ದೇವರಿಗೊಂದು ಪತ್ರ (12)

ದೇವರಿಗೊಂದು ಪತ್ರ (12)

ನೀನೆಲ್ಲಾ ಬಲ್ಲ ವಿಧಿ ಬರಹಗಾರ
ಹೊಸ ಹೊಸ ಪಾತ್ರ ಕೊಟ್ಟಾಡಿಸುವ ಸೂತ್ರಧಾರ
ಆದರೂ ಹೇಳುವೆ ನನ್ನೆದೆಯ ತಳಮಳ ಕೇಳು ನೀ ವಿಧಾತ

ಇರುತಿರುತಿರೆ ದುಃಖ ಉಮ್ಮಳಿಸಿ ಬರುತಿದೆ
ಧಾರಾಕಾರ ಕಂಬನಿ ಉಕ್ಕಿ ಹರಿಯುತ್ತಿದೆ
ನೆನಪಾಗಿ ನಿನ್ನ ಹೇ.. ವಿಠಲ

ಹಗಲಿರುಳು ಕನಸುಗಳು ಬೀಳುತಿವೆ ನಿನ್ನದೆ
ನೀನಿಂತು ನಕ್ಕಂತೆ ವೇಣು ಕೈಯಲ್ಲಿ ಹಿಡಿದಂತಿದೆ
ಮನಕೆ ಭ್ರಾಂತಿ ಆದಂತೆ ಹೇ.. ಶ್ಯಾಮಲ

ಇದಾವ ಹುಚ್ಚು ಭಕ್ತಿ ಎಂದಾಡಿಕೊಳುತಿಹರು
ವ್ಯಂಗ್ಯದಲಿ ನಕ್ಕು ಮೂದಲಿಸುತಿಹರು
ನೀನರಿಯದಾ ಮಾತೆ ಇದು ಹೇಳು..ಗಿರಿವರ

ನನ್ನ ಸಂಕಟ ನೀ ಹೇಗೆ ಬಲ್ಲೆ ಹೇಳು
ಪತ್ರ ಓದುವಿಯೊ ಇಲ್ಲವೋ ಎಂಬ ಚಿಂತೆ! ಕೇಳು
ನಿನ್ನ ಧ್ಯಾನ ದೊಳಿರುವವರ ಸಲಹುದಿದಾವಪರಿ ನೀ.. ಹೇಳು ವಲ್ಲಭ?

ನಾ ನಕ್ಕುನಲಿದ ಮರುಕ್ಷಣವೇ ದುಃಖದಲಿ ಮುಳುಗಿಸುವಿ
ಮಾಯೆಯೊಳು ಬಂಧಿಸಿ ಚಿತ್ತ ಚಂಚಲವ ಮಾಡುವಿ
ನಿನ್ನ ಪ್ರೀತಿಯ ಜಾಲ ನಾ ಬಲ್ಲೆ ಹೇ.. ಮುರುಳಿ

ಹೇಳುವುದಿದೆ ನಿನ್ನ ಸೃಷ್ಟಿ ಅದ್ಭುತ ಕುರಿತು
ನೀ ಉತ್ತರವ ಹೇಳು ಪ್ರೇಶ್ನೆಗಳ ಅರಿತು
ಬರೆವ ಪತ್ರಕ್ಕೆ ಉತ್ತರವ ನೀಡೆನುತ ಮತ್ತೆ ಸಿಗುವೆ ಹೇ… ವಸುದೇವಸುತ

ಇಂತಿ
ನಿನ್ನ ಉಮಾ ಭಾತಖಂಡೆ.

Leave a Reply