ಕಾಲೇಜಿನ ಕಾಲ ಸುವರ್ಣ ಕಾಲ
ಕಾಲೇಜಿನ ನನೆಪು ಬಂದಾಗಲೆಲ್ಲ ಒಂಥರದ ನವಿರು ಭಾವನೆ ಮನಸ್ಸಿನಲ್ಲಿ ಮೂಡಿ ಮರೆಯಾಗುವುದು. ಕಾಲೇಜ ಲೈಫ್ ಎಂದರೆ ಗೋಲ್ಡನ್ ಲೈಫ್ ಎನ್ನುವುದು ಉತ್ಪ್ರೇಕ್ಷೆಯೇನಲ್ಲ. ಆ ವೇಳೆಯಲ್ಲಿ ಕಲಿಯುವಾಗ ಅಂಥ ಸೀರಿಯಸ್ಸಾಗಿರದಿದ್ದರೂ ಜೀವನದಲ್ಲಿ ಕಲಿಯಬೇಕಾಗುವ ಪಾಠ ಸಾಕಷ್ಟು ಸಿಕ್ಕುತ್ತವೆ. ಕೇವಲ ಪುಸ್ತಕದಿಂದ ಮಾತ್ರವೇನಲ್ಲ ಗೆಳತಿಯರ ನಡಾವಳಿ, ಮಾಸ್ತರರು, ಪರಿಸರ, ಮುಂತಾದವುಗಳು ನಮಗೊಂದೊಂದು ಪಾಠ ಕಲಿಸುತ್ತವೆ ಎಂದರೆ ಸುಳ್ಳೇನಲ್ಲ.
ಹೊಸದಾಗಿ ಕಾಲೇಜು ಮೆಟ್ಟಿಲು ಹತ್ತಿದಾಗ ಎಂಥದೋ ಅಳುಕು. ಅಷ್ಟೇನೂ ದೊಡ್ಡ ಸಿಟಿಯಾಗಿರದ ನಮ್ಮೂರಿನ ಕಾಲೇಜಿಗೆ ನಡೆದುಕೊಂಡೇ ಹೋಗಬೇಕಾಗುತ್ತಿತ್ತು. ಎಷ್ಟೇ ದೂರಾದರೂ ಪರ್ವಾಗಿಲ್ಲ. ಬಸ್ಸು ರಿಕ್ಷಾದವರ ಹಾವಳಿ ಅಷ್ಟೇನಿರಲಿಲ್ಲ. ಹುಡುಗಿಯರೂ ಕೂಡ ಹುಡುಗರ ಕುಚೆಷ್ಟೆಗೆ ಕುಹಕತೆಗೆ ಎದುರುತ್ತರ ನೀಡದೇ ತಮ್ಮ ಶಾಲೀನತೆಯಲ್ಲಿಯೇ ಇರುತ್ತಿದ್ದರು. ಹುಡುಗರೊಂದಿಗೆ ಚೇಷ್ಟೇಯಾಗಲೀ ಮಾತಾಗಲೀ ದೂರದ ಮಾತೇ ಸರಿ. ಮನೆಯಲ್ಲಿಯೂ ಕೂಡ ಹುಡುಗರೊಂದಿಗಿನ ಸಲುಗೆ ಬೇಡ ಎಂಬ ತಾಕೀತು ಮೇಲಿಂದ ಮೇಲಿರುತ್ತಿದ್ದರಿಂದ ನಾವೆಲ್ಲ ಸ್ವಲ್ಪ ಸೀರಿಯಸ್ಸಾಗಿಯೇ ಇರುತ್ತಿದ್ದೆವು. ಕೆಲವೊಮ್ಮೆ ಕ್ಲಾಸಿನಲ್ಲಿ ನಡೆದ ಘಟನೆಗಳು ಈಗ ನೆನಪಾದರೆ ನಗೆಯ ಬುಗ್ಗೆಯನ್ನು ಎಬ್ಬಿಸುತ್ತವೆ.
ಆದಿನ ನಾವೂ ಕಾಲೇಜಿಗೆ ಹೊಸಬರು. ನಮಗೆ ಕಲಿಸಲೆಂದು ಬಂದವರೂ ಹೊಸದಾಗಿ ಮೊದಲ ಅಪಾಯಿಂಟಮೆಂಟ್ ತೆಗೆದುಕೊಂಡು ನಮ್ಮ ಕಾಲೇಜಿಗೆ ಬಂದವರವರು. ಅವರಿಗೆ ಕಲಿಸುವ ಎಕ್ಸಪೀರಿಯನ್ಸ್ ಇರದ್ದರಿಂದ ಅವರು ಕ್ಲಾಸಿಗೆ ಬಂದಾಗ ಅವರ ಕೈಕಾಲಲ್ಲಿ ಸಣ್ಣಗೆ ನಡುಕ. ಧ್ವನಿಯಲ್ಲಿ ಅಳುಕು. ಏನು ಹೇಳಲೂ ತೋಚದಂತೆ ಸ್ಥಿತಿ. ಕ್ಲಾಸಿನಲ್ಲಿದ್ದ ಹುಡುಗರಿಗೋ ಮಂಗನಿಗೆ ಮದ್ಯ ಕುಡಿಸಿದಂತೆ ಆಗಿತ್ತು. ಕ್ಲಾಸಿನಲ್ಲಿ ನಗೆಯು ತುಂಬಿತು. ಕುಚೇಷ್ಟೆ ಶುರುವಾಯಿತು. ಕಾಗದದ ಬಾಣಗಳು ಹಾರಾಡಿದವು. ಲಾಸ್ಟ್ ಬೆಂಚಿನ ಹುಡುಗರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶಿಳ್ಳೆ ಹೊಡೆಯತೊಡಗಿದರು. ಮೈಯೆಲ್ಲ ಬೆವೆತ ಲೆಕ್ಚರರು ಅಲ್ಲಿ ನಿಲ್ಲಲಾಗದೇ ಹೇಳಲಾಗದೇ ತಿರುಗಿ ಹೋಗೇಬಿಟ್ಟರು. ಮುಂದಿನ ಕ್ಲಾಸಿನಲ್ಲಿ ಅದೇ ಸರ್ ಒಳ್ಳೆತ ತಯಾರಿಯಿಂದ ಬಂದು ಹಿಂದೆ ಕುಳಿತು ಗದ್ದಲ ಮಾಡುತ್ತಿದ್ದ ಪಂಚಪಾಂಡವರನ್ನು ಮುಂದೆ ಕೂಡಿಸಿ ಪ್ರತಿಯೊಂದು ಪ್ರಶ್ನೆಯನ್ನು ಅವರಿಗೇ ಕೇಳತೊಡಗಿದಾಗ ಹೇಳಲಿಕ್ಕೆ ಆಗದೆ ಅವಮಾನಿತಗೊಂಡ ಪುಂಡ ಹುಡುಗರು ಓದಿ ಬರತೊಡಗಿದರು. ಹೀಗಾಗಿ ಪಾಠದಲ್ಲಿ ಆಸಕ್ತಿ ತೋರತೊಡಗಿದರು. ಇದರಿಂದ ಕ್ಲಾಸೇ ಶಾಂತವಾಯಿತು ಎಂದು ಹೇಳಬಹುದು. ಅದೇ ಸರ್ ಇಷ್ಟು ಚೆನ್ನಾಗಿ ಕಲಿಸತೊಡಗಿದರಲ್ಲ ಅವರು ಎಲ್ಲರ ಅಚ್ಚುಮೆಚ್ಚಿವವರಾದರು.
ಮತ್ತೊಮ್ಮೆ ಮೇಡಂ ಒಬ್ಬರು ಕನ್ನಡ ಕಲಿಸುತ್ತಿದ್ದರು. ಅವರೂ ಹೊಸದಾಗಿಯೇ ನೇಮಕಗೊಂಡಿದ್ದರು. ಅವರದು ಒಂತರ ಪೀಚಲು ಧ್ವನಿ. ಹುಡುಗರಿಗೆ ಅಷ್ಟೇ ಸಾಕು ಮೇಡಂಗೆ ಕಾಡಿಸಲು, ಮತ್ತೆ ಇವರ ಗದ್ದಲದ ವರಸೆ ಶುರುವಾಯಿತು. ಆದರೆ ಅವರು ಪ್ರೀತಿಯಿಂದ ತಿಳಿಹೇಳಲು ಬಂದರೆ ಕುಹಕ ನಗೆ ನಗುವರು. ಏನಾದರೂ ಚೇಷ್ಟೇ ಮಾಡುವವರು. ಸುಮ್ಮನೇ ಏನಾದರೂ ಕಿಲಾಡಿ ಪ್ರಶ್ನೆ ಹಾಕುವರು. ಅವರು ಆ ಪ್ರಶ್ನೆಗೆ ತಾಳ್ಮೆಯಿಂದ ವಿಸ್ತರಿಸುತ್ತಿರುವಾಗಲೇ ಪುಸ್ತಕವನ್ನು ಬೆಂಚಿನಿಂದ ಕೆಳಗೆ ಬೀಳಿಸಿ ಅವರ ಲಕ್ಷ್ಯವನ್ನು ಸೆಳೆಯುವುದು. ವಿವರಿಸುವುದಕ್ಕೆ ಈ ರೀತಿ ತಡೆ ಒಟ್ಟುವರು. ಹೀಗೆಲ್ಲಾ ಮಾಡುತ್ತಿದ್ದಾಗ ಮೇಡಂರ ತಾಳ್ಮೆಗೆ ಪರೀಕ್ಷೆ ಉಂಟಾಗುತ್ತಿತ್ತು. ಒಂದಿನವಂತೂ ರೋಸಿ ಹೋದ ಮೇಡಂ ತಮ್ಮ ಹಣೆ ಹಣೆ ಜಜ್ಜಿಕೊಳ್ಳುತ್ತಾ, ‘ಅಯ್ಯೋ ಕರ್ಮ, ಕರ್ಮ, ನಿಮಗೆ ಸುಮ್ಮನೇ ಕೂತುಕೊಳ್ಳಲಿಕ್ಕೆ ಏನು ಬೇಕ್ರೋ’ ಎಂದು ಜೋರಾಗಿಯೇ ತಮ್ಮ ಪಿಚಲು ಕಂಠದಿಂದ ಚೀರಿದರು. ಒಬ್ಬ ಹುಡುಗ (ಪಂಚಪಾಂಡವರಲ್ಲಿಯ ಒಬ್ಬವ) ಎದ್ದು ನಿಂತು ಗಂಭೀರದಿಂದ, ‘ನಮಗೆ ಛೋಪಡೇನ ಅಂಗಡಿಯ ಪೇಡೆ ಮತ್ತು ಚೂಡಾ ಬೇಕ್ರಿ ಮೇಡಂ’ ಎಂದಾಗ ಮೇಡಂ ಸುಸ್ತೋ ಸುಸ್ತು. ಯಾಕೆಂದರೆ ಜಮಖಂಡಿ ಊರ ಮಧ್ಯದಲ್ಲಿದ್ದ ಛೋಪಡೇನ ಅಂಗಡಿ ಪೇಡೆ ಹಾಗೂ ಚೂಡಾ ಭಾಳ ಫೇಮಸ್ಸು, ಯಾರೇ ಆ ಊರಿಗೆ ಬಂದರೂ ಅದನ್ನೇ ಒಯ್ಯುವವರು. ಆ ಅಂಗಡಿಯ ಎದುರಿಗೆ ಉದ್ದಕ್ಕಿದ್ದ ಕಟ್ಟೆಯ ಮೇಲೆ ಈ ಚಂಡಾಳಿ ಚೌಕಳಿ ಸಂಜೆಯ ಹೊತ್ತು ಠಿಕಾಣಿ ಹೂಡಿತ್ತು. ಆಗ ಈ ಮೇಡಂ ತಮ್ಮ ಪತಿಯೊಂದಿಗೆ ಆ ಅಂಗಡಿಗೆ ಬಂದು ಒಂದು ಕಿಲೋ ಪೇಡೆ ಹಾಗೂ ಚೂಡಾ ಖರೀದಿ ಮಾಡಿದ್ದರು. ಅದನ್ನು ನೋಡಿಯೇ ಆ ಭೂಪ ಹಾಗೆ ಕೇಳಿದ್ದ. ಅದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳದೇ ಮೇಡಂ ‘ಹಂಗಾರ ಮನೀ ಕಡೆ ಬಾ ಕೊಡ್ತೀನಿ’ ಎಂದು ಹೇಳಿ ತಾವೂ ನಗತೊಡಗಿದರು. ಮುಂದಿನ ಕ್ಲಾಸಿಗೆ ಬಂದ ಕೂಡಲೇ, ‘ಯಾಕೋ ಪೇಡೆ, ಚೂಡಾ ತೊಗೊಳ್ಳಾಕ ಬಂದೇ ಇಲ್ಲ,’ ಅಂತ ಅವರೇ ಚಂಡಾಳ ಚೌಕಳಿಗೆ ಪ್ರಶ್ನೆ ಹಾಕಿ ಕಾಡಿಸತೊಡಗಿದಾಗ ಇವೆಲ್ಲಾ ತೆಪ್ಪಗಾದವು. ಮುಂದೆ ಆ ಮೇಡಂ ಯಾವುದೇ ಹಮ್ಮು ಬಿಮ್ಮು ಇಲ್ಲದೇ ಎಲ್ಲರಿಗೂ ಪ್ರಿಯರಾಗಿ ಉಳಿದರು.
ವಾಣಿಜ್ಯ ಶಾಸ್ತ್ರವನ್ನು ಕಲಿಸುವ ಮಾಸ್ತರರೊಬ್ಬರಿದ್ದರು. ಅವರು ಕಲಿಸುತ್ತಿರುವಾಗ ಉದಾಹರಣೆಗೆ ಕೊಡಲು ಬಸವಣ್ಣನ ವಚನವನ್ನೋ ಸರ್ವಜ್ಞನ ಉಕ್ತಿಯನ್ನೋ ಹೇಳುವುದು ಅಥವಾ ವಿದ್ಯಾರ್ಥಿಗಳಿಂದ ಕೇಳುವುದು ಸಾಮಾನ್ಯವಾಗಿತ್ತು. ಹಾಗೇ ಒಂದು ವಾಣಿಜ್ಯಶಾಸ್ತ್ರದಲ್ಲಿ ಬರುವ money lending (ಸಾಲ ತೆಗೆದುಕೊಳ್ಳುವ) ಬಗ್ಗೆ ವಿವರಿಸುತ್ತಿದ್ದರು. ಹಾಗೇ ವಿವರಣೆ ಕೊಡುತ್ತಾ ಹದಿನಾರನೆ ಶತಮಾನದಲ್ಲಿ ಆಗಿ ಹೋದ ಸರ್ವಜ್ಞ ಕೂಡ ಸಾಲದ ಬಗ್ಗೆ ಪಂಕ್ತಿ ಹೇಳಿದ್ದಾನೆ. ನಿಮಗ್ಯಾರಿಗಾದರೂ ಗೊತ್ತೋ ಎಂದು ಕೇಳಿದಾಗ, ಕೊನೆಯ ಬೆಂಚಿನ ಹುಡುಗ ಎದ್ದು ನಿಂತು, ‘ನಾ ಹೇಳ್ತೀನ್ರೀ ಸರ್’ ಎಂದು ಕೂಗಿದ. ಆಗ ಸರ್ ‘ಗುಡ್ ಹೇಳು’ ಎಂದರು. ಆಗ ಆತ ರಾಗವಾಗಿ, ‘ಸಾಲವನು ಕೊಂಬಾಗ ಹಾಲೋಹರನುಂಡಂತೆ ಸಾಲಿಗರು ಬಂದು ಕೇಳಿದಾಗ ಕುಂಡಿಗೆ ಚೇಳು ಕಡಿದಂತೆ ಸರ್ವಜ್ಞ’ ಎಂದು ಬಿಡಬೇಕೆ. ಇಡೀ ಕ್ಲಾಸಿಗೆ ಕ್ಲಾಸೇ ನಗೆಗಡಲಲ್ಲಿ ಮುಳುಗಿದರೆ ಸರ್ ಕೂಡ ನಮ್ಮ ನಗೆಯಲ್ಲಿ ಶಾಮೀಲಾಗಬೇಕಾಯಿತು.
ಇನ್ನೊಬ್ಬ ಮಾಸ್ತರರಂತೂ ಪುರ್ತಿ ಬಾಯಿಪಾಠ್ ಮಾಡಿಕೊಂಡು ಬಂದಿರುತ್ತಿದ್ದರು. ಹಾಗೇ ಹೇಳುತ್ತಾ ಹೇಳುತ್ತಾ ಒಂದುಕಣ್ಣು ಮುಚ್ಚಿ ಬಿಡುವರು. ಒಂದು ವೇಳೆ ಅವರು ಹುಡುಗಿಯರೆಡೆಗೆ ನೋಡಿ ಹಾಗೆ ಮಾಡಿದಾಗ ಅವತ್ತೀಡೀ ದಿನ ಆ ಹುಡುಗಿಯನ್ನು ಕಾಡುವುದೇ ಆಗುತ್ತಿತ್ತು. ಆ ಮಾಸ್ತರರಿಗೆ ನಾವೆಲ್ಲರೂ ‘ಕಣ್ಣು ಹೊಡೆಯುವ ಮಾಸ್ತರ’ ಎಂಬ ಬಿರುದು ಕೊಟ್ಟಿದ್ದೆವು.
ಮತ್ತೊಬ್ಬ ಮಾಸ್ತರರು ಪಾಲಿಟಿಕ್ಸ್ ಕಲಿಸಲು ಬರುತ್ತಿದ್ದರು. ಅವರು ಕಾಲೇಜಿನಲ್ಲಿಯೇ ಪ್ರಭಾವಿ ವ್ಯಕ್ತಿಯಾಗಿದ್ದರು. ಹೀಗಾಗಿ ಅವರು ಕ್ಲಾಸು ತೆಗೆದುಕೊಳ್ಳದಿದ್ದರೂ ಯಾರೂ ಏನೂ ಅನ್ನುತ್ತಿರಲಿಲ್ಲ. ಅವರು ಆರಾಮಾಸಿಗೊಮ್ಮೆ ಬಾರಾಮಾಸಿಗೊಮ್ಮೆ ಬಂದು ಕಲಿಸುತ್ತಿದ್ದರು. ಕಲಿಸುವಾಗ ಕೂಡ ಪಾಲಿಟಿಕ್ಸ ವಿಷಯವನ್ನು ಬಿಟ್ಟು ನಿಜವಾಗಿಯೂ ನಡೆಯುತ್ತಿರುವ ರಾಜಕಾರಣಿಗಳ ಗುದ್ದಾಟ, ರಾದ್ಧಾಂತಗಳನ್ನೆಲ್ಲ ಒದರಿಬಿಡುತ್ತಿದ್ದರು. ಪುಂಖಾನುಪುಂಖಲೆ ಸಿಗರೇಟು ಸೇದುತ್ತಿದ್ದ ಕ್ಲಾಸಿನ ಒಳಗೆ ಬರುವಾಗ ಕೂಡ ಕಾರಿಡಾರಿನಲ್ಲಿಯ ಹಚ್ಚಿದ ಸಿಗರೇಟನ್ನು ಪೂರ್ತಿಯಾಗಿ ಮನಸೋಕ್ತ ಸೇದಿ ಒಳ ಬರುತ್ತಿದ್ದರು. ಹುಡುಗರೊಂದಿಗೆ ಒಳ್ಳೆಯ ಒಡನಾಟದಿಂದಿದ್ದ ಅವರು ಕ್ಲಾಸು ತೆಗೆದುಕೊಂಡರೆ ಕ್ಲಾಸು ಫುಲ್ಲು ಇರುತ್ತಿತ್ತು.
ಮತ್ತೊಬ್ಬರು ತಲೆಗೆ ತುಂಬಾ ಎಣ್ಣಿ ಹಚ್ಚಿಕೊಂಡು ನಟ್ಟ ನಡುವೆ ಬೈತಲೆ ತೆಗೆದು ನೀಟಾಗಿ ಹಿಕ್ಕೊಂಡು ಬರುವವರು. ಮೈಮೇಲಿನ ಅರಿವೆ ಮುದ್ದಿಯಾಗಿದ್ದರೂ ಪರ್ವಾಗಿಲ್ಲ ಕೂದಲ ಕೊಂಚಕೂಡ ಅಲುಗಾಡುತ್ತಿರಲಿಲ್ಲ. ನನ್ನ ಗೆಳತಿ ಒಬ್ಬಳು ‘ಸರ್ ಗೆ ಒಂದು ಬೊಟ್ಟು ಕುಂಕುಮ ವಿಟ್ಟರೆ….’ ಎಂದು ನಗಾಡುವಳು.
ಇನ್ನೊಬ್ಬ ಮಾಸ್ತರನ್ನು ಮಾತ್ರ ದೂರದಿಂದಲೇ ಮಾತನಾಡಿಸಬೇಕು. ಇಲ್ಲದಿದ್ದರೆ ಅವರ ಉಗುಳಿನ ಪ್ರೋಕ್ಷಣೆಯಿಂದ ನಮಗೆ ಸ್ನಾನ ಮಾಡಿದಂತಾಗುತ್ತಿತ್ತು.
ನಮ್ಮ ಕಾಲೇಜಿನ ಗುಡ್ಡ ಹತ್ತಿ ಮೇಲೆ ಹೋದರೆ ರಾಮತೀರ್ಥ ರಾಜನ ಅರಮನೆ. ಆ ಅರಮನೆಯ ಆವರಣದಲ್ಲಿ ಈಶ್ವರ, ಗಣಪತಿಯ ದೇವಸ್ಥಾನ ಇತ್ತು. ಅಲ್ಲಿ ಶ್ರಾವಣದ ಪ್ರತಿ ಸೋಮವಾರ ಜಾತ್ರೆ ಇರುತ್ತಿತ್ತು. ಪ್ರತಿ ಶ್ರಾವಣ ಸೋಮವಾರ ಎಲ್ಲ ಗೆಳತಿಯರು ಕ್ಲಾಸಿಗೆ ಬಂಕ್ ಮಾಡಿ ಅಲ್ಲಿ ಹೋಗುತ್ತಿದ್ದೆವು. ಅಲ್ಲಿ ಸಿಗುವ ಮಿರ್ಚಿ ಭಜಿ, ಭೇಲ, ನಮ್ಮೆಲ್ಲರ ಅಚ್ಚುಮೆಚ್ಚಿನವಾಗಿದ್ದವು. ದೇವರ ಭೆಟ್ಟಿಗಿಂತ ಅದನ್ನು ತಿನ್ನಲೆಂದೇ ನಾವೆಲ್ಲ ಅಲ್ಲಿ ಹೋಗುತ್ತಿದ್ದೆವು ಎಂದರೆ ಅತಿಶಯೋಕ್ತಿಯೇನಲ್ಲ. ಆ ದಿನ ಕೂಡ ನಾವು ಗೆಳತಿಯರೆಲ್ಲ ದೇವರಿಗೆ ನಮಸ್ಕರಿಸಿ ನಂತರ ಸಾಕಷ್ಟು ಭೇಲ ಮಿರ್ಚಿ ಭಜಿ ಖರೀದಿಸಿ ಒಂದೆಡೆ ಕುಳಿತೆವು. ಆಗೆಲ್ಲ ಬಾಟಲಿ ಸಂಸ್ಕೃತಿ ಇರಲಿಲ್ಲವಾದ್ದರಿಂದ ಎಲ್ಲಿ ನೀರು ಸಿಗ್ತದೋ ಅದನ್ನೇ ಕುಡಿದು ಸಂತೃಪ್ತರಾಗುತ್ತಿದ್ದೆವು. ಈಗಿನ ಹಾಗಿನ Health ಕ್ಯಾನ್ಶಿಯಸ್ ಆಗಿರಲಿಲ್ಲ. ಆದರೂ ನಮಗೇನೂ ಧಾಡಿಯೂ ಆಗುತ್ತಿರಲಿಲ್ಲ. ನಾವೆಲ್ಲ ಏನೇ ಹೊರಗಿನಿಂದ ತಿಂದೂ ಕುಡಿದೂ ಮಾಡಿದರೂ ದಂಡ ಪಿಂಡಗಳಂತೆ ಬೇನೆ ಬೇಸರಿಕೆ, ಒದ್ದಾಟ ನರಳಾಟಗಳಿಲ್ಲದೇ ಆರಾಮವಾಗಿ ಅಡ್ಡಾಡಿಕೊಂಡಿರುತ್ತಿದ್ದೆವು. ಹೀಗಾಗಿ ನಾವ್ಯಾರೂ ನೀರು ಕುಡಿಯಲಿಕ್ಕೆಂದು ಬಾಟಲಿಯನ್ನು ಒಯ್ಯುತ್ತಿರಲಿಲ್ಲವಾದ್ದರಿಂದ ಅದೇ ಪ್ರಮಾದವಾಗಿ ಹೋಯಿತು. ನನ್ನ ಗೆಳತಿ ಒಬ್ಬಳು ಭೇಲ ಜೊತೆಗೆ ಸಿಕ್ಕ ಮೆಣಸಿನಕಾಯಿಯನ್ನು ಕಚ್ಚಿಬಿಟ್ಟಿದ್ದಾಳೆ. ಒಂದೇ ಸಮನೆ ನಾಲಿಗೆ ಹೊರಚಾಚುತ್ತಾ ಕಣ್ಣಿನಿಂದ ಕೋಡಿ ನೀರು ಹರಿಸುತ್ತಾ ‘ನೀರು ನೀರು’ ಎಂದು ಸಂಜ್ಞೆ ಮಾಡತೊಡಗಿದಳು. ಏನೂ ತೋಚದಂತಾದಾಗ ಗಣಪತಿ ಗುಡಿಯ ಒಳಗೆ ಹೊಕ್ಕೆವು. ನೀರಿನ ಹೊಂಡ ಅಲ್ಲಿದ್ದರೂ ಅದು ಪಾಚಿಗಟ್ಟಿದಂತಿದ್ದು ಕಾಲಿಟ್ಟರೇ ಜಾರುತ್ತಿತ್ತು. ಹೀಗಾಗಿ ಗುಡಿಯ ಮುಂದಿಟ್ಟ ತೀರ್ಥದ ಮೇಲೆ ನಮ್ಮ ಕಣ್ಣು! ದೇವರ ಮುಂದೆ ತೀರ್ಥ ಕೊಡಲು ಒಬ್ಬಳು ಹೆಣ್ಣುಮಗಳು ಅಲ್ಲಿದ್ದಳು. ನಾವು ಕೆಲವು ಗೆಳತಿಯರು ಒಳಹೊಕ್ಕಾಗ ತೀರ್ಥಕೊಡಲು ಮುಂದಾದಳು. ನನ್ನ ಗೆಳತಿಯ ನಾಲಿಗೆ ಹೊರಚಾಚುವುದು ‘ಹುಷ್ ಹುಷ್’ ಎನ್ನುವುದು ನಡೆದೇ ಇತ್ತು. ಆಗ ನನ್ನ ತಲೆಗೆ ಒಂದು ಉಪಾಯ ಹೊಳೆದು ಆ ಹೆಂಗಸಿನ ಹತ್ತಿರ ಹೋಗಿ ‘ನಿಮಗೆ ಯಾರೋ ಈಶ್ವರನ ಗುಡಿಯ ಹತ್ತಿರ ಕರೀಲಿಕತ್ತಾರ್ರೀ’ ಎಂದೆ. ಅವಳು ನಮ್ಮ ಮೇಲೆ ಎಂಥಧೋ ಅಪಾರ ವಿಶ್ವಾಸವನ್ನಿಟ್ಟು ಗಡಿಬಿಡಿಯಿಂದ ಹೊರ ನಡೆದಳು. ಅಲ್ಲಿ ತಂಬಿಗೆಯಲ್ಲಿ ಟೆಂಗಿನ ನೀರು ನಮ್ಮನ್ನು ನೋಡಿ ನಗುತ್ತಿತ್ತು. ಆ ತಂಬಿಗೆಯನ್ನು ಎತ್ತಿ ಗೆಳತಿಗೆ ಕೊಟ್ಟಾಗ ಗಟಗಟನೆ ತಂಬಿಗೆ ಎತ್ತರಿಸಿ ಹಾಯೆನಿಸುವಷ್ಟು ಕುಡಿದೇ ಕುಡಿದಳು. ನಂತರ ಸರದಿಯ ಪ್ರಕಾರ ನಾವೆಲ್ಲರೂ ಚೂರು ಚೂರು ಕುಡಿದು ಖಾಲಿ ತಂಬಿಗೆಯನ್ನು ಅಲ್ಲಿಟ್ಟು ಎದ್ದೆವೋ ಬಿದ್ದೆವೋ ಎನ್ನುತ್ತಾ ಹೊರನಡೆದು ಗದ್ದಲದಲ್ಲಿ ಒಂದಾಗಿಬಿಟ್ಟೆವು. ಈಕೆಗೆ ಕರೆದವರ್ಯಾರೂ ಸಿಗದೇ ಹೊರಳಿ ಬಂದು ನೋಡಿದರೆ ತೀರ್ಥವೇ ಇಲ್ಲ. ನಮ್ಮನ್ನು ಹುಡುಕಲು ಬಂದಾಳು ಎನ್ನುವ ಭಯದಿಂದ ನಾವೆಲ್ಲ ಆಗಲೇ ಗುಡ್ಡ ಇಳಿಯುತ್ತಿದ್ದೆವು.
ಮತ್ತೊಂದು ಸಲ ನಮ್ಮ ಮಾಸ್ತರರೊಬ್ಬರಿಗೆ ನಾಲ್ಕು ಹೆಣ್ಣಿನ ಮೇಲೆ ಒಂದು ಗಂಡು ಮಗು ಜನಿಸಿದಾಗ ಅವರ ಉತ್ಸಾಹ ಹೇಳತೀರದಂತಾಗಿತ್ತು. ನಮ್ಮ ಗೆಳತಿಯರ ಸ್ಟ್ರೆಂಗ್ಧ್ ಕಡಿಮೆಯಾಗಿತ್ತು. ನಾಲ್ಕೇ ಜನರು ಉಳಿದಿದ್ದೆವು. ಅವರ ಮಗುವಿನ ನಾಮಕರಣ ಉತ್ಸವವನ್ನು ಒಳ್ಳೇ ವಿಜೃಂಭಣೆಯಿಂದ ನೆರವೇರಿಸಿದ್ದರು. ನಾವು ಕೊನೆಯ ವರ್ಷದ ನಾಲ್ಕೇ ಜನ ಹುಡುಗಿಯರಿದ್ದರಿಂದ ನಮ್ಮನ್ನು ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದರು. ಇದೊಂದೇ ಚಾನ್ಸ ನಮಗೆ ಬೇಕಾಗಿತ್ತು. ಎಲ್ಲರೂ ಐದೈದು ರೂಪಾಯಿ ಸೇರಿಸಿ ಒಂದು ಪಾಕೀಟಿನಲ್ಲಿ ಹಾಕಿ ಅವರ ಮನೆಗೆ ನಡೆದೆವು. ಅಲ್ಲಿಯೋ ಜನ ಜಾತ್ರೆ, ಆ ಜಾತ್ರೆಯಲ್ಲೇ ನಾವೂ ನುಗ್ಗಿ ಜಾಗ ಮಾಡಿಕೊಂಡು ಮಾಸ್ತರರ ಹೆಂಡತಿಯನ್ನು ಭೆಟ್ಟಿ ಮಾಡಿ ಮಗುವನ್ನು ವರ್ಣಿಸಿ ‘ವೈನೀರಿ ಥೇಟ ಕೂಸು ನಿಮ್ಮಾಂಗ ಅದರೀ, ಭಾಳ ಲಕ್ಕೀ ಇದ್ದಾನ್ರಿ’ ಅಂತೆಲ್ಲಾ ಬೊಗಳೆ ಬಿಟ್ಟು ಪಟ್ಟಾಂಗ ಊಟ ಜಡಿದು, ಆಹೇರಿ ಕೊಟ್ಟು ಮನೆಗೆ ಬಂದೆವು. ಅವರ ಮನೆ ಕಾಲೇಜಿಗೆ ಅತೀ ಹತ್ತಿರದಲ್ಲಿತ್ತು. ಆ ಮೇಲಿಂದ ಯಾವಾಗಾದರೂ ಕ್ಲಾಸು ಇರದಿದ್ದರೆ, ‘ಕೂಸಿನ ನೆನೆಪಾತ್ರೀ ನೋಡಲಿಕ್ಕೆ ಬಂದೀವ್ರೀ’ ಅಂತನ್ನುತ್ತಾ ಅವರು ಮಾಡಿದ ಅವಲಕ್ಕಿ ಚಹಾ ಹೊಡೆದು ಬರತೊಡಗಿದೆವು. ಆದರೂ ಕೂಡ ನಮ್ಮೊಂದಿಗೆ ಸಲುಗೆಯಿಂದ ವ್ಯವಹರಿಸುತ್ತಿದ್ದರು. ಸರ್ ಗುಣಗಾನ ಕೂಡ ಮಾಡಿ ಅವರನ್ನು ಉಬ್ಬಿಸುತ್ತಿದ್ದೆವು. ಮನೆಯಿಂದ ಹೊರಬರುವಾಗ ‘ಮತ್ತ ಬರ್ರಿ, ಅಕ್ಕಾಗ ಟಾಟಾ ಮಾಡೂ’ ಅಂತನ್ನುತ್ತ ಆಹ್ವನಿಸುತ್ತಿದ್ದರು. ನಾವು ಅದನ್ನೇ ಕಾಯುತ್ತಿದ್ದವರಂತೆ ಮತ್ತೆ ಮತ್ತೆ ಅವರ ಮನೆಗೆ ಹಾಯುತ್ತಿದ್ದೆವು. ಉಂಡು ಬರುತ್ತಿದ್ದೆವು.
ಕೊನೆಯ ವರ್ಷದಲ್ಲಿ ಬಂದಾಗ ವಾರಕ್ಕೊಮ್ಮೆ ಒಂದು ಪಿರೇಡ್ ನಡೆಯುತ್ತಿರಲಿಲ್ಲ. ಆವಾಗೆಲ್ಲ ಎದುರಿಗೇ ಇದ್ದ ಪವನ ಹೋಟೇಲ್ ಗೆ ನುಗ್ಗಿ ದೋಸೆ ತಿಂದು ಬರುತ್ತಿದ್ದೆವು. ಆವಾಗಿನ ದೋಸೆಯ ರೇಟು ಅಂದ್ರೆ ಎರಡು ರೂಪಾಯಿಗೆ ಎರಡು ಸೆಟ್ ದೋಸೆ, ಹತ್ತು ರೂಪಾಯಿ ತಂದರೆ ಒಂದು ಪ್ಲೇಟ ಸೆಟ್ ದೋಸೆ ಪ್ರತಿಯೊಬ್ಬರಿಗೂ ಮತ್ತೊಂದು ಪ್ಲೇಟ್ ಕಾಂದಾಭಜಿ ಆರ್ಡರ್ ಮಾಡುತ್ತಿದ್ದೆವು. ನನ್ನ ಗೆಳತಿಯೊಬ್ಬಳು ಮೊದಲ ಸಲ ಹತ್ತು ರೂಪಾಯಿ ತಂದು ಎಲ್ಲರಿಗೂ ತಾನೇ ಕೊಡಿಸಿದಳು. ಅದೇ ಪರಿಪಾಠವಾಗಿ ಪ್ರತಿ ವಾರಕ್ಕೊಮ್ಮೆ ಒಬ್ಬೊಬ್ಬರ ಸರದಿಯಂತೆ ಹತ್ತು ರೂಪಾಯಿ ತರುವುದು, ಅವರು ಅವತ್ತು ದೋಸೆ ಕೊಡಿಸುವುದು ಎಂದಾಯಿತು. ಆ ದಿನ ಕಲ್ಪನಾಳ ಸರದಿ. ಆಫ ಪಿರಿಯಡ್ ಆದ್ದರಿಂದ ಹೋಟೆಲಿಗೆ ನಡೆದೆವು. ದೋಸೆ ಭಜಿ ಎಲ್ಲ ತಿಂದೆವು. ಬಿಲ್ಲೂ ಬಂತು. ಕಲ್ಪನಾ ಮೊದಲೆ ಕಂಜೂಷಿ, ಈಗ ಅವಳೇ ಬಿಲ್ಲು ಕೊಡಬೇಕಾಗಿ ಬಂದಾಗ ಪುಸ್ತಕ ಹರಿದು ಹೋಗುವಂತೆ ಪೇಜಗಳನ್ನು ಕಿತ್ತಾಡತೊಡಗಿದಳು. ‘ಯಾಕ ಹೀಂಗ್ಯಾಕ ಕಿತ್ತ್ಯಾಡ್ಲಿಕತ್ತೀ’ ಎಂದರೆ ಅವಳು ‘ಅಲ್ಲ ಇದರಾಗ ಹತ್ತು ರೂಪಾಯಿ ಇಟ್ಟಿದ್ದೆ ಎಲ್ಲೆ ಬಿತ್ತೋ ಏನಾತೋ’ ಅಂತ ಮತ್ತೆ ತಿರುವ್ಯಾಡತೊಡಗಿದಳು. ಇವಳದು ನಟನೆ ಎನ್ನುವುದನ್ನು ಅರಿಯದವರೇನಲ್ಲ ನಾವು ಯಾವಾಗ್ಲೂ ದುಡ್ಡಿನ ವಿಷಯ ಬಂದಾಗ ಅವಳು ಹಿಂದೆನೇ , ವಿದ್ಯಾ ಯಾವಾಗ್ಲೂ ಮುಂದೇನೇ. ಯಾರದಾದರೂ ದುಡ್ಡು ಜರೂರಿ ಇದ್ದಾಗ ಇಸಿದುಕೊಂಡಿದ್ದರೂ ಆಕೆಗೆ ಜಾಣ ಮರೆವು. ಸುಮ್ಮನೇ ಇದ್ದು ಬಿಡುವವಳು. ಆದರೆ ನನ್ನಂಥವರು ಕೊಟ್ಟ ದುಡ್ಡನ್ನು ಹೇಗೆ ಅವಳಿಂದ ಪಡೆಯಬೇಕೂ ಅಂತ ರಾತ್ರಿ ಇಡೀ ಪ್ಲಾನ್ ಮಾಡುತ್ತ ನಿದ್ದೆಗೆಡುವುದು ನನ್ನ ಜಾಯಮಾನ!
‘ನೀ ಹಂಗ ಮಾಡ್ತೀ ಅಂತ ತಿಳಿದ ನಾ ಎಕ್ಸ್ಟ್ರಾರ್ ರೊಕ್ಕಾ ತಂದೀನೀ ನೋಡು, ನೀಯೇನ ಖುಷಿಯಾಗ ಬ್ಯಾಡಾ ನಮಗೆ ಇನ್ನೊಮ್ಮೆ ಮುಂದಿನವಾರದಾಗ ನೀ ಕೊಡಿಸಬೇಕು…. ಪೆನಲ್ಟೀ ಅಂತ ಜಾಮೂನೂ ಬೇಕು’ ಎಂದು ತಾಕೀತು ಮಾಡಿ ನಾನೇ ದುಡ್ಡು ಕೊಟ್ಟೆ. ಆಮೇಲೆ ಆಕೆ ಸಣ್ಣಗೆ ನಗತೊಡಗಿದಾಗ ಹೂರಣ ಹೊರಬಿದ್ದಿತ್ತು.
ಮತ್ತೊಮ್ಮೆ ಪರೀಕ್ಷೆ ಸಮೀಪಿಸಿತ್ತು. ರಾತ್ರಿ ಓದುತ್ತಾ ಕುಳಿತಿದ್ದೆ. ನಾನೊಬ್ಬಳೇ ಇದ್ದೆ ರೂಮಿನಲ್ಲಿ. ರಾತ್ರಿಯ ನೀರವತೆಯಲ್ಲಿ ಗೋಡೆಯ ಹಲ್ಲಿಯೊಂದು ಲೊಚಗುಟ್ಟಿತು. ಲಕ್ಷ್ಯ ಆ ಕಡೆಗೇ ಹೊರಳಿತು. ಆಗಲೇ ಏನೋ ಸದ್ದಾದಂತಾಯಿತು. ಸಹಜವಾಗಿ ಅದು ಹಳೆಯ ಮನೆಯಾದ್ದರಿಂದ ಪ್ರಾಣಿ ಸಂಗ್ರಹಾಲಯವೇ ಆ ಮನೆಯಲ್ಲಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ಹಲ್ಲಿ, ಜೊಂಡಿಗ, ಇರುವೆ, ತಗಣಿ, ಇಲಿ, ಒಮ್ಮೊಮ್ಮೆ ಹಾವು ಚೇಳುಗಳೂ ಕಾಣಿಸಿಕೊಂಡು ಮರೆಯಾಗುತ್ತಿದ್ದವು. ಹಾಗಾಗಿ ಇವೆಲ್ಲ ಸಹಜವೆಂಬಂತೆ ಏನೂ ಲಕ್ಷ್ಯ ಕೊಡದೇ ಪಲ್ಲಂಗದ ಮೇಲೆ ನಿಡಿದಾದ ಕಾಲುಗಳನ್ನಿಟ್ಟು ಓದುತ್ತಾ ಮಲಗಿದೆ. ಒಳಗಿನ ಇನ್ನೊಂದು ರೂಮಿನಿಂದ ನಮ್ಮ ತಾಯಿಯ ಗೊರಕೆಯ ಸದ್ದು ಕೇಳುತ್ತಿತ್ತು. ಶಾಂತ ವಾತಾವರಣದಲ್ಲಿ ಮತ್ತೆ ಕುಸು ಕುಸು ಸದ್ದು! ಸ್ವಲ್ಪ ಸಮಯದ ನಂತರ ಮತ್ತೆ ನಡುಗಿದಂತಹ ಸದ್ದು!…..ಸದ್ದು…..ಸದ್ದು….
ಹಿಂದಿನದಿನವೇ ಕಾಲೇಜಿನಿಂದ ಗೆಳತಿಯರೆಲ್ಲಾ ದೆವ್ವದ ವಿಷಯವನ್ನೇ ಮಾತನಾಡುತ್ತಾ ಬರುತ್ತಿದ್ದೆವು. ಹೆಣ್ಣು ದೆವ್ವವೊಂದು ರಾತ್ರಿ ೧೨ ರಿಂದ ೩ ರ ವೇಳೆಯಲ್ಲಿ ಅಡ್ಡಾಡ್ತದೆ…. ನಮ್ಮ ಮನೀಕಡೆ ರಾತ್ರಿ ಗೆಜ್ಜೆಯ ಶಬ್ದವಾಗಲಿಕತ್ತಿತ್ತು….. ಎಂದು ಹೇಳಿದ್ದಳು ಗೆಳತಿ ವಿದ್ಯಾ. ಗಡಿಯಾರದ ಕಡೆಗೆ ಲಕ್ಷ್ಯ ಹೋಯಿತು. ರಾತ್ರಿಯ ಒಂದೂ ಮುಕ್ಕಾಲು ಗಂಟೆ. ಎದಿ ಡಬ್ ಡಬ್ ಡಬ್, ಕೈಕಾಲುಗಳಲ್ಲಿ ನಡುಕ ಶುರುವಾಗಿತ್ತು. ಕಾಲುಗಳನ್ನು ಮಡಚದಂಥ ಸ್ಥಿತಿ! ಜೋರಾಗಿ ಕೂಗಬೇಕೆಂದರೆ ನಾಲಿಗೆಯಲ್ಲಿ ಪಸೆಯೇ ಇಲ್ಲ. ಎಲ್ಲಾ ದೇವರುಗಳೂ ಸ್ಮೃತಿಪಟಲದಲ್ಲಿ ಹಾಯ್ದು ಹೋದವು. ಸ್ವಲ್ಪ ಸಮಯ ಸದ್ದು ನಿಂತಿತು. ಓದಿನ ಕಡೆಗೆ ಲಕ್ಷ್ಯವೇ ಇಲ್ಲದಂತಾಯಿತು. ಪುಸ್ತಕಗಳನ್ನೆಲ್ಲಾ ಸದ್ದು ಮಾಡುತ್ತಾ ತೆಗೆದಿಟ್ಟೆ. ಮತ್ತೆ ಸದ್ದು…. ಈಗ ಬಾಥರೂಂ ಕಡೆಯಿಂದ ಬಂದಿತ್ತು. ಆ ಕಡೆಗೆ ಕೆಂಗಣ್ಣು ಬಿಟ್ಟುಕೊಂಡು ನೋಡುತ್ತಾ ಕುಳಿತೆ. ಸ್ವಲ್ಪ ಸಮಯಕ್ಕೆ ಮತ್ತೆ ಸದ್ದು…. ಇಲ್ಲಿ ಏನಾದರೂ ಇರಬಹುದೇ ಎನಿಸಿತಾದರೂ ಸದ್ದು ಹಾಗಿರಲಿಲ್ಲ. ಮನಸ್ಸಿನಲ್ಲಿ ಹೆದರಿಕೆಯ ಮಹಾಪೂರವೇ ಇದ್ದರೂ ಧಿಗ್ಗನೇ ಎದ್ದು ಕೋಲನ್ನೆತ್ತಿಕೊಂಡು ಎಲ್ಲ ಕಡೆಯ ಲೈಟನ್ನು ಆನ್ ಮಾಡಿದೆ. ತಕ್ಷಣ ಸದ್ದು ಗಾಯಬ್! ಬೆಳಕಿಗೆ ದೆವ್ವಗಳು ಓಡಿ ಹೋಗುತ್ತವೆ ಎಂದು ಹೇಳಿದ ವಿದ್ಯಾನ ಮಾತುಗಳು ನೆನಪಾಗಿ ಮತ್ತಿಷ್ಟು ದಿಗಿಲು. ಒಳಗಿನಿಂದ ನಮ್ಮ ತಾಯಿಯ ಕೂಗು, ‘ರಾತ್ರಿ ಅಪರಾತ್ರ್ಯಾಗ ಎಲ್ಲಾ ಲೈಟ್ ಯಾಕ ಆನ್ ಮಾಡೀ, ಭಾಳ ವ್ಯಾಳ್ಯಾ ಆಗೇದ ಇನ್ನ ಮಲಕ್ಕೋ ಅವಳೋ ಮೊದಲೇ ಹಾರ್ಟ್ ಪೇಶಂಟ್. ಅವಳ ಮುಂದೆ ಏನೂ ಹೇಳುವ ಹಾಗಿಲ್ಲ. ಹೂಂ ಸ್ವಲ್ಪ ಓದಿ ಮಲಕ್ಕೋತೀನಿ’ ಎಂದೆ. ಮತ್ತೆ ನನ್ನ ಪತ್ತೇದಾರಿಕೆ ಶುರುವಾಯಿತು. ಈಗ ತಾಯಿಯೂ ಎಚ್ಚರಿಕೆಯಿಂದಿದ್ದಾಳೆ ಎಂಬ ಭಾವನೆಯೇ ನನ್ನಲ್ಲಿ ಹೆದರಿಕೆಯನ್ನು ಕಡಿಮೆಗೊಳಿಸಿತ್ತು. ಈಗ ಬಾಥ ರೂಂಮಿನ ಲೈಟನ್ನು ಹಚ್ಚಿದೆ. ಅಲ್ಲಿ ಬಿಳಿಯ ಸೀರೆಯ ಕೂದಲನ್ನು ಇಳಿಬಿಟ್ಟು ಕಣ್ಣ ತುಂಬಾ ಕಾಡಿಗೆ ಮೆತ್ತಿಕೊಂಡು ನನ್ನತ್ತಲೇ ಕಣ್ಣು ಕೆಕ್ಕರಿಸಿ ನೋಡುತ್ತಿರುವ ದೆವ್ವ ಎಂದು ಕೊಂಡಿರಾ….. ಛೇ, ನಿಮ್ಮ ಮತ್ತು ನನ್ನ ಊಹೆ ತಪ್ಪು…..ತಪ್ಪು….
ಬಚ್ಚಲು ಮೋರೆಗೆ ದಿನಾಲೂ ಕಲ್ಲು ಹಚ್ಚಿ ಮಲಗುತ್ತಿದ್ದಳು ನಮ್ಮ ಅವ್ವ, ಆದರೆ ಇವತ್ತು ಮರೆತು ಹಾಗೆ ಮಲಗಿದ್ದರಿಂದ ಆ ಕಡೆಯ ಗ್ರೌಂಡಿನಿಂದ ಸಲೀಸಾಗಿ ನಾಯಿ ಮರಿಯೊಂದು ನುಸುಳಿತ್ತು. ನೀರಿರುವ ಜಾಗದಲ್ಲಿ ನಿಂತಿದ್ದರಿಂದ ಥಂಡಿಗೆ ಮುಲುಗುತ್ತಿತ್ತು. ಅಯ್ಯೋ ನನ್ನ ಧೈರ್ಯವೇ ಎನ್ನುತ್ತಾ ಅದಕ್ಕೆ ಸ್ವಲ್ಪ ಹಾಲು ಹಾಕಿ ಬೆಚ್ಚನೆಯ ಜಾಗದಲ್ಲಿ ಮಲಗಿಸಿದೆ. ಅಂದಿನಿಂದ ಅದೊಂದು ನಮ್ಮ ಮನೆಯ ಪ್ರಾಣಿಸಂಗ್ರಹಾಲಯದಲ್ಲಿ ಕಾಯಂ ಸದಸ್ಯ ಆಯಿತು. ಅಲ್ಲದೇ ‘ದೆವ್ವ’ ಎನ್ನುವ ನಾಮಧ್ಯೇಯವನ್ನೂ ಪಡೆದುಕೊಂಡಿತು.
ಹಿಂದಿನ ವರ್ಷದ ಹುಡುಗಿ ನಮ್ಮ ಜೊತೆ ಸೇರಿಕೊಂಡು ಗೆಳತಿಯಾದಳು. ಆಕೆಯೋ ಮರಾಠಿ ಮಾತನಾಡುವವಳು. ಕನ್ನಡ ಕೂಡ ಗೊತ್ತಿರುತ್ತಿತ್ತು. ಆದರೂ ಮಾತನಾಡುವಾಗ ಸ್ತ್ರೀಲಿಂಗಕ್ಕೆ ಪುಲ್ಲಿಂಗದ ಉಚ್ಚಾರವನ್ನು ಪುಲ್ಲಿಂಗಕ್ಕೆ ಸ್ತ್ರೀ ಲಿಂಗವನ್ನು ಜೋಡಿಸುತ್ತಿದ್ದಳು. ಒಮ್ಮೊಮ್ಮೆ ‘ಮಾಸ್ತರು ಬರ್ತಾವ’ ಅಂತ ನಪುಂಸಕಲಿಂಗಕ್ಕೆ ತಳ್ಳಿ ನಮ್ಮನ್ನೆಲ್ಲ ದಂಗುಬಡಿಸುತ್ತಿದ್ದಳು. ಮೊದಲಿನಿಂದಲೂ ಹುಡುಗರು ಆಕೆಗೆ ಕಾಡಿಸುತ್ತಿದ್ದರೆ ಆಕೆ ನಕ್ಕು ಮತ್ತೂ ಅವರನ್ನು ಉದ್ದೀಪಿಸುತ್ತಿದ್ದಳು. ನಮ್ಮ ಗ್ರುಪ್ಪಿಗೆ ಸೇರಿದ ನಂತರ ಆಕೆಯ ಚೆಲ್ಲಚೆಲ್ಲಾದ ಬಿಹೇವಿಯರ ಕೂಡ ಬದಲಾಗಿ ಹುಡುಗ್ರೂ ಕೂಡ ತೆಪ್ಪಗಾದರು.
ಇಂದು ಎಲ್ಲ ಗೆಳತಿಯರೂ ತಮ್ಮ ತಮ್ಮ ನೆಲೆಯನ್ನರಸಿ ಒಂದೊಂದು ದಿಕ್ಕಿನಲ್ಲಿರುತ್ತಿದ್ದರೆ ಹಳೆಯ ನೆನಪಿನ ಹಳವಂಡಗಳು ಸ್ಮೃತಿ ಪಟಲದ ಮೇಲೆ ಮೂಡಿ ನಗೆಯ ಬುಗ್ಗೆ ಎಬ್ಬಿಸುವವು. ಅದಕ್ಕೇ ಹೇಳುವುದು College life is a golden life ಎಂದು.