ದೇವರಾಗುವ ಬದಲು ದೆವ್ವವಾಗುತ್ತಿರುವ ವೈದ್ಯರು
ಕಪ್ಪು ಮೋಡಗಳು ಆಕಾಶವನ್ನೆಲ್ಲ ವ್ಯಾಪಿಸಿ ಗುಟ್ಟಾಗಿ ಗಾಳಿಯಿದ್ದೆಡೆಗೆ ಓಡುತ್ತಿದ್ದರೆ ಮನಸ್ಸಿನಲ್ಲಿ ಅವ್ಯಕ್ತವಾದ ಭಯ ಹುಟ್ಟು ಹಾಕುತ್ತದೆ. ದೈತ್ಯಾಕಾರದ ಕಪ್ಪಾದ ಮೋಡಗಳು ಧರೆಗೆ ಸಮೀಪಿಸುತ್ತಿರುವಂತೆಯೇ ಭೂಮಿಯಲ್ಲಿ ತಂಪಾದ ಹವೆ ಮೂಡಿಬಿಡುತ್ತದೆ. ಮಳೆ ಬಾರದಿದ್ದರೂ ಆ ಕ್ಷಣ ಆಹ್ಲಾದಕರ ಕ್ಷಣ ಎಂದೆನಿಸುತ್ತದೆ. ಹಾಗೇ ವೈದ್ಯನಾದವನು ಕೇವಲ ತನ್ನ ಮಾತಿನಿಂದಲೂ ರೋಗಿಗಳನ್ನು ಸಾಂತ್ವನಗೊಳಿಸಬಲ್ಲ, ಅರ್ಧ ಅನಾರೋಗ್ಯ ಕಡಿಮೆಗೊಳಿಸಬಲ್ಲ.
ಹೋದವಾರದಲ್ಲಿ ನನ್ನ ಗೆಳತಿಯ ತಂಗಿಯ ಸಾವಿನ ಕುರಿತಾಗಿ ಬರೆದ ಲೇಖನವನ್ನೋದಿದ ಪರಿಚಿತರನೇಕರು ಫೋನಾಯಿಸಿದರು. ತಮಗೂ ಕೂಡ ಆ ಆಸ್ಪತ್ರೆಯಿಂದ ಒದಗಿದ ಕೆಟ್ಟ ಅನುಭವಗಳನ್ನು ಬಿಡಿಸಿ ಬಿಡಿಸಿ ಹೇಳುತ್ತಿದ್ದರೆ ನನಗೆ ಈ ವೈದ್ಯ ವೃತ್ತಿಯಲ್ಲಿಯೇ ಅಸಹ್ಯವನ್ನು ಮೂಡಿಸುತ್ತಿತ್ತು.
ನನ್ನ ಪರಿಚಿತರೊಬ್ಬರು ಹೇಳಿದರು. ಅವರು ಆ ಆಸ್ಪತ್ರೆಯಲ್ಲಿ ದಾಖಲಾದಾಗ ದೇಹದಲ್ಲಿ ಉಪ್ಪಿನಂಶ ಕಡಿಮೆಗೊಂಡಾಗ ಉಪ್ಪಿನ ಇಂಜೆಕ್ಷನ್ನನ್ನು ಕೊಟ್ಟರಂತೆ ವೈದ್ಯ ಮಹಾಶಯರು. ಆ ರೋಗಿಯ ಕೈಕಾಲುಗಳೆಲ್ಲ ಬಾತು ಇನ್ನಷ್ಟು ಆರೋಗ್ಯ ಹದಗೆಟ್ಟಿತಂತೆ ಹಾಗೆಯೇ ಇನ್ನೊಬ್ಬರಿಗೆ ಸಕ್ಕರೆಯ ಅಂಶದ ಕೊರತೆಯಾದರೆ ಸಕ್ಕರೆಯ ಇಂಜೆಕ್ಷನ್ನನ್ನು ಕೊಡುವ ಇವರೆಂಥ ಸೀಮೇ ಡಾಕ್ಟರ್ ರೋ? ಅವರಿಗೆಲ್ಲ ದುಡ್ಡಿನ ಥೈಲಿಯೇ ಬೇಕು. ಯಾಕೆಂದರೆ ಅವರು ದುಡ್ಡನ್ನು ಬಂಡವಾಳವಾಗಿಸಿ ವೈದ್ಯಕೀಯ ಕೋರ್ಸನ್ನು ಮುಗಿಸಿ ಬಂದವರು. ಹಾಕಿದ ಬಂಡವಾಳವನ್ನು ಶತಾಯ ಗತಾಯ ಹಿಂತಿರುಗಿ ಪಡೆಯಲೇಬೇಕಲ್ಲವೇ? ಅದಕ್ಕಾಗಿ ಅವರು ಏನೂ ಮಾಡಲೂ ಹೇಸದವರು. [ಎಲ್ಲ ವೈದ್ಯರೂ ಆ ರೀತಿ ಇರದಿದ್ದರೂ ಆ ರೀತಿಯ ಜನರಿಂದ ಇಡೀ ಸಮುದಾಯಕ್ಕೇ ಕಪ್ಪು ಮಸಿ ಹತ್ತುತ್ತದೆ.] ಕೆಲವಾರು ಸಲ ರೋಗಿಯ ನಿಜಸ್ಥಿತಿಯನ್ನು ಅವಲೋಕಿಸದೇ ಕೇವಲ ಸಲೈನ್ ನ್ನು ಏರಿಸುತ್ತಾ ಆತನನ್ನು ತಮ್ಮಲ್ಲಿಯೇ ಇರಿಸಿಕೊಂಡು, ದಿನಗಳನ್ನು ಹೆಚ್ಚಿಸುತ್ತಾ ಹಾಗೇ ಬಿಲ್ಲಿನ ಅಮೌಂಟನ್ನು ಏರಿಸುತ್ತಿರುವುದು ಅವರಿಗೆ (ವೈದ್ಯರಿಗೆ) ರೂಢಿಯಾಗಿರುತ್ತದೆ. ಆ ಬಿಲ್ಲನ್ನು ನೋಡಿಯೇ ರೋಗಿಯ ಹೃದಯ ನಿಂತು ಹೋಗಿರಬೇಕು. ಒಂದು ವೇಳೆ ಹಾಗೇನಾದರೂ ಆದರೆ ರೋಗಿಯ ದೇಹದ ಭಾಗಗಳನ್ನು ತೆಗೆದು ಬೇರೆ ಕಡೆಗೆ ಹೆಚ್ಚಿನ ದುಡ್ಡಿಗೆ ಮಾರಲೂ ಹೇಸದಂಥವರು. ಇವರು ಜನರ ಜೀವನವನ್ನು ಉಳಿಸುವ ವೈದ್ಯರಲ್ಲ. ಯಮರಾಜನಿಗೆ ರಜೆ ಘೋಷಿಸಿ ಅವನ ಕೆಲಸವನ್ನು ಭೂಲೋಕದಲ್ಲಿದ್ದುಕೊಂಡು ಸುಲಿಗೆ ಮಾಡುತ್ತಿರುವ ಸೋಕಾಲ್ಡ್ ಯಮಕಿಂಕರರಿವರು. ನನ್ನ ಮಗಳಿಗೆ ಮೆರಿಟ್ ಸೀಟಿನಲ್ಲಿ ಎಮ್.ಬಿ.ಬಿ.ಎಸ್ ಸೀಟು ಸಿಕ್ಕಾಗ ನಮ್ಮ ಯಜಮಾನರು ಆಕೆಯನ್ನು ಕೂಡಿಸಿ ಕೊಂಡು, ‘ನೀನು ದುಡ್ಡಿನ ಹಿಂದೆ ಬೆನ್ನತ್ತುವ ವೈದ್ಯಳಾಗುವುದಾದರೆ ಈ ಕೋರ್ಸನ್ನು ತೆಗೆದುಕೊಳ್ಳಬೇಡ, ಸೇವೆಯನ್ನು ಲಕ್ಷ್ಯದಲ್ಲಿಟ್ಟರೆ ಮಾತ್ರ ತೆಗೆದುಕೋ’ ಎಂದು ಹೇಳಿದಾಗ ಆಕೆ ಅವರ ಅಪ್ಪನಿಗೆ ಪ್ರಾಮಿಸ್ ಮಾಡಿದಳು. ಈಗ ಆಕೆ ಅದನ್ನೆಲ್ಲ ಹೇಳುತ್ತಿದ್ದರೆ ನಮ್ಮಿಬ್ಬರಿಗೂ ಹೆಮ್ಮೆಯಿಂದ ಬೀಗುವಂತಾಗುತ್ತದೆ. ‘ವೈದ್ಯೋ ನಾರಾಯಣೋ ಹರಿಃ’ ಎಂಬ ಘೋಷವಾಕ್ಯವನ್ನು ಹೇಳಿದಂತಹ ನಾಡು ನಮ್ಮದು. ವೈದ್ಯನಾದವನು ಸಾಕ್ಷಾತ್ ನಾರಾಯಣನೇ ಎಂದು ನಂಬಿದಂತಹ ಸಂಸ್ಕೃತಿ ನಮ್ಮದು. ಮುಖ್ಯವಾಗಿ ವೈದ್ಯವೃತ್ತಿ ಅಪೇಕ್ಷಿಸುವುದು ಸೇವೆ ಮಾತ್ರ. ಪೇಷಂಟನ್ನು ಉಳಿಸುವ ಹಂಬಲ, ಸರಿಯಾದ ಚಿಕಿತ್ಸೆ ಹಾಗೂ ಮಾನಸಿಕ ಬೆಂಬಲ ಇವುಗಳು ಪ್ರತಿಯೊಬ್ಬ ವೈದ್ಯನಲ್ಲೂ ಇರಲೇಬೇಕಾದದ್ದು ಅವಶ್ಯಕ. ಆದರೆ ಮಟೀರಿಯಲಿಸ್ಟಿಕ್ ಜಮಾನಾದಲ್ಲಿ ದುಡ್ಡೇ ದೊಡ್ಡಪ್ಪನಾಗಿದ್ದಾನೆ. ದುಡ್ಡಿನ ಮುಂದೆ ಪೇಶೆಂಟ್ ಉಳಿದರೆಷ್ಟು ಇಲ್ಲದಿದ್ದರೆಷ್ಟು, ತನಗೆ ಬರಬೇಕಾದ ದುಡ್ಡು ಬಂದರೆ ಸಾಕು ಎಂಬ ವಾಂಛೆ ಆತನನ್ನು ಅಧಃಪತನಕ್ಕೆ ನೂಕುತ್ತಿದೆ. ಕೇವಲ ದುಡ್ಡಿಗೋಸ್ಕರ ತಮ್ಮ ತತ್ವಗಳನ್ನೆ ಗಾಳಿಗೆ ತೂರಿದ ವೈದ್ಯರನ್ನು ನಾವಿಂದು ಕಾಣುತ್ತಿದ್ದೇವೆ. ಔಷಧಿ ಕಂಪನಿಗಳಿಂದ ಸಿಗುವ ಕಮೀಷನ್ನಿಗೋಸ್ಕರ ಜರೂರಿಲ್ಲದ ಔಷಧಿಗಳನ್ನು ಬರೆದು ಕೊಡುತ್ತಿರುತ್ತಾರೆ. ಅದರಿಂದಾಗುವ ಸೈಡ್ ಇಫೆಕ್ಟ್ ಗಳಿಗೆ ಅವರು ಜವಾಬ್ದಾರರಲ್ಲ. ಪೇಷಂಟ್ ಇದನ್ನೆಲ್ಲ ತನ್ನ ಕರ್ಮವೆಂಬಂತೆ ಅನುಭವಿಸಬೇಕು. ನಕಲಿ ಹಾಗೂ ಅಸಲಿ ಔಷಧಿಗಳಲ್ಲಿ ನಕಲಿಯದಕ್ಕೆ ಹೆಚ್ಚು ಬೆಲೆ ಇರಿಸಿ ಅಸಲಿಯದನ್ನು ಪಕ್ಕಕ್ಕೆ ಸರಿಸಿ ಮಾರಾಟ ಮಾಡುವ ಅಥವಾ ಮಾರಾಟವನ್ನು ಹೆಚ್ಚಿಸಿಕೊಳ್ಳುವ ಔಷಧಿ ಅಂಗಡಿಗಳೂ ಈ ಪಾಪಕೂಪದಲ್ಲಿ ಶಾಮೀಲು ಒಟ್ಟಿಗೇ ವ್ಯವಸ್ಥೆಯಲ್ಲಿಯೇ ಲೋಪದೋಷಗಳು ಮೆರೆದಾಡುತ್ತಿದ್ದರೆ ಯಾರಿಗೆ ಏನೆನ್ನುವುದು ಅನುಭವಿಸುವುದೊಂದನ್ನು ಬಿಟ್ಟು……….