ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೭ – ಹಳಗನ್ನಡ ಕಾವ್ಯದ ಓದು
ಹಳಗನ್ನಡ ಕಾವ್ಯದ ಅಭ್ಯಾಸ ಅಲಕ್ಷ್ಯಕ್ಕೆ ಒಳಗಾಗತೊಡಗಿದೆ. ಪದವಿ ಮತ್ತು ಸ್ನಾತಕೋತ್ತರ ಅಭ್ಯಾಸಕ್ರಮದಲ್ಲೂ ಹಳಗನ್ನಡ – ನಡುಗನ್ನಡ ಕಾವ್ಯಗಳ ಓದಿನ ಭಾಗ ಕಡಿಮೆಯಾಗ ತೊಡಗಿದ. ಹಳಗನ್ನಡವನ್ನು ಚೆನ್ನಾಗಿ ಕಲಿಸುವ ಪಾಂಡಿತ್ಯವೂ ವಿರಳವಾಗುತ್ತಿದೆ. ಇಂದಿನ ಬರವಣಿಗೆಗೆ ಹಳೆಗನ್ನಡ ಕಾವ್ಯದ ಓದು ಅಗತ್ಯವಿಲ್ಲ ಎಂಬ ವಾದವೂ ಎದ್ದಿದೆ. ಆದರೆ ಪರಂಪರೆಯ ಅಧ್ಯಯನದಿಂದ ನಮ್ಮ ಇಂದಿನ ಕಾವ್ಯ ಹೆಚ್ಚಿನ ಸತ್ವ, ತೇಜಸ್ಸು ಪಡಯಬಲ್ಲದು. ಕಳೆದ ಮೂರು ವರ್ಷಗಳಲ್ಲಿ ಧಾರವಾಡ ಸಾಹಿತ್ಯ ಸಂಭ್ರಮ ನಡೆಸಿದ ಹಳಗನ್ನಡ ಕಾವ್ಯದ ಓದಿನ ಪ್ರಯೋಗ ಅಭೂತಪೂರ್ವ ಯಶಸ್ಸು ಪಡೆಯಿತು. ಪರಿಣಾಮಕಾರಿಯಾಗಿ, ನಿಜವಾದ ಪ್ರೀತಿಯಿಂದ ಓದಿದರೆ ಹಳಗನ್ನಡ ಕಾವ್ಯವನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ ಎಂದು ಸಭಿಕರಿಗೆ ಮನದಟ್ಟಾಗಿದೆ. ಈ ಮೂಲಕ ಹಳಗನ್ನಡ ಕಾವ್ಯದ ಬಗ್ಗೆ ಓದುಗರಲ್ಲಿ ಆಸಕ್ತಿ ಮೂಡಿಸುವದು ಈ ಗೋಷ್ಠಿಯ ಉದ್ದೇಶ.
ಈ ವರ್ಷ, ಈಗಾಗಲೇ ತಮ್ಮ ಪ್ರಭಾವಪೂರ್ಣ ಓದಿನಿಂದ ಜನಮನ ಗೆದ್ದಿರುವ ತಮಿಳ್ ಸೆಲ್ವಿ ಜನ್ನನ “ಯಶೋಧರ ಚರಿತೆ”ಯಿಂದ, ಕೃಷ್ಣಮೂರ್ತಿ ಹನೂರ ಅವರು ರಾಘವಾಂಕನ “ಹರಿಶ್ಚಂದ್ರಕಾವ್ಯ”ದಿಂದ, ಹುಲುಗಪ್ಪ ಕಟ್ಟೀಮನಿ ಅವರು ಮುದ್ದಣನ “ರಾಮಾಶ್ವವೇಧ”ದಿಂದ ಆಯ್ದ ಭಾಗಳನ್ನು ಓದಲಿದ್ದಾರೆ.
ಬಿ.ಪಿ.ಸಂಪತ್ ಕುಮಾರ ಈ ಗೋಷ್ಠಿಯನ್ನು ನಡೆಸಿಕೊಡುತ್ತಾರೆ.