ಧಾರವಾಡ ಸಾಹಿತ್ಯ ಸಂಭ್ರಮ ೨೦೧೫: ಗೋಷ್ಠಿ ೮: ಪು. ತಿ. ನ. ಹಾಗು ವಿ. ಕೃ. ಗೋಕಾಕರ ಕವಿತೆಗಳ ಓದು
ಕವಿಗಳು ತಮ್ಮ ಸ್ವಂತ ಕವಿತೆಗಳನ್ನು ಓದುವ ಕವಿಗೋಷ್ಠಿಗಳು ಸಾಮಾನ್ಯ. ಆದರೆ ಈ ಗೋಷ್ಠಿಯಲ್ಲಿ ಕವಿಗಳು ಪು. ತಿ. ನ. ಹಾಗು ವಿ. ಕೃ. ಗೋಕಾಕರ ತಮಗಿಷ್ಟವಾದ ಒಂದು ಕವನವನ್ನು ಓದಬೇಕು. ಕಾವ್ಯವಾಚನವೆಂದರೆ ಯಾಂತ್ರಿಕವಾಗಿ ಪ್ರತಿಯೊಂದೂ ಸಾಲನ್ನು ಎರಡೆರಡು ಸಲ ಓದುವದಲ್ಲ. ಕಾವ್ಯವಾಚನ ಒಂದು ಕಲೆ. ಭಾವಪೂರ್ಣವಾಗಿ, ಅರ್ಥಪೂರ್ಣವಾಗಿ ಓದಬೇಕು. ಇಂಥ ಓದಿನ ಮೂಲಕ ಈ ಇಬ್ಬರು ಹಿರಿಯ ಕವಿಗಳ ಕಾವ್ಯವನ್ನು ಮುನ್ನೆಲೆಗೆ ತರುವುದು ಗೋಷ್ಠಿಯ ಉದ್ದೇಶ.
ಕವಿತೆಗಳು ಎಷ್ಟು ಹಳೆಯವಾಗಿದ್ದರೂ ಅವು ಪ್ರತಿಯೊಂದೂ ತಲೆಮಾರಿಗೆ ಹೊಸ ಸ್ಪೂರ್ತಿ, ಹೊಸ ಚಿಂತನೆಗೆ ಕಾರಣವಾಗುತ್ತವೆ ಎಂಬುದಕ್ಕೆ ಪು. ತಿ. ನ. ಹಾಗು ವಿ. ಕೃ. ಗೋಕಾಕರ ಕಾವ್ಯವಾಚನದ ಈ ವಿಶಿಷ್ಟ ಗೋಷ್ಠಿ ಸಾಕ್ಷಿಯಾಯಿತು. ಹಿರಿಯ ಕವಿ ಚೆನ್ನವೀರ ಕಣವಿಯವರು ವಿ. ಕೃ. ಗೋಕಾಕರ “ನನ್ನ ನಾಡು” ಕವಿತೆಯನ್ನು ವಾಚಿಸುವ ಮೂಲಕ ಗೋಷ್ಠಿಗೆ ಚಾಲನೆ ನೀಡಿದರು.