ಭೇದವೆಣಿಸದ ಸಮದರ್ಶಿ
‘ಜ್ಞಾನ-ನಿರ್ಧತ-ಕಲ್ಮಶರು’ (ಜ್ಞಾನದಿಂದ ಶುದ್ಧರಾದವರು) ಮೋಹಬಂಧಗಳಿಂದ ಮೇಲೆದ್ದು ತತ್ವದೆತ್ತರಕ್ಕೆ ಏರುತ್ತಾರೆ ಎನ್ನುವುದನ್ನು ಕೃಷ್ಣನು ವಿವರಿಸುತ್ತಿದ್ದನಷ್ಟೆ? ಅಂತಹ ಜ್ಞಾನಿಗಳು ಲೋಕವನ್ನು ಹೇಗೆ ಕಾಣುತ್ತಾರೆ ಎನ್ನುವುದನ್ನು ವಿವರಿಸುತ್ತಾನೆ;
ಪಂಡಿತನಾದವನು ವಿದ್ಯಾವಿನಯಸಂಪನ್ನನಾದ ಬ್ರಾಹ್ಮಣನಲ್ಲಿಯೂ, ಸಿಂಹದಲ್ಲೂ, ಆನೆಯಲ್ಲೂ, ನಾಯಿಯಲ್ಲೂ, ನಾಯಿಮಾಂಸವನ್ನು ಸೇವಿಸುವಂತಹವನಲ್ಲೂ ಸಮದರ್ಶಿಯಾಗಿರುತ್ತಾನೆ. (ಭ.ಗೀ.: 5.17)
ಕಣ್ಣಿಗೆ ಮೇಲೆ ಮೇಲೆ ಕಾಣುವ ತಾರತಮ್ಯಗಳನ್ನು ನೋಡಿ ತಾನೆ ಮನುಷ್ಯನು ಭೇದವೆಣಿಸುವುದು! ಈ ಬಾಹ್ಯದ ತಾರತಮ್ಯಗಳನ್ನು ಅತಿಕ್ರಮಿಸಿ, ಒಳಗಿರುವ ಭಗವತ್ತತ್ವವನ್ನು ನೋಡಿದರೆ, ಭೇದಭಾವದ ಭ್ರಾಂತಿ ಉಳಿಯದು. ಸಮಸ್ತ ಚರಾಚರದಲ್ಲೆಲ್ಲ ತುಂಬಿರುವುದು ಏಕೈಕ ಭಗವಚ್ಚೈತನ್ಯವೇ ಎಂದು ಎಲ್ಲ ಶಾಸ್ತ್ರಗಳೂ, ಮಹಾತ್ಮರೂ ಹೇಳುತ್ತಲೇ ಬಂದಿದ್ದರೂ, ಅದನ್ನು ಮನುಜರು ಕೇಳುತ್ತಲೇ ಬಂದಿದ್ದರೂ, ಜೀವನದರ್ಶನದಲ್ಲಿ ಆ ಭಾವವನ್ನು ಅಳವಡಿಸಿಕೊಳ್ಳುವುದಿಲ್ಲ! ಜೀವರಲ್ಲಿ ಮೇಲೆ ಮೇಲೆ ಕಾಣುವ ಲಿಂಗ, ರೂಪ, ಕುಲ, ಅಂತಸ್ತುಗಳ ಭೇದಗಳನ್ನೇ ದೊಡ್ಡದಾಗಿ ಗಣಿಸಿ, ತಾರತಮ್ಯ ಎಸಗುತ್ತಾರೆ. ‘ನಾನು ಹೆಚ್ಚು, ನೀನು ಕಡಿಮೆ, ಅವನು ದೊಡ್ಡವನು, ಇವನು ನೀಚ, ಇವನು ಮನುಷ್ಯ, ಅದು ಪ್ರಾಣಿ’ ಎಂದು ಉಚ್ಚ-ನೀಚಗಳ ಪಟ್ಟಿ ಕಟ್ಟಿಯೇ ನೋಡುತ್ತಾರೆ! ಇದನ್ನೇ ‘ಅಜ್ಞಾನ’ ಎಂದಿದ್ದಾನೆ ಕೃಷ್ಣ.
ನಿಜವಾದ ಪಂಡಿತನು ಭೇದವೆಸಗುವುದಿಲ್ಲ. (‘ಪಂಡ’ ಎಂದರೆ ಜ್ಞಾನ, ‘ಪಂಡಿತ’ ಎಂದರೆ ಜ್ಞಾನಿ.) ಏಕೆಂದರೆ ಅವನು ಜೀವಿಗಳ ಹೊರಾವರಣಗಳನ್ನಷ್ಟೇ ನೋಡುವುದಿಲ್ಲ. ಒಳಗಿನ ಆತ್ಮಚೈತನ್ಯವನ್ನು ಕಾಣುತ್ತಾನೆ. ನಾಮ-ರೂಪ-ದೇಶ-ಕಾಲಗಳ ಭೇದಗಳ ಹೊರಜಗತ್ತಿನಲ್ಲಿ ಆತ ವ್ಯವಹರಿಸುತ್ತಿದ್ದರೂ, ಸರ್ವವ್ಯಾಪಿಯಾದ ಭಗವತ್ತತ್ತ್ವದಲ್ಲಿ ಮನವನ್ನಿಟ್ಟಿರುತ್ತಾನೆ. ಮನುಷ್ಯ-ಮನುಷ್ಯರ ನಡುವೆಯಷ್ಟೇ ಅಲ್ಲ, ಆತ ಮನುಷ್ಯ, ಪ್ರಾಣಿ, ಪಕ್ಷಿ, ನೆಲ, ಜಲ, ಗಾಳಿ, ಬೆಂಕಿ, ಆಕಾಶಾದಿ ಚರಾಚರಗಳಲ್ಲೂ ಭೇದ ಕಾಣಲಾರನು. ಏಕೆಂದರೆ ಪ್ರಕೃತಿಯ ಎಲ್ಲದರಲ್ಲೂ ಎಲ್ಲರಲ್ಲೂ ಒಂದೇ ಸಚ್ಚಿದಾನಂದದ ಅಸ್ತಿತ್ವವನ್ನೇ ಕಾಣುತ್ತಾನೆ.
ಹಾಗಾಗಿ ಪೂರ್ಣಜ್ಞಾನಿಯು ಸಹಜವಾಗಿಯೇ ಸಮದರ್ಶಿಯಾಗುತ್ತಾನೆ. ಅವನ ಪಾಲಿಗೆ ವಿದ್ಯಾ-ವಿನಯ-ಸಂಪನ್ನನಾದ ಬ್ರಾಹ್ಮಣನು ಹೇಗೋ ಇತರ ಸಾಮಾನ್ಯರೂ ಪಶು-ಪಕ್ಷಿಗಳೂ ಹಾಗೆಯೇ! ಇಲ್ಲಿ ‘ಬ್ರಾಹ್ಮಣ’ ಎನ್ನುವ ಪದ ಕೇವಲ ಕುಲವಾಚಕವಲ್ಲ. ‘ವಿನಯ’ ಎಂದರೆ ವಿನಮ್ರತೆ ಎಂದರ್ಥ. ‘ಚೆನ್ನಾಗಿ ಪರಿಣತಿ ಹೊಂದಿದ’ ಎಂದೂ ಅರ್ಥ. ವಿದ್ಯಾ-ವಿನಯ-ಸಂಪನ್ನ ಎಂದರೆ ‘ಒಳ್ಳೆ ವಿದ್ಯಾಬುದ್ಧಿಗಳನ್ನೂ ಗುಣಗಳನ್ನೂ ಸಂಪಾದಿಸಿ ಮಾನ್ಯನಾದವನು’ ಎಂದರ್ಥ. ‘ಬ್ರಾಹ್ಮಣ’ ಎಂದರೆ ‘ಬ್ರಹ್ಮಜ್ಞಾನವನ್ನು ಪಡೆದವನೆಂದೂ, ವೇದಾಧ್ಯಯನ ಮಾಡುವವನೆಂದೂ, ಆಚಾರ್ಯ/ಶಿಕ್ಷಕ ಎಂದೂ, ಬ್ರಹ್ಮಚರ್ಯಾದಿ ಉನ್ನತ ಆದರ್ಶಗಳನ್ನು ಪಾಲಿಸುವ ಸಂಯಮಿ’ ಎಂದೂ ಅರ್ಥಗಳಿವೆ. ಒಟ್ಟಿನಲ್ಲಿ ‘ವಿದ್ಯಾ-ವಿನಯ-ಸಂಪನ್ನ-ಬ್ರಾಹ್ಮಣ’ ಎಂದರೆ ‘ವಿದ್ಯೆಯಲ್ಲೂ ಕಾರ್ಯದಲ್ಲೂ ಯೋಗ್ಯತೆಯಲ್ಲೂ ಶೀಲದಲ್ಲೂ ಉನ್ನತಿಗೇರಿ, ಸಮಾಜದಲ್ಲಿ ಮಾನ್ಯನೆನಿಸಿದವನು’ ಎಂದರ್ಥ. ಸಮಾಜವು ಇಂಥವರನ್ನು ‘ಬೆರಗಿ’ನಿಂದ ಕಾಣುತ್ತದೆ. ಆದರೆ ಜ್ಞಾನಿಯಲ್ಲಿ ಅಂಥ ‘ಬೆರಗು’ ಇರುವುದಿಲ್ಲವಂತೆ!
ಪಾಂಡಿತ್ಯಸಂಪನ್ನನೇ ಆಗಲಿ, ವಿದ್ಯೆ-ಕೌಶಲಗಳಿಲ್ಲದವನೇ ಆಗಲಿ, ಬಾಲನೇ ಆಗಲಿ, ವೃದ್ಧನೇ ಆಗಲಿ, ಬಡವನೇ ಆಗಲಿ, ಬಲ್ಲಿದನೇ ಆಗಲಿ, ಆಳೇ ಆಗಲಿ, ಅರಸನೇ ಆಗಲಿ, ಸ್ತ್ರೀಯಾಗಲಿ, ಪುರುಷನಾಗಲಿ, ಯಾವ ದೇಶ-ಕಾಲ-ವೃತ್ತಿಗಳ ಹಿನ್ನಲೆಯವನೇ ಆಗಲಿ – ಎಲ್ಲರೂ ಒಂದೇ ಭಗವಲ್ಲೀಲೆಯ ಸುಂದರ ಸೃಷ್ಟಿಗಳು ಎಂಬುದು ಅವನ ಉದಾತ್ತ ದರ್ಶನವಾಗಿರುತ್ತದೆ. ಕ್ರೂರವೂ ಬಲಶಾಲಿಯೂ ಆದ ಸಿಂಹವೂ, ಸಾತ್ವಿಕವೂ ಬಲಶಾಲಿಯೂ ಆದ ಆನೆಯೂ, ಸಾಮಾನ್ಯ ಬಲಾಬಲಗಳ ನಾಯಿಯೂ, ನಾಯಿಮಾಂಸವನ್ನು ತಿನ್ನುವಂತಹವನೂ (ಕಾಡು ಮನುಷ್ಯನೂ) ಎಲ್ಲರೂ ಪರಮಾತ್ಮನ ಸೋಜಿಗದ ಸೃಷ್ಟಿಗಳೇ! ಎಲ್ಲರಲ್ಲೂ ಇರುವ, ಇದ್ದು ಪ್ರವರ್ತಿಸುವ ಭಗವಚ್ಚೈತನ್ಯವು ಒಂದೇ ಎನ್ನುವುದು ಅವನ ಅನುಭವ.
ಭೇದವಿರುವ ತನಕ ಮನುಷ್ಯನು ಒಬ್ಬರನ್ನು ಕಂಡು ಬೆರಗಾಗುವುದು, ಹೊಗಳುವುದು, ಮೋಹಗೊಳ್ಳುವುದು, ಮತ್ತೊಬ್ಬರನ್ನು ಕಂಡು ಅಸಹ್ಯಪಟ್ಟುಕೊಳ್ಳುವುದು, ತಿರಸ್ಕರಿಸುವುದು, ಮುನಿಯುವುದು ಇತ್ಯಾದಿಗಳನ್ನು ಮಾಡುತ್ತಲೇ ಇರುತ್ತಾನೆ! ಅಂತರಂಗದಲ್ಲಿ ಮೋಹದ ‘ಅಶುದ್ಧಿ’ ಇರುವನಕ ಭೇದಬುದ್ಧಿ ತಪ್ಪದು. ಮೋಹ ತೊಲಗಿ ಅಂತರಂಗವು ಶುದ್ಧವಾದಾಗ ಸಮದರ್ಶಿತ್ವವು ಮೂಡೂತ್ತದೆ. ಇದನ್ನೇ ಶರಣವರೇಣ್ಯರು
‘… ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ’
ಎಂದು ನಿರ್ದೇಶಿಸಿದ್ದು!
ಇಂತಹ ಸಮದರ್ಶಿತ್ವಕ್ಕೇ ಸ್ವತಃ ಕೃಷ್ಣನೇ ನಿದರ್ಶನ. ಅರಸುಮನೆತನದ ತನ್ನ ಪ್ರತಿಷ್ಠಿತ ಬಂಧುಮಿತ್ರರಲ್ಲೂ ಮುನಿಜನರಲ್ಲೂ ಆತ ಯಾವ ಸ್ನೇಹಾದರಗಳನ್ನು ತೋರಿದನೋ, ಗೋಕುಲದ ಮುಗ್ಧ ಗೊಲ್ಲಗೊಲ್ಲತಿಯರಲ್ಲೂ, ಅಲ್ಲಿನ ಗೋವು, ಗಿಳಿ, ನವಿಲು, ಜಿಂಕೆಗಳಲ್ಲೂ, ಗಿಡ, ಮರ, ಬಳ್ಳಿ, ಬೆಟ್ಟಗಾಡುಗಳಲ್ಲೂ ಯಮುನೆಯಲ್ಲೂ ಅಷ್ಟೇ ಪ್ರೀತ್ಯಾದರ ತೋರಿದವನು ಅವನು. ಅವನ ಪ್ರೇಮವು ಸೀಮಾತೀತವೂ ದೇಶಕಾಲಾತೀತವೂ ಅಗಿದ್ದರಿಂದಲೇ ಇಂದಿಗೂ ಶ್ರೀಕೃಷ್ಣನು ಇಡೀ ಮನುಕುಲಕ್ಕೆ ಪ್ರಸ್ತುತನೆನಿಸಿದ್ದಾನೆ.
ಡಾ. ಆರತೀ ವಿ. ಬಿ.
ಕೃಪೆ: ವಿಜಯವಾಣಿ