ಈ ಜಗತ್ತೇ ಒಂದು ಬಿಗ್ ಬಾಸ್ ಮನೆ
ನಾವು ಮಾಡುವ ಕೆಲಸಗಳೆಲ್ಲವೂ ದೈವ ನಮಗೆ ಕೊಡುವ ಟಾಸ್ಕ್ ಇದ್ದಂತೆ. ನಮ್ಮ ಕೆಲಸಗಳ ಮೇಲೆ ‘ಭಗವಂತ’ ಎಂಬುವವನ ಕಣ್ಣು ಕ್ಯಾಮೆರಾಗಳ ತೀಕ್ಷ್ಣ ದೃಷ್ಟಿ ಇದ್ದೇ ಇರುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಕೆಲಸ ಅಸಾಧ್ಯವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಮನೋಭಾವದವರು ಎಲಿಮಿನೇಟ್ ಆಗುತ್ತಾರೆ.
ಹೀಗೊಂದು ವಿಡಿಯೋ ನೋಡಿದೆ ಇವತ್ತು ಬೆಳಿಗ್ಗೆ. ಎಷ್ಟೊಂದು ನಿಜ! ಇದನ್ನು ಒಪ್ಪಿಕೊಳ್ಳಲೇಬೇಕು ಎಂಬಂತೆ ದಿನಮಾನಗಳು ಬದಲಾಗುತ್ತವೆ. ಜಗತ್ತು ಬದಲಾಗುತ್ತದೆ ಜನರ ರೀತಿ-ನೀತಿ ಬದಲಾಯಿಸುತ್ತವೆ. ಅದರ ಜೊತೆ ಜೊತೆಗೆ ನಾವೂ ಬದಲಾಗಲೇ ಬೇಕಲ್ಲ!
ಬಹಳ ವರ್ಷಗಳ ಹಿಂದಿನ ಮಾತು ದೂರದರ್ಶನದಲ್ಲಿ ಯಾರೋ ಹಿರಿಯರೊಬ್ಬರ ಸಂದರ್ಶನ ನಡೆದಿತ್ತು. ಸಂದರ್ಶನದ ಭಾಗವಾಗಿ ಸಂದರ್ಶನಕಾರರು ಕೊನೆಯಲ್ಲಿ ಅವರನ್ನೊಂದು ಒಂದು ಪ್ರಶ್ನೆ ಕೇಳಿದರು: “ನಿಮಗೆ ಜೀವನದಲ್ಲಿ ಸವಾಲು ಎನಿಸಿದಂಥ ಎರಡು ಸಂಗತಿಗಳಾವುವು?” ಒಂದು ಈಗಿನ ಕಾಲದಲ್ಲಿ ಸಂಬಂಧಗಳನ್ನು ಘಾಸಿಯಾಗದಂತೆ ಉಳಿಸಿಕೊಂಡು ಹೋಗುವುದು ಇನ್ನೊಂದು ಇತರರಿಗಾಗಿ ಉಡುಗೊರೆಗಳ ಆಯ್ಕೆ” ಅವರ ಮಾತಿಗೆ ಸಂದರ್ಶಕರು ತಲೆದೂಗಿದರು.
ದೇವರೇ!! ಹಾಗಾದರೆ ಇದು Universal Problem ಅಂದ ಹಾಗಾಯ್ತು ನನ್ನೊಬ್ಬಳದೇ ಅಲ್ಲ ಎಂದು ಸಮಾಧಾನ ಪಟ್ಟುಕೊಂಡೆ. ಹಿಂದೊಂದು ಕಾಲವಿತ್ತು, ಸಂಬಂಧಗಳು ಕೌಟುಂಬಿಕ ನೆಲೆಯಲ್ಲಿ ಸಮುದಾಯಕ್ಕೆ ಸಂಬಂಧಿಸಿದಂತೆ ಇರುತ್ತಿತ್ತು ಎಲ್ಲರೂ ಎಲ್ಲರಿಗಾಗಿ- ಎಂಬುದು ಅಲಿಖಿತ ಒಪ್ಪಂದ ಇರುತ್ತಿತ್ತು. ತಮ್ಮದಲ್ಲದ ಸಮುದಾಯಗಳಲ್ಲೂ ಒಂದು ಚೌಕಟ್ಟಿನಲ್ಲಿ ಬಾಂಧವ್ಯ ಉಳಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರದು ಆಗಿತ್ತು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮತಭೇಧಗಳು ಹಿರಿಯರ ಅಣತಿಯ ಮೇರೆಗೆ ನೀರು ಗೊಬ್ಬರವಿಲ್ಲದೇ ಕಮರಿ ಹೋಗುತ್ತಿದ್ದವು. ಬಹುಶಃ ಪರಸ್ಪರ ಅವಲಂಬನೆ ಗ್ರಾಮಗಳ ಅಂತ ಚಿಕ್ಕಪುಟ್ಟ ಘಟಕಗಳಿಂದಾಗಿ ಅದು ಅವಶ್ಯಕವೂ ಅನಿವಾರ್ಯವೂ ಆಗಿದ್ದಿರಬಹುದು. ಪರಿವರ್ತನೆ ಜಗದ ನಿಯಮ ಕಾಲಾನಂತರದಲ್ಲಾದ ಸಾಮಾಜಿಕ ಬದಲಾವಣೆ, ಆರ್ಥಿಕ ಸ್ವಾವಲಂಬನೆ ಯಿಂದಾಗಿ ಬದಲಾವಣೆ ಕಂಡ ಸಮಾಜದ ಅನಿವಾರ್ಯ ಭಾಗವಾಗಿ ಎಲ್ಲವೂ ಬದಲಾಗುತ್ತಾ ಬಂದಾಗ ಮಾನವ ಸಂಬಂಧಗಳು ಅದಕ್ಕೆ ಹೊರತಾಗಲಿಲ್ಲ. ಪ್ರತ್ಯೇಕ ಅಸ್ತಿತ್ವದ ಬಯಕೆ ಹೆಸರು ಸ್ಥಾನಮಾನಗಳ ಹಸಿವು ಅದನ್ನು ಬೆಳೆಸಲು ಸಹಕಾರಿಯಾಯ್ತೆನೋ…. ಏನೋ ಗೊತ್ತಿಲ್ಲ, ಅಂತ ಸಂಬಂಧಗಳು ನಾಜೂಕಾಗಿ ಎಲ್ಲರೂ ಒಂದು ರೀತಿಯ ಸರ್ಕಸ್ ಮಾಡಿ ಎಳೆಗಳು ಹರಿಯದಂತೆ ಸಂಭಾಳಿಸಿದ ಸಂಭಾಳಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಆಧುನಿಕ ತಂತ್ರಜ್ಞಾನಗಳಿಂದ ಉದ್ಯಮ ಕ್ಷೇತ್ರ ಬೆಳೆದು ಇಂತ ಬದಲಾವಣೆಗಳು ಆರ್ಥಿಕ ರಂಗವನ್ನೂ ಪಲ್ಲಟಗೊಳಿಸಿದ ಕಳಿಸಿದ ಮೇಲೆ ಕೆಳ ಮಧ್ಯಮ ವರ್ಗ ಕಾಣದಾಗಿ ಎಲ್ಲರೂ ಸ್ಥಿತಿವಂತರ ಪಟ್ಟಿಯಲ್ಲಿ ಸೇರಿ ಆದ ಮಹತ್ತರ ಬದಲಾವಣೆ ಜನರ ಧೋರಣೆಗಳನ್ನೂ ಸ್ವಾಭಾವಿಕವಾಗಿಯೇ ಬದಲಾಯಿಸಿತು. ಎಲ್ಲರಿಗೂ ಎಲ್ಲವೂ ಯಾವುದಕ್ಕೂ ಮಹತ್ವವೇ ಇಲ್ಲದಂತೆ ಭಾಸವಾಗತೊಡಗಿತು.
ನನ್ನ ಮಗನ ಚೌಲದ ವೇಳೆ, ಒಂದು ಬ್ಲೌಸ್ ಪೀಸ್ ಮಗುವಿಗೆ ಐದು ರೂಪಾಯಿ ಅತಿ ಹೆಚ್ಚಿನ ಉಡುಗೊರೆ ಅನಿಸಿತ್ತು. ಯಾರಿಗೂ ಅದೊಂದು ಚರ್ಚೆಯ ವಿಷಯವೇ ಆಗಿರಲಿಲ್ಲ ಈಗದು ತುಂಬಾ ಪ್ರತಿಷ್ಠೆಯ ವಿಷಯವಾಗಿ ಹೆಮ್ಮೆಯ ಹಲವುಬಾರಿ ಮನಸ್ತಾಪ, ಜಗಳಗಳ ವಿಷಯವಾಗಿದೆ. ಉಡುಗೊರೆ ಕೊಡುವವರ, ತೆಗೆದುಕೊಳ್ಳುವವರ ವ್ಯಕ್ತಿತ್ವ ತೂಕವೆಂಬಂತಾಗಿದೆ.
ಕೊಡ-ಕೊಳ್ಳುವಿಕೆಯ ಆನಂದದ ಮಾತೇ ಇಲ್ಲ. ಕೊಟ್ಟವರು ತಮ್ಮ ಮನೆ ಕ್ರಮಗಳಲ್ಲಿ ಅದು ಮರಳಿ ಬಂತೇ ಎಂದು ಲೆಕ್ಕ ಹಾಕುವುದೂ ಕೆಲವೊಮ್ಮೆ ನಡೆದರೆ ಆಶ್ಚರ್ಯವಿಲ್ಲ ಹೀಗಾಗಿ ಅಂಥ ಎಲ್ಲ ಸಂದರ್ಭಗಳಲ್ಲೂ ಆನಂದದ ಜಾಗದಲ್ಲಿ ಆತಂಕ, ಒಂದು ರೀತಿಯ ಕಿರಿಕಿರಿಯೇ ಜಾಸ್ತಿಯೇನೋ ಅನ್ನಿಸಿದ್ದಿದೆ ಎಷ್ಟೋಸಲ.. ಅಲ್ಲದೇ ಎಲ್ಲರ ಕೊಳ್ಳುವ ಸಾಮರ್ಥ್ಯ ಹೆಚ್ಚಾದದ್ದೂ ಅಭಿರುಚಿಗಳು ಭಿನ್ನವಾದದ್ದೂ ಉಡುಗೊರೆ ಪಡೆದ ಸಂತೋಷವನ್ನು ಗಣನೀಯವಾಗಿ ಕಡಿಮೆ ಮಾಡಿವೆ.
ಹಾಗೆಂದು ನನಗನಿಸಿತ್ತು. ಅನೇಕರಿಗೆ ಹಾಗೇ ಅನಿಸುತ್ತಿರುವುದಾಗಿ ಇದೀಗ ಅರಿವಾಗುತ್ತಿದೆ. ನಿಮಗೆ?