ದೇವರಿಗೊಂದು ಪತ್ರ! (40)
ಪತ್ರವಿದು ವಿಶೇಷ ಓ ಹರಿಯೆ ಓದು ಈ ಕ್ಷಣಕ್ಕೆ ತಪ್ಪದೆ ನೀನು!
ಈ ನಾಲ್ಕು ದಿನದಿಂದ ಅತೀತ ಆನಂದದಲ್ಲಿ ಮನವೆನ್ನ ಮುಳುಗಿಹುದು!
ಅರಿಯದ ಸಂತಸದ ಭಾವ ಅನುಭಾವದಲಿ ಆತ್ಮವಿದು ತೇಲುತಿಗುದು
ಆನಂದಭಾಷ್ಪ ಕಣ್ಣಂಚಲಿ ಬಿಡದೆ ಜಿನುಗುತಿಹುದು
ನೋಡಿದವರು ಎನೆನ್ನುವರೀಪರಿಯ ಭ್ರಾಂತಿಗೆ ಎಂಬಳಕು ಮನದೊಳಿಹುದು!
ನೀ ಹುಟ್ಟಿದಾಷ್ಟಮಿಯು ಇಂದು ಜನ್ಮಾಷ್ಟಮಿ ನಿನ್ನದಿಹುದು!
ಇಂದು ಕುಳಿತಲ್ಲಿ ನಿಂತಲ್ಲಿ ನಿನ್ನದೇ ಧ್ಯಾನದಲ್ಲಿ ನಾ ಭಿನ್ನ ಪಾತ್ರದಲ್ಲಿ ಕಲ್ಪಿಸಿಹೆನು
ನೀ ಹುಟ್ಟಿದಂತೆ ಈ ಕ್ಷಣಕ್ಕೆ ನಾ ದಾದಿಯಾಗಿ ನಿನ್ನ ಎರೆದು ಸಿಂಗರಿಸಿದಂತೆ!
ತೊಟ್ಟಿಲಲ್ಲಿ ಮಲಗಿಸಿ ನಾ ಲಾಲಿ ಹಾಡಿದಂತೆ ನೀ ಕಿಲಕಿಲನೆ ನಕ್ಕಂತೆ
ನಿನ ಚರಣ ಹಿಡಿದು ನಾ ಮುತ್ತಿಟ್ಟು ಕಣ್ಣಿಗೊತ್ತಿ ಕೊಂಡಂತೆ!
ಮತ್ತೇನೇನೋ ಹೇಳಲಾಗದು ನನ್ನೀ ಮಾನಸ ಪೂಜೆಯ ಪರಿಯು!
ನೆನಪಿದೆಯಾ? ನಾ ಮೊದಲ ಪತ್ರ ಬರೆದಾ ದಿನವು ಓ ಜಗಪಾಲಕ ನಿನಗೆ
ಏನೋ ದುಃಖವು ತುಂಬಿ ನಿನ್ನಾಲಯಕೆ ಬಂದೊಡನೆ!
ನೀನಂದು ಮುಗುಳು ಭಾವದಿ ನಗು ಮೊಗವ ತೋರಿದ್ದೆ!
ನಾಚಿಕೆಯು ಇಂದೆನಗೆ ಕೊಡು ಕೊಡು ಎಂದು ಬೇಡಿದ ಅಜ್ಞಾನಕ್ಕೆ
ಬೇಡೆನಿನ್ನೇನು ನಿನ್ನ ಹೊರತು ಜಗತ್ಪಾಲಕ ಹಿಡಿ ಬಿಗಿ ನನ್ನ ಕೈ ಬೇಡ ಮತ್ತೇನು!
ನಿನ್ನೆದುರು ನಿಂತು ನೀ ದರುಶನವ ನೀಡೆಂದಾಗಾ ಕೆಂಗುಲಾಬಿ ಚರಣದಲಿ ಬೀಳಿಸಿದೆ
ಮತ್ತೆ ಮತ್ತೆ ಬಂದಾಗ ಹೊಸಬಗೆಯ ಭಾವ ಅನುಭಾವ ತುಂಬಿದೆ
ಅದೇನೋ ಅನಿರೀಕ್ಷಿತ ನಿನ್ನ ಕಾಣುವ ತವಕದಲ್ಲಿ ಬಂದಾಗ ಶಿರದ ಮಾಲೆಯ ತುರುಬಿಗೆ ಕೊಟ್ಟಿದ್ದೆ
ಆಗಾದಾಗದು ಕೃಷ್ಣ ನಿನ್ನ ಬಿಟ್ಟು ಬದುಕ ಸಾಗಿಸಲು
ಎಲ್ಲ ಮಿತ್ಯವು ಇಲ್ಲಿ ಸತ್ಯ ನೀನೊಬ್ಬನೇ ವಿಠಲ
ಏನಾದರೂ ಸರಿಯೇ ನಿನ್ನ ಸಾನಿಧ್ಯವು ಬೇಕೆನಗೆ
ತುಳಸಿಯ ದಳವಾದರೂ ನಿನ್ನ ಕೊರಳಲ್ಲಿ ಇರಬಹುದಲ್ಲ!
ದಾಸವಾಳವಾದರೂ ನಿನ್ನ ಪಾದದಡಿ ಇರಬಹುದಲ್ಲ
ಈ ಮಾನವ ಜನ್ಮದಲಿ ನಾ ನಿನ್ನ ಹೇಗೆ ಪಡೆಯಲಿ ದಾರಿ ತೋರು
ನನ್ನಲ್ಲಿ ನಿನ್ನ ನೆನಕೆಯ ಪರಿಯ ಈ ಪರಿ ತುಂಬಿದ ನೀನು ನನ್ನ ರಕ್ಷೆಗೆ ನಿಂತಲ್ಲದೆ ಮತ್ತೇನು ಹರಿಯೆ
ಜನ್ಮ ಸಾರ್ಥಕವು ಪತ್ರ ಬರೆಸಿದೆ ನೀನು ನನ್ನಿಂದ ಅದಾವ ನಿರೀಕ್ಷೆಯೋ ನನ್ನಿಂದ ನಾನರಿಯೆ.
ಇರು ಮತ್ತೆ ಬರೆವುದಿದೆ ಮತ್ತೊಂದು ಜೋಗುಳವು ನೀ ಹುಟ್ಟಿದುದಕೆ.
ನನ್ನೊಳಗಿನ ಆತ್ಮವು ಆಚರಿಸುತ್ತಿದೆ ನಿನ್ನ ಜನುಮ ದಿನದ ಸಂಭ್ರಮವೂ
ಈ ಸುತ್ತೋಲೆ ಮುಗಿಸು ಮತ್ತೆ ಪತ್ರವನೆತ್ತು ನಿನ್ನ ತೊಟ್ಟಿಲ ತೂಗಿದುದಕೆ
ನಿನ್ನ
ಉಮಾ ಭಾತಖಂಡೆ.