ಲೇಖನಿ ಮತ್ತು ಕಾಗದಗಳ ಬಳಕೆಯಿಲ್ಲದೆ, ಆನ್ ಲೈನ್ ನಲ್ಲಿ ಯೂನಿಕೋಡ್ ತಂತ್ರಾಂಶವನ್ನು ಬಳಸಿ ಈ ಲೇಖನವನ್ನು ಬರೆಯುವ ನನ್ನಲ್ಲಿ ಒಂದಿಷ್ಟು ಸಂಭ್ರಮ, ಒಂದಿಷ್ಟು ಆತಂಕ ಮತ್ತು ಗೊಂದಲಗಳಿವೆ. ಅದು e ಸಾಹಿತ್ಯದ ಬಗೆಗೆ.
ಸಂಭ್ರಮ, ನನ್ನ ಮಾತೃಭಾಷೆಯನ್ನು, ಕಸ್ತೂರಿ ಕನ್ನಡವನ್ನು ಇಂಗ್ಲೀಷಲ್ಲಿ ಬೆರಳಚ್ಚಿಸಿ ಕಂಪ್ಯೂಟರ್ ಪರದೆಯ ಮೇಲೆ ಮುದ್ದಾದ ಕನ್ನಡದ ಅಕ್ಷರಗಳಲ್ಲಿ ಅದು ಮೂಡುವುದನ್ನು ಕಂಡಾಗ. ಸಂವಹನ, ಸಂಪರ್ಕವನ್ನು ನಮ್ಮ ಮಾತೃಭಾಷೆಯಲ್ಲೇ ಗೈದಾಗ ಆಗುವ ಪರಿಣಾತ್ಮಕ ಫಲಿತಾಂಶವನ್ನು ಅನುಭವಿಸಿದಾಗ. ಫೇಸ್ ಬುಕ್ ನಲ್ಲೋ, ನಮ್ಮದೇ ಆದ ಬ್ಲಾಗ್ ಗಳಲ್ಲೋ ನಮ್ಮ ಭಾವಗಳನ್ನು ಕತೆಯೋ, ಕಾವ್ಯವೋ, ವಿಮರ್ಶೆಯೋ, ಅನಿಸಿಕೆಯೋ ಹೀಗೆ ವಿವಿಧ ಪ್ರಕಾರವಾಗಿ ನಮ್ಮ ಬರಹಗಳನ್ನು ಹರಿಯಬಿಟ್ಟಾಗ, ಪ್ರತಿಯಾಗಿ ಅದಕ್ಕೊದಗಿ ಬರುವ ಅನಿಸಿಕೆ, ವಿಮರ್ಶೆಗಳನ್ನು, ಮೆಚ್ಚುಗೆಗಳನ್ನು ಅನುಭವಿಸಿದಾಗ.
ಬರವಣಿಗೆಯ ಮೂಲಕ ಸೃಷ್ಟಿಯಾದ ಸಾಹಿತ್ಯ ಪ್ರಕಟವಾಗುವುದು (ಆನ್ ಲೈನ್ ಸಾಹಿತ್ಯವನ್ನು ನಾನು ತಾಂತ್ರಿಕವಾಗಿ ಬರವಣಿಗೆಯಲ್ಲ ಎನ್ನುತ್ತೇನೆ!) ಪತ್ರಿಕಾ ಮಾಧ್ಯಮದ ಮೂಲಕ. ಈ ರೀತಿಯ ಪ್ರಕಟಣೆಯಲ್ಲಿ ಲೇಖಕನಿಗೆ ಹಲವೊಂದು ಇತಿ ಮಿತಿಗಳಿವೆ. ಬರವಣಿಗೆಯ ಗುಣಮಟ್ಟ, ಆಯ್ಕೆಯಲ್ಲಿರಬಹುದಾದ ತೊಂದರೆಗಳು, ಪುಟಗಳ ಮಿತಿ, ತನ್ನ ಯೋಚನಾಲಹರಿ ಮತ್ತು ಪತ್ರಿಕೆಯ ದೃಷ್ಟಿಕೋನಗಳಲ್ಲಿ ಹೊಂದಾಣಿಕೆಯಿಲ್ಲದಿರುವುದು, ಬಹುವಾಚಿತ ಲೇಖಕ ಗಳಿಸಬಹುದಾದ ಪ್ರಥಮ ಆದ್ಯತೆಗಳು (ಹಲವೊಂದು ಸಲ ಅವರ ಬರವಣಿಗೆಯ ಗುಣಮಟ್ಟ ಸಾಂದರ್ಭಿಕವಾಗಿ ನವ ಬರಹಗಾರರಿಗಿಂತ ಕಡಿಮೆಯಿದ್ದರೂ) ಮತ್ತು ಪತ್ರಿಕಾ ಮಾಧ್ಯಮದಲ್ಲೂ ಇತ್ತೀಚೆಗೆ ಕಂಡು ಬರುತ್ತಿರುವ ಇಸಂಗಳ ಹಾವಳಿ. ಇವೆಲ್ಲವುಗಳಿಂದಾಗಿ ನವ ಬರಹಗಾರರಿಗೆ ಪತ್ರಿಕಾ ಮಾಧ್ಯಮದಲ್ಲಿ ತೆರೆದ ಬಾಗಿಲ ಸ್ವಾಗತವಿಲ್ಲ. (ಇಂತಹ ವ್ಯವಸ್ಥೆಗಳಿಂದ ಕೆಲವು ಪತ್ರಿಕೆಗಳು ಮುಕ್ತವಾಗಿರಲೂಬಹುದು.) ಈ ಸನ್ನಿವೇಶದಲ್ಲಿ ಅಂತರ್ಜಾಲತಾಣಗಳಲ್ಲಿ, ಬ್ಲಾಗ್ ಗಳಲ್ಲಿ, ಫೇಸ್ ಬುಕ್ ಗಳಲ್ಲಿ ಧಂಡಿಯಾಗಿ ಕನ್ನಡ ಹರಿದಾಡುತ್ತಿದೆ, ಕಂಪನ್ನು ಸೂಸುತ್ತಿದೆ ಎನ್ನುವುದು ಈ ಕ್ಷಣದ ಸಂಭ್ರಮ, ಸಂತೋಷ!
ಇಂದು ಈ ಅಂತರ್ಜಾಲವೆಂಬ ಮಾಯಾಲೋಕ ನಮಗೆ ಬರೆಯುವ, ಓದುವ, ಕಾಣುವ ( ಏನನ್ನಾದರೂ!) ಸ್ವಾತಂತ್ರ್ಯವನ್ನು ತನ್ನ ತಾಂತ್ರಿಕತೆಯ ಮೂಲಕ ಒದಗಿಸಿದೆ. ಹಾಗೆಯೇ ಚಲನಶೀಲ ಮತ್ತು ಚಲನರಹಿತ ದೃಶ್ಯಗಳನ್ನು ಪರಿಣಾಮಕಾರಿಯಾಗಿ ನೋಡುಗನ ಮುಂದೆ ತೆರೆದಿಡುವುದರಲ್ಲಿ ಅದು ಸಫಲವಾಗಿದೆ. ಜ್ಞಾನ-ವಿಜ್ಞಾನ, ಇತಿಹಾಸ, ಸಾಹಿತ್ಯ, ಸಂಸ್ಕೃತಿ, ಕಲೆ, ಜಾನಪದ ಅಥವಾ ಇನ್ನು ಹಲವು ವಿಷಯಗಳ ಬಗೆಗಿನ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಬೆರಳ ತುದಿಯಲ್ಲಿ ನಾವು ಗಳಿಸುವಂತಾದುದು ಈ ಕ್ಷಣದ ಅಚ್ಚರಿ ಕೂಡ. ಇಂತಹ ಒಂದು ಮಾಧ್ಯಮದ ಮೂಲಕ ನಮ್ಮ ಕಲ್ಪನೆಗಳನ್ನು, ನಮ್ಮ ಭಾವಗಳನ್ನು ಲಿಪಿ ರೂಪದಲ್ಲಿ ಲೇಖನಿ ಮತ್ತು ಕಾಗದದ ಹಂಗಿಲ್ಲದೆ ಮತ್ತು ಯಾರಾದರೂ ಪ್ರಕಟಿಸಬಹುದೇನೊ ಎಂಬ ನಿರೀಕ್ಷೆಯಿಲ್ಲದೆಯೂ ನಾವೇ ಪ್ರಕಟಿಸಬಹುದಾದ ಎಕೈಕ ಸಶಕ್ತ ಮಾಧ್ಯಮ ಈ ಅಂತರ್ಜಾಲ ತಾಣ. ಅದರ ಫಲರೂಪವೇ ನಾವು ಕಾಣುವ e ಸಾಹಿತ್ಯ, e ಬರವಣಿಗೆ, e ಪತ್ರಿಕೆ ಇತ್ಯಾದಿತ್ಯಾದಿಗಳು. ಮುಂದುವರಿದ ತಾಂತ್ರಿಕತೆಯ ಲಾಭವೆಂದರೆ ಈ ಎಲ್ಲವನ್ನು ನಮ್ಮ-ನಿಮ್ಮ ಕೈಯ್ಯಲ್ಲಿರುವ ಮೊಬೈಲ್ ನ ಪುಟ್ಟ ಪರದೆಯ ಮೇಲೂ ನೋಡುವಂತಾದುದು. ಇನ್ನೇನು ಬೇಕು ಕನ್ನಡ ಮೊಳೆಯುವುದಕ್ಕೆ, ಬೆಳೆಯುವುದಕ್ಕೆ, ಹುಲುಸಾದ ಅಕ್ಷರದ ಫಸಲನ್ನು ಕೊಡುವುದಕ್ಕೆ? ಆದರೆ, ಆತಂಕವಿರುವುದು ಇಲ್ಲೇ!
ಇಂತಹ e ಸಾಹಿತ್ಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮುಕ್ತಗೊಳಿಸಿದೆ. ಅಂತರ್ಜಾಲವನ್ನು ಉಪಯೋಗಿಸುವ ಸರಳ ತಾಂತ್ರಿಕತೆ ಕಾಗದ ಲೇಖನಿಗಳಿಲ್ಲದೆ ನಮ್ಮಲ್ಲಿ ಬರೆಯುವ (ಬೆರಳಚ್ಚಿಸುವ) ಉತ್ಸಾಹವನ್ನು ಪ್ರಚೋದಿಸಿದೆ. ಕನ್ನಡಕ್ಕಾಗಿಯೇ ಇರುವ ಬ್ಲಾಗುಗಳಲ್ಲೋ, ನಮ್ಮದೇ ಸ್ವಂತದ ಬ್ಲಾಗುಗಳಲ್ಲೋ, ಮುಖ ಪುಸ್ತಕದಲ್ಲೋ (FaceBook) ನಮಗನಿಸಿದ್ದನ್ನು ಥಟ್ಟನೆ ಬೆರಳಚ್ಚಿಸಿ ಪ್ರಕಾಶಿಸುವ (!) ಸ್ವಾತಂತ್ರ್ಯ ಇಂದು ನಮಗಿದೆ. ಪರಿಣಾಮ ಒಳ್ಳೆಯ ವಿಚಾರಗಳು, ಹಲವಾರು ಕಾರಣಗಳಿಗಾಗಿ ಪ್ರಕಟಿತವಾಗದೆ ಇರುವ ಕತೆ, ಕವನ, ಪ್ರಬಂಧ, ವೈಚಾರಿಕ ಲೇಖನಗಳು. ನಗೆ ಲೇಖನಗಳನ್ನು ನಾವಿಂದು ಕಾಣಬಹುದಾಗಿದೆ. ದಿನಪತ್ರಿಕೆಯನ್ನೋ, ವಾರ-ಮಾಸ ಪತ್ರಿಕೆಯನ್ನೋ ಕೊಂಡು ಓದುವ ಓದುಗನಿಗಿಂತ ಅಂತರ್ಜಾಲ ಪತ್ರಿಕೆಗಳ ಓದುಗ (ನೋಡುಗ) ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿರುವುದು ಮತ್ತು ಅಂತಹ ಒಂದು ಮಾಧ್ಯಮದ ಮೂಲಕ ಲೇಖಕ ಮತ್ತು ಓದುಗನ ಮಧ್ಯೆ ಸಾಹಿತ್ಯಾತ್ಮಕವಾದ ಆತ್ಮೀಯ ಸಂಬಂಧವೊಂದು ಏರ್ಪಡುತ್ತಿರುವುದು ಖುಷಿ ಪಡುವ ವಿಚಾರ. ಇಲ್ಲಿ ಲೇಖಕನ ಪರಿಚಯವನ್ನು ಭಾವಚಿತ್ರದ ಮೂಲಕವಾಗಿ, ಅವರು ನೀಡಿರುವ ಸ್ವಪರಿಚಯದ ವಿವರಣೆಯ ಮೂಲಕವಾಗಿ ಹೊಂದಬಹುದಾಗಿದೆ. ಅವರೊಡನೆ ಮೈತ್ರಿಯನ್ನೋ, ಸಂವಹನವನ್ನೋ ಪರಿಣಾಮಕಾರಿಯಾಗಿ ಮಾಡಬಹುದಾಗಿದೆ. ಅಂತೆಯೇ ಲೇಖನದ ಕುರಿತಂತೆ ವಾಚಕರಿಂದ ಬರುವ ಅನಿಸಿಕೆ, ವಿಮರ್ಶೆಗಳನ್ನು ನಾವು ನೇರವಾಗಿ ಪಡೆಯಬಹುದಾಗಿದೆ. ಇದರ ಜತೆಜತೆಯಲ್ಲಿ ಶ್ರೇಷ್ಠ ಸಾಹಿತ್ಯ ಕೃತಿಗಳ, ಕತೆ, ಕವಿತೆ, ಕಾದಂಬರಿಗಳ ಶಬ್ದರೂಪದ ದಾಖಲಾತಿ ಕೂಡ ಒಂದು ಸ್ವಾಗತಾರ್ಹ ಪ್ರಯತ್ನವೇ ಸರಿ.
ಸಾಹಿತ್ಯ ನಿರ್ಮಿತಿ ಒಂದು ತಪಸ್ಸು. ವಾಚಿಕವಾಗಿ ಮತ್ತು ಶಬ್ದರೂಪವಾಗಿರುವ ಅಕ್ಷರ (ನಾಶವಿಲ್ಲದ್ದು ಎಂಬ ಅರ್ಥವೂ ಇದೆ) ಅದರ ಬೀಜ ಮಂತ್ರ. ಸಾಹಿತ್ಯವೆಂಬುದು ನಮ್ಮ ಭಾವಗಳ, ಕಲ್ಪನೆಗಳ ಶಬ್ದರೂಪದ ದಾಖಲಾತಿ. ಹಾಗಾಗಿ ಅದನ್ನು ಯಾವುದೇ ಮಾಧ್ಯಮದ ಮೂಲಕ ಪ್ರಕಾಶಿಸುವ ಮೊದಲು ಅದನ್ನರಿಯುವ ದೀರ್ಘಕಾಲದ ಅಧ್ಯಯನ (ತಪಸ್ಸು) ಮುಖ್ಯ.
ಭಾವನೆಗಳಿಗೆ ಅಕ್ಷರರೂಪ ಅಥವಾ ಶಬ್ದರೂಪವನ್ನು ಕೊಡುವ ಮೊದಲು ಸಂಯಮ ಅತಿ ಅವಶ್ಯ. ಅದೊಂದು ಕೃಷಿ. ಇದು ಭಾವಗಳ ಬೀಜ ಬಿತ್ತಿ ಅರಿವಿನ, ಜ್ಞಾನದ ಫಸಲನ್ನು ಪಡೆಯುವ ಕಾಯಕ. ಬಿತ್ತಿದ ಬೀಜ ಚಿಗುರೊಡೆದು, ಬೇರೂರಿ ಸಸಿಯಾಗಿ, ಮರವಾಗಿ ಫಲವನ್ನು ನೀಡುವುದಕ್ಕೆ ಹೇಗೆ ಒಂದು ಸುದೀರ್ಘ ಅವಧಿಯನ್ನು ತೆಗೆದುಕೊಳ್ಳುತ್ತದೊ ಅಂತೆಯೇ ಸಾಹಿತ್ಯದ ಸೃಷ್ಟಿ ಕೂಡ. ಅಕ್ಷರ, ಅದು ಲಿಪಿ ರೂಪದಲ್ಲಿರಲಿ ಅಥವಾ ಶಬ್ದ (ಮಾತು)ರೂಪದಲ್ಲಿರಲಿ ಅದು ಭಾವಗಳನ್ನು ಅರಳಿಸುವ, ಸಿಂಗರಿಸುವ, ಕೆರಳಿಸುವ, ಕೊಲ್ಲುವ ಕೆಲಸವನ್ನು ಮಾಡಬಲ್ಲುದು. ಅದು ಖಡ್ಗದಂತೆ. ಅದಕ್ಕೆ ನಾಜೂಕು ಹಿಡಿಯೊಂದಿರಬೇಕು, ತನ್ನನ್ನೇ ಘಾಸಿಗೊಳಿಸದಂತೆ ಅದನ್ನು ಸುರಕ್ಷಿತವಾಗಿರಿಸಬಲ್ಲ ಸಂಯಮವೆಂಬ ಓರೆಯೊಂದಿರಬೇಕು.
ಅಕ್ಷರಗಳನ್ನು ಬಣ್ಣಗಳಿಂದ, ಸಾಂಧರ್ಭಿಕ ಚಿತ್ರಗಳಿಂದ, ಆಕರ್ಷಕ ವಿನ್ಯಾಸಗಳಿಂದ ಶಬ್ದಗಳೊಡನೆ ಹೆಣೆದು ಸಿಂಗರಿಸಿದಾಗ ಅದು ಸಾಹಿತ್ಯವಾಗುವುದಿಲ್ಲ! ಅಂತರ್ಜಾಲದ ಬ್ಲಾಗುಗಳಲ್ಲಿ, ಫೇಸ್ ಬುಕ್ ಗಳಲ್ಲಿ ಪ್ರಕಟವಾಗುವ ಸಾಹಿತ್ಯಕ್ಕೆ ಇಂತಹ ಒಂದು ಸಿಂಗಾರದ ಆಶಯವಿದೆ! ಇಂತಹ ಒಂದು ಸಿಂಗಾರ ನೋಡುಗನನ್ನು ಓದುವುದಕ್ಕೆ ಪ್ರಚೋದಿಸಬಲ್ಲುದು ಎಂಬುದು ಒಂದು ಸಮಜಾಯಿಶಿಯಷ್ಟೇ. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಅಂತರ್ಜಾಲದಲ್ಲಿ ಹಲವೊಂದು ಸಲ ಪ್ರಕಟವಾಗುವ ಹನಿಗಳು ಮಿನಿ ಕವನಗಳು ಭಾವೋದ್ರೇಕದ ಕೊಡುಗೆಗಳು. ಅದು ನೋಡುಗನನ್ನು ಸೃಷ್ಟಿಸಬಹುದೇ ಹೊರತು ಓದುಗನನ್ನಲ್ಲ! ಅದು ನೋಡುಗನ, ಓದುಗನ ಚಿತ್ತಭಿತ್ತಿಯಲ್ಲಿ ಶಾಶ್ವತವಾಗಿ ಉಳಿಯುತ್ತವೆಂಬ ಖಾತರಿಯಿಲ್ಲ. ಹಲವೊಂದು ಸಲ ಅಂತರ್ಜಾಲ ತಾಣಗಳಲ್ಲಿ ಪ್ರಕಟವಾಗುವ ಮಾಹಿತಿಗಳು, ವಾದ-ಪ್ರತಿವಾದಗಳು, ಸ್ವ ಘೋಷಿತ ಚಿಂತನೆಗಳು ಮತ್ತು ಅದಕ್ಕೆ ಪೂರಕವಾದ ಚಲನಶೀಲ ಮತ್ತು ಚಲನ ರಹಿತ ದೃಶ್ಯಗಳು, ಇವೆಲ್ಲವುಗಳನ್ನು ಒಟ್ಟಾರೆಯಾಗಿ ಪರಿಗಣಿಸುವ ಅಂತರ್ಜಾಲ ಸಾಹಿತ್ಯವೆಂಬುದು ಮಾನವ ಕ್ಷೇಮವನ್ನು ಕಾಯಬಲ್ಲುದೇ ಎಂಬುದೂ ಕೂಡ ನಮ್ಮ ಮುಂದಿರುವ ಆತಂಕ.
ಕೊನೆಯದಾಗಿ ಬರೆಯುವುದಕ್ಕೆ, ಬರೆಯುವುದರ ಬಗೆಗೆ ಇಷ್ಟೆಲ್ಲ ಚಿಂತನೆ ನಡೆಸಬೇಕೆ ಎಂಬ ಪ್ರಶ್ನೆ? ಮಾತು ಮತ್ತು ಬರವಣಿಗೆ ಸಂವಿಧಾನ ನಮಗಿತ್ತ ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲವೇ ಎನ್ನುವುದು ಎಲ್ಲರೂ ಒಪ್ಪತಕ್ಕ ವಿಚಾರವೇ. ಅಂತರ್ಜಾಲದಲ್ಲಿ ನಮ್ಮ ಕಲ್ಪನಾ ಶಕ್ತಿಗೆ, ಭಾವನೆಗಳಿಗೆ ಅಕ್ಷರ ಮುಖೇನ ಒಂದು ರೂಪವನ್ನು ನೀಡುವ ಪ್ರಯತ್ನ, ಅದನ್ನು ಇಂತಹ ಸಶಕ್ತ ಮಾಧ್ಯಮಕ್ಕೆ ದಾಖಲಿಸುವ ಸುಲಭ ತಾಂತ್ರಿಕ ಸೌಲಭ್ಯಗಳು ಪ್ರತಿಯೊಬ್ಬ ಅಕ್ಷರಸ್ಥನಲ್ಲಿ ಕವಿಯನ್ನೋ, ಕತೆಗಾರನನ್ನೋ, ಚಿಂತಕನನ್ನೋ ಸೃಷ್ಟಿಸಿದರೆ ಅದು ನಾವು – ನೀವೆಲ್ಲರೂ ಖುಷಿ ಪಡಬೇಕಾದ ವಿಚಾರ. ಪ್ರಸವಕ್ಕೂ ಮೊದಲು ಶಿಶುವು ನವ ಮಾಸಗಳಲ್ಲಿ ಗರ್ಭಸ್ಥವಾಗಿರುವಂತೆ ನಮ್ಮೊಳಗಿನ ಕವಿ ಗರ್ಭಸ್ಥನಾಗಬೇಕು, ಆತ ಧ್ಯಾನ (ಧೇನಿಸು)ಸ್ಥನಾಗಿರಬೇಕು. ಒಂದು ಸುದೀರ್ಘ ಅವಧಿಯ ನಂತರ ಆತ ತನ್ನ ಕೃತಿಯ ಮೂಲಕ ಪ್ರಕಟನಾಗಬೇಕು. ಅಂತರ್ಜಾಲದಂತಹ ಒಂದು ಮಾಧ್ಯಮ ಅವಸರದ ಕೃತಿಯನ್ನೋ, ಕವಿಯನ್ನೋ ನಿರ್ಮಿಸುವಂತಾಗಬಾರದು. ಈ ಎಚ್ಚರ ಅಂತರ್ಜಾಲದಲ್ಲಿ ಬರೆಯುವ ನಮ್ಮ ನಿಮ್ಮೆಲ್ಲರಲ್ಲಿ ಇರಲಿ ಎಂದು ಹಾರೈಸೋಣ.