ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ…!
ಪಾರಿಜಾತ; ನಮ್ಮ ಪುರಾಣೇತಿಹಾಸಗಳಲ್ಲಿ ಪ್ರಸ್ತಾಪಗೊಂಡಿರುವ ಒಂದು ವೃಕ್ಷ. ಸಮುದ್ರ ಮಂಥನ’ದ ಸಮಯದಲ್ಲಿ ಉದ್ಭವಿಸಿದ್ದು ಅಂತ ಪ್ರತೀತಿ. ಇಂತಿಪ್ಪ ಪಾರಿಜಾತದ ಬಗ್ಗೆ ಅನೇಕ ಸ್ವಾರಸ್ಯಕರ ಕಥೆಗಳಿವೆ. ಅದರಲ್ಲಿ ಒಂದು ಕಥೆ ಹೀಗಿದೆ; ಹಿಂದೆ ಅಂದರೆ ಬಹು ಹಿಂದೆ, ಪಾರಿಜಾತಕ ಎಂಬ ಹೆಸರಿನ ಒಬ್ಬ ರಾಜಕುಮಾರಿ ಸೂರ್ಯನನ್ನು ಪ್ರೀತಿಸುತ್ತಿದ್ದಳು, ಒಮ್ಮೆ ತನ್ನ ಪ್ರೀತಿಯನ್ನು ಆತನಲ್ಲಿ ನಿವೇದನೆ ಮಾಡಿಕೊಂಡಾಗ ಸೂರ್ಯ ಆಕೆಯ ಪ್ರೀತಿಯನ್ನು ನಿರಾಕರಿಸಿದನಂತೆ ನೊಂದ ಆಕೆ ತನ್ನನ್ನೇ ಅಗ್ನಿಗೆ ಆಹುತಿಮಾಡಿಕೊಂಡಳಂತೆ ಆ ಬೂದಿಯಿಂದ ಈಗಿನ ಪಾರಿಜಾತದ ಗಿಡ ಹುಟ್ಟಿತಂತೆ ಅಂದು ಕೋಪದಿಂದ ಇನ್ನೆಂದೂ ಸೂರ್ಯನನ್ನು ನೋಡುವುದಿಲ್ಲವೆಂದು ಶಪಥ ಗೈದ ಪಾರಿಜಾತಕ, ನಂತರ ಗಿಡವಾಗಿ ಹುಟ್ಟಿದಾಗಲೂ ತನ್ನ ಮೊದಲಿನ ಕೋಪದಿಂದಾಗಿ ಸೂರ್ಯಾಸ್ತದ ನಂತರ ಅರಳಿ, ಸೂರ್ಯನುದಯಿಸುವ ಮೊದಲೇ ಉದುರಿ ತನ್ನ ಕೋಪ ತೋರಿಸುತ್ತಿದ್ದಾಳೆ ಎನ್ನಲಾಗುತ್ತಿದೆ.
ಈ ಪಾರಿಜಾತದ ಜೊತೆ ಕೃಷ್ಣ-ಸತ್ಯ ಭಾಮೆ, ರುಕ್ಮಿಣಿಯರ ತಳಕು ಹಾಕಿಕೊಳ್ಳುತ್ತದೆ, ಪ್ರೀತಿಯ ಮಡದಿಯ ಬಯಕೆ ಪೂರೈಸಲು ಭೂಮಿಯ ಮೇಲೆ ಸಿಗದ ಇಂದ್ರನ ತೋಟದಲ್ಲಿ ಮಾತ್ರ ಇರುವ ಪಾರಿಜಾತದ ಗಿಡ ತಂದು ನಂತರ ಸತ್ಯಭಾಮೆ ರುಕ್ಮಿಣಿಯರಲ್ಲಿ ಈ ಗಿಡಕ್ಕಾಗಿ ಕಲಹ. ಬುದ್ಧಿವಂತ ಗಂಡ ಒಬ್ಬಳ ಅಂಗಳದಲ್ಲಿ ಗಿಡ ನೆಟ್ಟು, ಮತ್ತೊಬ್ಬಳ ಅಂಗಳದಲ್ಲಿ ಹೂ ಉದುರಿ ಬೀಳುವಂತೆ ಮಾಡಿ ಬಚಾವಾದನಂತೆ, ಈಗಲೂ ಹಳ್ಳಿಗಳಲ್ಲಿ ಈ ಗಿಡಗಳು ಬೇಲಿಯಲ್ಲಿ ಗಡಿಗಳಲ್ಲಿ ಕಾಣ ಸಿಗುವುದಕ್ಕೆ ಈ ಕಾರಣ ಇರಬಹುದೇನೋ…! ಬಿಡಿ ಕಥೆ ಅದರ ಪಾಡಿಗೆ ಅದು ಇರಲಿ. ಈಗ ಆ ವಿವರ ಬೇಡ. ಕಥೆ ಈಗ ಕಾಡಿನಿಂದ ನಾಡಿಗೆ ಬರಲಿ….!
ಮಧ್ಯಮ ಗಾತ್ರದ ಮರವಾಗುವ ಪಾರಿಜಾತ, ಎಲೆ ಉದುರಿಸುವ ಗುಣದ್ದು ಅಚ್ಚ ಹಸಿರಿನ ಈ ಗಿಡದ ಎಲೆಗಳು ಒರಟು ಇದರ ಮೂಲ ಹಿಮಾಲಯದ ತಪ್ಪಲು ಅನ್ನುತ್ತಾರೆ. ಆಂಗ್ಲ ಭಾಷೆಯಲ್ಲಿ ನೈಟ್ ಜಾಸ್ಮಿನ್, ಕೊರಲ್ ಜಾಸ್ಮಿನ್, ಎಂದು ಕರೆಯುತ್ತಾರೆ. ರಾತ್ರಿಯ ಹೊತ್ತೇ ಪಾರಿಜಾತದ ಹೂಗಳು ಅರಳಿ ಸುಗಂಧವನ್ನು ಹೊರಸೂಸುವುದರಿಂದ ಟ್ರೀ ಆಫ್ ಸ್ಯಾಡ್ನೆಸ್;, ಎನ್ನುವ ಹೆಸರು ಇದೆ.
ಈ ಗಿಡದ ವಿಶೇಷ ಆಕರ್ಷಣೆ ಎಂದರೆ ಅದರ ಹೂವು ಹಾಗೂ ಅದು ಸೂಸುವ ಚೆಂದದ ಪರಿಮಳ. ಇವು ಮಲ್ಲಿಗೆ ಹೂವಿನಂತೆ ಬಹು ನಾಜೂಕು ಐದು ದಳಗಳ ಅಚ್ಚ ಬಿಳಿ ಹೂವುಗಳು ಹವಳ ಕಂಪಿನ ತೊಟ್ಟು ಧರಿಸಿವೆ. ಗೊಂಚಲಿನಲ್ಲಿ ಅರಳಿ ತನ್ನ ಸುಗಂಧ ಪರಿಮಳದಿಂದ ನಮ್ಮ ಮನಸ್ಸನ್ನು ಮುದಗೊಳಿಸುತ್ತದೆ ಸೂರ್ಯಾಸ್ತವಾದ ಮೇಲೆ ಅರಳಿ ಸೂರ್ಯನುದಯಿಸುವುದಕ್ಕೆ ಮುನ್ನವೇ ಉದುರಿ ಬೆಳ್ಳಂಬೆಳಗ್ಗೆ ಗಿಡದ ಬುಡದಲ್ಲಿ ಬಿಳುಪಾದ ಹೂವ ಹಾಸಿಗೆ ಹಾಸಿ ಕಣ್ಮನ ಸೆಳೆಯುತ್ತವೆ. ಮನೆಯ ಅಂಗಳದಲ್ಲಿ ಈ ಪಾರಿಜಾತದ ಗಿಡವಿದ್ದರೆ ಸಾಕು, ಬೀಸುವ ಗಾಳಿಯಲ್ಲಿ ನವಿರಾದ ಸುಗಂಧದ ಕಂಪು ತೇಲಿ ಮೈ-ಮನಗಳನ್ನು ಅರಳಿಸುತ್ತವೆ. ಪುರಾಣೇತಿಹಾಸಗಳಲ್ಲಿ ಅಲ್ಲದೇ ದಾಸ ಸಾಹಿತ್ಯ ಕನ್ನಡದ ಕಾವ್ಯಗಳಲ್ಲೂ ಈ ಹೂವಿನ ಉಲ್ಲೇಖವಿದೆ.
ಉತ್ತರ ಕರ್ನಾಟಕದಲ್ಲಿ ಶ್ರೀ ಕೃಷ್ಣ ಪಾರಿಜಾತವೆಂಬ ಸುಪ್ರಸಿದ್ಧ ನಾಟಕವಿರುವಂತೆ ಜನಪ್ರಿಯ ಕಲೆ ಯಕ್ಷಗಾನದಲ್ಲೂ ಶ್ರೀ ಕೃಷ್ಣ ಪಾರಿಜಾತವೆಂಬ ಅಖ್ಯಾಯಿಕೆ ಜನಪ್ರಿಯವಾಗಿದೆ. ಶುಶ್ರುತ ಸಂಹಿತೆಯಲ್ಲಿ ಇದರ ಔಷಧಿಯ ಗುಣಗಳ ಬಗ್ಗೆ ಹೇಳಲಾಗಿದೆಯಂತೆ ಈ ಸಸ್ಯದ ತೊಗಟೆ, ಬೇರು, ಎಲೆಗಳು ಔಷಧವಾಗಿ ಆಯುರ್ವೇದದಲ್ಲಿ ಉಪಯೋಗವಾದರೆ, ಇದರ ಹೂವು ಸುಗಂಧ ದ್ರವ್ಯದಲ್ಲಿ ಬಳಕೆ ಮಾಡುತ್ತಾರಂತೆ. ಈ ಹೂವಿನ ರಸದ ಲೇಪನದಿಂದ ಮುಖ ಕೋಮಲ ಹಾಗೂ ಕಾಂತಿಯುತವಾಗುತ್ತದಂತೆ. ಇದು ದೇವಲೋಕದ ಮರವಾದರೂ ಇಳೆಯ ಮೇಲಿನ ನಿಸರ್ಗ ಸುಂದರಿಯೇ ಸೈ. ಇಂತಹ ಬಹುಪಯೋಗಿ, ಸುಂದರ ಹೂವು, ಪರಿಮಳ ಸೂಸುವ ಕೋಮಲ ಗಿಡವನ್ನು ನಮ್ಮ ಮನೆ ಮುಂದೆ, ಅಂಗಳ ತೋಟದ ಬೇಲಿಯಲ್ಲಿ ನೆಟ್ಟು ಅದರ ಸುಗಂಧ ಪರಿಮಳವನ್ನು ಆಸ್ವಾಧಿಸುತ್ತಾ ನಿಸರ್ಗವನ್ನು ಪೂಜಿಸೋಣ….! ಸುತ್ತಲ ಪರಿಸರದ ಸೂಕ್ಷ್ಮಗಳನ್ನು ಗ್ರಹಿಸುವ ಕುತೂಹಲದಿಂದ ವೀಕ್ಷಿಸುವ ತೀವ್ರ ಹಂಬಲವುಳ್ಳವರಾಗೋಣ….! ಸದಾ ಚಲನಶೀಲವಾಗಿರುವ ಪ್ರಕೃತಿಯಲ್ಲಿ ಪ್ರಾಣಿ, ಪಕ್ಷಿ, ಕೀಟಗಳ ನಿಗೂಢ ಕಾರ್ಯಾಚರಣೆಗಳು ನಂಬಲುಸಾಧ್ಯವಾದ ವಿದ್ಯಮಾನಗಳು ಅದ್ಭುತ ವೈವಿಧ್ಯತೆ ಇದೆ. ಇವುಗಳನ್ನೆಲ್ಲಾ ಸೂಕ್ಷ್ಮವಾಗಿ ವೀಕ್ಷಿಸುವ ಮನಸ್ಥಿರಬೇಕಷ್ಟೆ.
ಹೊಸ್ಮನೆ ಮುತ್ತು