ದೇವರಿಗೊಂದು ಪತ್ರ (18)

ದೇವರಿಗೊಂದು ಪತ್ರ(18)
ಓ … ಅಚಲಾದೀಶ.. ಇದೆಂಥಾ ದುಸ್ಥಿತಿ ಎಸಗಿಹೆ ತಂದೆ?
ಜಗವೇ ತಲ್ಲಣಿಸಿ ಭಯದ ಮುಸುಕಲಿ ಬಂಧಿಯಾಗಿದೆ! ಕಾಣೆಯ?
ಯಾರು ಸೌಖ್ಯರಿಲ್ಲವಿಂದು ಭುವಿಯಲಿ ಅದೆಂಥ ವಿಷಜಂತು ಕಳುಹಿಯೇ ಓ ಕಲ್ಕಿ?
ಮೃತ್ಯುಕೂಪದಲಿ ಬೇಯುತಿಹನು ಮನುಜನಿಂದು ಸುಮ್ಮನೆ ಹೇಗಿರುವೆ ನೀನು?
ಮತ್ತಾವ ಹೊಸ ಸೃಷ್ಟಿಗೆ ಕಾರಣವು ಈ ಬಗೆಯ ನಿನ್ನ ಆಟಕ್ಕೆ?ಹೇಳು ಜನಮೇಜಯ!
ಮಾನವ ಜನ್ಮ ಶ್ರೇಷ್ಠವೆಂದು ಬಗೆದು ನೀ ಸೃಷ್ಟಿಸಿದೆ ಯಂತೆ!
ಇತರೆ ಖಗ ಮೃಗ ಪಕ್ಷಿ ಸಂಕುಲ ಕೀಟಗಳಿಗೂ ಬಾರದ ಬೇನೆ ತರಲು ಕಾರಣವೇನು?
ಮರೆತ ಸಂಸ್ಕೃತಿ ಪರಂಪರೆಯನ್ನು ನೆನಪಿಸುವ ಪರಿ ಇದುವೇ?
ಮೈಮರೆತು ಅಟ್ಟಹಾಸ ಮೆರೆದ ಮನುಕುಲಕ್ಕೆ ದಕ್ಕಿದ ಹೊಸ ಪಾಠವಿದುವೇ?
ಸಕಲ ಜೀವ ಜಂತುಗಳ ಕಾಲಲ್ಲಿ ಹೊಸಕಿ ತಾನು ತಾನೆಂದು ಅಹಂ ತೋರಿಸಿದ್ದಕ್ಕೆ ಫಲವೇ?
ಆಸ್ತಿ ಪಾಸ್ತಿಗಾಗಿ ಹಗಲಿರುಳೆನ್ನದೆ ದುಡಿದು ಕೂಡಿಟ್ಟು ದಾಯಾದಿಗಳ ಕೂಡಿರದ್ದಿದ್ದರ ಫಲವೇ?
ಜಾತಿ ಮತ ಭೇದ ಮರೆತು ಬಾಳುವುದ ಕಲಿಸುವ ಈ ಅಧ್ಯಾಯವೂ ಸಾಕೆ?
ಉತ್ತೀರ್ಣ ಅನುತ್ತಿರ್ಣಕ್ಕೆ ಕಾಯುತ್ತಾ ಅಂಕದಲಿ ಜ್ಞಾನವನು ತಕಡಿಯಲಿ ತೂಗಿದ್ಧರ ಫಲಿತಾಂಶವೇ?
ಅನ್ಯ ಜೀವಿಗಳ ಪಂಜರದೊಳಗೆ ಬಂಧಿಸಿ, ಕಾಡಿಸಿ, ಚೇಷ್ಟೆಗಳ ಮಾಡಿ ಮೋಜುಗೈದದ್ದಕ್ಕೆ ಶಿಕ್ಷೆಯೇ?
ಆಗಾಗ ನೀನೇನೋ ಇಂಥಾ ಹೊಸ ಪಾಠ ಕೈಗೊಂಡು ದಾರಿ ತೋರುವಿ!
ಮತ್ತೂ ಮೈಮರೆತು ತನ್ನ ತಾ ಮರೆತು ಚಂಚಲನಾಗುವ ಮನುಜಗೆ ಸರಿ ನ್ಯಾಯ ನೀಡುವ ಪರಿ ಇದುವೇ?
ನಿನ್ನ ನೆನಹಲೂ ಸಮಯವಿರದೆ ಕಳೆದ ಘಳಿಗೆ ನೆನಪಿಸಿ ನಿನ್ನ ನಾಮ ಜಪಿಸಲು ಹೇಳುವ ದಾಟಿ ಇದುವೇ?
ಜನ್ಮದಾತನು ನೀನೇ ಅವಧಿ ಮೀರಲು ಒಯ್ಯುವವನೂ ನೀನೇ!
ಅದೇನು ನೀ ಮಾಡ ಬಯಸುವಿಯೋ ಅದೇ ಆಗುವುದು ನಿಶ್ಚಿತ?
ಆದರೂ ಮನುಜನ ಭಕ್ತಿಗೆ ಒಲಿದು ಸಂಕಷ್ಟದಲ್ಲಿ ನಂಜನ್ನೇ ಕುಡಿದ ನಂಜುಂಡ!
ಹಾಗೇ .. ಈಗಲೂ ನಿನ್ನ ನಂಬಿದ ಜಗಕೆ ಉದ್ಧರಿಸ ಬೇಕಾದ್ದು ನಿನ್ನ ಪಾಲಿಗಿದೆ!
ಏನೋ ಒಂದು ಹಾದಿ ತೋರುವೆ ಅದು ಖಂಡಿತ ಆದರೆ ಈ ಬಾರಿ ನಿನ್ನ ಪ್ರಶ್ನೆ ಪತ್ರಿಕೆ ತುಂಬಾ ಕ್ಲಿಷ್ಟಕರ ವಾಗಿದೆ!

ಹೇ…ಪದ್ಮನಾಭ ನಿನ್ನ ನಂಬಿಕೆಯ
ಇಂತಿ
ಉಮಾ ಭಾತಖಂಡೆ.

Leave a Reply