ಚಟವಂತರ ಕೂಟದ ಹರಟೆಗಳು
ನಮ್ಮೂರ ಹೈದ, ನಡಮನೀ ನಾರ್ಯಾ ಯಾವಾಗ ಕೇಳಿದರೂ ಆತನ ಬಾಯಿಂದ ಉದುರುವ ಅಣಿ ಮುತ್ತುಗಳು, ನನಗ ಈಗ ಭಾಳ ಅಡಚಣೀ ಅದ ಎನ್ನುವುದೇ ಆಗುತ್ತಿತ್ತು. ಮದುವಿಗಿಂತ ಮೊದಲು ಒಂಥರಾ ಅಡಚಣಿ, ಮದುವೀ ಆದಮ್ಯಾಲೇ ಇನ್ನೊಂಥರ, ಒಟ್ಟ ಅಡಚಣೇ ಒಳಗ ಇರೂದನ ಅವನ ಜನ್ಮ ಸಿದ್ಧ ಹಕ್ಕು ಎಂಬಂತಾಗಿತ್ತು.
ಊರ ನಡು ಹಣಮಂತದೇವರ ಗುಡಿ, ಗುಡಿಗೆ ಒಂದ ಲಠ್ಠ ಕಟ್ಟಿ, ಆ ಕಟ್ಟೀ ಮ್ಯಾಲ ಸಂಜೀ ಆತು ಅಂದರ ಅವನ ವಾಸ್ತವ್ಯ ಅಲ್ಲೇ. ಯಾಕೆಂದರೆ ಯಾವುದರೇ ಬಕರಾ ಸಿಕ್ಕು ನೂರ ಎರಡನೂರರೇ ಸಿಗ್ತಾವೇನೋ ಎನ್ನುವ ದೂರದ ಆಸೆ, ಹ್ಯಾಂಗ ಸಣ್ಣ ಹಳ್ಳದ ದಂಡೀಮ್ಯಾಲೇ ದೊಡ್ಡ ಮೀನ ಏನರೇ ಸಿಗ್ತದೇನೋ ಎನ್ನುವ ಆಶಾದಿಂದ ಮುಂಜಾನೀಯಿಂದ ಸಂಜೀತನಕಾ ಸಣ್ಣ ಬಲೀ ಹಿಡ್ಕೊಂಡು ಸಣ್ಣ ಹುಡುಗ್ರು ಕುತ್ತಿರ್ತಾವಲ್ಲ ಹಂಗ,
ಇವನಂಥವರ ಆ ಊರಾಗ ಭಾಳ ಮಂದೀ ಇದ್ದದ್ದಕ್ಕ ಅವರೂ ಹೀಂಗ ಯಾವುದರ ಮಿಕದ ಬ್ಯಾಟೀ ಆಡಲಿಕ್ಕಂತ ಇದೇ ಕಟ್ಟೀಗೆ ಬಂದ ಕೊಡಾವ್ರು. ಹೀಂಗಾಗಿ ಆ ಕಟ್ಟಿಗೇ ಒಂಥರದ ಕಳೆ ಬಂದಾಂಗಾಗಿತ್ತು. ಒಬ್ಬರಿಗೆ ಇಬ್ಬರು, ಇಬ್ಬರಿಗೆ ನಾಲ್ಕು….ಹೀಂಗ ಗುಂಪು ಬೆಳೀತು, ನಮ್ಮ ಹೈದ ಅದರ ಅಧ್ಯಕ್ಷ ಅಂತ ಅನ್ನಿಸಿಕೊಂಡ.
ನಡು ನಡುವ ಅವರೊಳಗನ ಜಿಜ್ಞಾಸೆ ಮೂಡುವುದು ‘ಎಲ್ಲಾರೂ ಇಷ್ಟ ಆರಾಮ ಇರ್ತಾರ, ನಮಗ ಯಾಕ ಇಷ್ಟ ಅಡಚಣೀ ಇರ್ತದ’ ಅರಳೀಕಟ್ಟಿ ಅನ್ಯಾ ಉಸುರಿದಾಗ, ‘ಎಲ್ಲಾರಿಗೂ ನಮ್ಮಂಗ ದೊಡ್ಡ ಸಂಸಾರ ಎಲ್ಲೀ ಇರ್ತದೋ, ಇನ್ ಕಮಿಂಗ್ ರೆ ಕಮ್ಮಿ, ಔಟ್ ಗೊಯಿಂಗ್ ಭಾಳ, ಒಂದಕ್ಕೊಂದು ಹೊಂದದ ನಾವು ತಿಂಗಳಾ ತಿಂಗಳಾ ಡೆಫಿಸಿಟ್ಟನ್ಯಾಗ ಬೀಳ್ತಿವೋಪಾ’ ನಡಮನೀ ನಾರ್ಯಾನ ಉತ್ತರ.
ಅದಕ್ಕ ಕರೀಕಟ್ಟಿ ಕರ್ಯಾ, ‘ನಮ್ಮಲ್ಲೇ ಚಟಗೋಳೇನ ಕಮ್ಮೀ ಅದಾವ? ಸಿಗರೇಟ ಸೇದೂದಂದ್ರ ಅದರಿಂದ ಹೊಗೀ ಬರಲಿಕ್ಕೆ ಹತ್ತಿದ್ರ ಅವನ ಮಾರೀನ ಕಾಣಾಂಗಿಲ್ಲ, ಮಾರಾಯ, ಇಪ್ಪತ್ನಾಲ್ಕು ತಾಸ ಆ ಹೊಗ್ಯಾಗ ಕುತ್ತಿರತಾನ ನಮ್ಮ ಬಸರೀಕಟ್ಟಿ ಬಸ್ಯಾ’ ಎಲ್ಲರೂ ಗೊಳ್ಳಂತ ನಕ್ಕರು.
‘ಅವ ಬಿಡೂ ಹೋಗೀ ಒಳಗ ಮನೀ ತಾಪತ್ರಯರೇ ಕಾಣಬೇಕಲ್ಲ’ ನಡಮನೀ ನಾರ್ಯಾನ ಮಾತಿಗೆ ಎಲ್ಲರೂ ಮತ್ತೆ ನಕ್ಕರು.
ಬಸರೀಕಟ್ಟಿ ಬಸ್ಯಾ ಆ ಕಡೆ ಮಾರೀ ತಿರುಗಿಸಿ ಹೊಗಿ ಉಗುಳುದ್ರಾಗ ಮಗ್ನನಾಗಿ ಕುಳಿತುಬಿಟ್ಟ.
“ಸಿಟ್ಟಿಗೆದ್ದೇನ ಮತ್ತ ಹೀಂಗ ಹರಟೀ ನಡೀವನ” ಸಮಾಧಾನಿಸಿದ ಕರ್ಯಾನ ಮಾತಿಗೆ ಮಳ್ಳ ಆಗಿ ಹೊಳ್ಳಿ ಈ ಕಡೆ ಕೂತ ಬಸ್ಯಾ. ‘ಇಂವ ಮಗ್ಗಲ ಮನಿ ಮಾದ್ಯಾಂದಂತೂ ಬ್ಯಾರೇನ ಕಥೀ’
‘ಏನ ಅಂತಾ ಕಥೀ’ ಎಲ್ಲರೂ ಉತ್ಸುಕ ತೋರಿಸಿ ಕೇಳಿದಾಗ ಬಸರೀಕಟ್ಟಿ ಬಸ್ಯಾ ಒಂದ ಝರುಕ ಝುರ್ರಂತ ಬ್ರಹ್ಮರಂಧ್ರಕ್ಕ ಮುಟ್ಟುತನಕಾ ಎಳಕೊಂಡ ಹೊರಗ ಬರೂ ಹೊಗೀ ಒಳಗ ತನ್ಮಯ ಆಗಿ ಸುರುಳೀ ಸುರುಳೀ ಹೊರಗ ಬಿಡುತ್ತಿದ್ದರೆ ತಾವ ಸೇದಿದಾಂಗ ಸುತ್ತಲ ಕುತ್ತವರು ಕಣ್ಣು ಆ ಕಡೆ ಈ ಕಡೆ ಹೊಳ್ಳಾಡಿಸುತ್ತ ‘ಹುಂ ಹೇಳಪಾ, ಏನ ಮಾಡ್ಯಾನ ಮಾದ್ಯಾ ಕಥೀ’ ಅಂತ ಒಕ್ಕೊರಲಿನಿಂದ ಕೇಳಿದಾಗ ಬಸ್ಯಾ ಹೇಳಲಿಕ್ಕೆ ಶುರು ಮಾಡಿದ.
‘ಈ ಮಾದ್ಯಾ ಶೆರೀ ಕುಡ್ಯುದಂದ್ರ ನೀರ ಕುಡದ್ಹಂಗ ಅಂತ ತಿಳೀತಾನ, ಅಂದ್ರ ನೀರ ಯಾವುದು, ಶೆರೀ ಯಾವುದು ಫರಕನ ಗೊತ್ತಾಗುದಿಲ್ಲ’ ಅಂತ ಹೇಳಿ ಹೊಗೆಯನ್ನುಗುಳುತ್ತಾ ಅದರಲ್ಲೇ ಪರಮಾನಂದ ಕಂಡವರ ಮಗ ಕುಳಿತುಬಿಟ್ಟ. ‘ಮುಂದೇನಾತು?’ ಅರಳೀಕಟ್ಟೀ ಅನ್ಯಾನ ಧಾವಂತ. ‘ತಡೀ, ಅಂವ ಬೀಡಿ ಸೇದೂದ್ರಾಗ ಅಗ್ದೀ ಆನಂದಾನುಭೂತಿ ಹೊಂದಲಿಕತ್ತ್ಯಾನ’, ‘ಅಂವನ್ನ ನೋಡಿದರ ನಮಗ ಪರಮಾನಂದ ಆಗಾಕತ್ತೇತಿ’ ಎಂದ ಗಿಡ್ಡ ಗಿರ್ಯಾನ ಮಾತಿಗೆ ಬಸ್ಯಾ ತನ್ನ ಒಂದ ಕೈ ಮ್ಯಾಲೆತ್ತಿ ಎಲ್ಲರಿಗೂ ಸುಮ್ಮನ ಕೂಡ್ರೀ ಎಂದು ಸನ್ನೆ ಮಾಡಿ ಮತ್ತೆರಡು ಸುರುಳಿ ಬಿಟ್ಟು ಸಿಗರೇಟು ತೆಗೆದು ನೆಲಕ್ಕೆ ತಿಕ್ಕಿ ‘ಹುಂ ಕೇಳ್ರೀ, ಒಂದ್ಸಲ ಏನಾತು, ಈ ಮಾದ್ಯಾ ಮತ್ತವನ ಸಂಬಂಧಿಕ ನದೀ ದಂಡೀ ಮ್ಯಾಲೆ ಕೂತಿದ್ದರು, ಯಥಾ ಪ್ರಕಾರ ನೆತ್ತೀಮ್ಯಾಲೆ ಸುಡು ಸುಡು ಬಿಸಿಲು, ಸೂರ್ಯಾ ಏನರೇ ಕೆಂಡಾಕಾರೀ ಉಗುಳ್ಳಿಕತ್ಯಾನೇನೋ ಅನ್ನು ಹಂಗ, ಹಂಥಾದ್ರಾಗ ಮಾದ್ಯಾನ ಗಂಟಲ ಒಣಗಿ ಬಿರಕ ಬಿಟ್ಟಂಗಾತು, ಕೈಯ್ಯಾಗಿನ ಬಾಟಲೀ ಎತ್ತಿ ಬಾಯಾಗ ಹೊಯ್ಕೊಂಡ, ಎಲ್ಲಾ ಖಾಲೀ ಮಾಡೇ ಕೆಳಗೆ ಇಟ್ಟ. ಇನ್ನೊಂದ್ಸಲ ಬೇಕೆನಿಸಿತು, ಇನ್ನೊಂದು ಬಾಟಲಿ ಇಳಿಸಿದ… ಹಂಗ ನಾಲ್ಕು ಬಾಟಲೀ ಗಂಟಲ ಕೊರಕನ್ಯಾಗ ಹಾಯ್ದು ಜಠರದಾಗ ಹೋಗಿ ಕುತ್ವು, ಕಣ್ಣು ತೇಲಗಣ್ಣ ಮೇಲಗಣ್ಣ ಆಗಾಕ್ಹತ್ತಿದ್ವು. ನದ್ಯಾಗ ಸಂಬಂಧಿಕ ಸ್ನಾನಕ್ಕೆ ಇಳಿದಾನ, ಇಂವಗೇನೂ ಧ್ಯಾನ ಇಲ್ದ ಕೂತು ಬಿಟ್ಟಾನ, ಒಮ್ಮೆಲೇ ನದ್ಯಾಗಿಂದ ‘ಮಾದಣ್ಣ, ನಾ ಮುಳುಗ್ಹಾಕತ್ತೀನೋ, ನನ್ನ ಉಳಿಸ ಬಾರೋ’ ಎಂದು ಆರ್ತನಾಗಿ ಆತ ಚೀರುತ್ತಿದ್ದರೆ ಇವನಿಂದ ಯಾವುದೇ ಅಭಂ ಇಲ್ಲ ಶುಭಂ ಇಲ್ಲ. ಇವನ ನಿರ್ವಿಕಾರ ಭಾವ ನೋಡಿ ಆತ ಮತ್ತೊಮ್ಮೆ, ‘ಮಾದಣ್ಣ ನೀ ಈಗ ಬಂದು ಉಳಿಸಲಿಲ್ಲಂದ್ರ ನಾ ಮುಳುಗಿ ಹೊಕ್ಕೇನಿ, ನಾ ಸತ್ತೇ ಹೊಕ್ಕೇನಿ’ ಎಂದರ ಈ ಭೂಪ ಏನನಬೇಕು. ‘ಹೊಕ್ಕೀ ಹೋಗ, ಹೊಕ್ಕೀ ಹೋಗ ಅಂತ ಕೂಗಿ ಹೇಳಿ ಧೊಪ್ಪಂತ ಬಿದ್ದರ ಮುಂದ ಮಂದೀ ಇವನ್ನ ದೇಹ ಇವನ ಸಂಬಂಧಿಕನ ಹೆಣಾ ಎರಡೂ ಹೂತಕೊಂಡು ಮನೀಗೆ ಬರಬೇಕಾತು ‘ಕಟ್ಟೀಮ್ಯಾಲ ಕುತ್ತಾವ್ರು, ಅತ್ಲಾಗ ಇತ್ಲಾಗ ಅಡ್ಡ್ಯಾಡವ್ರು, ಈ ಮಾತ ಕೇಳಿಸಿಕೊಂಡಾವ್ರು ಎಲ್ಲಾರೂ ಬಿದ್ದು ಬಿದ್ದು ನಗತೊಡಗಿದರು.
‘ಇದ ಅತೀ ಆತಪಾ’ ಅನ್ಯಾ ಗಿರ್ಯಾಗ ತಿವಿದು ಹೇಳಿದರ ಗಿಡ್ಡ ಗಿರ್ಯಾ ‘ನೀ ಏನ ಕಮ್ಮೀ ಅದೀ. ಎರಡೂ ಕೈಲೀ ಭಜನೀಗೆ ಕುತ್ತ್ಯಂದ್ರ ಕರೀ ರಾತ್ರೀ ಹೋಗಿ ಬಿಳೀ ಹಗಲೀ ಆಕ್ಕೈತಿ, ಬಿಳೀ ಹಗಲ ಕರೀ ಆಗೂದು ಭಾಳ ವ್ಯಾಳ್ಯಾ ಹಿಡ್ಯುದಿಲ್ಲ, ಇದ್ದದ್ದೆಲ್ಲ ಭಜನೀ ಒಳಗ ಸುರುವಿ ಬಿಟ್ಟಿ.’
ಗಿರ್ಯಾನ ಮಾತಿಗೆ ಅನ್ಯಾ ಸಿಟ್ಟಿಗೆದ್ದು, ‘ಒಂದ ಚಾರಷೇ ಇದ್ದರ ಕೊಟ್ಟೀರು, ಬಿಳೀ ಹಗಲ ಕರೀ ಮಾಡಿ ಬರ್ತೇನಿ’ ಎಂದಾಗ ಮತ್ತ ಎಲ್ಲಾರ ನಗು.
ಬಾಳ್ಯಾನ ಸಂಗತೀ ಮಾತಾಡಿದ್ರನ ಅವನ ಮೈಯ್ಯಾಗಿನ ಬೆವರ ಹನೀ ಒಳಗನ ರೋಗಾಣು ಕುತ್ತಿರತಾವೋ ಏನೋ ಕೇಶ್ಯಾ ಹೇಳಿದರ ಸಿಟ್ಟಿಗೆದ್ದ ಬಾಳ್ಯಾ, ‘ಮಗಾ ತಂಬಾಕ ತಿನ್ನೂದಂದ್ರ ಅನ್ನಾ ತಿಂದಂಗ ತಿಂತೀ, ಯಾವಾಗ್ಲೂ ಪಾನ ಪರಾಗ ಗುಟಖಾ ಕಿಸೆದಾಗ ಗಂಟಲನ್ಯಾಗ, ಗಂಟನ್ಯಾಗ ಕಿಸೇದಾಗ ಓಡ್ಯಾಡತ್ತಿರ್ತಾವ ಮಗಾ, ನನ್ನ ಚಟದ ಬಗ್ಗೆ ಮಾತಾಡ್ತಾನ” ಎಂದು ಬಾಳ್ಯಾನ ಮಾತಿಗೆ ಸಿಟ್ಟಿಗೆದ್ದ ಕೇಶ್ಯಾ ಸಿಟ್ಟಿನಿಂದ ಎದ್ದು ನಡೆದಾಂವ ಎಲ್ಲಾರ ಜುಲಿಮಿಗೆ ಮತ್ತ ಬಂದು ಕಟ್ಟಿ ಮ್ಯಾಲೆ ಆಸೀನನಾದ.
‘ತಡಿಯೋ, ಇಷ್ಟ್ಯಾಕ ಗಡಿಬಿಡಿಲೇ ಸಿಟ್ಟಿಗೆದ್ದ ಹೋಗ್ತೀ, ಯಾವುದರೇ ಬಕರಾ ಸಿಗಬಹುದು’ ಅಂತ ಚಟದ ಕೂಟದ ಅಧ್ಯಕ್ಷನ ಆದೇಶಕ್ಕೆ ಎಲ್ಲಾರೂ ಶಾಂತ ಆದರು.
ಆಗ ಆ ಮಂಡಳಿಯ ಅಧ್ಯಕ್ಷನಾದ ನಡುಮನೀ ನಾರ್ಯಾನ ಉದ್ಗಾರ, ‘ನನಗ ಅರ್ಜೆಂಟ್ ಬೆಂಗಳೂರಿಗೆ ಹೋಗುದದ, ನಮ್ಮ ತಂಗೀ ಮಗಳ ಮದುವೀ ಅದ.’
‘ಅದಕ್ಕೇನಾತು?’ ಅನ್ಯಾನ ಮಾತಿಗೆ ಬಸ್ಯಾ, ‘ಅಷ್ಟೂ ತಿಳ್ಯುದಿಲ್ಲೇನ್ಲೇ ಅರ್ಜೆಂಟ್ ರೊಕ್ಕ ಬೇಕಾಗ್ಯಾವ ಅಂತ ಅರ್ಥ.’
‘ಕರೆಕ್ಟ ಬರೋಬ್ಬರಿ ಹೇಳೀದೀ ನೋಡು, ಅರ್ಜೆಂಟ ಒಂದ್ಸಾವಿರ ಇದ್ರ ಕೊಡು, ಆಮ್ಯಾಲೆ ಕೊಡ್ತೀನೀ’ ನಾರ್ಯಾನ ಮಾತಿಗೆ ಕರ್ಯಾ, ‘ನಮ್ಮ ಕಡೇ ಇದ್ದೂ ಅಂದ್ರ ನಾವೆಲ್ಲಾ ಇಲ್ಲ್ಯಾಕ ಬಂದ ಕೂಡ್ತಿದ್ದೀವಿ, ನನಗೂ ಅರ್ಜೆಂಟ್ ಎರಡನೂರು ರೂಪಾಯಿ ಬೇಕಾಗ್ಯಾವ.’
‘ನನಗ ಸಾವಿರ ಸಿಗಲೀ, ಅದ್ರಾಗಿಂದ ಎರಡನೂರು ಕೊಟ್ಟನ ನಾ ಬೆಂಗಳೂರಿಗೆ ಹೋಗ್ತೀನಿ’ ಎಲ್ಲಾರೂ ಹಣಮಪ್ಪಗ ಒಂದು ಉದ್ದಂಡ ನಮಸ್ಕಾರ ಹಾಕಿ ಯಾವುದರೇ ದೊಡ್ಡ ಗಿರಾಕೀನ ಸಿಗಲಿ ಎಂದು ಬೇಡಿಕೊಂಡರು. ತಿರುಗಿ ಹೊಳ್ಳಿ ನೋಡೂದರಷ್ಟರಾಗನ ಹಣಮಪ್ಪ ಕರುಣಿಸಿದ ವರಾ ಸಿಕ್ಕ ಬಿಡ್ತು ಅನ್ನುವಷ್ಟು ಹುರುಪಾತು ಎಲ್ಲಾರಿಗೂ. ಹಿಂದ ಸಾಹುಕಾರ ಶ್ಯಾಮಣ್ಣ ನಿಂತಿದ್ದ. ಅವನ್ನ ನೋಡಿದ ಕೂಡಲೇ ಇವರೆಲ್ಲರ ಮಾರೀ ಮೂರಗಲವಾಯಿತಾದರೂ ಅವನ ಮಾರೀ ಬಾಲ ಸುಟ್ಟ ಬೆಕ್ಕಿನಂಗಾತು. ರೊಕ್ಕಾ ಬೇಡೂದ್ರಾಗ ನಡಮನೀ ನಾರ್ಯಾನಷ್ಟು ಎಕ್ಸಪರ್ಟು ಯಾರೂ ಇರಲಿಕ್ಕೇ ಇಲ್ಲ. ಅಂವ ಬೇಡಿದಾ ಅಂದರ ಎದುರಿಗಿನವರು ಎಷ್ಟರೇ ರೊಕ್ಕಾ ಕಕ್ಕಲಿಕ್ಕೇ ಬೇಕು. ಅಂಥಾ ಬೆರಕೀ ಮಗಾ ಅಂವ.
“ನಮಸ್ಕಾರ್ರೀ ಶ್ಯಾಮಣ್ಣ, ಭಾಳ ದಿವಸಾತು ನಿಮ್ಮನ್ನ ನೋಡಿ” ನಾರ್ಯಾ ಕೇಳಿದ್ರ ಶ್ಯಾಮಣ್ಣ ಒಳಗಿಂದೊಳಗನ ಕರಬಲಿಕ್ಕೆ ಹತ್ತಿದಾ, ನೋಡದ ಇದ್ರನ ಠೀಕ ಅದ ಅನ್ನೂ ಹಂಗ ಮಾರೀ ಮಾಡಿದ, ನಾರ್ಯಾ ಬಿಡಬೇಕಲ್ಲ ಅಂವನ ಮತ್ತ ಅವನ ಅಗ್ದೀ ಬಾಜೂಕನ ನಿಂತು, ‘ನಿಮ್ಮ ಮನೀಗೆ ನಾಳೆ ಗಡ್ಡೀ ಬದನೀಕಾಯಿ ಕಳಿಸ್ತೀನಿ, ನೀವು ಇರ್ತಿರಲ್ಲಾ’ ಅಂದಾಗ ಸ್ವಲ್ಪ ನಗಮಾರೀ ಮಾಡಿದ ಶ್ಯಾಮಣ್ಣ ‘ಹೂಂ’ ಎಂದು ಅನ್ನೂದಕ್ಕನ ಬಲೀ ಹಳ್ಳಕ್ಕ ಬಿತ್ತು ಅನ್ನೂ ಅರಿವಾದ ನಾರ್ಯಾ, ಬೆಂಗಳೂರಿನ್ಯಾಗ ನಮ್ಮ ತಂಗೀ ಇದ್ದಾಳಲ್ಲ. ಅಕೀ ಮಗಳ ಮದುವೀ ಅದ ಸಾವ್ಕಾರ್ರ, ನೀವ ಸ್ವಲ್ಪ ಮದತ ಮಾಡಬೇಕ್ರೀ ಈಗ, ನಾ ಊರಿಂದ ಬಂದ ಮ್ಯಾಲ ನಿಮ್ಮ ರೊಕ್ಕಾ ನಿಮಗ ಕೊಡ್ತೀನ್ರೀ’ ಗಂಗಾ ಭಾಗೀರಥೀ ಕಣ್ಣಲ್ಲಿ ಹರಿಸಿಕೊಂಡ ನಾರ್ಯಾ ಸ್ವಲ್ಪ ಧನಿ ಸಣ್ಣಗ ಮಾಡಿ ಹೇಳಿದರ ಸುತ್ತಲಿನ ಅವನ ಪಟಾಲಂ ಗೆಳೆಯರಿಗೂ ಆಶ್ಚರ್ಯ. ಜಾದೂ ನೋಡಿದ್ಹಂಗ ಅನ್ನಿಸ್ತು, ‘ಈ ಪರೀ ಕಣ್ಣಾಗ ನೀರ ಹ್ಯಾಂಗ ಬಂದೂಲೇ’ ಮಾದ್ಯಾ ಕರ್ಯಾಗ ತಿವಿದರ ‘ಗ್ಲೀಸರೀನ ಪ್ರಭಾವೋಲೆ’ ಎಂದು ಪಿಸುಗುಟ್ಟಿದ ಕರ್ಯಾ. ಇಲ್ಲಿಂದ ತಪ್ಪಿಸಿಕೊಂಡು ಹೋಗೂದು ಹ್ಯಾಂಗ ಅಂತ ಹೊಳಿದೇ ಮಿಕ ಮಿಕ ನೋಡುತ್ತಾ ನಿಂತ ಶ್ಯಾಮಣ್ಣನನ್ನು ಈ ಪಟಾಲಂ ಸುತ್ತುವರೆದರು. ಏನರೆ ಕಕ್ಕಿಸಿಯೇ ಕಳಿಸ್ತಾರ ಅನ್ನೂದು ಖಾತ್ರಿಯಾಯ್ತು ಶ್ಯಾಮಣ್ಣಗ.
“ಸರೀರೀ, ನಾ ಅಂಗಡಿಗೆ ಹೊಗಬೇಕು ಅಂತ ಅಂವಾ ಅವಸರಿಸಿದರ ನಾರ್ಯಾ ಅವನ ಕೈ ಗಟ್ಟಿ ಹಿಡಿದ. ಇನ್ನು ಸ್ವಲ್ಪ ವೇಳ್ಯಾ ಹೀಂಗ ಆದ್ರ ನನಗೆಲ್ಲೆರೆ ಬಡದು ಕಸಗೋತಾರ ಒಟ್ಟು ಎರಡು ಸಾವಿರ ಕೊಡ್ರೀ ಶ್ಯಾಮಣ್ಣ, ಅಗ್ದೀ ಅರ್ಜೆಂಟದ.’
‘ರೊಕ್ಕಾ ಅಂದ್ರ ಏನ ಹುಣಶೀಕಪ್ಪ ಅಂತ ತಿಳಿಕೊಂಡೀ ಏನು? ಒಮ್ಮೇ ಅಷ್ಟು ಕೊಡಲಿಕ್ಕೇ, ನಿಮಗ ಕೊಟ್ಟರ ಹೊಳ್ಳೀ ಬರೂ ಗ್ಯಾರಂಟೀನೂ ಇಲ್ಲ ಮತ್ತ…..’ ಎಂದು ಶ್ಯಾಮಣ್ಣ ತನ್ನ ಮಾತನ್ನು ಇನ್ನೂ ಮುಗಿಸಿರಲಿಲ್ಲ. ಅಷ್ಟರಾಗ ಮಾದ್ಯಾ ಕರ್ಯಾ ಅವನ ಮೈಮ್ಯಾಲೇ ಏರಿ ಬಂದರು. ಗಾಬರಿ ಆಗಿ ಶ್ಯಾಮಣ್ಣ ಕಿಸೆದಾಗ ಕೈ ಹಾಕಿ ಹದಿನೆಂಟನೂರು ಮತ್ತಷ್ಟು ಚಿಲ್ಲರೆ ಇದ್ದದ್ದನ್ನು ನೀರಾಗ ಬಿಟ್ಟಾಂಗ ನಾರ್ಯಾನ ಕೈಯ್ಯಾಗ ಬಿಟ್ಟು ಸೊಟ್ಟ ಮಾರೀ ಮಾಡ್ಕೊಂಡು ಬಿರಬಿರನೆ ನಡೆದೇ ಬಿಟ್ಟ.
ನಾರ್ಯಾನ ನಗೀ ಜೋಡಿ ಬಸ್ಯಾ, ಕರ್ಯಾ, ಮಾದ್ಯಾ, ಅನ್ಯಾ, ಬಾಳ್ಯಾ, ಕೇಶ್ಯಾ ಎಲ್ಲಾರ ನಗೀಗೋಳು ಕೂಡಿ ಮುಗಿಲು ಹರಿದುಹೋತೇನೋ ಅನ್ನೂ ಹಂಗ ಗಹಗಹಿಸತೊಡಗಿದರು. “ದೇವರಂದ್ರ ಇಂಥಾ ಹಣಮಪ್ಪನಂಗ ಇರಬೇಕ್ರಪಾ, ನಾವು ಕೇಳಿದ್ದು ಒಂದು ಸಾವಿರ, ಕೊಟ್ಟಿದ್ದು ಎಂಟನೂರು ಹೆಚ್ಚನ” ಕರ್ಯಾನ ಮಾತಿಗೆ ಎಲ್ಲಾರೂ ಹೂಂಗುಟ್ಟಿದರು. ತನ್ನ ಪಾಲಿನ ಒಂದು ಸಾವಿರ ನಾರ್ಯಾ ತಾ ತೊಗೊಂಡು ಬೆಂಗಳೂರಿನ ಹಾದೀ ಹಿಡಿದ. ಎರಡು ನೂರು ಕರ್ಯಾಗ ಹೋದ್ದು, ಇನ್ನ ಉಳಿದಿದ್ದು ಬಸ್ಯಾನ ಸಿಗರೇಟಿನ ನೂರು, ಮಾದ್ಯಾನ ಶೆರೀಗೆ ನೂರು, ಕೇಶ್ಯಾನ ತಂಬಾಕಕ್ಕ ಐವತ್ತು, ಅನ್ಯಾನ ಇಸ್ಪೀಟಿಗೆ ನೂರು, ಬಾಳ್ಯಾನ ಖಯಾಲಿಗೆ…. ಹಂಚಿಕೊಂಡ ಉಳಿದಿದ್ದು ಮಸ್ತ ಫ್ರೈ ಮಾಡಿದ್ದ ಮೀನು, ಚಿಕನ್ ಬಿರಿಯಾನಿ ಊಟಾ ಉಂಡು ತೇಲಾಡಿಕೊತ ಮನಿ ಸೇರಿದರು. ಮತ್ತ ಮರುದಿನ ಅದ ಹಾಡು, ಅದ ಕಥೀ ‘ನಮಗ’ ಭಾಳ ಅಡಚಣೀ ಅದ…..’ ಎನ್ನುತ್ತಾ ಯಾವುದರ ಮಿಕದ ಹುಡುಕಾಟ ಚಾಲೂ…..