ಚಾಳ
ಮನೆಯ ಹಿಂದಿನ ಚಾಳಿನ ಮೊದಲ ಮನೆಯಲ್ಲಿ ಕವಿಯೊಬ್ಬನಿದ್ದ,
ನಿರುಪದ್ರವಿ, ತನ್ನೆಡೆಗೆ ಹೋದ ಮಕ್ಕಳಿಗೂ ಕವನ ಹಂಚುತ್ತಿದ್ದ,
ಅವುಗಳನ್ನೋದುವಾಗ ಮಾತ್ರ ಭಾವುಕನಾಗುತ್ತಿದ್ದ,
ಕಣ್ಣುಗಳಲ್ಲಿ ಕನಸುಗಳ ಲಗೋರಿ, ಪ್ರೇಮಲೋಕದ ಬುಗುರಿಯಾಗಿದ್ದ,
ಕವನಗಳಿಗೆ ಮೆಚ್ಚಿ ಒಬ್ಬಳೂ, ಅವನ ಕೈಹಿಡಿಯಲಿಲ್ಲ!
‘ರಗಡ’ಆಗಿತ್ತು ಅವರ ಮನೆಯವರಿಗೆ, ‘ಉಂಡಾಡಿ’ ‘’ಅಡ್ನಾಡಿ’ ಯಾಗಿದ್ದ,
ದಿನವೂ ಅಷ್ಟಷ್ಟ ಸತ್ತು, ಈ ಲೋಕವನ್ನೇ ತೊರೆದುಬಿಟ್ಟ!
ಅವನನ್ನು ಹುಡುಕಿಕೊಂಡು ಈಗಲೂ ಬರುತ್ತಾರೆ, ಕೆಲವರು
ಬೆರಗಿನಿಂದ ಕೇಳುತ್ತಿರುತ್ತಾರೆ,..ಅವನ ಬಗ್ಗೆ!
ಚಾಳಿನ ಎರಡನೆಯ ಮನೆಯಲ್ಲಿ ಒಬ್ಬ ತಾಯಿ
ಚಿಮಣಿಯ ಬೆಳಕಿನಲ್ಲಿ ಓದಿಸುತ್ತಿದ್ದಳು, ಮಕ್ಕಳಿಗೆ
ಸಂಜೆಯಾಗುತ್ತಲೇ ಶಾಲೆಯಿಂದ ಬರುವುದರೊಳಗಾಗಿ
ನಾಲ್ಕಾರು ಮನೆಗೆಲಸ ಮುಗಿಸಿರುತ್ತಿದ್ದಳು
ಅವರು ಅಂಗಳದಲ್ಲಿ ಆಟವಾಡುವಾಗ,
ಇವಳ ಒಲೆ ಹೊಗೆಯುಗುಳುತ್ತ ಗಡಿಗೆಯಲ್ಲಿ ಅನ್ನ ಬೇಯಿಸುತ್ತಿತ್ತು
ನಿದ್ದೆಯ ನಾಡಿ ಎಳೆಯುವವರೆಗೂ
ಮಕ್ಕಳೊಂದಿಗೆ ಬೆರೆತು ಪಾಠ ಹೇಳುತ್ತಿದ್ದಳು,
ತನ್ನ ವಯಸ್ಸನ್ನು ಅರೆದು ಕ್ಷಣಗಳಣ್ಣುಣಿಸುತ್ತಿದ್ದಳು
ತಾನುಣ್ಣದಿದ್ದರೂ ಮಕ್ಕಳಿಗೆ ಉಣಿಸುತ್ತಿದ್ದಳು
ಮನೆಯಲ್ಲೀಗ ಅವಳಿಲ್ಲ
ಸೊಸೆಯ ಬಾಣಂತನಕ್ಕಾಗಿ ಅಮೇರಿಕೆಯಲ್ಲಿದ್ದಾಳೆ
ವರ್ಷ ವರ್ಷ ತಿರುಗುತ್ತಾಳೆ, ಮಕ್ಕಳಿರುವ ದೇಶಗಳಲ್ಲಿ,
ಚಾಳಿನ ಕೊನೆಯಲ್ಲಿದ್ದ ಹಿರಿಯ ಪ್ರಸಾದನ ಕಲಾವಿದ,
ಮೊನ್ನೆ ಮನೆ ಬಿಡಿಸಿದರು
ಬಾಡಿಗೆ ಕೊಡುವುದಾಗಲಿಲ್ಲವಂತೆ,
ಹಳೆಯ ಸೈಕಲ್ಲಿನೊಂದಿಗೆ, ಬಣ್ಣಗಳ ಡಬ್ಬಿಯೊಂದೇ ಮುಖ್ಯ ಆಸ್ತಿ,
ಪೆಚ್ಚು ಪೆಚ್ಚಾಗಿ ನಗುತ್ತಿದ್ದ, ಬಣ್ಣವಿಲ್ಲದ ಮುಖದಲ್ಲಿ
ಸಿಗರೇಟಿನ ಹೊಗೆಯಂತೆ ತೂರಾಡುತ್ತ ಹೊರಟಿದ್ದ,
ಬರಿಗಾಲ ಫಕೀರ,
ಹಿಂದಿನ ತಳ್ಳುಗಾಡಿಯಲ್ಲಿ ಪ್ರಶಸ್ತಿ ಫಲಕಗಳು, ಭಾಂಡೆಗಳು
ಹರಿದ ಗಂಟಲ್ಲಿ ರಾಜ್ಯೋತ್ಸವ ಪ್ರಶಸ್ತಿಯೊಂದು ಹೊರಚಾಚಿತ್ತು!
ಆಗಾಗ ಅವನ ಹೆಸರು ದಿನಪತ್ರಿಕೆಗಳಲ್ಲಿರುತ್ತೆ,
ಕಣ್ಣಿಗೆ ಬೀಳುತ್ತದೆ, ಪುರವಣಿಯಲ್ಲಿ
ಚಾಳಿನ ಮೊದಲ ಮನೆಯ ಮೇಲಂತಸ್ತಿನಲ್ಲಿ,
ಒಬ್ಬ ಭಾರೀ ಮೀಸೆಯ ಜಮೀನ್ದಾರನಿದ್ದಾನೆ,
ಅಲ್ಲಿ ಹಜಾರದಲ್ಲಿ ಖಡ್ಗವೊಂದು ಗೋಡೆಗೆ ನೇತು ಹಾಕಿದೆ.
ಮೀಸೆ ಕತ್ತರಿಸಲೂ ಬರದು ಈಗದು, ಜಂಗು ಹಿಡಿದಿದೆ!
ಜಮೀನು ಜಾಯದಾದ ಕರಗಿ, ಉಟ್ಟ ಅಂಗಿಯಲ್ಲಿದ್ದಾನೆ,
ಹಗಲೆಲ್ಲ ಕೋರ್ಟ್ ನಲ್ಲೇ ಹೆಚ್ಚು ಹೆಚ್ಚು ಇರುತ್ತಾನೆ,
ಕಂಡವರ ಹತ್ತಿರ ‘ಕೈಗಡ’ ಕೇಳುತ್ತಾನೆ, ರಾತ್ರಿ ‘ಬಾರಿ’ಗೆ!,
ಇನ್ನೂ ಭೂತಕಾಲದಲ್ಲಿದ್ದಾನೆ, ವರ್ತಮಾನದಲ್ಲಿ ಕಳೆದುಹೋಗಿದ್ದಾನೆ
ರಾತ್ರಿಯ ಖಾಲಿ ರಸ್ತೆಗಳಲ್ಲಿ ತೂರಾಡುತ್ತ ಬರುತ್ತಾನೆ
ಚಾಳಿನ ನಡುಮನೆಯಲ್ಲಿ ಶಿಕ್ಷಕನ ಕುಟುಂಬ ಬಹಳ ವರ್ಷದಿಂದ ಇತ್ತು,
ಕಣ್ಣುಗಳು ಕೆಂಪಗಿರುವುದನ್ನು ನಾನು ನೋಡಿದ್ದೇ ಅವನಲ್ಲಿ,
ಆತ ಕಲಿಯುವುದು ಬಹಳವಿತ್ತು!
ಮಕ್ಕಳೆಲ್ಲ ಬಲು ಪೋಲಿ, ಅಪ್ಪನಿಗಿಂತ ಹೆಚ್ಚು ಚಟಗಾರರು,
ಅವನ ಮಗನೊಬ್ಬ ನಿತ್ಯ ಜಗಳಗಂಟ,
ಶಾಲೆಗೆ ವಕ್ಕರಿಸುತ್ತಿದ್ದನಂತೆ, ಅಪ್ಪನಿಂದ ದುಡ್ಡು ಕೀಳಲು!
ಯಾರ್ಯಾರದೋ ಹಿಂಡು ಕಟ್ಟಿಕೊಂಡು, ದೊಡ್ಡ ಗ್ಯಾಂಗ್ ಲೀಡರಾಗಿದ್ದಾನೆ,
ಅಪ್ಪನ ಕಣ್ಣುಗಳು ಈಗ ಅವನಲ್ಲಿ ಬಂದಿವೆ
ನೂರಾರು ಜನರ ಪರಾಕಿನಲ್ಲಿ ವೋಟು ಕೇಳುತ್ತ ಬಂದ,
‘ಕ್ಯಾಂಡಿಡೇಟ್’ ಯಾರು ಎಂದೆ, ‘ನಾನೇ’ ಎಂದ!
ಜನವೆಲ್ಲ ಹೇಳುತ್ತಲಿತ್ತು,’ ಅವ ಬಂದೇ ಬರುತ್ತಾನೆ’
ಗೋಡೆಯ ಮೇಲಿನ ಗಾಂಧಿ ಫೋಟೋದತ್ತ ನೋಡಿದೆ,
ಗಾಂಧಿ ನಗುತ್ತಿದ್ದ, ಪೆಚ್ಚು ಪೆಚ್ಚಾಗಿ!
– ಲಕ್ಷ್ಮೀಕಾಂತ ಇಟ್ನಾಳ
1 Comment
ತನ್ನ ವಯಸ್ಸನ್ನು ಅರೆದು ಕ್ಷಣಗಳಣ್ಣುಣಿಸುತ್ತಿದ್ದಳು
ಇಂತಹ ಅನೇಕ ತಾಯಂದಿರ ತ್ಯಾಗದ ಫಲದಿಂದಾಗಿ ಮಕ್ಕಳು ಸುಖವಾಗಿಬದುಕುತ್ತಿದ್ದಾರೆ.
ಇನ್ನು ಗಾಂಧಿ ನಗು ….. ಅದು ನೂರಾರು ಅಥ್ ಕೊಡುತ್ತದ.