ಒಂದಾನೊಂದು ಕಾಲದಲ್ಲಿ ಮಾವಿನಹಳ್ಳಿಯಲ್ಲಿ ಸಿದ್ದಪ್ಪ ಎಂಬ ವ್ಯಾಪಾರಿ ಇದ್ದ. ಅವನು ಒಂದು ಕುದುರೆ ಹಾಗೂ ಒಂದು ಕತ್ತೆಯನ್ನು ಸಾಕಿಕೊಂಡಿದ್ದ. ತನ್ನ ವ್ಯಾಪಾರಕ್ಕಾಗಿ ಬೇರೆ ಕಡೆಗಳಿಂದ ತರುವ ಮತ್ತು ಬೇರೆ ಕಡೆಗೆ ತೆಗೆದುಕೊಂಡು ಹೋಗುವ ಸಾಮಾನು-ಸರಂಜಾಮುಗಳನ್ನು ಸಾಗಿಸಲು ಕುದುರೆ ಮತ್ತು ಕತ್ತೆಯನ್ನು ಅವನು ಬಳಸುತ್ತಿದ್ದ. ಜೊತೆಗೆ ಆಗಾಗ್ಗೆ ತಾನು ಕುಳಿತು ಓಡಾಡಲು ಕೂಡ ಕುದುರೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದ. ಕುದುರೆ ಸವಾರಿ ಮಾಡುವುದೆಂದರೆ ಸಿದ್ದಪ್ಪನಿಗೆ ದೊಡ್ಡಸ್ತಿಕೆಯ ವಿಷಯವೂ ಆಗಿತ್ತು. ಹಾಗಾಗಿ ಅವನು ಕುದುರೆಯನ್ನು ವಿಶೇಷ ಕಾಳಜಿಯಿಂದ, ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಅದನ್ನು ಕಂಡರೆ ಅವನಿಗೆ ಅತ್ಯಂತ ಪ್ರೀತಿ ಇತ್ತು. ಆದರೆ ಕತ್ತೆ ಎಷ್ಟೇ ಪ್ರಾಮಾಣಿಕವಾಗಿ, ಎಷ್ಟೇ ಶ್ರಮಪಟ್ಟು ಭಾರಹೊತ್ತು ದುಡಿದರೂ ಕುದುರೆಯ ಮೇಲಿದ್ದಷ್ಟು ಪ್ರೀತಿ ಅವನಿಗೆ ಕತ್ತೆಯ ಮೇಲಿರಲಿಲ್ಲ. ಅವನು ಆ ಕತ್ತೆಯನ್ನು ಬಹಳ ಉದಾಸೀನ ಧೋರಣೆಯಿಂದ ಕಾಣುತ್ತಿದ್ದ. ಮೊದಲ ದರ್ಜೆಯ ಉಪಚಾರ ಕುದುರೆಗಾದರೆ ಮೂರನೆ ದರ್ಜೆಯ ಉಪಚಾರ ಕತ್ತೆಗೆ ಸಲ್ಲುತ್ತಿತ್ತು. ತಮ್ಮ ಒಡೆಯ ಸಿದ್ದಪ್ಪ ಮಾಡುತ್ತಿದ್ದ ಈ ತಾರತಮ್ಯವು ಕತ್ತೆ ಮತ್ತು ಕುದುರೆಗೆ ಬಹಳ ಚೆನ್ನಾಗಿ ಗೊತ್ತಿತ್ತು. ಪಾಪ, ಕತ್ತೆ ಏನು ತಾನೆ ಮಾಡೀತು? ತನ್ನ ಹಣೆ ಬರಹವೇ ಇಷ್ಟೆಂದು ತನ್ನ ಪಾಡಿಗೆ ತಾನು ಸುಮ್ಮನೆ ದುಡಿಯುತ್ತಿತ್ತು. ಆದರೆ ತನಗೆ ಸಿಗುತ್ತಿದ್ದ ವಿಶೇಷ ಉಪಚಾರದಿಂದ ಕುದುರೆ ಕೊಬ್ಬಿಹೋಗಿತ್ತು. ಅದರ ಮೈತುಂಬ ಅಹಂಕಾರ ತುಂಬಿಕೊಂಡಿತ್ತು. ಅದು ಯಾವಾಗಲೂ ಕತ್ತೆಯನ್ನು ಹೀಯಾಳಿಸುತ್ತಾ ಕಾಲು ಕೆರೆದು ಜಗಳ ತೆಗೆಯುತ್ತಿತ್ತು. ಒಮ್ಮೆ ಅದು ‘ಕುದುರೆ ಕುದುರೇನೆ, ಕತ್ತೆ ಕತ್ತೇನೆ. ಕತ್ತೆ ಯಾವತ್ತೂ ಕುದುರೆಯಾಗಲು ಸಾಧ್ಯವಿಲ್ಲ’ ಎಂದು ಕತ್ತೆಯನ್ನು ಹಂಗಿಸಿ ಅಪಹಾಸ್ಯ ಮಾಡಿತು. ಜಂಭದಿಂದ ಕೇಕೆ ಹಾಕಿತು.ಇದರಿಂದ ಕತ್ತೆಯ ಮನಸ್ಸಿಗೆ ನೋವಾದರೂ ‘ಏಯ್ ಜಂಭದ ಕುದುರೆಯೇ, ಇಷ್ಟೊಂದು ಅಹಂಕಾರ ಪಡಬೇಡ. ಒಂದಲ್ಲ ಒಂದು ದಿನ ನೀನು ನನ್ನ ಕಾಲು ಹಿಡಿಯುವ ಕಾಲ ಬಂದರೂ ಬರಬಹುದು’ ಎಂದು ತನ್ನಲ್ಲೇ ಗೊಣಗಿಕೊಂಡು ಮೌನವಾಯಿತು. ಕತ್ತೆ ಗೊಣಗಿಕೊಂಡದ್ದು ತನಗೆ ಗೊತ್ತಾಯಿತೆಂಬಂತೆ ಕುದುರೆಯು ‘ಏಯ್ ಕತ್ತೆಯೇ, ಕಷ್ಟ ಬಂದಾಗ ಕತ್ತೆಯ ಕಾಲನ್ನೂ ಹಿಡಿಯಬೇಕೆಂಬ ಗಾದೆಯನ್ನು ಮನುಷ್ಯರು ಹುಟ್ಟು ಹಾಕಿದ್ದಾರಷ್ಟೆ. ಆದರೆ ಅದು ಆಗದ ಮಾತು. ಆಚರಣೆಗೆ ಖಂಡಿತ ಬರುವುದಿಲ್ಲ. ಅದನ್ನು ನೆನೆದು ಸುಮ್ಮನೆ ನೀನು ಹಗಲು ಕನಸು ಕಾಣಬೇಡ’ ಎಂದು ಕತ್ತೆಯನ್ನು ಕಿಚಾಯಿಸಿ ತನ್ನೆರಡೂ ಮುಂಗಾಲುಗಳನ್ನು ಎತ್ತಿ ಕತ್ತೆಗೆ ಒದೆಯಿತು. ಕೆಲವು ಹೊತ್ತಿನ ನಂತರ ಒಡೆಯ ಸಿದ್ದಪ್ಪ ತಮ್ಮಿಬ್ಬರ ಬಳಿ ಬಂದಾಗ, ಕತ್ತೆಯೇ ತನಗೆ ಒದೆಯಿತೆಂದು ಚಾಡಿ ಹೇಳಿತು. ಇದರಿಂದ ಸಿಟ್ಟುಗೊಂಡ ಸಿದ್ದಪ್ಪ ಕೂಡ ಕತ್ತೆಗೆ ನಾಲ್ಕು ಬಾರಿಸಿದ. ಇಂತಹ ಪರಿಸ್ಥಿತಿ ಇದ್ದರೂ ವಿಧಿಯಿಲ್ಲದೆ ಇದನ್ನೆಲ್ಲಾ ಕತ್ತೆ ಸಹಿಸಿಕೊಂಡು ಹೋಗುತ್ತಿತ್ತು. ‘ಕೊಬ್ಬಿದ ಈ ದುರಹಂಕಾರಿ ಕುದುರೆಗೆ ಎಂದಾದರೊಂದು ದಿನ ಆ ದೇವರೇ ತಕ್ಕ ಶಾಸ್ತಿ ಮಾಡುತ್ತಾನೆ’ ಎಂದು ಕತ್ತೆ ದುಃಖದಿಂದ ಕಾಣದ ದೇವರಲ್ಲಿ ಮೊರೆ ಇಟ್ಟಿತು. ಒಂದು ದಿನ ಸಿದ್ದಪ್ಪ ತುಂಬಾ ಭಾರದ ಐದು ಉಪ್ಪಿನ ಮೂಟೆಗಳನ್ನು ಕತ್ತೆಯ ಬೆನ್ನಿಗೇರಿಸಿ ಬಿಗಿಯಾಗಿ ಕಟ್ಟಿದ. ಹಾಗೆಯೇ ತನ್ನ ಪ್ರೀತಿಯ ಕುದುರೆಗೆ ಹೆಚ್ಚು ಭಾರವಾಗದಿರಲೆಂದು ಬಹಳ ಹಗುರವಾದ ಸ್ಪಾಂಜಿನ ಐದು ಮೂಟೆಗಳನ್ನು ಅದರ ಬೆನ್ನಿಗೇರಿಸಿ ಅಷ್ಟೇ ಬಿಗಿಯಾಗಿ ಕಟ್ಟಿ ಹೇಳಿದ: ‘ನೀವು ಈ ಮೂಟೆಗಳನ್ನು ಹೊತ್ತುಕೊಂಡು ಹೋಗಿ ಪಕ್ಕದೂರಿನ ಶ್ರೀನಿವಾಸ ಶೆಟ್ಟರ ಅಂಗಡಿಗೆ ಕೊಟ್ಟು ಬನ್ನಿ. ಹೇಗೂ ನಿಮಗೆ ಊರು ಮತ್ತು ಅಂಗಡಿ ಗೊತ್ತಿರುವುದರಿಂದ ನಾನು ನಿಮ್ಮ ಜೊತೆ ಬರುವ ಅಗತ್ಯವಿಲ್ಲ. ಊರು ಬಹಳ ದೂರವಿರುವುದರಿಂದ ದಾರಿ ನಡುವೆ ಮೂಟೆಗಳು ಬಿದ್ದು ಹೋಗದಂತೆ ಬಂದೋಬಸ್ತಾಗಿ ಕಟ್ಟಿರುವೆ. ಶ್ರೀನಿವಾಸ ಶೆಟ್ಟರು ಬಿಚ್ಚುವ ತನಕ ಅವು ಬಿಗಿಯಾಗಿಯೇ ಇರುತ್ತವೆ’ ಎಂದು ಕುದುರೆ ಹಾಗೂ ಕತ್ತೆಯನ್ನು ಜೊತೆಯಾಗಿ ಸಿದ್ದಪ್ಪ ಕಳಿಸಿದ. ಅವೆರಡೂ ಪಕ್ಕದ ಊರಿನತ್ತ ಮೂಟೆಗಳನ್ನು ಹೊತ್ತುಕೊಂಡು ಸಾಗಿದವು. ‘ನಿನ್ನ ಮೂಟೆಗಳು ಭಾರ, ನನ್ನ ಮೂಟೆಗಳು ಹಗುರ, ನೀನು ಕತ್ತೆಯಾಗಿ ಹುಟ್ಟಿರುವುದೇ ಮಣಭಾರ ಹೊರುವುದಕ್ಕೆ…’ ಎಂದು ದಾರಿ ಉದ್ದಕ್ಕೂ ಕತ್ತೆಯನ್ನು ಉದ್ದೇಶಿಸಿ ಕೀಟಲೆ ಮಾಡಿಕೊಂಡೇ ಕುದುರೆ ಸಾಗುತ್ತಿತ್ತು. ಆದರೆ ಕತ್ತೆ ಮಾತ್ರ ಏನೊಂದೂ ಮಾತನಾಡದೆ ಮೂಟೆಗಳನ್ನು ಹೊತ್ತು ಮೌನವಾಗಿ ಕುದುರೆಯ ಜೊತೆ ಹೆಜ್ಜೆ ಹಾಕುತ್ತಿತ್ತು. ಹೀಗೆ ಕತ್ತೆ-ಕುದುರೆಗಳೆರಡೂ ತಮ್ಮ ಮೂಟೆಗಳನ್ನು ಹೊತ್ತುಕೊಂಡು ಅರ್ಧ ದಾರಿ ಕ್ರಮಿಸಿದ್ದವು ಅಷ್ಟೆ. ಆಗ, ಗುಡುಗು ಸಿಡಿಲುಗಳ ಸಹಿತ ಜೋರಾಗಿ ಕುಂಭದ್ರೋಣ ಮಳೆ ಸುರಿಯಲಾರಂಭಿಸಿತು. ಹಲವು ಗಂಟೆಗಳು ಕಳೆದರೂ ಮಳೆ ನಿಲ್ಲಲಿಲ್ಲ. ಕತ್ತೆ-ಕುದುರೆಗಳೆರಡಕ್ಕೂ ಮಳೆಯಿಂದ ತಪ್ಪಿಸಿಕೊಂಡು ನಿಲ್ಲಲು ಎಲ್ಲೂ ಜಾಗ ಸಿಗಲಿಲ್ಲ. ಅವು ಆ ಜಡಿಮಳೆಯಲ್ಲಿ ಒಂದೇ ಸಮನೆ ನೆನೆಯ ತೊಡಗಿದವು. ದಾರಿ ತುಂಬ ನೀರು ತುಂಬಿಕೊಂಡು ಅದರಲ್ಲಿ ಅವು ಮುಳುಗುವ ಹಂತ ತಲುಪಿದವು.ಆಗ ಸಹಜವಾಗಿ, ಕತ್ತೆ ಹೊತ್ತುಕೊಂಡಿದ್ದ ಉಪ್ಪಿನ ಮೂಟೆಗಳಲ್ಲಿದ್ದ ಉಪ್ಪೆಲ್ಲಾ ಮಳೆನೀರಿನಲ್ಲಿ ಕರಗಿ ಮೂಟೆಗಳು ಹಗುರಗೊಂಡವು. ಮುಳುಗುತ್ತಿದ್ದ ಕತ್ತೆ ಕೂಡಲೇ ಮೈಕೊಡವಿಕೊಂಡು ಎದ್ದು ನಿಂತು ಜೀವ ಉಳಿಸಿಕೊಂಡಿತು. ಆದರೆ ಕುದುರೆಯ ಮೇಲಿದ್ದ ಮೂಟೆಗಳಲ್ಲಿ ಸ್ಪಾಂಜು ಇದ್ದುದರಿಂದ ಅದು ಮಳೆ ನೀರನ್ನು ಚೆನ್ನಾಗಿ ಹೀರಿಕೊಂಡು ಹೊರಲಾರದಷ್ಟು ಭಾರವಾಯಿತು. ಈ ಯಮಭಾರಕ್ಕೆ ಕುದುರೆಗೆ ಮೇಲೇಳಲಾಗಲಿಲ್ಲ. ಅದರ ಮೂಗು, ಬಾಯಿಯೊಳಕ್ಕೆಲ್ಲಾ ನೀರು ತುಂಬಿಕೊಂಡಿತು. ಕೆಲವೇ ಕ್ಷಣಗಳಲ್ಲಿ ಅದು ಉಸಿರಾಡಲಾಗದೆ ಜೀವ ಬಿಟ್ಟಿತು. ಕುದುರೆಯ ದುರಹಂಕಾರಕ್ಕೆ ತಕ್ಕ ಶಾಸ್ತಿಯಾಯಿತು.
author-ಬನ್ನೂರು ಕೆ. ರಾಜು
courtsey:prajavani.net
https://www.prajavani.net/artculture/short-story/donkey-and-horse-664398.html