ದಲಿತರು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದನ್ನು ನಮ್ಮ ಇತಿಹಾಸ ಅಷ್ಟಾಗಿ ಗುರುತಿಸಿಲ್ಲ ಎನ್ನುವುದು ವಿಪರ್ಯಾಸ. ಈ ಲೇಖನ ಬರೆಯಲು ಬಹುದೊಡ್ಡ ಪ್ರೇರಣೆ ಎಂದರೆ ನನ್ನೂರು ಮಲ್ಲಿಗೆವಾಳುವಿನ ಸುತ್ತೇಳು ಹಳ್ಳಿಗಳಲ್ಲಿ ನೈತಿಕ ಬದುಕಿಗೆ ಹೆಸರಾಗಿದ್ದ ನನ್ನಪ್ಪ ಸಿದ್ದಯ್ಯ. ಆತ ಕಠಿಣ ಗಾಂಧಿಮಾರ್ಗಿ. ಜಾತಿಯ ಗಡಿ ದಾಟಿ ಮಾನವೀಯತೆಯೇ ಧರ್ಮವೆಂದು ನಂಬಿದ್ದವರು. ಮನೆಯಲ್ಲಿದ್ದ ವಿವಿಧ ದೇವರ ಫೋಟೊಗಳ ಪೈಕಿ ನನ್ನನ್ನು ಬಹುವಾಗಿ ಸೆಳೆಯುತ್ತಿದ್ದುದು ಗಾಂಧೀಜಿಯ ಫೋಟೊ. ಅಪ್ಪ ಎಲ್ಲಿಗೆ ಹೋಗಬೇಕಾದರೂ ಮೊದಲು ಆ ಫೋಟೊಕ್ಕೆ ನಮಿಸಿದ ನಂತರವೇ ಮುಂದಣ ಹೆಜ್ಜೆ ಇಡುತ್ತಿದ್ದುದು. 1986ರಲ್ಲಿ ಮೈಸೂರಿನ ಮಾನಸಗಂಗೋತ್ರಿಯಲ್ಲಿ ಕನ್ನಡ ಎಂ.ಎ. ಓದುತ್ತಿದ್ದೆ. ನಾನು ಆಗಲೇ ನನ್ನೊಳಗಿನ ಗಾಂಧಿಯ ಒತ್ತಡಕ್ಕೆ ಮಣಿದಿದ್ದು. ಗಾಂಧಿಭವನದಲ್ಲಿ ಡಿಪ್ಲೊಮ ಇನ್ ಗಾಂಧಿಯನ್ ಸ್ಟಡೀಸ್ ಕೋರ್ಸ್ ಮುಗಿಸಿದೆ. ಆಗ ಗಾಂಧಿಭವನದ ನಿರ್ದೇಶಕರಾಗಿದ್ದವರು ಡಾ.ಎಚ್. ಸಂಜೀವಯ್ಯ. ಅವರು ಅಪ್ಪಟ ಗಾಂಧಿವಾದಿ. ಗಾಂಧೀಜಿಗೆ ಸಂಬಂಧಿಸಿದ ಅತ್ಯುತ್ತಮ ಗ್ರಂಥಗಳನ್ನು ನನಗೆ ಓದಲು ಕೊಟ್ಟರು. ಈ ಅಧ್ಯಯನದ ದಾರಿಯಲ್ಲಿ ಮುಂದುವರಿದಂತೆ ನಾಡಿನಾದ್ಯಂತ ದಲಿತ ಸಮುದಾಯದವರು ರಾಷ್ಟ್ರೀಯ ಆಂದೋಲನದಲ್ಲಿ ಬಿಡುಬೀಸಾಗಿ ಪಾಲ್ಗೊಂಡಿರುವುದು ತಿಳಿದುಬಂದಿತು. ಆದರೆ, ದಲಿತರು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದನ್ನು ನಮ್ಮ ಇತಿಹಾಸ ಅಷ್ಟಾಗಿ ಗುರುತಿಸಿಲ್ಲ ಎನ್ನುವುದು ವಿಪರ್ಯಾಸ. ಗಾಂಧಿ ಅವರನ್ನು ಇಲ್ಲಿನ ದಲಿತರೂ ಒಳಗೊಂಡು ಕೆಳಹಂತದ ಸಮುದಾಯಗಳು ಹೇಗೆ ಸ್ವೀಕರಿಸಿದ್ದವು ಎನ್ನುವುದಕ್ಕೆ ನಾನು ಸಂಗ್ರಹಿಸಿದ ಕೆಲವು ವಿವರಗಳು ಇಲ್ಲಿವೆ. ಹಾವೇರಿ ಜಿಲ್ಲೆಯ ಸಂಬೂರ ಸಿದ್ದಪ್ಪ ಕುರುಬ ಸಮುದಾಯಕ್ಕೆ ಸೇರಿದವರು. ಗಾಂಧೀಜಿಯವರ ನೇರ ಶಿಷ್ಯ. ಸ್ವಾತಂತ್ರ್ಯ ಹೋರಾಟಗಾರ. ಅವರು ಗಾಂಧೀಜಿ ಅವರೊಟ್ಟಿಗೆ ಸಬರಮತಿ ಆಶ್ರಮದಲ್ಲಿದ್ದರು. ಮದುವೆಯ ವಯಸ್ಸು ಮೀರುತ್ತಿದ್ದುದರಿಂದ ತಂದೆ–ತಾಯಿ ಮದುವೆಗೆ ಒತ್ತಾಯಿಸುತ್ತಿದ್ದರು. ಸಂಬೂರು ಸಿದ್ದಪ್ಪ, ಗಾಂಧಿಯ ಅನುಮತಿ ಇಲ್ಲದೆ ಬದುಕಿನಲ್ಲಿ ಅವರು ಯಾವುದೇ ನಿರ್ಧಾರ ತೆಗೆದುಕೊಂಡವರಲ್ಲ. ತಂದೆ, ತಾಯಿಯ ಒತ್ತಾಯ ಹೆಚ್ಚಾಯಿತು. ಗಾಂಧೀಜಿ ಬಳಿ ಈ ಒತ್ತಾಯದ ವಿಷಯವನ್ನು ಪ್ರಸ್ತಾಪಿಸಿದರು. ಆಗ ಗಾಂಧೀಜಿ, ‘ನೀನು ಮದುವೆ ಆಗು. ಕಡ್ಡಾಯವಾಗಿ ಹರಿಜನ ಹುಡುಗಿಯನ್ನೇ ಮದುವೆ ಆಗಬೇಕು‘ ಎಂದು ಷರತ್ತು ವಿಧಿಸಿದರು. ತಂದೆ–ತಾಯಿಗೆ ಈ ವಿಷಯ ಮುಟ್ಟಿಸಿದರು. ಅವರಿಬ್ಬರೂ ಒಪ್ಪಲಿಲ್ಲ. ‘ಮದುವೆಯಾದರೆ, ಗಾಂಧೀಜಿಯ ಆಶಯದಂತೆ ಹರಿಜನ ಹೆಣ್ಣನ್ನೇ ಮದುವೆಯಾಗುತ್ತೇನೆ. ನೀವು ಒಪ್ಪದಿದ್ದರೆ ಮದುವೆ ಆಗುವುದಿಲ್ಲ’ ಎಂದರು ಸಿದ್ದಪ್ಪ. ತೀರಾ ಹಟ ಹಿಡಿದರೆ ಮಗ ಎಲ್ಲಿ ಮದುವೆಯಾಗದೆ ಹಾಗೆಯೇ ಉಳಿದುಬಿಡುತ್ತಾನೋ ಎಂಬ ಆತಂಕ ತಂದೆ–ತಾಯಿಗೆ ಕಾಡಿತು. ಕೊನೆಗೂ ಅವರು ಸಮ್ಮತಿಸಿದರು. ಹೀಗೆ, ಗಾಂಧೀಜಿ ತಮ್ಮ ಜೀವನದುದ್ದಕ್ಕೂ ಯಾವುದನ್ನು ಚಿಂತಿಸಿದ್ದರೋ, ಅದನ್ನು ಕೆಳಸಮುದಾಯದ ಹಲವರು ಪರಮಮೌಲ್ಯವಾಗಿ ಸ್ವೀಕರಿಸಿದ್ದಕ್ಕೆ ಹಲವು ನಿದರ್ಶನಗಳಿವೆ. 1942ರ ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭ. ಬ್ರಿಟಿಷರು ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಶ್ರೀಮಂತ ಮುಖಂಡರ ಮನೆಗಳನ್ನು ಪೊಲೀಸರ ಮೂಲಕ ದಾಳಿ ಮಾಡಿಸುತ್ತಿದ್ದರು. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಕುಟುಂಬದ ಮೇಲೂ ದಾಳಿ ನಡೆಯಿತು. ಉತ್ತರಕನ್ನಡ ಜಿಲ್ಲೆಯ ರಾಮಕೃಷ್ಣ ಹೆಗಡೆಯವರ ಮನೆಯಲ್ಲಿ ಆಗ ಕೆಲಸ ಮಾಡುತ್ತಿದ್ದ ದಲಿತ ಮಹಿಳೆಯ ಹೆಸರು ಲಕ್ಷ್ಮಿ. ಆಕೆ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಗೌಪ್ಯವಾಗಿ ಚೀಲದೊಳಕ್ಕೆ ತುರುಕಿ, ಅವರ ಮನೆಯ ಅಡಿಕೆ ತೋಟದಲ್ಲಿ ಹೂತುಬಿಡುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಗುವವರೆಗೂ ಹೂತಿಟ್ಟ ಆ ನಿಧಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಾರೆ. ರಾಮಕೃಷ್ಣ ಹೆಗಡೆ ಕುಟುಂಬಕ್ಕೆ ಈ ವಿಷಯ ತಿಳಿದಿರುವುದಿಲ್ಲ. ಎಲ್ಲರ ಮನೆಯ ಚಿನ್ನಾಭರಣವನ್ನು ಪೊಲೀಸರು ತೆಗೆದುಕೊಂಡು ಹೋದಂತೆ ‘ನಮ್ಮದೂ ಹೋಯಿತು, ಹೋಗಲಿ ಬಿಡಿ’ ಎಂದು ಸುಮ್ಮನಾಗುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಆ ಮಹಿಳೆಯು ಹೂತಿಟ್ಟಿದ್ದ ಚಿನ್ನಾಭರಣಗಳಿದ್ದ ಚೀಲವನ್ನು ಜೋಪಾನವಾಗಿ ತಂದು ಹೆಗಡೆ ಅವರ ಕುಟುಂಬಕ್ಕೆ ಒಪ್ಪಿಸುತ್ತಾರೆ. ಮುಗ್ಧವಾಗಿ ಗಾಂಧೀಜಿಯ ಪ್ರಭಾವಕ್ಕೆ ಒಳಗಾಗಿದ್ದ ಆ ದಲಿತ ಮಹಿಳೆ ಸ್ವಾತಂತ್ರ್ಯ ಚಳವಳಿಯ ಆ ಕಾಲಘಟ್ಟದಲ್ಲಿ ಈ ಬಗೆಯ ಧೈರ್ಯ, ನೈತಿಕತೆ, ಪ್ರಾಮಾಣಿಕತೆ ಮೆರೆದಿದ್ದು ಇತಿಹಾಸಕ್ಕೆ ಈಗ ನೆನಪಿಲ್ಲ. ದಲಿತರೇ ಹೆಚ್ಚಿರುವ ಮೈಸೂರಿನ ಅಶೋಕಪುರಂಗೆ ಗಾಂಧೀಜಿ ಭೇಟಿ ನೀಡಿದ್ದು 1924ರಲ್ಲಿ. ಸಿದ್ಧಾರ್ಥ ಹೈಸ್ಕೂಲ್ ಹಿಂಭಾಗದಲ್ಲಿದ್ದ ಹಾಲಿನ ಕೇಂದ್ರ ಉದ್ಘಾಟಿಸಿ ಅವರು ಭಾಷಣ ಮಾಡಿದ್ದರಂತೆ. ಭಾಷಣ ಕೇಳಿದ ದಲಿತ ಮಹಿಳೆಯೊಬ್ಬರು ‘ಮಹಾತ್ಮರೇ ನಮ್ಮ ಮನೆಗೆ ಬಂದು ಒಂದು ಲೋಟ ನೀರು ಕುಡಿಯಿರಿ’ ಎಂದು ಕೇಳಿಕೊಂಡರಂತೆ. ಗಾಂಧೀಜಿಯು ಆಕೆಯ ಮನೆಗೆ ಹೋಗಿ ನೀರು ಕುಡಿದರಂತೆ. ಬಳಿಕ ಆಕೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ದೇಣಿಗೆಯಾಗಿ ತನ್ನ ಮೈಮೇಲಿದ್ದ ಒಡವೆಗಳನ್ನು ಕಳಚಿಕೊಟ್ಟಳಂತೆ. ಮೈಸೂರು ಮಹಾರಾಜರಿಗೆ ದಲಿತರ ಮೇಲೆ ಅಪಾರ ಅಭಿಮಾನ ಇತ್ತು ಎಂಬುದಕ್ಕೆ ಹಲವು ದಾಖಲೆಗಳಿವೆ. 1897ರಲ್ಲಿ ಮೈಸೂರಿನ ಮರದ ಅರಮನೆಗೆ ಬೆಂಕಿ ಬಿತ್ತು. ಪ್ರಾಣದ ಹಂಗು ತೊರೆದು ಬೆಂಕಿ ನಂದಿಸಿ ರಾಜಪರಿವಾರದವರನ್ನು ರಕ್ಷಣೆ ಮಾಡುವಲ್ಲಿ ಅಸ್ಪೃಶ್ಯರು ಪ್ರಮುಖಪಾತ್ರವಹಿಸಿದ್ದರು ಎಂಬುದನ್ನು ರಾಜಮನೆತನದ ಹಿರಿಯ ತಲೆಮಾರಿನವರು ನೆನಪಿಸಿಕೊಳ್ಳುತ್ತಾರೆ. ಆಗ ಅರಮನೆಯನ್ನು ಗಂಡಾಂತರದಿಂದ ಪಾರು ಮಾಡಿದವರು, ಅಶೋಕಪುರಂ ಹಾಗೂ ಗಾಂಧಿನಗರ ಬಡಾವಣೆಯ ದಲಿತ ಸಮುದಾಯದರು. ಗಾಂಧೀಜಿ ಅವರು ಬದನವಾಳು, ತಗಡೂರು ಮತ್ತು ಮೈಸೂರಿಗೆ ಭೇಟಿ ನೀಡಿದ್ದಾಗ ಮಹಾರಾಜರ ಮನವಿಯಂತೆ ಮೈಸೂರಿನಲ್ಲಿ ಉಳಿದುಕೊಂಡಿದ್ದರು. ಮಹಾರಾಜರೊಂದಿಗೆ ಚರ್ಚಿಸಿ ದಲಿತರೇ ಹೆಚ್ಚು ವಾಸಿಸುವ ಗಾಂಧಿನಗರಕ್ಕೂ ಭೇಟಿ ನೀಡಿದ್ದರು. ಈಗಿನ ಗಾಂಧಿನಗರದ ಮೊದಲ ಹೆಸರು ಜಲಪುರಿ. ಅಲ್ಲಿನ ವೀರನಗರಿಯಲ್ಲಿದ್ದ ದಲಿತರ ಬಡಾವಣೆಗೆ ಗಾಂಧೀಜಿ 1934ರಲ್ಲಿ ಭೇಟಿ ನೀಡಿದ್ದರು. ಗಾಂಧೀಜಿಯನ್ನು ಬಡಾವಣೆಗೆ ಕರೆದೊಯ್ಯಲು ಮೈಸೂರು ಮುನಿಸಿಪಾಲಿಟಿಯ ಆಗಿನ ಸದಸ್ಯ, ಗಾಂಧಿ ಅಭಿಮಾನಿಯಾಗಿದ್ದ ಜೋಗಿಸಿದ್ದಯ್ಯ ತುಂಬಾ ಆಸಕ್ತಿವಹಿಸಿದ್ದರು. ಗಾಂಧೀಜಿ ಅವರ ಭೇಟಿಯ ನೆನಪಿಗೆ ‘ವೀರನಗರಿ’ ಎಂದಿದ್ದ ಹೆಸರನ್ನು ಗಾಂಧಿನಗರ ಎಂದು ಬದಲಿಸಲಾಯಿತು. ಗಾಂಧೀಜಿ ಅಂದು ಅಲ್ಲಿನ ನಿವಾಸಿಗಳಿಗೆ ದುಶ್ಚಟದಿಂದ ದೂರವಿರಲು ಸಲಹೆ ನೀಡಿದರಂತೆ. ದೈಹಿಕ ಆರೋಗ್ಯ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸಲಹೆಯಿತ್ತರು. ಅಲ್ಲಿನ ದಲಿತರು ಅವರ ಸಲಹೆಯನ್ನು ಚಾಚೂತಪ್ಪದೆ ಅನುಸರಿಸುತ್ತಿದ್ದುದ್ದನ್ನು ಅಲ್ಲಿನ ಹಿರೀಕರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಇದಕ್ಕೆ ಪುರಾವೆಯಾಗಿ ಗಾಂಧಿನಗರದಲ್ಲಿ ದೊಡ್ಡಗರಡಿ ಮನೆ, ಸಣ್ಣ ಗರಡಿಮನೆ, ಹತ್ತು ಗರಡಿಮನೆ, ಹೊಸ ಗರಡಿಮನೆಗಳಿವೆ. 1938ರಲ್ಲಿ ಗಾಂಧಿನಗರದಲ್ಲಿ ಸ್ಥಾಪನೆಯಾದ ಶಿವಯೋಗಿ ಮಠ ಇಂದಿಗೂ ಅಲ್ಲಿದೆ. ಇದಕ್ಕೆ ಉರಲಿಂಗಿಪೆದ್ದಿ ಪ್ರಿಯ ಮಠ ಎಂದೂ ಕರೆಯುತ್ತಾರೆ. ಗಾಂಧಿನಗರದ ದಲಿತರು ಟಿಪ್ಪುಸುಲ್ತಾನ್ ಕಾಲದಿಂದಲೂ ಸೈನಿಕರಾಗಿ ಸೇವೆ ಸಲ್ಲಿಸಿರುವ ಬಗ್ಗೆ ಅಲ್ಲಿನ ಹಿರೀಕರು ಮಾಹಿತಿ ನೀಡುತ್ತಾರೆ. ಚಿಕ್ಕಮಂಟಯ್ಯ (ಗುರುಬಸವಯ್ಯ) ಅವರದು ಆ ಕಾಲದ ದೊಡ್ಡ ಜಮೀನ್ದಾರಿ ಕುಟುಂಬ. ಇವರ ತಮ್ಮ ರಾಚಪ್ಪ. ಈ ಕುಟುಂಬ ಸಮಾಜ ಸೇವೆಗೂ ಹೆಸರಾಗಿತ್ತು. ಗಾಂಧೀಜಿಯ ಪ್ರಭಾವಕ್ಕೆ ಒಳಗಾದ ಈ ಮನೆತನ ಸಾವಿರಾರು ಎಕರೆ ಭೂಮಿಯನ್ನು ಬಡವರಿಗೆ ಹಂಚಿಕೊಟ್ಟದ್ದನ್ನು ಅಲ್ಲಿನ ಜನತೆ ನೆನಪಿಸಿಕೊಳ್ಳುತ್ತಾರೆ. ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಸೋಸಲೆ ಸಿದ್ದಪ್ಪ ಪ್ರಸಿದ್ಧ ಕವಿ. ಸಾಹಿತ್ಯ ಕೃಷಿ ಮಾಡಿದ ಮೊದಲ ತಲೆಮಾರಿನ ಪ್ರಮುಖ ದಲಿತ ಲೇಖಕ. ಶಿಕ್ಷಕರಾಗಿದ್ದ ಅವರು ತಮ್ಮ ಕವನ ಸಂಕಲನಕ್ಕೆ ಇಟ್ಟಿರುವ ‘ಗೋವುಗಳ ಗೋಳಾಟ’ ಎಂಬ ಶೀರ್ಷಿಕೆಯೇ ಗಾಂಧೀಜಿಯ ಪ್ರಭಾವಕ್ಕೆ ಸಾಕ್ಷಿ. ‘ಹಳೇ ಮೈಸೂರು ಭಾಗದ ದಲಿತರು ಆ ದಿನಗಳಲ್ಲಿ ಗಾಂಧೀಜಿಯ ಪ್ರಭಾವದಿಂದ ಅಕ್ಷರ ಕಲಿಯಲು ಮುಂದಾದರು. ನಮಗೂ ಸಾಮಾಜಿಕ ಅರಿವು ಮೂಡತೊಡಗಿತು. ಇದರಿಂದಾಗಿ ಏಕವಚನದಲ್ಲಿದ್ದ ನಮ್ಮವರ ಹೆಸರುಗಳು ಬಹುವಚನಕ್ಕೆ ರೂಪಾಂತರ ಹೊಂದಿದವು. ಇದೆಲ್ಲಾ ಸಾಧ್ಯವಾಗಿದ್ದು ಗಾಂಧಿ ಎನ್ನುವ ಮಹಾತ್ಮನಿಂದಲೇ’ ಎಂದು ನೆನಪಿಗೆ ಜಾರುತ್ತಾರೆ. ಹಳೆಯ ಮೈಸೂರು ಪ್ರಾಂತ್ಯ, ಮುಂಬೈ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಮಂಗಳೂರು ಭಾಗದಲ್ಲೂ ದಲಿತ ಗಾಂಧಿಮಾರ್ಗಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರು ಇದ್ದಾರೆ. ಬೆಳಗಾವಿಯ ಬಾಬುರಾವ್ ಹುಗಿರೆ, ಕಲಬುರ್ಗಿಯ ಶರಣಪ್ಪ ಪ್ರಜಲಪುರ, ಬಳ್ಳಾರಿಯ ಛಲವಾದಿ ಈಶಪ್ಪ, ಬೀದರ್ನ ಕಾಶೀನಾಥ ಪಂಚಶೀಲ ಗವಾಯಿ, ಮಂಗಳೂರಿನ ತಣ್ಣೀರುಬಾವಿ ಕೃಷ್ಣ ಅವರಲ್ಲಿ ಪ್ರಮುಖರು. ಹಾಸನ ಜಿಲ್ಲೆಯ ಪ್ರಸಿದ್ಧ ದಲಿತ ಕವಿ ಡಿ. ಗೋವಿಂದದಾಸ್ ಗಾಂಧೀಜಿ ಕುರಿತು ಹತ್ತಾರು ಕವಿತೆಗಳನ್ನು ಬರೆದಿದ್ದಾರೆ. ಅವರು ‘ಹರಿಜನಾಭ್ಯುದಯ’ ಎಂಬ ಕವನಸಂಕಲನ ಪ್ರಕಟಿಸಿದ್ದು 1937ರಲ್ಲಿ. ಈ ಕವನ ಸಂಕಲನದ ಶೀರ್ಷಿಕೆಯಲ್ಲಿಯೇ ಗಾಂಧೀಜಿಯ ಪ್ರಭಾವ ಎದ್ದುಕಾಣುತ್ತದೆ. ಚಿತ್ರದುರ್ಗ ಜಿಲ್ಲೆಯ ಕಡಬನಕಟ್ಟೆಯ ರಾಮಣ್ಣ ಬಟ್ಟೆ ವ್ಯಾಪಾರಿ. ಖಾದಿಧಾರಿಗಳಾಗಿದ್ದ ಅವರು ಸ್ವಾತಂತ್ರ್ಯಪೂರ್ವದಲ್ಲಿಯೇ ಊರೂರು ಸುತ್ತಿ ಸೈಕಲ್ ಮೇಲೆ ಖಾದಿ ಬಟ್ಟೆಯನ್ನು ವ್ಯಾಪಾರ ಮಾಡುತ್ತಿದ್ದರು. ಗಾಂಧೀಜಿ ಪ್ರತಿಪಾದಿಸಿದ ಸತ್ಯ, ಸರಳತೆ, ದೇಸಿಯತೆ, ಅಹಿಂಸೆಯ ತತ್ವಗಳನ್ನು ಅನುಸರಿಸಿ ಬದುಕಿರುವ ದಲಿತ ಮತ್ತು ಕೆಳಸಮುದಾಯದ ಸಂಖ್ಯೆ ದೊಡ್ಡದು. ದಲಿತರ ಕೇರಿಗಳಿಗೆ ಅಕ್ಷರದ ಬೆಳಕು ತಲುಪುವ ಮೊದಲೇ ಗಾಂಧಿ ಆ ಕೇರಿಗಳನ್ನು ತಲುಪಿದ್ದು ಗಮನಾರ್ಹ. ಅಕ್ಷರ ಕಲಿತ ಮೊದಲ ತಲೆಮಾರಿನ ದಲಿತರು ಗಾಂಧೀಜಿಯ ಪ್ರಭಾವಕ್ಕೆ ಪ್ರಾಮಾಣಿಕವಾಗಿ ಒಳಗಾದವರು. ಅವರಲ್ಲಿ ಶಿಕ್ಷಕರು, ಕೃಷಿಕರು, ಸಮಾಜ ಸೇವಕರು, ಜಮೀನುದಾರರು ರಾಜಕಾರಣಿಗಳು, ಸಂಘ–ಸಂಸ್ಥೆಗಳನ್ನು ಕಟ್ಟಿದ ದಾನಿಗಳ ಸಂಖ್ಯೆ ದೊಡ್ಡದಿದೆ.
courtsey:prajavani.net
https://www.prajavani.net/artculture/article-features/bhanu-gandhi-700397.html