ದೇವರಿಗೋಂದು ಪತ್ರ  (24)

ದೇವರಿಗೋಂದು ಪತ್ರ  (24)

ಸೌಖ್ಯವೇ?ಹರಿ

ನಾ… ನೀ ನನಗಿಂತ ಚೆನ್ನಾಗಿ ಬಲ್ಲೆ!

 

ನಿನಗೊಂದು ಮಾತ ಹೇಳಲು ಮನ ತಡಕಾಡಿದೆ

ನನಗೇಕೋ ನಿನ್ನ ಮೂರುತಿಯ ತಂದಿರಿಸುವಾಸೆ

ಬಗಲಲ್ಲಿ ಹಸುಕೂಸಿನಂತೆ ಹೊತ್ತು ತಿರುಗುವಾಸೆ

ಪಕ್ಕದಲ್ಲಿ ಬಿಗಿದಿಹಿಡಿದು ನಿದಿರೆಗೆ ಜಾರುವಾಸೆ

ಬಿಗಿದು ಆಲಂಗಿಸಿ ಶಿಶುವಂತೆ ಮುದ್ದಿಸುವಾಸೆ

ನಿನ್ನ ಪಾದ ಪದ್ಮದಲ್ಲಿ ಹಣೆಯ ಒತ್ತಿ ಹೊರಳುವಾಸೆ

 

ಏನ ಮಾಡಲಿ ಹೇಳು ನಿನ್ನಲಿ ನೂರು ಆಸೆ ನನ್ನೊಳು

ಅದಾವ ಕರ್ಮ ಫಲದ ಕಾರಣವೋ ನಾ ಮತ್ತೆ ಮನುಜ ಜನ್ಮದೊಳು

ಮಗಳಾಗಿ, ಮಡದಿಯಾಗಿ, ತಾಯಿಯಾಗಿಹೆ ಕರ್ತವ್ಯ ದೊಳು

ಒಮ್ಮೆ ಸುಖ ಒಮ್ಮೆ ದುಃಖ ಅನುಭವ ನೀಡಿದೆ ಈ ಜಗದೊಳು

ಸಮನಾಗಿ ಸ್ವೀಕರಿಸುವ ಸಹಿಷ್ಣತೆಯ ನೀಡು ಮುದದೊಳು

ತಂದೆ ಬಿಡಲಾರೆ ನಾ ನಿನ್ನ ನೀ ಬಿಡಬೇಡ ನನ್ನ ಇಹದೊಳು

 

ಹೀಗಾಗುವುದು ಒಮ್ಮೊಮ್ಮೆ ನಾ ನಿನ್ನ ಸಾನಿಧ್ಯದಲ್ಲಿ ಸದಾ ಇರಬೇಕು

ನೀ ಕೂಡುವ ಪೀಠದ ಕಾಲಾದರು ಆಗಬೇಕು

ನೀ ಪಾದ ಸ್ಪರ್ಶಿಸಿ  ಏರುವ ಮೆಟ್ಟಿಲಾದರು ಆಗಬೇಕು

ಆ ನಿನ್ನ ಚರಣದಲಿ ನಳ ನಳಿಸುವ ಪುಷ್ಪ ವಾದರು ಆಗಬೇಕು

ತಂಪಾದ ಗಾಳಿ ಸೋಕುವ ಆ ನಿನ್ನ ಅಕ್ಕ ಪಕ್ಕದ ಚಮರವಾದರೂ ಆಗಬೇಕು

ಸದಾ ನಿನ್ನ ಚರಣಗಳ ಬಿಗಿದ ಕಾಲ್ಕಡಗ ವಾದರೂ ಆಗಬೇಕು

 

ಮಸ್ತಕದಲ್ಲೆನ್ನ ನಿನ್ನ ಚಿಂತನೆಗೆ ಮಾತ್ರವೇ ಸ್ಥಳವಿರಲಿ

ಹೃದಯದೊಳಗೆ ನಿನ್ನ ಪ್ರತಿಬಿಂಬವೇ ತುಂಬಿ ಇರಲಿ

ಕರಣಗಳಿಗೆ ಸದಾ ನಿನ್ನ ಕೋಟಿ ನಾಮವೇ ಕೇಳಿಸಲಿ

ನಯನದಲಿ  ನಿನ್ನ ಮೂರ್ತಿಯು ಸ್ಥಿರ ಹೊಳೆಯುತಿರಲಿ

ನಾಲಿಗೆಯಲ್ಲಿ ನಿತ್ಯ ನಿನ್ನಯ ಗಾನ ತುಂಬಿ ಹೊಮ್ಮುತಿರಲಿ

ನಾಸಿಕವು ನಿತ್ಯ ನೀ ಮೆತ್ತಿದ ಗಂಧದ ಸೌಗಂಧ ಪೂಸುತಿರಲಿ

 

ಹೀಗಿದೆ ವಾಸುದೇವ ನನ್ನಾಸೆ

ಅಂತಿಮವಾಗಿ ಎಲ್ಲಾ ನಿನ್ನದೇ ಆಸೆ

ನನಗೆ ನೀ ಉತ್ತರ ಕೊಡುವಿ ಎಂಬಾ ಮಹದಾಸೆ

ಇಂತಿ ನಿನ್ನ

ಉಮಾ ಭಾತಖಂಡೆ.

Leave a Reply