ಹೊಲದಲ್ಲಿ ಸಮೃದ್ಧ ಬೆಳೆಯಾಗಲೆಂದು ದೇವರನ್ನು ಅರುಹಿಕೊಳ್ಳಲು ದೀಪಾವಳಿ ಸಂದರ್ಭದಲ್ಲಿ ಕರೆವಕ್ಕಲಿಗರು ಆಚರಿಸುವ ಸಾಂಪ್ರದಾಯಿಕ ಕಲೆ ‘ಬಿಂಗಿ ಕುಣಿತ’. ಇತ್ತೀಚೆಗೆ ಭಾಗವತಿಕೆ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ, ಈ ಆಚರಣೆ ಅಳಿವಿನಂಚಿನಲ್ಲಿದೆ. ‘ವರ್ಷಕ್ಕೊಮ್ಮೆ ಬರುವ ಬಲೀಂದ್ರರಾಯ… ದಿನಕ್ಕೊಮ್ಮೆ ಬರುವ ಭೀಮsssರಾಯ….’ ಯಂಕಣ್ಣ ರಾಗವಾಗಿ ಈ ಹಾಡನ್ನು ಹಾಡುತ್ತಿದ್ದರೆ, ಶಿಣ್ಣು ಗೌಡರು, ಶಾಂತು ಗೌಡರು ಅದಕ್ಕೆ ದನಿಯಾಗುತ್ತಿದ್ದರು. ಕೃಷ್ಣ ಗೌಡರು ಪಲ್ಲವಿಯನ್ನು ಮುಂದುವರಿಸಿದರೆ, ದೇವು ಗೌಡರು ಅವರಿಗೆ ಜೊತೆಯಾಗುತ್ತಿದ್ದರು. ಸುತ್ತ ಕುಳಿತ ಪ್ರೇಕ್ಷಕರ ಕಿವಿಯಷ್ಟೇ ಈ ಭಾಗವತರೆಡೆಗಿತ್ತು. ಅವರ ಕೌತುಕದ ಕಣ್ಣುಗಳು ಒಳಮನೆಯ ಕೋಣೆಯೆಡೆಗೆ ಸರಿದಿದ್ದವು. ಸಣ್ಣ ಹೆಂಚಿನ ಮನೆಯ ಪಡಸಾಲೆಯಲ್ಲಿ ಮಂದ ಬೆಳಕು. ಕಿಟಕಿಯ ರಂಧ್ರದಿಂದ ತೂರಿಬರುವ ಬೆಳಕು ಒಳಕೋಣೆಯಲ್ಲಿ ಮಂದಗತ್ತಲನ್ನು ಸೃಷ್ಟಿಸಿತ್ತು. ಹೀಗಾಗಿ ಅಂಗಳದಿಂದ ಕಾಣುವ ಚಿತ್ರಣಗಳೆಲ್ಲವೂ ಅಸ್ಪಷ್ಟವಾಗಿದ್ದವು. ಮೊದಲ ಬಾರಿ ‘ಬಿಂಗಿ’ ಕುಣಿತ ನೋಡಲು ಹೋಗಿದ್ದ ನಾನು ಏನೂ ಅರ್ಥವಾಗದೆ ಪೆಚ್ಚು ಮೋರೆಯಲ್ಲಿ ನಿಂತಿದ್ದನ್ನು ಕಂಡು, ಕಂಬಕ್ಕೆ ಒರಗಿ ನಿಂತಿದ್ದ ರೇಣುಕಾ ‘ಈಗ ಬರ್ತಾರೆ ಅವ್ರು ಕಾಣಿ…’ ಎಂದು ಪಿಸುಗುಟ್ಟರು. ಒಮ್ಮೆಲೇ ‘ಹೀ….ಹಿಹ್ಹಿಹಿ’ ವಿಕಟ ನಗೆ ಬೀರುತ್ತ ಆಲದ ಬಿಳಲಿನಂತೆ ಉದ್ದುದ್ದ ಗಡ್ಡ ಕಟ್ಟಿಕೊಂಡ ಇಬ್ಬರು ಒಳಕೋಣೆಯಿಂದ ಅಂಗಳಕ್ಕೆ ನುಗ್ಗಿದರು. ಭಾಗವತರ ಗಾಯನ ಏಕತಾನದಲ್ಲಿ ಮುಂದುವರಿದಿತ್ತು. ಈ ಬಿಳಿಗಡ್ಡಧಾರಿಗಳು ಅಂಗಳದ ತುಂಬೆಲ್ಲ ಓಡಾಡುತ್ತಿದ್ದರು. ವಿಶಿಷ್ಟ ಶೈಲಿಯ ಅವರ ಹೆಜ್ಜೆಯಲ್ಲಿ ಲಯವಿತ್ತು. ಅಲ್ಲಿಗೆ ಭಾಗವತರ ಒಂದು ಸುತ್ತಿನ ಹಾಡು ಮುಗಿಯಿತು. ಈಗ ಭಾಗವತರು ಮತ್ತು ಗಡ್ಡಧಾರಿಗಳ ಸಂಭಾಷಣೆ. ಭೂಲೋಕದಲ್ಲಿರುವ ಭಾಗವತರು ‘ನೀವ್ಯಾರು’ ಎಂದು ಪ್ರಶ್ನಿಸಿದ್ದಕ್ಕೆ, ‘ಪಾತಾಳಲೋಕದ ಬಲೀಂದ್ರರಾಯ, ಭೀಮರಾಯ ಸಹೋದರರು ನಾವು’ ಎಂದರು ಅವರಿಬ್ಬರು. ಹೀಗೆ ಶುರುವಾಗುವ ಬಿಂಗಿ ನೃತ್ಯ ತಾಸುಗಟ್ಟಲೆ ಮುಂದುವರಿಯುತ್ತದೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಕರೂರಿನಲ್ಲಿ ಕರೆವಕ್ಕಲಿಗರ ಕುಟುಂಬಗಳು ನೆಲೆಸಿವೆ. ಅವರಿಗೆ ದೀಪಾವಳಿಯೆಂದರೆ ಬೂರೆ ಹಬ್ಬ, ಬಲೀಂದ್ರನ ಪೂಜೆ, ಗೋಪೂಜೆ ಮಾಡುವ ‘ದೊಡ್ಡಹಬ್ಬ’ವಲ್ಲ, ಅದೊಂದು ಊರ ಜಾತ್ರೆ. ಹಬ್ಬದ ಮರುದಿನ ಜಾತ್ರೆಯ ಸಂಭ್ರಮೋತ್ಸಾಹ ಇಮ್ಮಡಿಸುತ್ತದೆ. ಇಡೀ ಊರಿಗೆ ಊರು ಜೀವಚೈತನ್ಯದ ಪುಳಕದಲ್ಲಿ ಮಿಂದೇಳುತ್ತದೆ. ನಿತ್ಯ ಹೊಲದಲ್ಲಿ ದುಡಿವ ಶ್ರಮಜೀವಿಗಳು ಬಿಂಗಿಯೊಳಗೆ ಬಂಧಿಯಾಗುತ್ತಾರೆ. ಗೋಪೂಜೆಯ ಸಂಜೆ ಬಿಂಗಿ ಕುಣಿತದ ತಂಡ ಊರು ಸುತ್ತಲು ಸಜ್ಜಾಗುತ್ತದೆ. ಬಿಸಿರಕ್ತದ ತರುಣ ಉದ್ದನೆಯ ಕೋಲು ಹಿಡಿದು ಸರಸರನೆ ಫರ್ಲಾಂಗು ಮುಂದೆ ಹೋಗುತ್ತಿದ್ದರೆ, ತಂಡದ ಇನ್ನುಳಿದವರು ಮಿಣುಕು ದೀಪ ಹಿಡಿದು ಅದೇ ಕಾಲುದಾರಿಯಲ್ಲಿ ಹೆಜ್ಜೆಯಿಡುತ್ತಾರೆ. ಮಲೆನಾಡಿನ ಚದುರಿದಂತಿರುವ ಒಂದೊಂದು ಮನೆ ತಲುಪಲು ಒಂದೋ ಎರಡೋ ಕಿ.ಮೀ ನಡೆಯಲೇ ಬೇಕು. ಮರದ ಮರೆಯಲ್ಲಿ ಮನೆಯ ಮಾಡು ಕಂಡಿದ್ದೇ ಆ ತರುಣ ಕೈಯಲ್ಲಿದ್ದ ಕೋಲನ್ನು ತುಟಿಗೆ ಹಿಡಿದು ವಿಶಿಷ್ಟ ‘ಸನ್ನೆ’ ವಾದನ ಮೊಳಗಿಸುತ್ತಾನೆ. ‘ಸನ್ನೆ’ಯ ದನಿಗೆ ಮನೆಮಂದಿಯೆಲ್ಲ ಎದ್ದು ಅಂಗಳಕ್ಕೆ ಬಂದು ನಿಲ್ಲುತ್ತಾರೆ ಬಿಂಗಿ ನೋಡಲು. ಈ ತಂಡಕ್ಕೆ ಹಗಲು–ಇರುಳು ಎರಡೂ ಒಂದೇ. ನಡುರಾತ್ರಿ ನಿದ್ದೆಯಿಂದ ಎದ್ದು ಬಂದವರಿಗೆ ಮಾತ್ರ ಬಿಂಗಿ ನೃತ್ಯ ನೋಡುವ ಅದೃಷ್ಟ ಸಿಗುತ್ತದೆ. ಬಿಂಗಿ’ ಏನೆಂದು ಬಲ್ಲಿರಾ? ಹಾಡು, ಮಾತು, ಸಂಭಾಷಣೆಯಲ್ಲಿ ಪುರಾಣದ ಬಲೀಂದ್ರ ದೇವರ ಕತೆ ಹೇಳುವ ಕಲೆ ಬಿಂಗಿ ಕುಣಿತ. ಭಾಗವತರ ಹಾಡು, ಬಲೀಂದ್ರ, ಭೀಮರಾಯ, ಅವರ ಪತ್ನಿಯರು, ಪರಿಚಾರಕರ ತಾಳವಾದ್ಯ, ಕೋಲಾಟ ಹೀಗೆ ವೈವಿಧ್ಯ ಕಲೆಗಳ ಸಂಗಮವಾಗಿರುವ ಬಿಂಗಿ ಅಪ್ಪಟ್ಟ ಜನಪದ ಕಲೆ. ಈ ಕಲಾ ಪ್ರದರ್ಶನದಲ್ಲಿ ಸಾಮಾಜಿಕ, ರಾಜಕೀಯ, ಕೌಟುಂಬಿಕ ಸಂಗತಿಗಳು, ಪ್ರೀತಿ–ಪ್ರಣಯಗಳು ಪದಗಟ್ಟುತ್ತವೆ. ‘ಬರೆಯುವ ಕೈಗಳು ಬರೆಯುತಿವೆ, ನಮ್ಮ ಭಾರತ ದೇಶವು ಭಾಗ್ಯವಿದೆ…ಬೆವರಿನ ಹನಿಯನು ಚೆಲ್ಲೋಣ ನಾವ್ ಮಣ್ಣಿನ ಮಾನವ ಕಾಯೋಣ’ – ಇಂತಹ ಸಾಮಾಜಿಕ ಪ್ರಜ್ಞೆ ಬೆಳೆಸುವ ಸಾಲುಗಳು ಭಾಗವತರ ಬಾಯಲ್ಲಿ ನಿರಾಯಾಸವಾಗಿ ಪದಗಳಾಗಿ ಮೂಡಿಬರುತ್ತವೆ. ಅಚ್ಚರಿಯೆಂದರೆ ಇವೆಲ್ಲವೂ ಅಲಿಖಿತ ಸಾಹಿತ್ಯಗಳೇ. ನರ್ತಿಸುತ್ತಲೇ ನೆಲಕ್ಕೆ ಬಿದ್ದ ನಾಣ್ಯಗಳನ್ನು ಕಾಲಿನಲ್ಲಿ ಎತ್ತಿ ಕಿಸೆಗೆ ಹಾಕುವಂತಹ ಸಾಹಸದ ಜತೆಗೆ ನೀತಿ ಪಾಠವನ್ನು ಕಲಿಸುತ್ತಾರೆ ಕರೆವಕ್ಕಲಿಗರು. ಮನೆ–ಮನೆಯಲ್ಲಿ ಕೊಡುವ ಅಕ್ಕಿ, ಕಾಯಿ ಎಲ್ಲವನ್ನೂ ಒಂದೆಡೆ ಕೂಡಿಟ್ಟು ಕೊನೆಯ ದಿನ ಎಲ್ಲ ಕುಟುಂಬದವರು ಸೇರಿ ‘ಚಪ್ಪರ’ (ಬೋರಿ ಊಟ) ಮಾಡುತ್ತಾರೆ. ಚಪ್ಪರದಲ್ಲಿ ಮಿಕ್ಕಿದ ಶೇಷವನ್ನು ಎಲ್ಲರೂ ಹಂಚಿಕೊಂಡು ಖುಷಿಪಡುತ್ತಾರೆ. ಕಲಾ ಪ್ರದರ್ಶನದಲ್ಲಿ ಎಲ್ಲರೂ ಪುರುಷ ಪಾತ್ರಧಾರಿಗಳು, ‘ಚಪ್ಪರ’ದಲ್ಲಿ ಮಾತ್ರ ಮಹಿಳೆಯರ ಅಧಿಪತ್ಯ ! ಹೊಲದಲ್ಲಿ ಸಮೃದ್ಧ ಬೆಳೆಯಾಗಲೆಂದು ದೇವರನ್ನು ಅರುಹಿಕೊಳ್ಳಲು ಬಂದಿರುವ ಈ ಸಾಂಪ್ರದಾಯಿಕ ಆಚರಣೆ ಮರೆಗೆ ಸರಿಯುತ್ತಿದೆ. ನಿರರ್ಗಳವಾಗಿ ಭಾಗವತಿಕೆ ಮಾಡುವವರು ಊರ ಹಿರಿಯರಾದ ಯಂಕು ಗೌಡರು, ಕೃಷ್ಣ ಗೌಡರು ಮಾತ್ರ. ಅವರೂ ಅಜ್ಜ–ದೊಡ್ಡಜ್ಜ ಹೇಳಿದ್ದನ್ನು ಕೇಳಿ ಕಲಿತವರು. ‘ಯುವಕರು ಬಿಂಗಿ ಕಲಿಯಲು ಒಲವು ಹೊಂದಿದ್ದಾರೆ. ಆದರೆ ಅವರಿಗೆ ಹಾಡು ಕರಗತವಾಗಿಲ್ಲ. ಬಲೀಂದ್ರನ ಹಾಡುಗಳೆಲ್ಲ ಸುದೀರ್ಘವಾದವೇ. ಹೀಗಾಗಿ ಅಕ್ಷರ ಕಲಿತ ಮಕ್ಕಳಿಂದ ಇದನ್ನು ಬರೆಯಿಸಿಡಲು ಯೋಚಿಸಿದ್ದೇವೆ’ ಎಂದು ಸುಬ್ಬು ಗೌಡ ಹೇಳಿರುವುದೇ ಆಶಾಭಾವದ ಸಂಗತಿ. ನಶಿಸುತ್ತಿರುವ ಬಿಂಗಿ ಕಲೆ ಪ್ರೋತ್ಸಾಹಿಸಲು ಗ್ರಾಮದಲ್ಲಿರುವ ಮುಂಡಗನಮನೆ ಸೇವಾ ಸಹಕಾರಿ ಸಂಘ ಕೂಡ ಮುಂದಾಗಿರುವುದು ಆಶಾದಾಯಕ ಬೆಳವಣಿಗೆ.&
autho-ಸಂಧ್ಯಾ ಹೆಗಡೆ
courtsey:prajavani.net
https://www.prajavani.net/artculture/article-features/karevakkaligas-variety-ritual-bingi-677155.html