ದೇವರಿಗೊಂದು ಪತ್ರ -30

ದೇವರಿಗೊಂದು ಪತ್ರ (30)

ಹೇಳ ಮಾತು ನೂರಿದೆ
ಕೇಳೋ ಬಯಕೆ ಸಾಗರದಷ್ಟಿದೆ
ನಿನ್ನನರಸಿ ಹುಡುಕುವ ಕಾತರ ಹೆಚ್ಚಿದೆ
ದೃಷ್ಟಿಗೆಲ್ಲ ಬರಿ ನೀನೇ ಕಾಣುವೆ
ಉತ್ತರಿಸು ಈ ಮನೋ ರೋಗಿಗೆ
ನಿನ್ನ ಹುಚ್ಚು ಹಿಡಿದ ಎನಗೆ
ಸಲಹು ನೀ ಕರುಣಾಮಯಿ ಹರಿಯೆ!

ಹೊಸೆದು ಹೊಸೆದು ಹುಲ್ಲಿನೊಳು ಹಗ್ಗವಾಗುವುದಯ್ಯ
ತುಳಿದು ತುಳಿದು ಹದವಾದ ಮಣ್ಣೊಳು ಗಡಿಗೆಯಾಗುವುದಯ್ಯ
ಕಡೆದು ಕಡೆದು ಮೊಸರಾಗುವುದಯ್ಯ
ಉತ್ತಿಬಿತ್ತಿ ಮಣ್ಣಿನೋಳು ಹಸನಾದ ಬೆಳೆಯು ಬರುವುದಯ್ಯ
ಕೆತ್ತಿ ಕೆತ್ತಿ ಸುಂದರ ಶಿಲ್ಪವಾಗುವುದಾಯ್ಯ
ತೋಡಿ ತೋಡಿ ಆಳಕ್ಕೆ ಬಾವಿಯಾಗುವುದಯ್ಯ
ಮಾಗಿ ಮಾಗಿ ಗಿಡದ ಕಾಯಿ ಸಿಹಿ ಹಣ್ಣಾಗುವುದಯ್ಯ
ಬೆಂದು ಬೆಂದು ಹದನಾದ ಹೂರಣವಾಗುವುದಯ್ಯ
ನುಡಿದು ನುಡಿದು ನಿತ್ಯಸತ್ಯ, ಧರ್ಮವಾಗುವುದಯ್ಯ
ನಿತ್ಯ ಪ್ರಾರ್ಥನೆಯು ನಿನ್ನ ಭಕ್ತಿರಸವ ಕೊಡುವುದಯ್ಯ
ಕುದಿ ಕುದಿವ ಗಾಣದಲಿ ಸಿಹಿಬೆಲ್ಲ ಬರುವುದಯ್ಯ
ಮಾಡಿ ಮಾಡಿ ಕರ್ಮವನು ಫಲವ ಪಡೆವರಯ್ಯ
ಮುಳು ಮುಳುಗೆ ಯಜ್ಞದಲ್ಲಿ ನಿನ್ನ ಉಪಾಸನೆ ಮಾಡುವರಯ್ಯ
ತಿರು ತಿರುಗಿ ಬೀದಿ ಬೀದಿಯೊಳು ನಿನ್ನನರಸಿ ದರಯ್ಯ
ಹಾಡಿ ಪಾಡಿ ಕೀರ್ತನೆಯ ಮಾಡಿ ಭಕ್ತಿಭಾವದಲಿ ಮುಳುಗುವರಯ್ಯ
ನಾ ಏನ ಮಾಡಲಿ ಪೇಳು ನಿನ್ನ ದರುಷನಕೆ ಆತ್ಮವೆನ್ನ ಕೊರಗುತಿಹುದಯ್ಯ
ನಾ ಕಾಣದೆ ಇರಲಾರೆ ಅಂತ್ಯ ಅಂದೇ ಆದರೂ ಸರಿಯೇ ಹೇಳು ನನ್ನಯ್ಯ.

ಉಮಾ ಭಾತಖಂಡೆ

 

Leave a Reply