ಬುದ್ಧನ ಕಂಡೇನೇ…
ಸಿಂಗಾಪುರದ ಬುದ್ಧ ದಂತಾವಶೇಷ ಮಂದಿರ
ಭೂಮಿಯಲ್ಲಿ ಜನಿಸಿ ಬರುವಾಗ ನಾವೆಲ್ಲಾ ಪಡೆದು ಬರುವ ಆಯುಷ್ಯಾವಧಿಯ ಬಾಲ್ಯ, ಯೌವನ, ವೃದ್ಧಾಪ್ಯಗಳೆಂಬ ಮೂರು ಹಂತಗಳಲ್ಲಿ ನಮಗೆ ಬೇಕಾದುದೇನು? ಒಂದು ನೆಮ್ಮದಿಯ ಬದುಕು, ನೋವಿಲ್ಲದ ಸಾವು ಮತ್ತದರ ನಡುವೆ ಜೀವನಸಾರ್ಥಕ್ಯ…
‘ವಿನಾ ದೈನ್ಯೇನ ಜೀವನಮ್..ಅನಾಯಾಸೇನ ಮರಣಂ’ ಎಂಬ ಮೂಲಪ್ರಾರ್ಥನೆ ಪ್ರಪಂಚದ ಎಷ್ಟು ಜನಕ್ಕೆ ನಿಜಕ್ಕೂ ಫಲಿಸಿದೆ, ಫಲಿಸುತ್ತದೆ ಎಂದು ತಿಳಿಯಲೆತ್ನಿಸಿದರೆ ಬೆಚ್ಚಿ ಬೀಳುವ ಸ್ಥಿತಿ! ಇದೇ ಇಂದು ನಮ್ಮ ಪ್ರಪಂಚದ ಹಣೆಬರಹದ ಚಿತ್ರಣವನ್ನು ಕೊಡುತ್ತಿದೆ. ಹೌದು, ಜಗತ್ತಿನ ಜನತೆ ಶಾಂತಿಗಾಗಿ ತಹತಹಿಸುತ್ತಿದ್ದಾರೆ. ಆದರೆ ಅದು ಮಾತ್ರ ಮರೀಚಿಕೆಯಾಗಿ ಅವರಿಂದ ದೂರವೇ ಸರಿಯುತ್ತಿದೆ.
ಶಾಂತಿಗಾಗಿ ಜಗತ್ತು ಆರ್ತವಾಗಿ ಬೇಡಿಕೊಳ್ಳುತ್ತಿದೆ. ಶತಶತಮಾನಗಳಿಂದಲೂ ಈ ಬೇಡಿಕೆ ನಿರಂತರವಾಗಿದೆ..ಅಳಿವು ಉಳಿವಿನ ಈ ತೇಲುಮೇಲಾಟಗಳಲ್ಲಿ ಒದ್ದಾಡುತ್ತಿರುವಾಗ ಈ ಜಗದ ಅಣುವಣುವಲ್ಲೂ ಅತ್ಯಂತ ಸೂಕ್ಷ್ಮವಾಗಿತೇಲಿಬರುವ ಶಾಂತಿ ಸಂದೇಶವು ”ಬುದ್ಧಮ್ ಶರಣಂ ಗಚ್ಛಾಮಿ” ಎಂಬ ಮಂದ್ರ ನಾದದ ಶ್ರುತಿಯ ಮಿಡಿತವಾಗಿ ಕಿವಿಗಳಿಗೆ ಅತ್ಯಂತ ಆಪ್ತವೆನಿಸುವುದು ಇಂಥ ಕ್ಷಣಗಳಲ್ಲೇ. ಭಾರತದಲ್ಲಿ ಉದ್ಭೂತನಾಗಿ ಜಗತ್ತಿಗೆ ಮೊಟ್ಟಮೊದಲ ಶಾಂತಿಸಂದೇಶವನ್ನು ತನ್ನ ಬೆಳಕಿನ ಕಿರಣಗಳಂತೆ ಸಹಸ್ರ ಸಹಸ್ರ ಮೈಲುಗಳುದ್ದಗಲಕ್ಕೆ ಹರಡಿದ ಭಗವಾನ್ ಬುದ್ಧನ ಅಪರೂಪದ ರೂಪವಿಶೇಷಗಳನ್ನು ಹೊತ್ತ, ಕಾಣಲು ಕಾಲಿಟ್ಟವರ ಕಣ್ಮನ ತಣಿಸುವ ಚೆಲುವಿನ ಗುಡಿಯೊಂದಿದ್ದು ಅದು ಸಿಂಗಾಪುರದಲ್ಲಿನ ಬುದ್ಧದಂತಾವಶೇಷ ಮಂದಿರ.
ಸತ್ಯ, ದಯೆ,ಶಾಂತಿಯ ಸಂದೇಶವಾಹಕನಾಗಿ ನಿಂತುಕೊಂಡಿರುವ ಸಿದ್ಧಾರ್ಥ ಬುದ್ಧ ಇಲ್ಲಿನ ಅವರ್ಣನೀಯ ಚೆಲುವಿನ ಹಲವು ಅಂಗಣಗಳಲ್ಲಿ ,ನೂರು ಸಾವಿರ ಪ್ರತಿಮೆಗಳ ರೂಪದಲ್ಲಿ ಅಂಗುಲಂಗುಲಕ್ಕೂ ತನ್ನಿರವನ್ನು ನಮ್ಮೆಡೆಗೆ ತೇಲಿಬಿಟ್ಟು ಮಂದಸ್ಮಿತನಾಗಿದ್ದಾನೆ.
ಸ್ಥಳಪುರಾಣದ ಜಾಡು ಹಿಡಿದು ಹೋಗುವುದಾದರೆ ಸಿಂಗಪುರದ ಬುದ್ಧದಂತಾವಶೇಷ, (ಹೆಸರೇ ಸೂಚಿಸುವಂತೆ ತಥಾಗತ ಬುದ್ಧನ ಕೋರೆ ಹಲ್ಲು ಇಲ್ಲಿದೆ ಎನ್ನುವ ಪ್ರತೀತಿ) ಮಂದಿರ ಮತ್ತು ಅದರೊಳಗಿರುವ ಅದ್ಭುತ ಅಪರೂಪದ ವಸ್ತುಸಂಗ್ರಹಾಲಯದ ನಿರ್ಮಾಣವಾದುದು 2008 ರಲ್ಲಿ..ಗಿಜಿಗುಟ್ಟುವ ಸಿಂಗಾಪುರದ ಮಧ್ಯವರ್ತಿ ಸ್ಥಳದಲ್ಲೊಂದು ಚೈನಾಟೌನ್ ಉಂಟು, ಚೀನಾವನ್ನೇ ಹೊಕ್ಕುಬಿಟ್ಟವೋ ಎಂಬಷ್ಟು ಚೀನೀಮಯವಾಗಿರುವ ಪಗೋಡಾ ಸ್ಟ್ರೀಟ್ ಈ ಆಲಯವನ್ನು ತನ್ನ ಹೆಮ್ಮೆಯಂತೆ ಧರಿಸಿ ಚಾಚಿ ನಿಂತಿದೆ. ತನ್ನ ಆವರಣದೊಳಗೆ ಕಾಲಿಟ್ಟವರನ್ನು ಅಸೀಮ ಮೌನದ ಸೆಲೆಯೊಳಗೆಳೆದುಕೊಂಡು ಆ ನಿರ್ವಾಜ್ಯ ವಾತಾವರಣದ ಮುಸುಕನ್ನು ತೊಡಿಸಿ ಧ್ಯಾನಕ್ಕೆ ಕೂರಲೇಬೇಕೆಂದು ಪ್ರೇರೇಪಿಸುವ ಧ್ಯಾನಪ್ರಿಯರ ಸ್ವರ್ಗಇದರೊಡಲಿನ ಮೆಡಿಟೇಶನ್ ಹಾಲ್.
ಹೊರಬಾಗಿಲಿನ ಎಡ ಪಾರ್ಶ್ವದಲ್ಲಿ ಕೆಕ್ಕರಿಸಿದ ಕಣ್ಣುಗಳೊಂದಿಗೆ ಶಸ್ತ್ರವೊಂದನ್ನು ಝಳಪಿಸುತ್ತಾ ನಿಂತ ದೈತ್ಯಾಕಾರದ ರಕ್ಷಕ ಭಟನನ್ನು ಕಂಡು ಬೆರಗುವಡೆದರೂ ಅವನೊಂದಿಗೆ ಫೋಟೋ ತೆಗೆಸಿಕೊಳ್ಳದೆ ಒಳಗೆ ಕಾಲಿಡುವವರೇ ಇಲ್ಲ! ಅಂಥ ರುದ್ರರಕ್ಕಸ ಅವನು.
ಮಂದಿರದ ಹೊರಬಾಗಿಲಿನ ಅಸ್ಖಲಿತ ವರ್ಣಮಯ ವಿನ್ಯಾಸ ಮೋಡಿಗೊಳಿಸುತ್ತಿರುವಾಗಲೇ ಒಳಾವರಣಕ್ಕೆ ಕಾಲಿಡಬೇಕು. ಅಲ್ಲಿ ಕಂಡ ಆ ಚೀನೀ ವಾಸ್ತುಕಲೆಯ ಪಗೋಡಾ ವಿನ್ಯಾಸದ ಭವ್ಯ ಕಟ್ಟಡ ಇನ್ನಷ್ಟು ಸೆಳೆದಂತಾಗಿ , ತಲೆಯೆತ್ತಿ ನೋಡಿ್ದರೆ ಅದರ ಐದಂತಸ್ತುಗಳೂ ತನ್ನ ವಿಶಿಷ್ಟ ಪರಂಪರೆಯ ವಾಸ್ತುವಿನ್ಯಾಸ ಕಲೆಯನ್ನು ಪ್ರದರ್ಶಿಸುತ್ತ ಉನ್ನತವಾಗಿ ನಿಂತ ಸೊಬಗು ಹಿಡಿದಿಡುತ್ತದೆ. ಆ ಚೆಲುವಿನಿಂದ ಕಣ್ಣುಗಳನ್ನು ಸುಲಭವಾಗಿ ಕೀಳಲಾಗದು. ಅಂಥ ಅನನ್ಯ ವರ್ಣಸಂಯೋಜನೆಯ ಮೇಳವದು. ಪ್ರಾಂಗಣದ ಕಟ್ಟೆಯಂಚಿನಲ್ಲಿ ನಿಲ್ಲಿಸಿರುವ ದೊಡ್ಡ ಪಾತ್ರೆಯ ಒಳಗೆ ಮಂದಿರಕ್ಕೆ ಬಂದ ಭಕ್ತರು ಒಂದು ಊದುಬತ್ತಿಯ ಕಟ್ಟನ್ನುಹೊತ್ತಿಸಿ ತಂದು ಕಣ್ಮುಚ್ಚಿ ಮಣ ಮಣ ಪಿಸುನುಡಿಯ ಮಂತ್ರ ಜಪಿಸಿ ಆದರೊಳಗೆ ನೆಟ್ಟಿದ್ದು ಕಂಡು ನಾನೂ ಹಾಗೆ ಮಾಡುವ ಮನಸ್ಸು ಪ್ರೇರೇಪಿಸಿತು.. ಅದೊಂದು ಹಿತದ ಅನುಭವ..
ಮುಂದೊಂದು ಕ್ಷಣದಲ್ಲಿ ನಮ್ಮೆದುರು ವಿಶಾಲವಾಗಿ ತೆರೆದುಕೊಳ್ಳುವ ಗರ್ಭ ಗುಡಿಯೊಳಗೆ ಚಪ್ಪಲಿ, ಷೂ ಮೆಟ್ಟಿಕೊಂಡೇ ಹೋಗಬಹುದು.. ನೂರು ಜನರ ಶಾಂತಗಂಭೀರ ಮೌನ ನಡಿಗೆಗಳ ನಡುವೆ ಸೇರಿ ನಾನೂ ಒಳಹೊಕ್ಕೆ. ಒಂದೇ ಕ್ಷಣ.. ಮನಸ್ಸು ಭಾವಚಿತ್ತಗಳೆಲ್ಲವನ್ನೂ ಆತ್ಯಂತಿಕವಾಗಿ ಆವರಿಸಿಕೊಂಡಿತು ಆ ಅಂಗಣದ ಮೋಡಿ.. ಅದಕ್ಕೆ ಖಂಡಿತ ಸಾಟಿ ಇಲ್ಲ! ಆಗೋ ಅಲ್ಲಿ ನಟ್ಟ ನಡುವೆ ಸುತ್ತಲೆತ್ತಲೂ ಹೊಳಪಿನ ಹೊಂಬಣ್ಣದಿಂದ ಫಳಫಳಿಸುವ ತೂಗುದೀಪಗಳ ಹಿಂದೆ, ಆಕಾಶದೆತ್ತರವೋ ಎಂದು ಭಾಸವಾಗುವ ತಥಾಗತ ಬುದ್ಧನ ಅಪ್ರಮೇಯ ಶಾಂತಮೂರ್ತಿ! ಆ ನಿಮೀಲಿತ ನಯನಗಳಲ್ಲಿರುವುದು ಅಸೀಮ ಶಾಂತಿಯಲ್ಲದೆ ಇನ್ನೇನು? , ಸ್ನಿಗ್ಧ, ಅಸ್ಖಲಿತ ಚೆಲುವಿನ ಮುಖಾರವಿಂದದ ಪ್ರತಿಮೆ. ಕಮಲಸಿಂಹಾಸನದಲ್ಲಿ ಸುಖಾಸೀನ ಬುದ್ಧನ ಕೈಯಲ್ಲಿ ಮುಖದತ್ತ ಬಾಗಿರುವ ಕಮಲದ ಮೊಗ್ಗುಗಳು. ಸಕಲ ಇಷ್ಟಾರ್ಥಗಳನ್ನು ತರುವ ಆರು ಕವಾಟಗಳುಳ್ಳ ಚಿಂತಾಮಣಿ ಚಕ್ರವನ್ನು ಕೈಗಳಲ್ಲಿ ಧರಿಸಿರುವ ಬೋಧಿಸತ್ವ ಅವಲೋಕಿತೇಶ್ವರ ನಾಮಾಂಕಿತ ಬುದ್ಧ ಇವನೇ! ಚಿನ್ನದಾಭರಣಗಳಿಂದ, ಹೊನ್ನ ಕಿರೀಟದಿಂದ ಅಲಂಕೃತನಾಗಿರುವ ಸರ್ವಸಂಗ ಪರಿತ್ಯಾಗಿ..ಆತನ ಎಡಬಲದಲ್ಲಿ ಸದಾ ಸನ್ನದ್ಧ ಸ್ಥಿತಿಯಲ್ಲಿರುವ ಡ್ರಾಗನ್ ಪ್ರೇಷಿತ ಕಾವಲುಭಟರ ಮುಖವಿಡೀ ಕಟ್ಟೆಚ್ಚರ ಮಾತ್ರ!
ಇದೇ, ಪ್ರಾಂಗಣದ ಹಿಂಭಾಗದಲ್ಲಿ, -ಇದು ಮಂದಿರವನ್ನು ಇನ್ನೊಂದು ದಿಕ್ಕಿನಿಂದ ಪ್ರವೇಶಿಸಬಹುದಾದ ಹೆಬ್ಬಾಗಿಲು- ಇಲ್ಲಿರುವವನು ಸುಮಾರು 27 ಅಡಿಯೆತ್ತರದ ಮೈತ್ರೇಯ ಬುದ್ಧ. ಸಕಲ ಭೂಷಣಾಲಂಕೃತ, ರೇಶಿಮೆ ವಸ್ತ್ರವುಟ್ಟು , ಥಳಥಳಿಸುವ ರನ್ನ ಕಿರೀಟಧಾರಿಯಾಗಿ ಸಿಂಹಾಸನಾರೂಢನಾಗಿ ನಿಮೀಲಿತ ನೇತ್ರನಾಗಿರುವ ಇವನ ಎಡಬಲದಲ್ಲಿ ಸೌಮ್ಯಮುಖದ ನಸುನಗುವಿನ ಅಂಜಲೀಬಧ್ಧ ಸಖರಿಬ್ಬರು ಪ್ರಭುವಿನ ಸೇವೆಗೆ ಸನ್ನದ್ಧ ಮುದ್ರೆಯಲ್ಲಿ ಸ್ಥಿತರು…ಹಾಗೆ ನೋಡಿದರೆ ಎರಡು ಮುಖ್ಯ ಪ್ರವೇಶ ದ್ವಾರಗಳಿರುವ ಈ ಮಂದಿರದಲ್ಲಿಡೀ ಎಲ್ಲಿ ನೋಡಿದರೂ ಬುದ್ಧಮಯವಾಗಿ ಕಂಗೊಳಿಸಿದರೆ ಹೌದೆಸಿಬಿಡುತ್ತದೆ.
ಸ್ವಾಗತ ಪ್ರಾಂಗಣದಲ್ಲಿ ಎಡಬಲಕ್ಕೂ ಚಾಚಿದ ಗೋಡೆಗುಂಟ ಅಸಂಖ್ಯಾತ ಕಿರುಗೂಡುಗಳ ಒಡಲುಗಳಲ್ಲಿ ನಾನಾ ಧ್ಯಾನಸ್ಥ ವಿನ್ಯಾಸಮುದ್ರೆಯಲ್ಲಿರುವ ಬುದ್ಧ ಪ್ರತಿಮೆಗಳ ಪ್ರತಿಫಲಿತ ಮಿರುಗು.. ಪ್ರತಿ ಬುದ್ಧಮೂರ್ತಿಗೂ ಒಂದು ಹೆಸರುಂಟು. ಎರಡೂವರೆ ಸಾವಿರ ವರ್ಷಗಳ ಹಿಂದೆ ಅರಳೀಮರದಡಿಯಲ್ಲಿ ಧ್ಯಾನಸ್ಥ ಸಿದ್ಧಾರ್ಥ ತನಗೊದಗಿದ ಆ ಜ್ಞಾನದ ಅರಿವಿನ ಸಂದೇಶಗಳನ್ನೆಲ್ಲ ಇಲ್ಲಿ ಪ್ರಕಟಪಡಿಸಿರುವ ಮುದ್ರೆಗಳಲ್ಲಿ ತುಂಬಿದ್ದಾನೆ. ಮುಖ್ಯವಾಗಿ ‘ಬುದ್ಧ’ ಪದದ ಅರ್ಥವೇ ಎಚ್ಛೆತ್ತವನು, ಜಾಗ್ರತನಾಗಿರುವವನು ಅಂತ ಅಲ್ಲವೇ? ಮುಚ್ಚಿದ, ಅರೆತೆರೆದ,ಅವನ ನಿಮೀಲಿತ ನಯನಗಳಲ್ಲಿ ಸಾಗರದಾಳದಷ್ಟು ಶಾಂತಿ! ಕಂಡೂ ಕಾಣದ ನಸುನಗೆ ಸೂಸುವ ಆ ತುಟಿಗಳಲ್ಲಿ ಕರುಣೆಯ ಹಾಡು.
ಆರ್ಯ ಅಷ್ಟಾಂಗಿಕ ಮಾರ್ಗಗಳ ಸಮ್ಯಕ್ ಅರ್ಥಾತ್ ಸತ್ಯ ಜ್ಞಾನ, ಸಮ್ಯಕ್ ಸಂಕಲ್ಪ, ಸಮ್ಯಕ್ ವಚನ,ಸಮ್ಯಕ್ ಕರ್ಮಂತ, ಸಮ್ಯಕ್ ಅಜೀವ, ಸಮ್ಯಕ್ ವ್ಯಾಯಾಮ, ಸಮ್ಯಕ್ ಸ್ಮೃತಿ, ಸಮ್ಯಕ್ ಸಮಾಧಿ. ಈ ಅಷ್ಟಾಂಗ ಮಾರ್ಗ ಸೂತ್ರಗಳ ಮೂಲಕ ಮೋಕ್ಷಪ್ರಾಪ್ತಿ. ಪಾಪಾಕರಣ, ಪುಣ್ಯಸಂಚಯ, ಚಿತ್ತ ಪರಿಶುದ್ಧಿಗಳ ಧಮ್ಮಪದದ ಮೂರು ಅಪ್ರಮೇಯ ತತ್ವಗಳ ತನ್ನ ಈ ಪ್ರತಿಮೆಗಳಲ್ಲಿ ತುಂಬಿ ಮುಖಭಾವ, ಕೂತ ಭಂಗಿ, ಹಸ್ತವಿನ್ಯಾಸ, ಮುಖಮುದ್ರೆಗಳಲ್ಲಿ ಪ್ರಚುರಪಡಿಸುತ್ತಿರುವ ಒಂದೊಂದು ಬುದ್ಧ ಪ್ರತಿಮೆಯೂ ಅವನನ್ನೇ ನೋಡುತ್ತಾ ನಿಂತು ಆ ಭಾವಬೋಧದಲ್ಲಿ ಲೀನವಾಗುವಂತೆ ಪ್ರೇರೇಪಿಸುತ್ತದೆ. ಸತ್ಯ, ಶಾಂತಿ, ದಯೆ, ಕರುಣೆಯ ಧರ್ಮ ಮಾರ್ಗಗಳ ಮೂಲಕ ಜನ್ಮಸಾರ್ಥಕ್ಯ ಪಡೆವ ದಾರಿದೋರುತ್ತ ಅವನಿಲ್ಲಿ ಸ್ಥಿತನಾಗಿದ್ದಾನೆ.
ಮಟ್ಟಿಲೇರಿ ಅಥವಾ ಲಿಫ್ಟಿನಲ್ಲಿ ಮೇಲೇರಿದಂತೆ ತೆರೆದುಕೊಳ್ಳುವ ಒಂದೊಂದೇ ಮಹಡಿಗಳಲ್ಲೂ ಬೇರೆಯದೇ ಬುದ್ಧಲೋಕ, ಎರಡನೇ ಮಾಳಿಗೆಯ ಸಾವಿರ ಬುದ್ಧ ಅಂಗಣ, ಮೂರನೆಯದರಲ್ಲಿ ಚೀನೀಯರ ವಸ್ತುಸಂಗ್ರಹದ
ಪರಾಕಾಷ್ಠೆಯ ಪ್ರತೀಕವಾಗಿ ಸಾಲು ಸಾಲಾಗಿ ಜೋಡಿಸಿಕೊಂಡಿರುವ ಅಸಂಖ್ಯ ವಸ್ತುಗಳಲ್ಲಿ ಏನೇನೆಲ್ಲ ಉಂಟು! ಬುದ್ಧನ ಮೂಳೆ ಮತ್ತು ನಾಲಿಗೆಯಿಂದ ಮೊದಲುಗೊಂಡು ದಕ್ಕಿರುವ ಅತ್ಯಪರೂಪದ ವಸ್ತುಗಳಿವು ಎಂದು ನಂಬಿ ಕಾಯ್ದುಕೊoಡ ಭಂಡಾರವಿದು.
ತಥಾಗತ ಬೋಧಿಸತ್ವ ಕ್ಷಿತಿಗರ್ಭನ ರೂಪದಲ್ಲಿ ಇಲ್ಲಿದ್ದಾನೆ.
ಬೌದ್ಧರ ಸಾಂಸ್ಕೃತಿಕತೆಯ ಸಮಗ್ರ ಚಿತ್ರಣವೇ ಇಲ್ಲಿ ಪ್ರತ್ಯಕ್ಷವಾಗಿದ್ದು, ಪುರಾತನ ಚೀನೀ ಭಾಷೆಯ ದಾಖಲೆಗಳು,
ಸಮಗ್ರ ಏಷಿಯನ್ ಬುದ್ಧಪರಂಪರೆಯನ್ನು ಚೀನೀ ವೈಶಿಷ್ಟ್ಯಗಳ ರೂಪದಲ್ಲಿ ಎತ್ತಿ ತೋರುವ ವಸ್ತುಗಳ ಸಂಗ್ರಹವಿಲ್ಲಿದೆ. ನನಗರ್ಥವಾಗದ ಓರೆಕೋರೆ ಅಕ್ಷರಗಳ ಮಂಡಾರಿನ್ ಭಾಷೆಯ ಬುದ್ಧ ವಚನಗಳ ಸಾಲುಗಳು ಇಲ್ಲಿನ ಮಹಡಿಯುದ್ದಗಲಕ್ಕೂ ಕೆಂಪು ರೇಶಿಮೆಯ ತೂಗುಫಲಕಗಳಲ್ಲಿ ಕಣ್ಣುಗಳಿಗೂ ಹಬ್ಬವಾಗಿವೆ ಅನಿಸಿತು.
ವಿವಾದಗಳಿಲ್ಲದೆ ಯಾವುದೇ ಧಾರ್ಮಿಕ ಕಟ್ಟಡ ನಿರ್ಮಾಣವಾಗುವುದು ಒಂದಿಷ್ಟು ವಿರಳವೇ ಹೌದೇನೋ? ಇಲ್ಲಿ ಬುದ್ಧ ದಂತಾವಶೇಷವೇ ವಿವಾದಕ್ಕೊಳಗಾಗಿದ್ದು ಎಲ್ಲೆಡೆ ಚರ್ಚೆಗೊಳಗಾಗಿತ್ತು. ತಾಂಗ್ ಚೀನೀ ವಾಸ್ತುಶಿಲ್ಪ ಆಧಾರಿತ ಈ ಮಂದಿರ ಪೂರ್ಣವಾಗಿ ಲೋಕಾರ್ಪಣೆಗೊಂಡು ಭಕ್ತರ ದರ್ಶನಕ್ಕೆ ಲಭ್ಯವಾಗಿದ್ದು 2008 ರಲ್ಲಿ. ಮಾಯನ್ಮಾರಿನ ಮಾರುಕ್ ಎಂಬ ಊರಲ್ಲಿ 1980ಯಲ್ಲಿ ಉತ್ಖನನವೊಂದರಲ್ಲಿ ಬುದ್ಧನ ಕೋರೆಹಲ್ಲಿನ ಅವಶೇಷದ ಪತ್ತೆಯಾಗಿ
ಮಾಯನ್ಮಾರಿನ ಬಂದುಲಾ ಬುದ್ಧಮಠದ ಪೂಜ್ಯ ಕಕ್ಕೆಪಾಲ ಎಂಬ ಧರ್ಮಗುರು ಇದನ್ನು ಕಂಡು ಹಿಡಿದು ಬಂಗಾರದ ಮಂಟಪದೊಳಗಿಟ್ಟು ಪೂಜೆ ಮಾಡ್ತಿದ್ದರಂತೆ.ಮುಂದೆ ಶಿ ಫಝಾವ ಎಂಬ ಚೀನೀ ಧರ್ಮಗುರು ಈ ದಂತಾವಶೇಷಗಳನ್ನು ಅವರಿಂದ ಕೇಳಿ ಪಡೆದು ಕಕ್ಕಪಾಲರಿಗಿತ್ತ ವಚನದಂತೆ ಸಿಂಗಪುರದಲ್ಲಿ ಅದ್ಭುತವಾದ ಮಂದಿರ ಕಟ್ಟಿ ಅಲ್ಲಿ ಈ ದಂತಾವಶೇಷಗಳನ್ನಿರಿಸಿ ಕಾಪಾಡಿ ಬುದ್ಧಭಕ್ತರು ಇಲ್ಲಿ ಬಂದು ಪ್ರಾರ್ಥನೆಗೈಯುವ ವ್ಯವಸ್ಥೆ ಮಾಡಿದರಂತೆ.
ನಾಲ್ಕನೆಯ ಅಂತಸ್ತಿನಲ್ಲಿರುವುದೇ ಬುದ್ಧದಂತಾವಶೇಷವನ್ನು ಹೊತ್ತಿ ನಿಂತಿರುವ ಚಿನ್ನದ ಭಾರೀ ಮಂಟಪ.. ಸ್ತೂಪದ ತಲೆಯ ಮೇಲಿನ ಮಳಿಗೆಯ ಒಳಭಾಗದಲ್ಲಿ ವೈರೋಚನ ಮಂಡಲದ ಗಾಢ ಬಣ್ಣಗಳ ತೈಲಚಿತ್ರದಲ್ಲಿ ಮೂವತ್ತಾರು ಡ್ರ್ಯಾಗನ್ ಗಳ ನೆಟ್ಟ ನೋಟ.. ಇಲ್ಲಿ ಧ್ಯಾನದ ಅಂಕಣದ ವರೆಗೆ ಹೊರತುಪಡಿಸಿದರೆ ಇನ್ನೂ ಒಳಗೆ ನಮಗೆ ಪ್ರವೇಶವಿಲ್ಲ. ನಾಲ್ಕು ನೂರಾಇಪ್ಪತ್ತು ಕಿಲೋಗ್ರಾಮ್ ಚಿನ್ನ ಬಳಸಿ ತಯಾರಾದ ಸುಂದರ ಮಂಟಪದೊಳಗೆ ರೇಷ್ಮೆಯಲ್ಲಿ ಸುತ್ತಿಟ್ಟ ಬುದ್ಧನ ಕೋರೆ ಹಲ್ಲಿನ ಗಾತ್ರ, ಸ್ವರೂಪದ ಬಗ್ಗೆ ನಮ್ಮಲ್ಲಿ ಮೂಡಿದ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವುದು ಅನಂತರದ ಮಾತು, ಆದರೆ ಅಲ್ಲಿ ತಾನೇ ತಾನಾಗಿ ಅಣುವಣುವಲ್ಲೂ ತುಂಬಿ ನಿಂತ ಪರಮ ಶಾಂತಿ ಸಮಾಧಾನದ ಛಾಯೆಯಲ್ಲಿ ಯಾವುದೇ ಪ್ರಶ್ನೆಗಳೇಳದಂತೆ ಮನಸ್ಸು ಭಾವವಿಭೋರವಾಗಿಬಿಟ್ಟಿತು!
ಇದೇ ಅಂಗಣವೇ ಮುಖ್ಯ ಪ್ರಾರ್ಥನಾ ಸಭಾಂಗಣವೂ ಧ್ಯಾನಕೇಂದ್ರವೂ ಹೌದು. ಸೂಜಿ ಬಿದ್ದರೂ ಛಳ್ಳನ್ನುವ ಆ ನಿಶ್ಯಬ್ದ ನೀರವದಲ್ಲಿ ಎಡಬಲದ ನಾಲ್ಕಡಿಯೆತ್ತರದ ವಿಶಾಲ ಕಟ್ಟೆಯ ಮೇಲೆ ಹಾಸಿದ ರತ್ನಗಂಬಳಿಯಲ್ಲಿ ಅಲ್ಲಲ್ಲಿ ಪದ್ಮಾಸನ ಹಾಕಿ ಧ್ಯಾನಮುದ್ರೆಯಲ್ಲಿ ಕಣ್ಮುಚ್ಚಿ ನಿಶ್ಚಲರಾಗಿದ್ದ ಹಲಕೆಲವು ವಿದೇಶಿಯಿಯರು ಕಣ್ಣಿಗೆ ಬಿದ್ದರು. ನಮ್ಮಂತೆ ಬಂದಿದ್ದ ಹಲವರು ಆ ಸಂಪೂರ್ಣ ಶಾಂತಿಯನ್ನು ಮನಸ್ವೀ ಒಳಗೊಳ್ಳುತ್ತ ಬೆಕ್ಕಿನ ಹೆಜ್ಜೆಯಿಟ್ಟು ಮುನ್ನಡೆಯುತ್ತಿದ್ದರು.
ಕಣ್ಮುಚ್ಚಿ ಕೂತ ನನಗೆ ಆ ಕೆಲವು ಗಳಿಗೆಗಳ ಕಾಲ ಎಲ್ಲಿಗೆ ಕರೆದೊಯ್ದಿತೆನ್ನುವುದೇ ಅರಿವಾಗದಂತೆ ಸರಿದು ಹೋಯಿತು. ನಮ್ಮ ರಾಮಕೃಷ್ಣಾಶ್ರಮಗಳಂಥ ಧ್ಯಾನಾಂಗಣಗಳನ್ನೇ ಹೋಲುವ ಆ ನಿಶ್ಯಬ್ದ ಸ್ಥಬ್ಧತೆಯಲ್ಲಿ ಮನಸ್ಸಿಗರಿವಾದದ್ದು ಒಂದು ತಣ್ಣನೆಯ ಸಾತ್ವಿಕ ತೃಪ್ತಿ!
ಅನಂತರ ಕೈ ಬೀಸಿ ಕರೆದ ನಾಲ್ಕನೆಯ ಮಹಡಿಯ ಆರ್ಕಿಡ್ ಉದ್ಯಾನಕ್ಕೆ ಕಾಲಿಟ್ಟರೆ ‘ಡೆಂಡ್ರೊಬಿಯಮ್ ರೆಲಿಕ್ ಬುದ್ಧ’ ಹಸರಿನ ಆರ್ಕಿಡ್ ತಾನೇ ಬುದ್ಧನೆನ್ನುವಷ್ಟು ಹೆಮ್ಮೆಯಿಂದ ಅರಳಿ ನಕ್ಕಿತ್ತು. ಇದನ್ನು ಈ ದೇಗುಲಸೂಚೀ ಹೂವಾಗಿ ಪರಿಗಣಿಸಿ ಬಲು ಪ್ರೀತಿಯಿಂದ ಬೆಳೆಸಿದ್ದಾರೆ.ಡೆಂಡ್ರೊಬಿಯಮ್ ನ ಅಕ್ಕತಂಗಿಯರಂತೆ ನಳನಳಿಸಿ ಬೆಳೆದ ಇನ್ನೂ ಅಸಂಖ್ಯ ಹೂಗಿಡಗಳ ಉದ್ಯಾನ ಆ ಬಿಸಿ ಟೆರೇಸಿನಲ್ಲೂ ತಂಪನ್ನು ತಂದಿತ್ತು.ಮಂದ ಮೃದು ಮಧುರವಾಗಿ ಕಿಣಿಕಿಣಿ ಅನ್ನುವ ಚೈಮ್ ತೂಗುಗಂಟೆಗಳ ನಡುವೆ ತಲೆಯಲ್ಲಾಡಿಸಿ ಅತ್ತಿತ್ತ ವಾಲುವ ಹೂಗಳ ಸುಗಂಧ ಸುತ್ತಮುತ್ತ ಹರಡಿ ಇಡೀ ಉದ್ಯಾನವೆ ಆಪ್ತವೆನಿಸಿತ್ತು.
ಅಲ್ಲೇ ಎಡಬಲದ ಕಾರಿಡಾರಿಡೀ ಗೋಡೆಯುದ್ದಕ್ಕೂ ತುಂಬಿ ನಿಂತ ಹತ್ತು ಸಾವಿರ ಕಿರುಬುದ್ಧ ಪ್ರತಿಮೆಗಳ ನಡುವಿನ ಕಲ್ಲು ಹಾಸಿನಲ್ಲಿ ನಡೆದು ಹೋಗುವಾಗ ಹೊರಪ್ರಪಂಚದ ಸಮಸ್ತವೂ ಅಲ್ಲೇ ಐಕ್ಯವಾದಂತನಿಸಿತು.. ಎಲ್ಲೆಲ್ಲಿ ಕಣ್ಣು ಹಾಯಿಸಿದರೂ ಅವನೇ! ಈ ಚೀನೀಯರ ಬುದ್ಧ ಭಕ್ತಿಯ ಪರಾಕಾಷ್ಠೆಯೋ ಇದು ಅನಿಸುವಂತಾಗಿತ್ತು.. ಅಷ್ಟು ಸುಂದರ ಆ ಪ್ರತಿಮೆಗಳು. ಒಂದನ್ನೊಂದು ಸಂಪೂರ್ಣ ಹೋಲುತ್ತಿದ್ದರೂ ಪ್ರತಿಯೊಂದೂ ಭಿನ್ನ ಅನಿಸುವುದು ಇವುಗಳ ವೈಶಿಷ್ಟ್ಯ!
ಕೊನೆಯಂತಸ್ತಿನ ನಟ್ಟ ನಡುವೆ ರಾರಾಜಿಸುತ್ತಿದೆ ಬೃಹತ್ ವೈರೋಚನ ಪ್ರಾರ್ಥನಾ ಚಕ್ರ. ಇದರೊಳಗೆ ವೈರೋಚನ ಧರಣಿಯ ಮಂತ್ರಗಳ ಮೂರು ಸಾವಿರ ಪ್ರತಿಗಳಿವೆಯಂತೆ. ಕೆಂಪುವರ್ಣದ ಹಿನ್ನೆಲೆಯ ಚೌಕಟ್ಟುಗಳಲ್ಲಿ ಬರೆದ ಪ್ರಾರ್ಥನೆಯ ಶ್ಲೋಕಗಳ ಅರ್ಥಗ್ರಹಣ ನನಗೆ ಅಸಾಧ್ಯವಿದ್ದರೂ ಆ ಚಕ್ರದ ದಪ್ಪನೆಯ ದುಂಡು ಸಲಾಕೆಯನ್ನು ಹಿಡಿದು ತಿರುಗಿಸುತ್ತಾ ಸುತ್ತು ಬರುವಾಗ ಭೂಮ್ಯಾಕಾಶಗಳು ವಿಸ್ಮ್ರಿತವಾಗಿ ಸಕಲವೂ ಬುದ್ಧಮ್ ಶರಣಂ ಗಚ್ಛಾಮಿಯ ಏಕನಾದದಲ್ಲಿ ತಲ್ಲೀನವಾಯಿತು! ಇಲ್ಲಿರುವ ಪ್ರಾರ್ಥನಾ ಚಕ್ರ ಜಗತ್ತಿನಲ್ಲೇ ಅತ್ಯಂತ ದೊಡ್ಡ ಪ್ರೇಯರ್ ವೀಲ್ ಅಂದರೆ ಒಪ್ಪಲೇಬೇಕು.ಅಷ್ಟು ಭವ್ಯ, ದಿವ್ಯ ಸ್ತಂಭವದು..
ಬೋಧಿಸತ್ವ ಬುದ್ಧಾವತಾರದ ಸಹಸ್ರನಾಮಾವಳಿಯನ್ನು ಪಠಿಸಿದವರಿಗೆ ಹೀನ ಜನ್ಮವೆಂದೂ ಲಭಿಸದು.. ಮಾನವ ಜನ್ಮವೇ ಲಭಿಸುತ್ತದೆ. ಎನ್ನುವ ಧೃಢ ವಿಶ್ವಾಸವನ್ನು ಮನಸ್ಸಿಡೀ ತುಂಬಿಕೊಂಡು
”ಓಂ ನಮೋ ಭಗವತೇ ಸರ್ವತೇ ಗತೇ, ವಾರಶುದ್ದಾನಿ ರಾಜಾಯ,ತಥಾಗತಾಯ ಅರಹತೇ
ಸಮ್ಯಕ್ ಸಂಬುದ್ಧಾಯ,ತಾ ದಯಾ ಥಾ ಓಂ ಶೋಧನೀ ಶೋಧನೀ ಸರ್ವ ಪಾಪಂ, ವಿಶೋಧನೀ ಶುದ್ಧೇ ವಿಶುದ್ಧೆ, ಸರ್ವ ಕರ್ಮ ಆವರಣ ವಿಶುದ್ಧಾನಿ ಯಾ ಸೋಹಾ..”
ಅನ್ನುವ ಮಂತ್ರಪಠಣವನ್ನು ಮಕ್ಕಳಿಗೆ ಹೇಳಿಕೊಟ್ಟು ಪಠಿಸುತ್ತಿದ್ದ ಹಲವಾರು ಕುಟುಂಬಗಳನ್ನು ಅಲ್ಲೇ ಕಂಡೆ.. ಮಂದಿರ ಬಿಟ್ಟು ಹೊರನಡೆಯುವಾಗ ಮನಸ್ಸಿಡೀ ನಮ್ಮ ಸಿದ್ದಾರ್ಥ ಗೌತಮ ಬುದ್ಧನೇ ತುಂಬಿಹೋಗಿದ್ದ.