ಬ್ರಹ್ಮನಿಷ್ಠೆಗೆ ಕಾರಣವಾಗುವ ಸಮತ್ವ
| ಡಾ. ಆರತೀ ವಿ. ಬಿ.
‘ಪಂಡಿತನು (ಜ್ಞಾನಿಯಾದವನು) ಮನುಷ್ಯ-ಮನುಷ್ಯರಲ್ಲಷ್ಟೇ ಅಲ್ಲ, ಪಶು-ಪಕ್ಷಿ-ವನಸ್ಪತಿಗಳಲ್ಲೂ ಭೇದವೆಣಿಸುವುದಿಲ್ಲ, ಸರ್ವತ್ರ ಏಕೈಕ ಭಗವದಸ್ತಿತ್ವವನ್ನು ಗುರುತಿಸಿ ಸಮದರ್ಶಿಯಾಗಿರುತ್ತಾನೆ’ ಎನ್ನುವುದನ್ನು ಕೃಷ್ಣನು ವಿವರಿಸುತ್ತಿದ್ದನು. ಒಂದೇ ಸಕ್ಕರೆಪಾಕವನ್ನು ಎರಕ ಹೊಯ್ದು ಬಗೆಬಗೆಯ ಆಕಾರಗಳ ಸಕ್ಕರೆ ಅಚ್ಚುಗಳನ್ನು ತಯಾರಿಸುವಂತೆ, ಒಂದೇ ಪರಮಾತ್ಮಚೈತನ್ಯವೇ ಸಮಸ್ತ ನಾಮರೂಪಗಳ ಒಳಗೂ ವ್ಯಾಪಿಸಿರುತ್ತದೆ. ಅಜ್ಞಾನಿಗಳು ಕಣ್ಣಿಗೆ ಕಾಣುವ ನಾಮ, ರೂಪ, ಲಿಂಗ, ಕುಲ, ಭೇದಗಳನ್ನಷ್ಟೇ ಪರಿಗಣಿಸಿ ಜೀವಜೀವರಲ್ಲಿ ಭೇದವೆಸಗುತ್ತಾರೆ. ಮನುಷ್ಯನ ಆಂತರ್ಯದಲ್ಲಿ ಕಾಮಮೋಹಾದಿಗಳ ಅಶುದ್ಧಿಯಿರುವವರೆಗೂ ಈ ಅಸಮಭಾವವಿರುವುದು ಅನಿವಾರ್ಯ. ಸಮತ್ವ ಸಿದ್ಧಿಸಿತೆಂದರೆ ಆತ ಬ್ರಹ್ಮನಿಷ್ಠನಾಗುತ್ತಾನೆ ಎನ್ನುತ್ತಾನೆ ಕೃಷ್ಣ;
‘ಯಾರ ಮನಸ್ಸು ಸಾಮ್ಯದಲ್ಲಿ (ಸಮತ್ವದಲ್ಲಿ) ನಿಂತಿರುತ್ತದೋ ಅವರು ಇಹದಲ್ಲೇ (ಜೀವನದಲ್ಲಿ) ಜಯಿಸಿರುತ್ತಾರೆ. ಬ್ರಹ್ಮವು ನಿದೋಷವಾದದ್ದು. ಅವರು ಆ ಬ್ರಹ್ಮದಲ್ಲಿ ನೆಲೆನಿಂತಿರುವುದರಿಂದಲೇ ಸಮತ್ವವನ್ನು ಪಡೆದಿರುತ್ತಾರೆ.’ (ಭ.ಗೀ.: 5.19)
ಬ್ರಹ್ಮದಲ್ಲಿ ಕಾಮಾದಿ ದೋಷಗಳ ಅಶುದ್ಧಿಯಿಲ್ಲ. ಹೀಗಾಗಿ ಭೋಗಸಂಕಲ್ಪಗಳೂ ಇಲ್ಲ. ಜ್ಞಾನಶುದ್ಧನಾದವನಲ್ಲಿ ಕಾಮಾದಿ ದೋಷಗಳು ಅಳಿದಿರುತ್ತವೆ. ಹಾಗಾಗಿ ಅವನು ಸಹಜವಾಗಿಯೇ ಶುದ್ಧ ಬ್ರಹ್ಮದಲ್ಲಿ ನಿಷ್ಠನಾಗುತ್ತಾನೆ. ಲೋಕದ ಸಂಬಂಧಗಳಿಗೆ ಬದ್ಧನಾಗುವುದು ಕಾಮಮೋಹಾದಿ ದೋಷಗಳ ಪಾಶದಿಂದ. ಅದನ್ನು ಅವನು ಕಳಚಿಕೊಳ್ಳುತ್ತಲೇ ಸರ್ವತಂತ್ರ ಸ್ವತಂತ್ರನಾಗುತ್ತಾನೆ. ಬ್ರಹ್ಮವೆಂಬ ಸರ್ವತಂತ್ರಸ್ವತಂತ್ರ ಸ್ಥಿತಿಯ ಅನುಭವಕ್ಕೇರುತ್ತಾನೆ.
‘ಆತ (ಸಮದರ್ಶಿಯಾದ ಕಾರಣ) ಪ್ರಿಯವಾದದ್ದು ಸಿಕ್ಕಿತೆಂದು ಬೀಗುವುದಿಲ್ಲ. ಅಪ್ರಿಯವಾದದ್ದು ಬಂದೊದದಗಿತೆಂದು ಉದ್ವಿಗ್ನನಾಗುವುದಿಲ್ಲ. ಮೋಹಗೊಳ್ಳದೆ, ಸ್ಥಿರಚಿತ್ತನಾಗಿದ್ದು ಬ್ರಹ್ಮವನ್ನು ಅರಿತು ಬ್ರಹ್ಮದಲ್ಲೇ ನೆಲೆನಿಲ್ಲುತ್ತಾನೆ. ಬಾಹ್ಯದ ಸ್ಪರ್ಶಗಳಲ್ಲಿ (ಇಂದ್ರಿಯವಿಷಯಗಳಲ್ಲಿ) ಆತ ಆಸಕ್ತನಾಗದೆ, ಆತ್ಮದಲ್ಲೇ ಸುಖವನ್ನು ಕಂಡುಕೊಳ್ಳುತ್ತಾನೆ. ಅಂಥವನು ಬ್ರಹ್ಮಯೋಗದಲ್ಲಿ ನೆಲೆಸಿ ಅಕ್ಷಯಸುಖಕ್ಕೆ ಭಾಜನನಾಗುತ್ತಾನೆ.’ (5.20)
ಎಲ್ಲರಲ್ಲೂ ಒಂದೇ ಅಖಂಡ ಆತ್ಮಚೈತನ್ಯವನ್ನು ಕಾಣುವ ಜ್ಞಾನಿಯು ಜೀವನದ ಆಗುಹೋಗುಗಳಲ್ಲೂ ಒಂದೇ ಭಗವದಿಚ್ಛೆಯ ಕೈವಾಡವನ್ನು ಕಾಣುತ್ತಾನೆ. ಜೀವನದ ಘಟನಾವಳಿಗಳಲ್ಲಿ ತೊಡಗಿದ್ದರೂ, ಸುಖದುಃಖಗಳನ್ನು ಅನುಭವಿಸುತ್ತಿದ್ದರೂ ‘ಹೀಗಾಗಬಾರದಿತ್ತು, ಹಾಗೆಯೇ ಆಗಬೇಕಿತ್ತು’ ಎನ್ನುತ್ತ ಉದ್ವೇಗ-ಹಠಗಳ ಭಾವವೈಪರೀತ್ಯಕ್ಕೊಳಗಾಗುವುದಿಲ್ಲ.
‘ಜ್ಞಾನಿಯು ಸುಖ-ದುಃಖಗಳಿಗೆ ವಶನಲ್ಲ’ ಎಂದರೆ ಅಳುವುದಿಲ್ಲ, ನಗುವುದಿಲ್ಲ, ತಟಸ್ಥನಾಗಿರುತ್ತಾನೆ, ನೀರಸನಾಗಿರುತ್ತಾನೆ ಎಂದರ್ಥವಲ್ಲ. ಎಲ್ಲರಂತೆ ಇರುತ್ತ, ಸಮಯೋಚಿತ ನಗುವಳುಗಳನ್ನು ಪ್ರಕಟಿಸುತ್ತಾನಾದರೂ, ‘ಅಂತರಂಗದಲ್ಲಿ ಪ್ರಕ್ಷುಬ್ದನಾಗುವುದಿಲ್ಲ’ ಎಂದರ್ಥ. ಸುಖದುಃಖಾನುಭವಗಳಿಂದ ಬೇಗನೆ ಸಾವರಿಸಿಕೊಂಡು ಸಮಸ್ಥಿತಿಗೆ ಮರಳುತ್ತಾನೆಂದರ್ಥ. ಇಂಥ ಸಮತ್ವದ ಶಕ್ತಿಯಿರುವವನೇ ಜೀವನದಲ್ಲಿ ಘನಕಾರ್ಯ ಸಾಧಿಸಬಲ್ಲ.
ಸೀತಾನ್ವೇಷಣೆಗಾಗಿ ಹರಸಾಹಸವನ್ನೆಸಗಿದ ಹನುಮಂತನ ಉದಾಹರಣೆಯನ್ನೇ ನೋಡಿ! ಲೌಕಿಕ ಧಾಟಿಯಲ್ಲಿ ಲೆಕ್ಕಹಾಕಿದರೆ – ಹನುಮನಿಗೆ ರಾಮನು ನಂಟನೋ ಬಂಧುವೋ ಆಗಿರಲಿಲ್ಲ. ಜೀವೋಪಾಯವನ್ನೆದುರಿಸಿ ಸೀತಾನ್ವೇಷಣೆಯಂತಹ ಅತಿಕಠಿಣಕಾರ್ಯಕ್ಕೆ ಕೈಹಾಕುವ ಅನಿವಾರ್ಯ ಅವನಿಗಿರಲಿಲ್ಲ. ಅದರಿಂದ ಅವನಿಗೆ ರಾಜ್ಯಪ್ರಾಪ್ತಿ-ಧನಪ್ರಾಪ್ತಿಗಳೂ ಇರಲಿಲ್ಲ. ಆದರೂ ಆ ಕಾರ್ಯಕ್ಕಾಗಿ ಟೊಂಕ ಕಟ್ಟಿ ನಿಂತ! ಯಾಕೆ? ಧಮೈಕಕಾರಣಕ್ಕಾಗಿ! ‘ನಾನು-ನನ್ನದು-ನನಗೆ’ ಎನ್ನುವ ಅಶುದ್ಧಭಾವಗಳಿಲ್ಲದೆ, ಲೋಕಹಿತ ಹಾಗೂ ಧರ್ಮರಕ್ಷಣಗಳೆಂಬ ‘ಋತದ ಧ್ಯಾನ’ವನ್ನು ಮಾಡಿದ ಮಹಾತ್ಮ ಅವನು. ಅವನು ಸಮದರ್ಶಿಯಾದ್ದರಿಂದಲೇ ಹಾಗೆ ಆಲೋಚಿಸಲು ಸಾಧ್ಯವಾದದ್ದು. ದಾರಿಯಲ್ಲಿ ಬಂದ ರಕ್ಕಸರಿಗೂ ವಿಘ್ನಗಳಿಗೂ ಹೆದರಿ ಹಿಮ್ಮೆಟ್ಟಲಿಲ್ಲ! ಲಂಕೆಯಲ್ಲಿ ಚರಿಸುವಾಗ ಅಲ್ಲಿ ಕಂಡ ಭೋಗಾತಿರೇಕಗಳಿಂದ ವಿಚಲಿತನಾಗಲಿಲ್ಲ! ದಿನಗಟ್ಟಲೆ ಸೀತೆ ಕಾಣಬಾರದೆ, ದೇಹ, ಮನಗಳು ಬಳಲಿ ಬೆಂಡಾದರೂ ಪ್ರಯತ್ನವನ್ನು ಕೈಬಿಡಲಿಲ್ಲ! ಅಪಾಯಸರಣಿಗಳೇ ಎದುರಾದರೂ ಎದೆಗುಂದಲಿಲ್ಲ! ಸಾವೇ ಬೆದರಿಸಿದರೂ ಸೋಲೊಪ್ಪಲಿಲ್ಲ! ತನ್ನ ಛಲ-ಬಲ-ಚಾತುರ್ಯಗಳನ್ನೆಲ್ಲ ಬಳಸಿ ಧರ್ಮರಕ್ಷಣೆಗಾಗಿ ಶ್ರಮಿಸಿದ. ಅದೇ ಸಮದರ್ಶಿಯ ಶಕ್ತಿ! ಸಮದರ್ಶಿಯಲ್ಲಿ ದೇಹ, ಮತಿ, ಮನ, ವಾಕ್ಕು, ನೈಪುಣ್ಯಗಳೆಲ್ಲ ಊರ್ಜಿತವಾಗಿರುತ್ತವೆ! ‘ಹನುಮಂತನು ಮುಗಿಲೆತ್ತರ ಬೆಳೆದುನಿಂತ’ ಎನ್ನುವ ಮಾತಿನಲ್ಲಿ ‘ಶುದ್ಧಾತ್ಮನೂ ಬ್ರಹ್ಮನಿಷ್ಠನೂ ಆದವನಲ್ಲಿ ದೇಹ, ಮನ, ಮತಿ, ವಾಕ್ಕು, ನೈಪುಣ್ಯಾದಿಗಳೆಲ್ಲವೂ ಅಮಿತವಾಗಿ ಅರಳುತ್ತವೆ’ ಎನ್ನುವ ಧ್ವನಿ ಇದೆ.
ಸ್ವತಃ ಕೃಷ್ಣನ ಲೋಕೋತ್ತರ ಸಾಧನೆಗಳಿಗೆ ಕಾರಣ ಅವನ ಸಮದರ್ಶಿತ್ವ. ನಾಡಲ್ಲೂ ಕಾಡಲ್ಲೂ ಅದ್ವಿತೀಯನೆನಿಸಿದ ಶ್ರೀರಾಮನ ಸಾಧನೆಗಳಿಗೆ ಕಾರಣ ಅವನ ಸಮಚಿತ್ತತೆ. ಭಯಂಕರ ವೈಪರೀತ್ಯಗಳ ನಡುವೆಯೂ ಶಾಂತಿ-ಕ್ಷಾಂತಿಗಳ ಆಗರವೇ ಆಗಿದ್ದ ನಮ್ಮ ಸೀತಮ್ಮಳ ಔದಾರ್ಯಕ್ಕೆ ಕಾರಣ ಅವಳ ಸಮದರ್ಶಿತ್ವ. ಆ ಶಾಂತಿ-ಕ್ಷಾಂತಿಗಳ ಬಿಂದುಮಾತ್ರವನ್ನಾದರೂ ಅಳವಡಿಸಿಕೊಂಡರೆ ನಮ್ಮ ಆತ್ಮಚೈತನ್ಯವೂ ಊರ್ಜಿತವಾಗಿ ಬೆಳೆಯುವುದು ಖಂಡಿತ. ಅದನ್ನೇ ಗುರುವರ ಕೃಷ್ಣನು ನಮಗೆ ಅರ್ಥಪಡಿಸಲೆಳೆಸುತ್ತಿದ್ದಾನೆ.
ಕೃಪೆ: ವಿಜಯವಾಣಿ