ದ್ರೌಪದಿಯ ಮೋಹ

ಜಾಂಬವಂತನ ನೆಲದಲಿ ಜಂಬು ನೇರಳೆಯ ಕಥೆ ಕಟ್ಟಿ ಪಾಂಡವರಿಗೆ ದೊರಕಿದ ಹೆಣ್ಣಿನ, ಹಣ್ಣಿನ ಭಾಗ, ವಿಭಾಗ, ಪಾಲು ವಿಭಾಗ ಹಂಚಿದ್ದು ಹಂಚಿಕೆಯಾಗಿದ್ದು ಹಂಚಿಕೆಗೊಳಪಟ್ಟಿದ್ದು ದ್ರೌಪದಿ. ಭರತ ಖಂಡದಲಿ ಸತ್ಯ ಸಂಧತೆಯು ಮೆರೆದು ಭೀಮನು ಕಿತ್ತ ಜಂಬುನೇರಳೆ ಶಾಪ ವಿಮೋಚನೆಗೊಳಪಟ್ಟು ಸತ್ಯ ವಾಚನಕ್ಕೆ ಮತ್ತೆ ಮರ ಸೇರುವುದು ಭ್ರಮೆಯನ್ನುಟ್ಟು ಭ್ರಮೆಯಲಿ ಸಾಗಿ ಕೃಷ್ಣನೆಂಬ ಆಪತ್ಬಾಂಧವನಾಟವೋ ದ್ರೌಪದಿಯಾಡಿದ ಸುಳ್ಳೊ ಸತ್ಯವೋ ಸುಳ್ಳಿಗೆ ನಿಂತು ಸತ್ಯಕ್ಕೆ ಮೇಲ್ಸಾಗುವ ಜಂಬು ನೇರಳೆ ಇದು ದ್ರೌಪದಿಯ ಪರೀಕ್ಷೆಯೋಹೆಣ್ಣಿನ ಹೆಣ್ತನದ ಪರಿಕ್ಷೆಯೋ ಹೆಣ್ಣಿನೊಡಲಿನ ಸತ್ಯ ಬಗೆಬಗೆದು ಮರವೇರಿತು ಜಂಬು ನೇರಳೆ ತರಳೆ ನೇರಳೆ ಬಿಚ್ಚಿಯೋ ಕಚ್ಚಿಯೋ ಒಡಲ ದಾಹ, ಮನ ದಾಹ, ತನು ದಾಹ ತುಂಬಿಕೊಳ್ಳುವುದೇ ಪುರುಷಹಂಕಾರ ದ್ರೌಪದಿಯ ಸುಳ್ಳಾದರೂ ಏನು? ಪಾಂಡವರೈವರಲ್ಲಿ ಒಬ್ಬನನ್ನು ಹೆಚ್ಚು ಮೋಹಿಸಿದ್ದೆ? ಐವರಿಗಿಂತ ಮೊದಲಿಗನಾದ ಕರ್ಣನ ಮೇಲೆ ಮನಸಾಗಿದ್ದೇ? ಈ ಹೆಚ್ಚು ಕಡಿಮೆ ಕಡಿಮೆ ಹೆಚ್ಚು ಹೆಚ್ಚು ಎಂದರೆ ಕಡಿಮೆ ಮೋಹಿತನಾದವನ ಸ್ಥಿತಿ ಏನು? ಕಡಿಮೆ ಮೋಹಿಸಿದ ದ್ರೌಪದಿಯ ಸಂಕಟವೇನು? ಕರ್ಣನ ತೊಳಲಾಟವೇನು? ಒಟ್ಟಿನಲ್ಲಿ ಶಿಕ್ಷೆಗರ್ಹಳು ದ್ರೌಪದಿ ಎಷ್ಟೆಷ್ಟು ಶಿಕ್ಷೆ? ಎಷ್ಟೆಷ್ಟು ಭಿಕ್ಷೆ? ಸಂಕಟವೆಲ್ಲಾ ಹೆಣ್ಣಿನೊಡಲಿಗೆ ಪುರುಷಹಂಕಾರದಲಿ ನಿರಂತರ ಶಿಕ್ಷೆ. ದ್ರೌಪದಿ ಹೆಣ್ಣು ದ್ರೌಪದಿ ಮೌನ ದ್ರೌಪದಿ ಸಹನೆ ದ್ರೌಪದಿ ಸತ್ಯ ದ್ರೌಪದಿ ಸುಳ್ಳು ದ್ರೌಪದಿ ಮೋಹ ದ್ರೌಪದಿ ಅಭಾಗ್ಯೆ
ಪುಣ್ಯದಲಿ ಪುರಾಣದಲಿ ಪಾಪದಲಿ ದಿನನಿತ್ಯದಲಿ ಎರಡಲಗಿನ ಒರೆಗೆ ಸವಿಯುತಿಹುಳು ಮೋಹದಿಂದ ಮೋಸದಿಂದ ಹೆಣ್ಣೆಂಬ ಮಾತ್ರಕ್ಕೆ ದ್ರೌಪದಿಯ ಮೋಹದ ಅಪವಾದ ಕೊನೆಗೊಳ್ಳದು ಜಂಬು ನೇರಳೆ ಮರವೇರದು ಕಲಿಯುಗದಲಿ ಶಾಪ ವಿಮೋಚನೆಯಿಲ್ಲ.

courtsey:prajavani.net

https://www.prajavani.net/artculture/poetry/draupadiya-moha-706937.html

Leave a Reply