ಎಲ್ಲ ವರ್ಣದಲ್ಲೂ ಸಂತಶ್ರೇಷ್ಠರು
ಮೂಲತಃ ವರ್ಣವ್ಯವಸ್ಥೆ ಜಾತಿಯ ಹೆಸರಲ್ಲಿ ವಿಭಜನೆ ಆಗಿರಲಿಲ್ಲ ಎನ್ನುವುದನ್ನು ಮನಗಾಣಲು ಇತಿಹಾಸ ನೋಡುತ್ತ ಬಂದಿದ್ದೇವೆ. ತಾರತಮ್ಯ ಮಾಡುವ ಮತಾಂಧರು ಎಲ್ಲ ಕಾಲದಲ್ಲೂ ಇದ್ದರು. ಆದರೆ ಅಂಥವರ ವಿಕೃತ ಕೂಗುಗಳನ್ನು ಮೂಲೆಗೆ ತಳ್ಳಿ, ಸಮಾಜ ನೈಜ ಯೋಗಿಗಳನ್ನು ಒಪ್ಪಿ ಪೂಜಿಸಿದೆ. ನಾಟಕ-ಸಿನಿಮಾಗಳ ಸಂತರ ಜೀವನಗಳಲ್ಲಿ ಉತ್ಪ್ರೇಕ್ಷಿಸುವ ‘ಜಾತಿಭಾವ’ವನ್ನೇ ಸಾರ್ವಕಾಲಿಕ ವಾಸ್ತವ ಎಂದು ಭ್ರಮಿಸಬಾರದು. ಎಲ್ಲ ಕುಲಗಳಲ್ಲೂ ಅಧ್ಯಾತ್ಮದೆತ್ತರಕ್ಕೇರಿದ ಮಹಾತ್ಮರ ಉದಾಹರಣೆ ನೋಡಬಹುದು.
ಬ್ರಾಹ್ಮಣರಾದ ಸಂತ ಬಿಖಾಸಿಂಗರ ಗುರುಗಳು ಕುನ್ಬೀ (ಕೂಲಿಕೆಲಸ ಮಾಡುವ) ಕುಲದ ಸಂತ ಬುಲ್ಲಾಹ್ ಸಾಹೇಬರು. ಮುಸಲ್ಮಾನ ಆಕ್ರಮಣಕಾರರ ಕ್ರೌರ್ಯ-ಮತಾಂತರಗಳ ಕಾಲದಲ್ಲೂ, ಮುಸಲ್ಮಾನ ನೇಯ್ಗೆಯವನಾದ ಸಂತ ಕಬೀರರ ಮಾಹಾತ್ಮ್ಯನ್ನು ಗುರುತಿಸಿ ಆದರಿಸಿದ ಸಮಾಜ ನಮ್ಮದು! ಬನ್ದೋಗರ್ಹ್ ರಾಜ್ಯದ ರಾಜನ ಗುರುವು ಸೇನಾ ನ್ಹಾವಿ ಎಂಬವರು ಬ್ರಾಹ್ಮಣೇತರರು. ಸಂತ ಕಹಾರರು ನೇಯ್ಗೆಯವರು; ಪಂಜಾಬಿನ ಸಂತ್ ‘ಕುಬ’ ಕುಂಬಾರರು; ಮುನ್ನಾದಾಸ್ ಹಾಗೂ ಗುಜರಾತಿನ ಅಖೋ ಎಂಬ ಸಂತರು ಅಕ್ಕಸಾಲಿಗರು. ಸಂತ ಗುಜ್ರಾತಿ ಕುನ್ಬೀ ಕುಲದವರಾಗಿದ್ದು ಸಂತ ಜಲಾರಾಮ ಹಾಗೂ ವಾಲಂರಾಮರಂತಹ ಮಹಾತ್ಮರಿಗೇ ಗುರುವಾಗಿದ್ದವರು! 1881ರಲ್ಲಿ ಉಳುವ ಆಳುಗಳ ಕುಲದ ಗುಲಾಬ್-ರಾವ್-ಮಹಾರಾಜ್ ವೇದವೇದಾರ್ಥಗಳನ್ನು ಪ್ರಸಾರ ಮಾಡಿದವರು. ಮಹಾರಾಷ್ಟ್ರದ ಸಂತ ನಾಮದೇವರು ನೇಯ್ಗೆಯವರು. ಕುಂಬಾರ ಕುಲದ ಕಾಲಾಕುಂಬಾರ್, ಗೋವಳರಾಗಿದ್ದ ಪೊನ್ನಾಜಿ ಬಾಲ, ನಾಮದೇವರ ಮನೆಯ ಕೆಲಸದಾಳಾಗಿದ್ದ ಜನಾಬಾಯಿ, ಮಾಲಿ ಕೆಲಸ ಮಾಡುತ್ತಿದ್ದ ಸಂತ ಸವತಾ ಮಾಲೀ, ಕ್ಷೌರಿಕ ವೃತ್ತಿಯ ಸಂತ ಸಾಯಿನಾನ್ಹಾವಿ ಹಾಗೂ ಸಚ್ಚಿದಾನಂದರು, ಬೀದಿಯಲ್ಲಿ ಸಾಮಾನು ಮಾರಾಟ ಮಾಡುತ್ತಿದ್ದ ತುಕಾರಾಮರು ಪ್ರಸಿದ್ಧ ಸಂತರು. ವೈಷ್ಣವ ಸಂತ ಅಚ್ಯುತಾನಂದರು ಗೋವಳರು. ಅವರ ಶಿಷ್ಯರಲ್ಲಿ ನಂದ, ರಾಮ, ನಾರಣ್ ಎಂಬ ಬಡಗಿಯವರುಗಳೂ, ರಾಮದಾಸ ಎಂಬ ಕುಂಬಾರನೂ ಹಾಗೂ ಹಲವು ಕುಲ-ಕಸುಬುಗಳಿಗೆ ಸೇರಿದ 250ಕ್ಕೂ ಹೆಚ್ಚು ಶಿಷ್ಯರಿದ್ದರು. ಸಂತ ಭೀಮ ದೀಬರಾ ಅಂಬಿಗರಾಗಿದ್ದರು. ಒಡಿಶಾದ ಸಂತರಾದ ಜಗನ್ನಾಥ ಮಹಿತೀ ಹಾಗೂ ಕಾಶೀನಾಥ ಮಹಿತೀರವರು ಕರಣ ಕುಲದವರು. ಪಕ್ಕದ ತಮಿಳುನಾಡನ್ನು ನೋಡುವುದಾದರೆ – ಮಹಾಸಿದ್ಧರ ಪೈಕಿ ಬೋಗರ್ ಕ್ಷೌರಿಕಕುಲದ ಸಂತರಾದ ಕಲಂಗಿನಾಥರ ಮಾರ್ಗದರ್ಶನದಲ್ಲಿ ಅರಳಿದ ಮಹಾತ್ಮರು. 18 ಸಿದ್ಧರ ಪೈಕಿ ಗೊಲ್ಲರಾದ ಏಡೈಕ್ಕಡರ್ ಎಂಬವರು, ಕುರ ಕುಲದ ರೋಮ ಋಷಿ, ರೆಡ್ಡಿ ಕುಲದ ಸುಂದರಾನಂದರ್ ರು ಪ್ರಸಿದ್ಧರು. ಶೈವಸಂತರ ಪೈಕಿ, ಬೆಸ್ತರವನಾಗಿದ್ದ ಆದಿಪಟ್ಟನ್ ಎಂಬವರು 63 ನಾಯನ್ಮಾರರಲ್ಲಿ ಒಬ್ಬರು. ಏನಾತ ಎಂಬ ಕತ್ತಿ ತಯಾರಿಸುವವರು, ಗಾಣಿಗದವರಾದ ಕಲಿಯಾನ್, ನೇಯ್ಗೆಯವರಾಗಿದ್ದ ಮೂಟ್ಟುಚುರಿಯರ್, ಕುಂಬಾರರಾಗಿದ್ದ ನೀಲಕಂಠರು, ನೇಯ್ಗೆಯವರಾಗಿದ್ದ ನೇಸರ್, ಸಂಗೀತಗಾರರ ಕುಲದ ನೀಲಾಂಜನ ತಯಲ್ಪನ್ನನ್, ಗೊಲ್ಲರ ಕುಲದ ಪಂಬಟ್ಟಿ, ಕ್ಷೌರಿಕವೃತ್ತಿಯ ಪಂಪರು ಕುರವರ್ ಕುಲದ ಕಮಲಮುನಿ, ಅಗಸವೃತ್ತಿಯ ಕುರಿಪ್ಪುತೋಣ್ಡರ್, ಅಕ್ಕಸಾಲಿಗರಾಗಿದ್ದ ನರಹರಿ ಸೋನರ್ ಪ್ರಸಿದ್ದಸಂತರು. ವೈಷ್ಣವ ಸಂತರಲ್ಲಿ ನೀಲನ್ ಎಂಬವರು ಕುಂಬಾರರಾಗಿದ್ದರು; ಪಿಳ್ಳೆ ೖ ಉರಂಗ ವಿಳ್ಳೀ ದಾಸರ್ ಮಲ್ಲರ ವಂಶದವರು.
ಆಂಧ್ರದ ಕುಂಬಾರರ ಕುಲದ ವೈಷ್ಣವ ಸಂತಸ್ತ್ರೀ ಕುಮಾರೀ ಮೊಲ್ಲ ರಾಮಾಯಣ ರಚಿಸಿದಾಕೆ. ಪೋತಲೂರಿ ವೀರಬ್ರಹ್ಮರು ಮರಗೆಲಸದ ವೃತ್ತಿಯವರು. ಇವರ ಶಿಷ್ಯರಲ್ಲಿ ಬ್ರಾಹ್ಮಣ ಅನ್ನಜಯ್ಯ, ಕಾಕಯ್ಯ ಎಂಬ ಹೆಸರಿನ ಚಮ್ಮಾರನೂ ಇದ್ದರೂ. ಇನ್ನೂ ಉದಾಹರಣೆಗಳನ್ನು ನೋಡುತ್ತ ಹೋಗಬಹುದು?
ಡಾ. ಆರತೀ ವಿ. ಬಿ.
ಕೃಪೆ: ವಿಜಯವಾಣಿ