ಚಿತ್ರಕಥೆಗಾರರಿಗೆ ಸಮೃದ್ಧ ಕೈಪಿಡಿ

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ಕಾರ್ಯನಿರ್ವಹಿಸಿದ ಅವಧಿಯಲ್ಲಿ ಹಮ್ಮಿಕೊಂಡ ಯೋಜನೆಗಳ ಪೈಕಿ ‘ಚಲನಚಿತ್ರ ತಂತ್ರ ಕೃತಿಮಾಲಿಕೆ’ಯ ಅಡಿಯಲ್ಲಿ ಪುಸ್ತಕ ಪ್ರಕಟಣೆಯೂ ಒಂದು. ಗಂಗಾಧರ ಮೊದಲಿಯಾರ್‌ ಸಂಪಾದಕತ್ವದಲ್ಲಿ ಈ ಸರಣಿಯಲ್ಲಿ ಒಟ್ಟು ನಾಲ್ಕು ಪುಸ್ತಕಗಳು ಹೊರಬಂದಿದ್ದು, ಶಂಕರ್‌ ಅವರು ಬರೆದ ಈ ಪುಸ್ತಕ ಮೊದಲನೆಯದ್ದು. ಸಿನಿಮಾದ ಜೀವಾಳವಾದ ಚಿತ್ರಕಥೆಯ ಬಗ್ಗೆ ಅತ್ಯಂತ ವಿವರವಾಗಿ, ಪ್ರಾಥಮಿಕ ಹಂತದ ಓದುಗನಿಗೂ ಅರ್ಥವಾಗುವಂತೆ ಶಂಕರ್‌ ಇಲ್ಲಿ ವಿವರಿಸಿದ್ದಾರೆ. ಆರಂಭದಲ್ಲಿ ಚಿತ್ರಕಥೆಯ ಮಹತ್ವದ ಕುರಿತು ಪುಟ್ಟ ಲೇಖನವೊಂದಿದೆ. ಬಳಿಕ ಚಿತ್ರಕಥೆಯನ್ನು ಬರೆಯುವ, ಮರುಬರೆಯುವ ಕೌಶಲವನ್ನು ಹೇಗೆ ರೂಢಿಸಿಕೊಳ್ಳಬೇಕೆಂಬ ಬಗ್ಗೆ ಸಾಕಷ್ಟು ಒಳನೋಟಗಳಿವೆ. ದೃಶ್ಯವೊಂದು ಹೇಗೆ ರೂಪುಗೊಳ್ಳುತ್ತದೆ, ಕಥೆ, ಕಥನ, ಸಿನಿಮಾ ಕಥೆ ಮತ್ತು ಚಿತ್ರಕಥೆಯ ನಡುವಣ ಸಂಬಂಧ, ವ್ಯತ್ಯಾಸಗಳನ್ನು ಮನಮುಟ್ಟುವಂತೆ ಬಣ್ಣಿಸಿರುವ ಶಂಕರ್‌ರ ಈ ಕೃತಿ, ಸಿನಿಮಾ ತಂತ್ರಜ್ಞರು ಮಾತ್ರವಲ್ಲ, ಪ್ರೇಕ್ಷಕರಿಗೂ ತುಂಬಾ ಉಪಯುಕ್ತವಾಗುವಂತಿದೆ. ಸಿನಿಮಾದಲ್ಲಿ ಚಿತ್ರಕಥೆ ನಿಜಕ್ಕೂ ಮಹತ್ವದ ಪಾತ್ರ ವಹಿಸುತ್ತದೆ. ಸಿನಿಮಾದ ಹೀರೊ– ಹೀರೋಯಿನ್‌ಗಳಿಗಿಂತಲೂ ಚಿತ್ರಕಥೆಗಾರನೇ ಹೆಚ್ಚು ಮುಖ್ಯ ಎನ್ನುವುದೂ ಒಂದು ಕಾಲದಲ್ಲಿ ದಾಖಲಾಗಿತ್ತು. ಹಿಂದಿ ಚಿತ್ರರಂಗದ ಸೂಪರ್‌ಸ್ಟಾರ್‌ ಅಮಿತಾಭ್‌ ಬಚ್ಚನ್‌ ಅಭಿನಯಿಸಿದ ‘ಜಂಜೀರ್‌’ ಚಿತ್ರದ ಪೋಸ್ಟರ್‌ನಲ್ಲಿ ಅದರ ಚಿತ್ರಕಥೆ ಬರೆದ ‘ಸಲೀಂ– ಜಾವೇದ್‌’ ಅವರ ಹೆಸರನ್ನು ದೊಡ್ಡ ಅಕ್ಷರಗಳಲ್ಲಿ ಎಲ್ಲಕ್ಕಿಂತ ಮೇಲೆ ಪ್ರಕಟಿಸಲಾಗಿತ್ತು. ‘ದೋಸ್ತಾನಾ’ ಚಿತ್ರಕ್ಕೆ ಅಮಿತಾಭ್‌ ಬಚ್ಚನ್‌ಗೆ 12 ಲಕ್ಷ ರೂಪಾಯಿ ಸಂಭಾವನೆ ನೀಡಿದ್ದರೆ, ಚಿತ್ರಕಥೆ ಬರೆದ ಸಲೀಂ–ಜಾವೇದ್‌ಗೆ 12.5 ಲಕ್ಷ ರೂಪಾಯಿ ನೀಡಲಾಗಿತ್ತು! ಹಿಂದಿ ಚಿತ್ರರಂಗದಲ್ಲಿ ಚಿತ್ರಕಥೆಗಾರರೇ ಅತ್ಯಂತ ಮುಖ್ಯ ಎನ್ನುವುದನ್ನು ಮೊದಲ ಬಾರಿಗೆ ಸಾಬೀತುಪಡಿಸಿದ ಜೋಡಿ ಸಲೀಂ– ಜಾವೇದ್‌. ಮೊದಲ ಪುಟಗಳಲ್ಲೇ ಈ ವಿವರಗಳನ್ನು ದಾಖಲಿಸುವ ಮೂಲಕ ಲೇಖಕರು ಪುಸ್ತಕದ ಓದಿಗೆ ಉತ್ತಮ ಆರಂಭವನ್ನು ಒದಗಿಸಿಕೊಟ್ಟಿದ್ದಾರೆ. ಚಿತ್ರಕಥೆಯನ್ನು ಬರೆಯುವ ಅಭ್ಯಾಸ ಮಾಡುವವರಿಗೆ ಇಲ್ಲಿರುವ ಪಾಠಗಳು ಬಹಳ ಉಪಯುಕ್ತವಾಗಿವೆ. ಬಂಗಾರದ ಮನುಷ್ಯ, ಒಂದು ಮೊಟ್ಟೆಯ ಕಥೆ, ಉಲ್ಟಾಪಲ್ಟಾ ಸಿನಿಮಾಗಳ ಚಿತ್ರಕಥೆಯ ಕೆಲವು ಭಾಗಗಳನ್ನು ಇಟ್ಟುಕೊಂಡು ಬರೆದಿರುವ ಹೋಂವರ್ಕ್ ಗಮನ ಸೆಳೆಯುತ್ತವೆ. ‘ಸಿನಿಮಾಗಳನ್ನು ನೋಡುತ್ತಾ, ಸಿಕ್ಕ ಚಿತ್ರಕಥೆಗಳನ್ನು ತಿರುವಿ ಹಾಕುತ್ತಾ ಹೋದ ಹಾಗೆ ಚಿತ್ರಕಥೆಯ ಒಳಗುಟ್ಟುಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಬರೆಯುತ್ತಾ ಬರೆಯುತ್ತಾ ಆ ಕಸುಬು ಒಲಿಯುತ್ತದೆ. ಚಿತ್ರಕಥೆ ಎಂಬುದು ಬರವಣಿಗೆಯ ಕಲೆ ಮಾತ್ರವಲ್ಲ, ಅದು ಮತ್ತೆ ಮತ್ತೆ ತಿದ್ದಿ ಬರೆಯುವ ಕಲೆ, ಮರುಬರವಣಿಗೆಯ ಕಲೆ’ ಎನ್ನುವುದನ್ನು ಲೇಖಕರು ಮನದಟ್ಟಾಗುವಂತೆ ವಿವರಿಸಿದ್ದಾರೆ. ಚಿತ್ರಕಥೆಯಲ್ಲಿ ಅನಗತ್ಯ ದೃಶ್ಯ, ಸಂಭಾಷಣೆ ಇರದಂತೆ ನೋಡಿಕೊಳ್ಳುವಲ್ಲಿ ಕೊಟ್ಟಿರುವ ಸಲಹೆಗಳೂ ಗಮನ ಸೆಳೆಯುತ್ತವೆ. ಸಿನಿಮಾವೊಂದನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಿಡ್‌ಫೀಲ್ಡ್‌ ರೂಪಿಸಿದ ‘ಪರಿಚಯ–ಸಂಘರ್ಷ– ಪರಿಹಾರ’ ಸೂತ್ರದ ಜೊತೆಗೇ, ಗೊಡಾರ್ಡ್‌ ಹೇಳಿದ ‘ಸಿನಿಮಾವೊಂದು ಆರಂಭ, ದೇಹ, ಅಂತ್ಯ ಈ ಕ್ರಮದಲ್ಲೇ ಇರಬೇಕೆಂದಿಲ್ಲ’ ಎನ್ನುವ ಮಾತನ್ನೂ ಸೇರಿಸಿ ಶಂಕರ್‌ ನೀಡಿರುವ ಉದಾಹರಣೆಗಳು ಮನಮುಟ್ಟುವಂತಿವೆ. ಕೊನೆಯಲ್ಲಿ ಕಡಿದಾಳು ಶಾಮಣ್ಣ ಅವರ ಆತ್ಮಕಥೆ ‘ಕಾಡ ತೊರೆಯ ಜಾಡು’ವಿನ ಒಂದು ಅಧ್ಯಾಯವನ್ನು ಚಿತ್ರಕಥೆಯಾಗಿಸಿದ ಪ್ರಯತ್ನವಂತೂ ಓದುಗರಿಗೆ ಪುಸ್ತಕವನ್ನು ಆಪ್ತವಾಗಿಸುತ್ತದೆ. ಕಥೆ, ಕಥನದ ಕುರಿತು ಬರೆದಿರುವ ಲೇಖನದಲ್ಲಿ ‘ಭಾರತೀಯ ಕಲಾಮೀಮಾಂಸೆಯಲ್ಲಿ ಕಥನವೇ ಮೂಲಭೂತವಾದದ್ದು’ ಎನ್ನುವ ಲೇಖಕರ ಅನ್ನಿಸಿಕೆಯನ್ನು ಪರ್ಯಾಯ ಸಿನಿಮಾಗಳ ಪ್ರತಿಪಾದಕರು ಒಪ್ಪುವುದಿಲ್ಲ ಎನ್ನುವುದು ನಿಜವೇ. ಪರ್ಯಾಯ ಸಿನಿಮಾಗಳ ಪ್ರತಿಪಾದಕರ ಪ್ರಕಾರ ಕಥೆ ಹೇಳುವುದು ಸಿನಿಮಾದ ಪ್ರಾಥಮಿಕ ಜವಾಬ್ದಾರಿಯಲ್ಲ. ಈ ಕುರಿತು ಇನ್ನಷ್ಟು ಜಟಿಲ ಸಿದ್ಧಾಂತಗಳ ಜಾಲವೇ ಇದೆ ಎನ್ನುವ ಸೂಚನೆಯನ್ನಷ್ಟೇ ನೀಡಿ, ಲೇಖಕರು ಚಿತ್ರಕಥೆಯ ಇತರ ಅಂಶಗಳ ಕಡೆಗೆ ಗಮನ ಹರಿಸಿದ್ದಾರೆ. ಈ ಕುರಿತು ಈಗಾಗಲೆ ದಾಖಲಾಗಿರುವ ಚರ್ಚೆಯನ್ನು ಇನ್ನಷ್ಟು ವಿವರಿಸಿದ್ದರೆ ವಿಷಯಾಂತರವೇನೂ ಆಗುತ್ತಿರಲಿಲ್ಲ. ಇಲ್ಲಿರುವುದು ಸಿನಿಮಾ ಕುರಿತು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದಿರುವ ಬಿಡಿಲೇಖನಗಳಲ್ಲ; ಬದಲಾಗಿ ನಿರ್ದಿಷ್ಟ ಉದ್ದೇಶವೊಂದನ್ನು ಇಟ್ಟುಕೊಂಡೇ ಬರೆದಿರುವ ಸುಸಂಬದ್ಧ ಲೇಖನಗಳ ಸಂಕಲನ. ಹಾಗಾಗಿ ವಿಭಿನ್ನ ಥಿಯರಿಗಳಲ್ಲಿ, ಭಾಷೆಯ ಒಡ್ಡೋಲಗದಲ್ಲಿ ಕೃತಿ ಕಳೆದುಹೋಗದೆ, ಅತ್ಯಂತ ಪ್ರಾಕ್ಟಿಕಲ್‌ ಆದ ವಿಧಾನವೊಂದನ್ನು ನಮ್ಮ ಮುಂದಿಡುತ್ತದೆ. ಪತ್ರಕರ್ತರಾಗಿ, ಸಿನಿಮಾ ವಿಮರ್ಶಕರಾಗಿ, ಪ್ರಶಸ್ತಿ ಸಮಿತಿಗಳ ಜ್ಯೂರಿಯಾಗಿ, ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ಮಾತ್ರವಲ್ಲ, ಸ್ವತಃ ನೂರು ಸಾಕ್ಷ್ಯಚಿತ್ರ ಮತ್ತು ‘ಉಲ್ಟಾಪಲ್ಟಾ’ ಸಹಿತ ಮೂರು ಸಿನಿಮಾಗಳನ್ನೂ ನಿರ್ದೇಶಿಸಿರುವ ಶಂಕರ್‌ರ ಲವಲವಿಕೆಯ ಭಾಷಾಶೈಲಿ, ಇದು ಎಲ್ಲಿಯೂ ಶುಷ್ಕಪಠ್ಯವಾಗದಂತೆ ನೋಡಿಕೊಂಡಿದೆ. ಇದು ಪಠ್ಯಮಾದರಿ ಮಾತ್ರವಲ್ಲ, ಮಾದರಿ ಪಠ್ಯವೂ ಹೌದು. ಇಂತಹ ಕೃತಿಗಳು ಇನ್ನಷ್ಟು ಬಂದರೆ, ಕನ್ನಡದಲ್ಲಿ ಚಿತ್ರಕಥೆ ಬರೆಯುವವರ ಹೊಸ ಒರತೆ ಕಾಣಿಸಿಕೊಳ್ಳಬಹುದು. ಕಲಾವಿದರೂ ಆಗಿರುವ ಶಂಕರ್‌, ಪುಸ್ತಕದ ಮುಖಪುಟವನ್ನೂ ತಾವೇ ಅಚ್ಚುಕಟ್ಟಾಗಿ ರೂಪಿಸಿರುವುದು ಗಮನ ಸೆಳೆಯುತ್ತದೆ.

author- ಬಿ.ಎಂ. ಹನೀಫ್

courtsey:prajavani.net

https://www.prajavani.net/artculture/book-review/what-screen-play-675045.html

Leave a Reply