ಭೂಮಿ ತಾಯಿ ಆಣೆ

ಭೂಮಿ ತಾಯಿ ಆಣೆ
ಗದಗ ರೈಲ್ವೆ ಸ್ಟೇಶನ್ನಿಂದ ಇಳಿದು ಮುನಸಿಪಲ್ ಹೈಸ್ಕೂಲ್ ಮುಂದೆ ಹಾದು ಹುಯಿಲಗೋಳ ನಾರಾಯಣರಾವ್ ಸರ್ಕಲ್ದಾಟಿ ಮುಂದೆ ಹೋದರೆ ತೋಂಟದ ಸ್ವಾಮಿ ಮಠಾ. ಅಲ್ಲಿಂದ ಬಲಕ್ಕ ಹೊಳ್ಳಿದರ ಕಾಜಗಾರ ಓಣಿ. ಕಾಜಗಾರ ಓಣಿಯ ಒಂದು ಚಾಳಿನಲ್ಲಿ ಸಾಲಕ ನಾಕು ಮನಿ. ಮೂರನೇದ್ದರಲ್ಲಿ ಪಡದಯ್ಯ ಅಜ್ಜ ತನ್ನ ಮಗನೊಂದಿಗೆ ವಾಸವಾಗಿದ್ದ. ಆದರೆ ಅವನ ಮನಸು ಜಂತಲಿ ಹದ್ದಿಗೆ ಹೊಂದಿಕೊಂಡಿದ್ದ ತನ್ನ ಹೊಲದ ಮೇಲಿತ್ತು. ತಾನು ಹೊಲದಲ್ಲಿ ನಿಂತು ಕಳೆ ಕೀಳುವ ಆಳುಗಳಿಗೆ ದನಕ್ಕೆ ಬೆದರಿಸುವಂತೆ ಬೆದರಿಸಿದಂತೆಯೂ ಹೊಲದಲ್ಲಿ ಬಿದ್ದಿರುವ ಸುಣ ಬುರ್ಲಿ ಹರಳುಗಳನ್ನು ಆರಿಸಿ ಒಡ್ಡಿಗೆ ಹಾಕಿದಂತೆಯೂ ಒಡ್ಡಗುಂಟ ಬೆಳೆದಿರುವ ಬಳ್ಳಾರಿ ಜಾಲಿಯನ್ನು ಕಡಿದಂತೆಯೂ ಅನಿಸುತ್ತಿತ್ತು. ಕುಳಿತ ಕಟಗಿ ಕುರ್ಚಿ ಜೀಕ್,ಜೀಕ್ ಎಂದು ಚೀರುತ್ತಿತ್ತು. ಮೇಲಿನ ಹಲಗೆ ಸಡಿಲಗೊಂಡು ಕುರ್ಚಿ ಹಿಂದೆ ಮುಂದೆ ಆದಾಗ ಕುಂಡಿ ಚರ್ಮ ಅದರ ಮಧ್ಯ ಸಿಲುಕಿ ಯವ್ವಾ ಅಂತ ಚೀರುವಂತೆ ಅನಿಸುತ್ತಿತ್ತು. ಹೀಗಾದಾಗೊಮ್ಮೆ ಅವನ ಮನಸು ಜಂತಲಿ ಹೊಲದಿಂದ ಗದಗಿನ ಈ ಚಾಳಿಗೆ ಬಂದು ನಿಲ್ಲುತ್ತಿತ್ತು.

ಪಡದಯ್ಯ ಹಿಂದೊಮ್ಮೆ ಜಂತಲಿವಾಸಿ. ತನ್ನ ಹೊಲದಲ್ಲಿ ಬೆಳೆದ ಹತ್ತಿಯನ್ನು ಗದುಗಿನ ದೊಡ್ಡಮನಿ ಸಾವಕಾರರ ವಕಾರಕ್ಕೆ ಹಚ್ಚಿ ಮುಂದ ತನ್ನ ಅಳಿಯ ಶಂಭಯ್ಯನ ಹತ್ತಿರ ಹೋಗುತ್ತಿದ್ದ. ಹೀಗೆ ಹೋದಾಗೊಮ್ಮೆ ಸವಣೂರ ಅನ್ನುವ ಒಬ್ಬ ಇನ್ಸಪೆಕ್ಟರ್ ಶ್ರಾವಣದಾಗ ಒಮ್ಮೆ ಇವರನ್ನು ಕರೆಸಿ ಪಾದಪೂಜಿ ಮಾಡಿ ಊಟಕ್ಕೆ ನೀಡಿ ಕಳಿಸಿದ್ದ. ಆ ಗುರ್ತಿನಿಂದಲೇ ತನ್ನ ಹಠಮಾರಿ ಮಗ ಶರಣಯ್ಯ ರೈತಕಿ ಒಲ್ಲೆ ಅಂತ ನಿಂತಾಗ ಪೊಲೀಸ ನೌಕರಿಗಾಗಿ ಸವಣೂರ ಇನ್ಸಪೆಕ್ಟರ್ ಮೂಲಕ ಪ್ರಯತ್ನ ಮಾಡಿದ್ದ. ನೌಕರಿ ಸಲುವಾಗಿ ತನ್ನ ಪ್ರೀತಿಯ ಗಳಿಕೆಯಾದ ಜಂತಲಿಯ ತುರಾಳ ದಂಡಿ ಹೊಲವನ್ನು ಮಾರಿಬಿಟ್ಟಿದ್ದ. ಇತ್ತ ದುಡ್ಡು ಕಳಕೊಂಡು ಅತ್ತ ಭೂಮಿನೂ ಕಳಕೊಂಡು ಗುಂಗು ಹಿಡಿದುಕೊಂಡು ಬಿಟ್ಟಿದ್ದ. ಮಗ ಶರಣಯ್ಯ ತನ್ನ ಹಠ ಬಿಡದೇ ಗದುಗಿನ ಒಂದು ಮೆಡಿಕಲ್ ಶಾಪಿನಲ್ಲಿ ಸೇಲ್ಸಮನ್ ಕೆಲ್ಸ ಹಿಡಿದು ಮುಪ್ಪಿನ ತಂದೆಯನ್ನು ಕರೆಸಿಕೊಂಡು ಹಾಗು ಹೀಗೂ ಜೀವನ ನಡೆಸುತ್ತಿದ್ದ.

ಬಾಳಂಭಟ್ಟರಿಗೆ ನಾಲ್ಕನೇ ಮಗು ಹುಟ್ಟಿತ್ತು. ಮೊದಲ ಹುಟ್ಟಿದ ಮೂರು ಹೆಣ್ಣು ಮಕ್ಕಳ ನಂತರ ಹುಟ್ಟಿದ ಗಂಡು ಮಗು ಇದಾಗಿತ್ತು. ಆದರೆ ಮಗು ಹುಟ್ಟಿದ ನಕ್ಷತ್ರ ಶಾಂತಿ ಆಗಬೇಕೆಂದು ಸಾರುತ್ತಿತ್ತು. ಬಾಣಂತನ ಖರ್ಚು, ನಕ್ಷತ್ರ ಶಾಂತಿ ಖರ್ಚು, ಬಾಳಂಭಟ್ಟರನ್ನು ಚಿಂತೆಗೆ ದೂಡಿದವು. ಬೇರೆ ದಾರಿ ಕಾಣದೇ ಊರಿನ ದೊಡ್ಡಕುಳ, ಹಿರಿಯ ಪಾಟೀಲ ನಾಗನಗೌಡರಲ್ಲಿ ಸಾವಿರ ರೂಪಾಯಿ ಸಾಲ ಮಾಡಿದರು. ನಾಗನಗೌಡರಿಗೆ ಬಾಳಂಭಟ್ಟರ ತುರಾಳ ದಂಡಿ ಹೊಲದ ಮೇಲೆ ಕಣ್ಣಿತ್ತು. ಹಳ್ಳದ ದಂಡಿಗುಂಟ ಇದ್ದ ಇಪ್ಪತ್ತೈದು ಎಕರೆ ಹೊಲ ಅವರಿಗೆ ಸಾವಿರ ರೂಪಾಯಿ ಬಿಚ್ಚುವಂತೆ ಮಾಡಿಸಿತ್ತು. ತನ್ನ ನಲವತ್ತೈದು ಎಕರೆಗೆ ಈ ಇಪ್ಪತ್ತೈದು ಎಕರೆ ಸೇರಿದರೆ ಎಪ್ಪತ್ತು ಎಕರೆಯ ಏಕಡಾಗ ನನ್ನದಾಗುತ್ತದೆ ಎಂದು ಉಮೇದಿನಲ್ಲಿದ್ದರು. ಬಾಳಂಭಟ್ಟರಿಗೆ ಪಡೆದ ಸಾಲ ಹಿಂದಿರುಗಿಸುವುದು ಅಸಾಧ್ಯವಾಗತೊಡಗಿತು. ಅವರ ಉಳಿದ ಜಮೀನುಗಳು ಬರ ಬಿದ್ದುಬಿಟ್ಟವು. ಅಲ್ಪ ಸ್ವಲ್ಪ ಸಾಲ ಮುಟ್ಟಿಸುವ ಪ್ರಯತ್ನ ಮಾಡಿದರಾದರೂ ಪ್ರಯೋಜನವಾಗಲಿಲ್ಲ. ನಾಗನಗೌಡರು ತಮ್ಮ ಮಗ ಭರಮನಗೌಡನನ್ನು ಸಾಲ ವಸೂಲಿಗೆ ಮನೆಗೆ ಕಳಿಸ ಹತ್ತಿದರು. ಅಲ್ಲದೇ ತಮ್ಮ ಹತ್ತಿರ ಸಾಲ ಕೇಳಲು ಬರುವವರಿಗೆಲ್ಲ ರಾಯರು ಇನ್ನ ರೊಕ್ಕ ಕೊಟ್ಟಿಲ್ಲ’ ಎಂದು ಹೇಳಿ ಊರ ತುಂಬ ಬಬ್ಬಾಟ ಮಾಡಿಬಿಟ್ಟರು. ಇದರಿಂದಾಗಿ ನೊಂದುಕೊಂಡ  ಬಾಳಂಭಟ್ಟರು ಪಡದಯ್ಯನ ಹತ್ತಿರ ಹೋದರು. ಇದೇ ವೇಳೆ ಪಡದಯ್ಯ ಹತ್ತಿ ಬೆಳೆದು ರೊಕ್ಕದ ಗಂಟು ಮಾಡಿದ್ದ. ಅವನಿಂದ ಎರಡು ಸಾವಿರ ಸಾಲ ಪಡೆದು ನಾಗನಗೌಡರ ಸಾಲ ತೀರಿಸಿಬಿಟ್ಟರು. ಪಡದಯ್ಯನಿಗೆ ಹೊಲ ಖರೀದಿಗೆ ಒಡಂಬಡಿಕೆ ಮಾಡಿಕೊಂಡರು. ಒಂದು ವರ್ಷದೊಳಗೆ ಹತ್ತು ಸಾವಿರ ಕೊಟ್ಟು ಹೊಲ ಕೊಂಡು ಕೊಳ್ಳಬೇಕು ಎಂಬುದಾಗಿತ್ತು. ಆದರೆ ಪಡದಯ್ಯನವರಿಗೂ ದುರಾದೃಷ್ಟ ಬಡಿದುಕೊಂಡಿತ್ತು. ಅವನ ಹೊಲಕ್ಕೂ ಬರ ಹಬ್ಬಿತು. ಊರ ಹಿರಿಯ ನಾಗನಗೌಡರು ತೀರಿಕೊಂಡರು. ಹಿರಿಯ ಮಗ ಭರಮಗೌಡನ ಆಳ್ವಿಕೆ ಶುರುವಾಯಿತು. ಬರ ಊರೆಲ್ಲಾ ಬಡಕೊಂಡಿತು. ಹೊಲದಲ್ಲಿ ಬೆಳೆ ಊರಲ್ಲಿ ಜನ ಇಲ್ಲವಾಯಿತು. ಕೆಲಸ ಹುಡುಕಿ ಜನ ಗೋವಾವರೆಗೂ ದುಡಿಯಲು ಹೋದರು. ಬಾಳಂಭಟ್ಟರ ಮಗ ವಾಮನ ಗದುಗಿನಲ್ಲಿ ಖೋಲಿ ಮಾಡಿಕೊಂಡು ಬಿ.ಕಾಂ. ಓದಿದ. ಪಡದಯ್ಯ ಹೊಲ ಖರೀದಿಗೆ ಸಾಕಷ್ಟು ಪ್ರಯತ್ನ ಮಾಡಿದ್ದರೂ ಸಾಧ್ಯವಾಗಿರಲಿಲ್ಲ. ಒಂದು ದಿನ ಬಾಳಂಭಟ್ಟರು ಪಡದಯ್ಯಜ್ಜ, ನನಗ ಅರ್ಜಂಟ್ ಆರು ಸಾವಿರ ರೂಪಾಯಿ ಬೇಕಾಗೈತಿ. ಮಗಾ ಬ್ಯಾಂಕ ನೌಕರಿಗೆ ಹೊಂಟಾನ. ಅಲ್ಲಿ ಡಿಪಾಜಿಟ್ ಮಾಡಬೇಕಂತ. ನಿನ್ನ ಕಡೇ ಖರೀದಿ ಆಗದಿದ್ದರ ಹೇಳು ಭರಮಗೌಡ ಖರೀದಿ ಮಾಡಾಕ ತಯ್ಯಾರ ಅದಾನ ಎಂದರು. ಪಡದಯ್ಯ ಬೇರೆ ದಾರಿ ಕಾಣದೇ ಮನೇಲಿದ್ದ ಬಂಗಾರ-ಬೆಳ್ಳಿ ಸಾಮಾನು ಮಾರಿ ಆರು ಸಾವಿರ ತಂದು ಕೊಟ್ಟ. ತುಗೋರಿ ರಾಯರ. ನಿಮಗ ತಡಾ ಮಾಡಿದೆ. ಬರಾ ಬೀಳದ ಇದ್ರ ನಿಮ್ಮ ಹೊಲದ ಜೊತಿ ಇನ್ನೊಂದು ಹೊಲ ಖರೀದಿ ಹಿಡೀತಿದ್ದೆ. ಆದ್ರ ನಾ ಪೂರ್ತ ರೊಕ್ಕ ಕೊಟ್ಟ ಮ್ಯಾಲ ಖರೀದಿ ಬರದ ಕೊಡ್ರಿ’ ಎಂದು ಕೈ ಮುಗುದ. ಬಾಕಿ ಎರಡು ಸಾವಿರ ಕೊಡುವ ವರೆಗೂ ಖರೀದಿ ಆಗುವುದಿಲ್ಲ ಎನ್ನುವ ಕೊರಗು ಪಡದಯ್ಯನಲ್ಲಿ ಉಳೀತು. ಈ ವ್ಯವಹಾರದಿಂದಾಗಿ ಪಡದಯ್ಯ ಭರಮನ ಗೌಡರ ಮನೆಯ ದ್ವೇಷ ಕಟ್ಟಿಕೊಳ್ಳುವಂತಾಯಿತು. ವರ್ಷಗಳು ಉರುಳಿದವು. ಬಾಳಂಭಟ್ಟರು ಅಳಿದುಳಿದ ಎಲ್ಲ ಹೊಲಗಳನ್ನು ಮಾರಿ ಹೆಣ್ಣುಮಕ್ಕಳ ಮದುವಿ ಮಾಡಿದರು. ವಾಮನ ನೌಕರಿಗಾಗಿ ಮುಂಬೈಗೆ ಹೋಗಿದ್ದರಿಂದ ಇವರೂ ಮುಂಬೈಗೆ ಹೋದರು. ಹಾಗೆ ಹೋದವರು ಒಮ್ಮೆ ಬಂದು ಆರೇರ ಕರಿನಿಂಗಪ್ಪನಿಗೆ ದೀಪ ಹಚಗೊಂಡು ಇರು’ ಎಂದು ದೆವ್ವನಂತಹ ಮನೆ ಬಿಟ್ಟುಕೊಟ್ಟರು. ಮನಿ ಬಿಟ್ಟು ಹೋಗುವಾಗ ಕರುಳು ಚುರ್ರ ಎಂದು ಜೀವ ಹಳಹಳಿಸುತ್ತಾ ಮುಂಬೈನ ಅಪಾರ್ಟಮೆಂಟ್  ಸೇರಿಬಿಟ್ಟತು. ಇತ್ತ ಬರದ ಬಾಧೆ ತಾಳದೇ ಹೊಲವನ್ನು ಮಾಡಲಾಗದೇ ಪಡದಯ್ಯನೂ ತನ್ನ ಒಂದೊಂದೇ ಹೊಲವನ್ನು ಮಾರಿ ಗದಗು ಸೇರಿದ. ಆ ಪೈಕಿ ಬಾಳಂಭಟ್ಟರ ತುರಾಳ ದಂಡಿ ಹೊಲವನ್ನು ಭರಮಗೌಡರಿಗೆ ಮಾರಿದ. ಹೀಗೆ ಜಂತಲಿ  ಅಂಬೋ ಊರಾಗ ಗಾಳಿ ಸಹ ನಿಶ್ಯಬ್ದದಿಂದ ಓಡಾಡಹತ್ತಿತು. ಮೇಲೆ ಹಾರುವ ಹಕ್ಕಿಗಳು, ಮೋಡಗಳು ಕೂಡಾ ಈ ಊರ ಸುತ್ತ-ಮುತ್ತ ತಮ್ಮ ನೆರಳು ಬೀಳದಂತೆ ಎಚ್ಚರಿಕೆಯಿಂದ ಹಾರಾಡುತ್ತಿದ್ದವು.

ಕಾಲಗತಿ ಮತ್ತೊಂದು ಮಗ್ಗುಲಾಗಿತ್ತು. ಹಳ್ಳಿಗುಡಿ ಗ್ರಾಮಕ್ಕೆ ಹೊಂದಿಕೊಂಡು ಜಂತಲಿ,ಶಿರೂರು, ಚುರ್ಚಿಹಾಳ ಸೇರಿದಂತೆ ನಾಲ್ಕೈದು ಗ್ರಾಮಗಳ ಐದು ಸಾವಿರ ಎಕರೆ ಭೂಮಿಯನ್ನು ವಿದೇಶಿ ಕಂಪನಿ ಕೊಂಡು ಕೊಂಡು ದೊಡ್ಡ ಫ್ಯಾಕ್ಟರಿ ಹಾಕುತ್ತದಂತೆ ಎಂದು ಸುದ್ದಿ ಹರಡಿತು. ಪರಿಹಾರವೆಂದು ಎಕರೆಗೆ ಹತ್ತು ಲಕ್ಷ ಕೊಡುತ್ತದಂತೆ ಎಂಬ ಸುದ್ದಿ ಜನರೊಳಗೆ ಕಚಗುಳಿ ಇಟ್ಟಿತು. ಎಕರೆಕ ಇಪ್ಪತ್ತು ಲಕ್ಷ ಕೊಟ್ಟರಷ್ಟೆ ನಾ ಹೊಲ ಕೊಡಾವ’ ಎಂದು ಅಡ್ಡ ಸೆಟೆದು ಅಡ್ಡಾಡುವ ಜನ ಎಲ್ಲೆಡೆ ಕಾಣತೊಡಗಿದರು. ಎಕರೆಗೆ ಇಪ್ಪತ್ತು ಸಾವಿರಕ್ಕೂ ಭಾರವಾಗಿದ್ದ ಭೂಮಿಗಳು ಇಪ್ಪತ್ತು ಲಕ್ಷ ತರುವ ಲಾಟರಿ ಟಿಕೇಟುಗಳಾದವು. ಖರೀದಿಗೆ ನಾ ಮುಂದೆ ನೀ ಮುಂದು ಎಂದು ಎಲ್ಲೆಲ್ಲಿಂದಲೋ ಜನ ಬರತೊಡಗಿದರು. ಜಂತಲಿ  ಅಂಬೋ ಗ್ರಾಮ ಜೇಮಶೇಡಪುರವೆಂಬಂತೆ ಬೀಗ ತೊಡಗಿತು. ಜನ ಭೂಸ್ವಾಧೀನ ಪರಿಹಾರದ ಹಣದ ಕನಸಲ್ಲಿ ತೇಲತೊಡಗಿದರು. ಎಲ್ಲೆಲ್ಲೂ ಹಣದ ಮಾತಿನ ಸುದ್ದಿ ಚಂಡಮಾರುತದಂತೆ ಊರೆಲ್ಲಾ ತಿರುಗುತ್ತಿತ್ತು. ಊರ ಮೇಲೆ ಲೋಹದ ಹಕ್ಕಿಗಳು ನಿತ್ಯ ಹಾರಹತ್ತಿದವು. ಕೆಂಪುಬಣ್ಣದ ಮಂದಿ ತಮ್ಮ ಊರ ಕರಿಮಣ್ಣು ಕಂಡು ಬೆರಗಿನಿಂದ ಮಾತಾಡುವುದನ್ನು, ಹಸಿರ ಸೀರೆ ಉಟ್ಟ ಹಳ್ಳಿ ಹೆಂಗಸರು ಬಾಯ ಮೇಲೆ ಬೆರಳಿಟ್ಟು ನೋಡಿದರು. ಅವರ ಒಂದು ಮಾತು ಎಲ್ಲಿಯಾದರೂ ಗಾಳಿಗೆ ತೂರಿ ತಮ್ಮ ಕಿವಿಗೆ ತಾಗದೇ ಹೋದೀತು ಎಂಬ ಭಯದಿಂದ ಗಾಳಿಯನ್ನು ತಡೆದು ನಿಲ್ಲಿಸುವ ಪ್ರಯತ್ನವನ್ನೂ ಮಾಡಿದರು. ಊರ ಹಿರಿಯ ಭರಮಗೌಡ ತನ್ನ ನಲವತ್ತೈದು ಎಕರೆ ಪಡದಯ್ಯನಿಂದ ಖರೀದಿಸಿದ ಇಪ್ಪತ್ತೈದು ಎಕರೆ ಒಟ್ಟ ಎಪ್ಪತ್ತು ಎಕರೆ ಗುಣಲೆ ಇಪ್ಪತ್ತು ಲಕ್ಷ ಎಂದು ಲೆಕ್ಕ ಹಾಕುತ್ತಿದ್ದ. ಒಂದು ದಿನ ಭೂ ಸ್ವಾಧೀನ ಇಲಾಖೆಗೆ ಲೆಕ್ಕ ಹಾಕಿಸಲು ಹೊರಟ. ಅವರು ಜಮೀನ ಉತಾರ ತೆಗೆದುಕೊಂಡು ಬರ್ರಿ ನಿಮ್ಮ ಹೆಸರಲ್ಲಿ ಎಷ್ಟು ಜಮೀನಿದೆ ನೋಡೋಣ ಆಮ್ಯಾಲ ಹೇಳ್ತೀವಿ ಅಂದರು. ‘ಸರಿ’ ಎಂದು ಭರಮಗೌಡ ಉತಾರ ತಗಿಸಿ ನೋಡಿದರೆ ಕೇವಲ ಎಂಟು ಎಕರೆ ಮಾತ್ರ ಅವನ ತಂದೆಯ ಹೆಸರಲ್ಲಿತ್ತು. ನೂರಾರು ಎಕರೆಯ ಒಡೆಯ ತಾನು ಎಂದು ಭ್ರಮಿಸಿದ ಭರಮಗೌಡ ಗಾಬರಿಯಾಗಿ ಬಿಟ್ಟ. ತನ್ನದೆಂದು ಕೊಂಡಿದ್ದ ಭೂಮಿ ಈಗ ಯಾರದೋ ಹೆಸರಲ್ಲಿತ್ತು. ಅವರಲ್ಲಿ ಕೆಲವರು ಸತ್ತೂ ಹೋಗಿದ್ದರು! ಕೆಲವರು ಊರು ಬಿಟ್ಟು ಹೋಗಿದ್ದರು. ಈಗ ಎಲ್ಲರನ್ನು ಕರೆಸಿ ಖರೀದಿ ಮಾಡಿಸಿಕೊಳ್ಳುವುದು ತನ್ನ ಹೆಸರು ಹಚ್ಚಿ ಭೂ ಪರಿಹಾರ ಪಡೆಯುವುದು ಅಸಾಧ್ಯವೆಂದು ಅರಿತ. ಕೂಡಲೇ ತನ್ನ ಆಪ್ತರನ್ನು ಹತ್ತಿರದ ಹಳ್ಳಿಗಳ ಸಂಬಂಧಿಕರನ್ನು ಸೇರಿಸಿದ. ಬಂದ ಬಹುತೇಕರ ಸ್ಥಿತಿ ಇವನಂತೆಯೇ ಇತ್ತು. ವಿಚಾರ ಮಂಥನಗಳ ಬಳಿಕ ರಾತ್ರೋ ರಾತ್ರಿ ಬೋರ್ಡುಗಳನ್ನು ಬರೆಸಿದರು. ‘ವಿದೇಶಿ ಕಂಪನಿಗಳಿಗೆ ಧಿಕ್ಕಾರ!’ ‘ನಮ್ಮ ಜಮೀನು ನಮ್ಮ ಹಕ್ಕು’, ‘ಭೂಮಿ ತಾಯಿ ಆಣೆ, ಜಮೀನು ಮಾರುವುದಿಲ್ಲ’ ಪರಸ್ಪರ ವಿರೋಧವಿದ್ದರೂ ಪಡದಯ್ಯಜ್ಜ ಭರಮಗೌಡ��� ಜೊತೆ ಸೇರಿ ಮಠಕ್ಕೆ ಬಂದ. ನಮ್ಮೂರ ಜಮೀನು ಯಾರದೋ ಪಾಲು ಆಗದಿರಲಿ’ ಎಂದು ಗದ್ದಗಿಗೆ ಹಣಿ ಹಚ್ಚಿ ಬೇಡಿಕೊಂಡ. ಇದಾವುದರ ಪರಿವೆ ಇಲ್ಲದ ಬಾಳಂಭಟ್ಟರ ಮಗ ವಾಮನ ಮುಂಬೈನ ತನ್ನ ಫ್ಲಾಟ ಮುಂದೆ ಹಳೇ ಬೋರ್ಡು ತೆಗೆದು ಹೊಸ ಬೋರ್ಡ ಹಚ್ಚಿದ.
ವ್ಹಿ.ಬಿ.ಜೋಶಿ
ಡೆಪ್ಯೂಟಿ ಜನರಲ್ ಮ್ಯಾನೇಜರ್
( ಅಗ್ರಿಕಲ್ಚರ್ ಡೆವೆಲಪ್ಮೆಂಟ್ )

            — ಶ್ರೀನಿವಾಸ. ಹುದ್ದಾರ
                 ಧಾರವಾಡ

Leave a Reply