ಮನೆಯಲ್ಲಿ ಸುಳ್ಳು ಹೇಳಿ ಡೊಳ್ಳು ಕುಣಿತ ಕಲಿಯಲು ಹೋಗುತ್ತಿದ್ದ ಆ ಯುವಕನಿಗೆ, ಕೊನೆಗೊಂದು ದಿನ ಆ ಡೊಳ್ಳು ಕುಣಿತವೇ ರಾಜ್ಯ, ಹೊರ ರಾಜ್ಯದಲ್ಲಿ ಖ್ಯಾತಿ ಪಡೆಯುವಂತೆ ಮಾಡಿತು. ದೊಡ್ಡ ದೊಡ್ಡ ನೃತ್ಯಗಾರರಿಗೆ, ಶಾಲಾ ಕಾಲೇಜು ಮಕ್ಕಳಿಗೆ ಡೊಳ್ಳು ಕುಣಿತ ಕಲಿಸುವ ಅವಕಾಶ ಒದಗಿಸಿ ಕೊಟ್ಟಿತು. ವೈವಿಧ್ಯಮಯ ಕಲೆ, ವಾದ್ಯಗಳನ್ನು ನುಡಿಸುವುದನ್ನೂ ಕಲಿಸಿತು! ಆ ಯುವಕನ ಹೆಸರು ಹಿದಾಯತ್ ಅಹಮದ್. ಬೆಂಗಳೂರಿನ ಇವರು, ಒಂದು ಕಾಲದಲ್ಲಿ ಮನೆಯವರ ಕಣ್ತಪ್ಪಿಸಿ, ಈ ಜನಪದ ಕಲೆಯನ್ನು ಅಭ್ಯಾಸ ಮಾಡುತ್ತಿದ್ದರು. ಈಗ ಅದೇ ಕಲೆ ಇವರ ಕೈ ಹಿಡಿದಿದೆ. ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಹಿದಾಯತ್ ಈಗ ಕಲಾ ತಂಡ ಕಟ್ಟಿಕೊಂಡು ಆಸಕ್ತರಿಗೆ ಡೊಳ್ಳು ಕುಣಿತ ತರಬೇತಿ ನೀಡುತ್ತಿದ್ದಾರೆ. ಶಿಕ್ಷಣದೊಂದಿಗೆ ಕಲೆಯ ಮಿಳಿತ ಬಾಲ್ಯದಲ್ಲಿ ತುಂಟನಾಗಿದ್ದ ಹಿದಾಯತ್‌ನಲ್ಲಿ ಚುರುಕುತನವೂ ಇತ್ತು. ಒಂದರಿಂದ ಏಳನೇ ತರಗತಿವರೆಗೆ ಉರ್ದು ಮಾಧ್ಯಮದಲ್ಲಿ ಓದಿದ್ದ ಹಿದಾಯತ್ ಪ್ರೌಢಶಾಲೆಗೆ ಬರುವಷ್ಟರಲ್ಲಿ ಪಕ್ಕದ ಕನ್ನಡ ಶಾಲೆಗಳಲ್ಲಿ ನಡೆಯುತ್ತಿದ್ದ ‘ಪ್ರತಿಭಾ ಕಾರಂಜಿ’ಯತ್ತ ಆಕರ್ಷಿತರಾಗಿದ್ದರು. ಅಲ್ಲಿ ನೋಡಿದ್ದನ್ನೇ ಚಾಚೂ ತಪ್ಪದೇ ತನ್ನ ಶಾಲೆಯಲ್ಲಿ ಪ್ರದರ್ಶಿಸುತ್ತಿದ್ದರು. ಅವರ ಕೌಶಲಕ್ಕೆ ಸಹಪಾಠಿಗಳು ಚಪ್ಪಾಳೆ ತಟ್ಟುತ್ತಿದ್ದರು. ಕಲೆಯ ಮೇಲಿನ ಒಲವಿಗಾಗಿಯೇ 8ನೇ ತರಗತಿಯಿಂದ ಕನ್ನಡ ಮಾಧ್ಯಮಕ್ಕೆ ಸೇರಿದರು. ಆರಂಭದಲ್ಲಿ ಸಮಸ್ಯೆಯಾಯಿತು. ಗಣಿತ ಮತ್ತು ಕನ್ನಡ ಕಬ್ಬಿಣದ ಕಡಲೆಯಾಯಿತು. ಆದರೆ ಪೇಪರ್ ಕ್ರಾಫ್ಟ್, ಗೊಂಬೆ ತಯಾರಿಕೆ, ಕ್ರೋಶಾ ವರ್ಕ್, ರಂಗೋಲಿ ಹೀಗೆ ಕಲಾತ್ಮಕ ಚಟುವಟಿಕೆಗಳಲ್ಲಿ ಮುಂದಿದ್ದ ಅವರಿಗೆ, ಬೇರೆಲ್ಲ ಸುಲಭವಾಯಿತು. ಮುಂದೆ, ಪರಿಶ್ರಮದೊಂದಿಗೆ ಕನ್ನಡ ಮಾತನಾಡಲು ಓದಲು, ಬರೆಯುವುದನ್ನು ಕಲಿತರು. ಹಾಗೆಯೇ ಕಬ್ಬಿಣದ ಕಡಲೆಯಾಗಿದ್ದ ಗಣಿತವನ್ನೂ ಪಳಗಿಸಿ, ಸುಲಭವಾಗಿಸಿಕೊಂಡರು. ಹಿದಾಯತ್ ಪಾಲಿಗೆ ಪಿಯುಸಿಯ ಎರಡು ವರ್ಷ ಗೋಲ್ಡನ್ ಡೇಸ್‌ಗಳಾದವು. ಏಕೆಂದರೆ, ಅವರು ಓದಿದ ರಾಜಾಜಿನಗರದ ಶಿವನಹಳ್ಳಿಯ ಗಂಗಮ್ಮ ತಿಮ್ಮಯ್ಯ ಪಿ.ಯು ಕಾಲೇಜಿನ ಸಾಂಸ್ಕೃತಿಕ ಪರಿಸರ ಹಿದಾಯತ್ ವ್ಯಕ್ತಿತ್ವವನ್ನೇ ಬದಲಿಸಿತು. ‘ಅದರಲ್ಲೂ ಎಂ.ಆರ್. ಕಮಲ ಮೇಡಂ ಅವರ ಬೋಧನೆ ನನ್ನ ಕಲಾ ಜೀವನಕ್ಕೆ ಸ್ಫೂರ್ತಿಯಾಯಿತು’ ಎಂದು ವಿನಮ್ರವಾಗಿ ನೆನೆಯುತ್ತಾರೆ ಹಿದಾಯತ್. ‘ಮೇಡಂ ಅವರ ಪ್ರೋತ್ಸಾಹದಿಂದ ‘ಮಾತೃಭೂಮಿ’ ಯುವಕರ ಸಂಘ ಆಯೋಜಿಸಿದ್ದ ಡೊಳ್ಳು ತರಬೇತಿ ಶಿಬಿರಕ್ಕೆ ಸೇರಿದೆ. ಅಲ್ಲಿಂದ ಇಲ್ಲಿಯ ತನಕ ಡೊಳ್ಳಿನ ಸಾಂಗತ್ಯ ಬಿಟ್ಟಿಲ್ಲ’ ಎನ್ನುತ್ತಾ ನಡೆದು ಬಂದ ಹಾದಿಯನ್ನು ಮೆಲುಕು ಹಾಕುತ್ತಾರೆ. ಕದ್ದು ಕಲೆ ಕಲಿತಿದ್ದು. ಕಾಲೇಜಿನಲ್ಲಿ ಸ್ಪೆಷಲ್ ಕ್ಲಾಸ್ ಇದೆಯೆಂದು ಮನೆಯಲ್ಲಿ ಸುಳ್ಳು ಹೇಳಿ ಡೊಳ್ಳು ಕುಣಿತ ತರಬೇತಿಗೆ ಹೋಗುತ್ತಿದ್ದರು ಹಿದಾಯತ್. ಆದರೆ ಶಿಕ್ಷಕರಿಗೆ ಈ ವಿಷಯ ಗೊತ್ತಿತ್ತು. ಡೊಳ್ಳು ಕುಣಿತ ಕಲಿಸಿಕೊಟ್ಟ ಡಾ.ಎಸ್. ಬಾಲಾಜಿ, ‘ಡೊಳ್ಳು ಕುಣಿತ ಗಂಡು ಕಲೆ. ಇದನ್ನು ಕಲಿತು ಕಾಲೇಜಿನಲ್ಲಿ ಬಾರಿಸು, ಕಾಲೇಜೇ ನಡುಗಿ ಹೋಗುತ್ತೆ’ ಎಂದು ಬೆನ್ನು ತಟ್ಟಿದ್ದರು. ಆ ಮಾತನ್ನೇ ನಂಬಿಕೊಂಡು ಶಿಸ್ತುಬದ್ಧವಾಗಿ ಆ ಕಲೆಯನ್ನು ಕಲಿತರು. ಪೂರ್ಣ ಪ್ರಮಾಣದ ಕಲಾವಿದನಾಗಿ ರೂಪುಗೊಂಡರು. ಈಗ ತಮ್ಮದೇ ಆದ ‘ರಂಗಚಾರಕ’ ಎಂಬ ಸ್ವಂತ ತಂಡವನ್ನೂ ಕಟ್ಟಿಕೊಂಡಿದ್ದಾರೆ. 2010ರಲ್ಲಿ ಮೊದಲ ಬಾರಿಗೆ ಹೊರ ರಾಜ್ಯದಲ್ಲಿ ತನ್ನ ಕಲೆಯನ್ನು ಪ್ರದರ್ಶಿಸಲು ಅವಕಾಶ ಸಿಕ್ಕಿತು. ಅದು ಒಡಿಶಾದಲ್ಲಿ ನಡೆದ ಯುವಜನೋತ್ಸವದಲ್ಲಿ ಡೊಳ್ಳು ಕುಣಿತ ಪ್ರದರ್ಶಿಸುವ ಅವಕಾಶ. ಅವರ ಮನದಲ್ಲಿ ಆ ಗಳಿಗೆ ಇನ್ನೂ ಹಚ್ಚಹಸಿರಾಗಿದೆ. ಅದುವರೆಗೆ ಮನೆಯಲ್ಲಿ ಸುಳ್ಳು ಹೇಳಿ ಡೊಳ್ಳು ಕುಣಿತಕ್ಕೆ ಹೋಗುತ್ತಿದ್ದ ಅವರು ಅದೇ ಮೊದಲ ಬಾರಿಗೆ ಸತ್ಯ ಹೇಳಿ ಒಡಿಶಾದ ವಿಮಾನವೇರಿದಾಗ ಮನೆಮಂದಿಗೆಲ್ಲಾ ಪುಳಕ. ಕಲೆ, ಅಕಾಡೆಮಿಕ್ ಶಿಸ್ತು. ಈ ಕಲಾ ಪಯಣದ ಹುಮ್ಮಸ್ಸಿನಲ್ಲಿ ಸಾಂಸ್ಕೃತಿಕ ಕೋಟಾದಡಿ ಹಿದಾಯತ್‌ಗೆ ಕೋಲಾರದಲ್ಲಿ ಎಂ.ಕಾಂ ಪದವಿಗೆ ಪ್ರವೇಶ ಸಿಕ್ಕಿತು. ನಾಟಕ ಮತ್ತು ಜನಪದ ಕಲೆಗಳ ಮೇಲಿನ ಮೋಹಕ್ಕೆ ಜನಪದ ಮತ್ತು ನಾಟಕ ವಿಷಯಗಳಲ್ಲೇ ಡಿಪ್ಲೊಮಾ ಪದವಿಯನ್ನೂ ಪಡೆದರು. ನಂತರದಲ್ಲಿ ಶಾಸ್ತ್ರೀಯ ಕಲೆ ಜತೆಗೆ ಅಕಾಡೆಮಿಕ್ ಶಿಸ್ತನ್ನೂ ಮೈಗೂಡಿಸಿಕೊಂಡಿರುವ ಹಿದಾಯತ್ 2014ರಲ್ಲಿ ಖ್ಯಾತ ನೃತ್ಯಪಟುಗಳಾದ ಮಯೂರಿ ಉಪಾಧ್ಯಾಯ ಮತ್ತು ಮಾಧುರಿ ಉಪಾಧ್ಯಾಯ ಸಹೋದರಿಯರ ತಂಡಕ್ಕೂ ಡೊಳ್ಳು ಕಲಿಸುವಷ್ಟು ಪ್ರಾವೀಣ್ಯ ಗಳಿಸಿದರು. ‘ಮಯೂರಿ–ಮಾಧುರಿ ಅವರ ತಂಡಕ್ಕೆ ಡೊಳ್ಳು ಕುಣಿತ ಕಲಿಸುತ್ತಾ ಅವರಿಂದ ನಾನು ಕಲಿತದ್ದೇ ಹೆಚ್ಚು ಎನ್ನುತ್ತಾರೆ’ ಹಿದಾಯತ್. ಮುಂದೆ, ಮಯೂರಿ ಅವರ ನೃತ್ಯಸಂಯೋಜನೆ ತಂಡ ದಲ್ಲಿ ಸ್ಥಾನ ಪಡೆದ ಹಿದಾಯತ್, ಆಯಾ ಪ್ರಾದೇಶಿಕತೆಗೆ ಅನು ಗುಣವಾಗಿ, ಜನರ ನಿರೀಕ್ಷೆಗಳನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿತರಂತೆ. ಡೊಳ್ಳು ಕಲೆಯ ಬಗ್ಗೆ ಅಪಾರ ಗೌರವ, ಪ್ರೀತಿ ಇಟ್ಟುಕೊಂಡಿರುವ ಅವರಿಗೆ ಈ ಕಲೆಯನ್ನು ಯುವಜನರಿಗೆ ಕಲಿಸಲು ಬಹಳ ಇಷ್ಟ. ಡೊಳ್ಳಿನ ಬಗ್ಗೆ ಅದಮ್ಯ ಪ್ರೀತಿ ಡೊಳ್ಳುಕುಣಿತ ನಮ್ಮ ರಾಜ್ಯದ ಕಲೆಗಳಲ್ಲೇ ಉನ್ನತ ಸ್ಥಾನದಲ್ಲಿದೆ. ಈಗಿನ ಯುವಜನರಿಗೆ ಇಂಥ ದೇಸಿಯ ಕಲೆಯ ಬಗ್ಗೆ ತರಬೇತಿ ನೀಡಿದರೆ ಮುಂದಿನ ಪೀಳಿಗೆಗೂ ಈ ಕಲೆಯನ್ನು ಕೊಂಡೊಯ್ದಂತಾಗುತ್ತದೆ ಎಂಬ ಆಶಯ ಅವರದ್ದು. ‘ನೀವು ಯಾವುದೇ ಸಂಗೀತ ವಾದ್ಯ ನುಡಿಸಬಹುದು. ಆದರೆ, ಡೊಳ್ಳಿನ ಸದ್ದಿನಷ್ಟು ಆಕರ್ಷಕ ಮತ್ತೊಂದಿಲ್ಲ. ಹಾಗಾಗಿಯೇ ಈ ಕಲೆ ಗೋವಾದಲ್ಲಿ ನಡೆದ 2018ರ ಅಂತರರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸೇರಿದ್ದ ಜನರನ್ನು ಆಕರ್ಷಿಸಿತು’ ಎಂದು ಹಿದಾಯತ್ ನೆನಪಿಸಿಕೊಳ್ಳುತ್ತಾರೆ. ‘ಡ್ರಮ್ಸ್ ಆಫ್ ಇಂಡಿಯಾ’ ಷೋ ಮೂಲಕ ಕಥಕ್ ಮತ್ತು ಡೊಳ್ಳು ಕುಣಿತದ ಜಗುಲ್‌ಬಂದಿ ಬಹಳ ಜನಪ್ರಿಯವಾಗಿತ್ತು. ಅಂತೆಯೇ ‘ಮಯೂರಿ ಉತ್ಸವ’ದಲ್ಲೂ ಡೊಳ್ಳಿನ ಸದ್ದಿಗೆ ಸಾವಿರಾರು ಮಂದಿ ಮಾರು ಹೋಗಿದ್ದನ್ನು ಹಳೆಯ ನೆನಪುಗಳ ಜತೆ ಪೋಣಿಸುತ್ತಾರೆ. ವಿವಿಧ ಕಲೆಗಳಲ್ಲಿ ಪ್ರಾವೀಣ್ಯ ಹಿದಾಯತ್ ಡೊಳ್ಳು ಕುಣಿತವಷ್ಟೇ ಅಲ್ಲ ಸೋಮನ ಕುಣಿತ, ಪಟ ಕುಣಿತ, ಗೊರವರ ಕುಣಿತ, ವೀರಗಾಸೆ, ಕೀಲು ಕುದುರೆ, ಹಾಲಕ್ಕಿ ಸುಗ್ಗಿ ಕುಣಿತ, ಕೋಲಾಟ, ಯಕ್ಷಗಾನದಲ್ಲೂ ಪ್ರಾವೀಣ್ಯ ಗಳಿಸಿದ್ದಾರೆ. ಕಾರ್ಯಕ್ರಮಗಳ ನಡುವೆ ಬಿಡುವಿದ್ದಾಗ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಈ ಕಲೆಗಳನ್ನು ಕಲಿಸಿ ಕೊಡುತ್ತಾರೆ. ಸಾಧಕಿ ಅಶ್ವಿನಿ ಅಂಗಡಿ ಅವರ ‘ಬೆಳಕು’ ಅಕಾಡೆಮಿಯ 15 ಅಂಧ ಮಕ್ಕಳಿಗೆ ಡೊಳ್ಳು ಕುಣಿತ ಹೇಳಿ ಕೊಟ್ಟದ್ದು ನನ್ನ ಪಾಲಿಗೆ ಅವಿಸ್ಮರಣೀಯ ಅನ್ನುವ ಹಿದಾಯತ್, ಡೊಳ್ಳಿಗೆ ಚರ್ಮ ಕಟ್ಟುವುದನ್ನೂ ಕರಗತ ಮಾಡಿಕೊಂಡಿದ್ದಾರೆ. ಕಲೆ ಮತ್ತು ಕಲಾವಿದರನ್ನು ಗೌರವಿಸುವ ಯಾರೇ ಕರೆದರೂ ಅವರಲ್ಲಿಗೆ ಹೋಗಿ ತಮ್ಮ ಕಲೆಯನ್ನು ಪ್ರದರ್ಶಿಸುವ ಗುಣ ಹಿದಾಯತ್ ಅವರದ್ದು. ಈಗಾಗಲೇ ಮುಂಬೈ, ನವದೆಹಲಿ, ಜೈಪುರ, ಹೈದರಾಬಾದ್, ಒಡಿಶಾ, ಲಕ್ಷದ್ವೀಪ ಸೇರಿದಂತೆ ಹಲವೆಡೆ ಕಾರ್ಯಕ್ರಮ ನೀಡಿದ್ದಾರೆ. 2018ರಲ್ಲಿ ದೆಹಲಿಯ ಕೆಂಪು ಕೋಟೆ ಎದುರು ಗಣ್ಯರ ಸಮ್ಮುಖದಲ್ಲಿ ಡೊಳ್ಳು ಕುಣಿತ ಪ್ರದರ್ಶಿಸಿದ್ದಾರೆ. 2013ರಲ್ಲಿ ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್ ಆಯೋಜಿಸಿದ್ದ ನೃತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಜನಪದ ಕಲೆಗಳಷ್ಟೇ ಅಲ್ಲದೇ ನಾಟಕ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿರುವ ಅವರು, ‘ಕರ್ಣಭಾರ’ ನಾಟಕವನ್ನು ನಿರ್ದೇಶಿಸಿದ್ದಾರೆ. ಭವಿಷ್ಯದಲ್ಲಿ ಜನಪದ ಕಲೆಗಳಿಗಾಗಿಯೇ ಪ್ರಯೋಗ ಶಾಲೆ ತೆರೆಯಬೇಕೆಂಬ ಕನಸು ಹೊಂದಿದ್ದಾರೆ. ಕಾರ್ಯಕ್ರಮಗಳಿದ್ದಾಗ ಕೈತುಂಬಾ ಕಾಸು ಸಂಪಾದಿಸುವ ಹಿದಾಯತ್ ಅಹಮದ್, ‘ಕಲಾವಿದರಿಗೆ ಜಾತಿ, ಧರ್ಮದ ಹಂಗಿಲ್ಲ’ ಅನ್ನುವ ತತ್ವದಲ್ಲಿ ನಂಬಿಕೆ ಇರಿಸಿಕೊಂಡವರು.
author: ಮಂಜುಶ್ರೀ ಎಂ. ಕಡಕೋಳ.
courtsey:prajavani.net
https://www.prajavani.net/artculture/art/hidyat-kamal-dollu-kunita-662257.html