕೊಳ್ಳಬಹುದು, ಆದರೆ ‘ಯೋಗದೆತ್ತರಕ್ಕೇರಿದ್ದೇನೆ, ನಾನು ಹೇಳುವುದು ನಿನಗೆ ಸ್ಪಷ್ಟವಾಗಿ ದಾರಿತೋರಿಸಬಲ್ಲುದು’ ಎನ್ನುವ ಆತ್ಮವಿಶ್ವಾಸದ ಮಾತುಗಳನ್ನಾಡಲು ಎಲ್ಲರಿಂದ ಸಾಧ್ಯವಿಲ್ಲ. ಶಿಷ್ಯಸಂಖ್ಯಾವರ್ಧನೆ, ಹಣ-ಕೀರ್ತಿಗಳ ಸಂಪಾದನೆಗಾಗಿ ಒಂದಷ್ಟು ಡೋಂಗಿಗಳು ಕೆಲಕಾಲ ಹೀಗೆ ಹೇಳಿಕೊಳ್ಳುತ್ತ, ಒಂದಷ್ಟು ಮುಗ್ಧರನ್ನು ಆಡಿಸಬಹುದೇನೋ ಅಷ್ಟೆ. ಆದರೆ, ಸಹಸ್ರಮಾನಗಳೇ ಗತಿಸಿದರೂ ಕೃಷ್ಣನ ಈ ಮಾತು ಅದೆಷ್ಟು ಗೌರವಯುತವಾಗಿ ಅಂಗೀಕಾರವಾಗಿದೆ! ಅಂದಿನಿಂದ ಇಂದಿನವರೆಗೂ ಕೃಷ್ಣನ ನಡೆನುಡಿಗಳು ಮನುಕುಲಕ್ಕೇ ಜೀವನಯಾನದ ಬಗೆಯನ್ನು ಪರಿಚಯಿಸುವಂತಹದ್ದಾಗಿದೆ! ‘ಮಹಾತ್ಮರ ಜೀವನಸಂದೇಶದ ಸಾರವನ್ನೇ ತಾನು ತನ್ನ ನೇರ ಸರಳ ಮಾತುಗಳಲ್ಲಿ ಮನಮುಟ್ಟಿಸುತ್ತಿದ್ದೇನೆ’ ಎನ್ನುವುದು ಕೃಷ್ಣನ ಮಾತಿನ ಇಂಗಿತ. ಅಶುಭದಿಂದ ಅರ್ಥಾತ್ ಜನ್ಮಮರಣಚಕ್ರದಿಂದ ಬಿಡುಗಡೆಗೆ ಮಾರ್ಗವನ್ನು ತಾನೇ ತೋರಿಸುತ್ತೇನೆಂದು ಅರ್ಜುನನಿಗೆ ನಿಖರವಾಗಿ ಹೇಳುತ್ತಿದ್ದಾನೆ ಕೃಷ್ಣ.
ಇಂತಹ ಜಗದ್ಗುರು ಶ್ರೀಕೃಷ್ಣನು ತನ್ನ ಅನನ್ಯಶೈಲಿಯಲ್ಲಿ ‘ಅಕರ್ಮ’ದ ಬಗೆಯನ್ನು ವಿವರಿಸುತ್ತಿದ್ದಾನೆ! ಅದನ್ನೆಲ್ಲ ಆಲಿಸಿದ ಆ ಪಾರ್ಥನೂ ಧನ್ಯ! ಅವನ ನಿಮಿತ್ತವಾಗಿ ಆ ಗೀತೋಕ್ತಿಯನ್ನು ಆಲಿಸುತ್ತಿರುವುದರಿಂದ ನಾವು ಧನ್ಯರೇ!
ಡಾ. ಆರತೀ ವಿ. ಬಿ.
ಕೃಪೆ: ವಿಜಯವಾಣಿ