ಭಗವದ್ಗೀತೆಯ ಸಾರಸರ್ವಸ್ವ ಭಾಗ- ೨
ಆ) ಲೋಕ ಕಲ್ಯಾಣ–
ವಾಸ್ತವಿಕವಾಗಿ ಪ್ರಪಂಚವನ್ನಾಗಲೀ, ಪ್ರಪಂಚದಲ್ಲಿ ದೊರಕುವ ಸುಖ ದುಃಖಗಳನ್ನಾಗಲೀ, ಪ್ರಾಪಂಚಿಕ ಇತಿಮಿತಿ ಚೌಕಟ್ಟು ಬಂಧ ವನ್ನಾಗಲೀ ಒಪ್ಪಿಕೊಳ್ಳದೇ ಇರಲು ಸಾಧ್ಯವಿಲ್ಲ. ಪ್ರಪಂಚದಲ್ಲಿ ಬಾಳನ್ನು ಸಾಗಿಸಲೇ ಬೇಕು, ಜವಾಬ್ದಾರಿಗಳನ್ನು ನಿರ್ವಹಿಸಲೇ ಬೇಕು; ಅದೇ ಸಹಜವಾದದ್ದು. ವ್ಯಕ್ತಿ ತನಗಾಗಿ, ತನ್ನ ಕುಟುಂಬ ಸಮಾಜ ರಾಜ್ಯ ಸುತ್ತಲಿನ ಪರಿಸರಕ್ಕಾಗಿ ಅತ್ಯಾವಶ್ಯಕವಾಗಿ ಮಾಡಬೇಕಾದ ಕರ್ಮ, ಕರ್ತವ್ಯಗಳನ್ನು ನಿರ್ವಹಿಸುತ್ತಾ ಕರ್ಮಾನುಷ್ಠಾನಿ ಆಗಲೇಬೇಕು. ವ್ಯಕ್ತಿಯ ಕರ್ತವ್ಯಗಳು ಮಾನವ ಸಮಾಜಕ್ಕೆ ಮಾತ್ರ ಸೀಮಿತವಾದದ್ದು ಅಲ್ಲ, ಸಮಸ್ತ ಚರಾಚರ ಜಗತ್ತನ್ನು ಅವು ವ್ಯಾಪಿಸುತ್ತವೆ. ನೈತಿಕ ಪ್ರಜ್ಞೆ ಇಲ್ಲದಿರುವವುಗಳಿಗೆ ತಾವೇ ಭಾವಿಸಿ ಮಾಡಬೇಕಾದ ಕರ್ತವ್ಯಗಳು ಇಲ್ಲದಿರಬಹುದು. ಆದರೆ ಅವುಗಳಿಗೆ ಸಲ್ಲಿಸ ಬೇಕಾದ ಯಾವ ಕರ್ತವ್ಯಗಳೂ ಮನುಷ್ಯನಿಗೆ ಇಲ್ಲ ಎನ್ನಲಾಗುವುದಿಲ್ಲ. ಲೋಕಕಲ್ಯಾಣಕ್ಕಾಗಿ ಕರ್ಮ – ಕರ್ತವ್ಯವನ್ನು ಮಾಡಲೇಬೇಕು ಎಂದು ಭಗವದ್ಗೀತೆ ಒತ್ತಾಯಿಸುತ್ತದೆ.
ಇ) ವ್ಯಕ್ತಿತ್ವ–
ಸಾಮಾಜಿಕ ಜೀವನದ ಬಗ್ಗೆ ಜಿಗುಪ್ಸೆ ಇರಬಾರದು; ಅದರ ಬಗ್ಗೆ ಉದಾಸೀನತೆ ತೋರಬಾರದು; ಕರ್ಮಾನುಷ್ಠಾನದಲ್ಲಿ ಸೂಚ್ಯವಾಗಿರುವ ನಿರ್ಲಿಪ್ತತೆಯನ್ನು, ಸ್ವಾರ್ಥತ್ಯಾಗವನ್ನು ರೂಢಿಸಿಕೊಳ್ಳಬೇಕು; ಜೊತೆಗಾರರ ಬಗೆಗೆ ಪ್ರೀತಿ ದಯೆ ಅನುಕಂಪೆ ಹೊಂದಿರಬೇಕು; ಸಮಸ್ತ ಜೀವ ಅಜೀವರಾಶಿಯನ್ನು ಒಳಗೊಳ್ಳುವ ವಿಸ್ತಾರವಾದ ಸಮಷ್ಟಿಯ ಬಗೆಗೆ ಮೈತ್ರಿಭಾವ ಇರಬೇಕು; ಅಹಿಂಸೆ, ಕರ್ಮಾನುಷ್ಠಾನ ಮತ್ತು ದೇವೋಪಾಸನೆಗಳಿಂದ ಆಸುರೀ ಗುಣಗಳಿಂದ ದೂರ ಸರಿಯುತ್ತಾ ಹೋಗಬೇಕು; ದೈವೀಗುಣಗಳನ್ನು ಸಂಪಾದಿಸುತ್ತ ದೇವಯಾನಿಯಾಗಬೇಕು; ತಾಮಸಿಕ ಗುಣದ ಜಡತ್ವವನ್ನು ಕೊಡವಿಕೊಳ್ಳಬೇಕು; ರಾಜಸಿಕ ಗುಣದ ಕ್ರಿಯಾಶೀಲತೆಗೆ ತನು ಮನ ಧನಗಳನ್ನು ಒಡ್ಡಿಕೊಳ್ಳಬೇಕು; ಶ್ರದ್ಧೆ ರೂಢಿ ಅಭ್ಯಾಸಗಳನ್ನು ತರ್ಕ ಅನುಭವ ಅನುಭಾವಗಳ ಒರೆಗಲ್ಲಿಗೆ ಹಚ್ಚಿ ಅರಿವು ಪಡೆದು ಸಾತ್ವಿಕ ಗುಣದ ಔದಾರ್ಯ, ಶಾಂತಿ, ನಿರಾಳತೆಗಳ ಪರಮಶಾಂತಿಯುತ ವ್ಯಕ್ತಿತ್ವವನ್ನು ತನ್ನದಾಗಿಸಿಕೊಳ್ಳಬೇಕು ಎನ್ನುವ ಗುರಿಯನ್ನು ಭಗವದ್ಗೀತೆ ಮುಂದಿಡುತ್ತದೆ. ಇದೇ ಲೋಕಕಲ್ಯಾಣಕ್ಕಾಗಿ ರೂಪಿಸಿಕೊಂಡ ಮತ್ತು ಮೋಕ್ಷ ಮೌಲ್ಯವನ್ನು ಸಿದ್ಧಿಸಿಕೊಂಡ ಪರಮ ಸಾರ್ಥಕ ಬದುಕು ಎಂದು ಭಗವದ್ಗೀತೆ ಸ್ಪಷ್ಟಪಡಿಸುತ್ತದೆ.
ವ್ಯಕ್ತಿ ಸ್ವಾತಂತ್ರ್ಯ–
ಅ) ಜೀವನಗತಿ–
ಒಂದು ಮುಖ್ಯವಾದ ಪ್ರಶ್ನೆ ನಮಗೆ ಬೇಕಾದಂತೆ ನಮ್ಮ ಜೀವನವನ್ನು ಅರ್ಥಪೂರ್ಣ ಆಗಿಸಿಕೊಳ್ಳುವ, ಶಾಂತತೆಯ ಆನಂದದ ಅನುಭವವನ್ನು ಪಡೆಯುವ ಸ್ವಾತಂತ್ರ್ಯ ನಮಗೆ ಇದೆಯೇ ಎಂಬುದು. ಇದಕ್ಕೆ ಕೊಡುವ ಉತ್ತರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯನ್ನು ಗಮನಿಸಿ ಭಗವದ್ಗೀತೆ ವ್ಯಕ್ತಿ ಎಂಬುವವನು ದೇಹ, ಮನಸ್ಸು ಮತ್ತು ಅವುಗಳ ಕ್ರಿಯೆಗಳ ಒಂದು ಸಂಕೀರ್ಣತೆ; ವ್ಯಕ್ತಿಯು ಸತ್ತಾಗ ಅವನ ಸೂಕ್ಷ್ಮ ಶರೀರದ ಜೊತೆಗೆ ಅವನ ವಿದ್ಯಾ (ಜ್ಞಾನ) ಮತ್ತು ಕರ್ಮ (ಆಸೆ) ಗಳೂ ಅವನ ಸ್ಥೂಲ ಶರೀರದಿಂದ ಹೊರಬೀಳುತ್ತವೆ; ಅವು ಅವನ ಮುಂದಿನ ಜೀವನಗತಿಯನ್ನು ನಿರ್ಧರಿಸುತ್ತವೆ; ವ್ಯಕ್ತಿಯ ಜೀವನಗತಿ ಬಂಧನಕಾರಿಯೋ ಅಥವಾ ವಿಮೋಚನಕಾರಿಯೋ ಎಂಬುದು ವ್ಯಕ್ತಿಯನ್ನೇ ಅವಲಂಬಿಸಿರುತ್ತದೆ ಎನ್ನುತ್ತದೆ.
ಆ) ಬಂಧನ–
ವ್ಯಕ್ತಿ ಮೂಲಭೂತವಾಗಿ ಕರ್ತೃ ಭೋಕ್ತ ಜ್ಞಾತೃ. ಒಬ್ಬನ ವಿಚಾರಕ್ಕೆ, ನಡೆವಳಿಕೆಗೆ, ಭಾವನೆಗಳಿಗೆ ಅವನೇ ಕಾರಣ. ಅವನ ತಪ್ಪು ಗ್ರಹಿಕೆಯಾಧಾರಿತ ಕರ್ಮ, ಅವನ ಕರ್ಮವು ಉಂಟುಮಾಡುವ ಸೀಮಿತ ಜ್ಞಾನ ಎರಡೂ ಅವನನ್ನು ಬಂಧಿಸುತ್ತವೆ. ಅವನು ಎಲ್ಲಿಯವರೆಗೆ ತನ್ನ ಆಸೆ ಆಕಾಂಕ್ಷೆ, ಲಾಭ ನಷ್ಟ, ಸುಖ ದುಃಖ ಇವುಗಳ ದೃಷ್ಟಿಕೋನದಿಂದ ಕರ್ಮವನ್ನು ಮಾಡುತ್ತಿರುತ್ತಾನೆಯೋ ಅಲ್ಲಿಯವರೆಗೂ ಅವನ ಗ್ರಹಿಕೆ ಮತ್ತು ಕರ್ಮಗಳೆರಡೂ ಸೀಮಿತ ವ್ಯಾಪ್ತಿಯನ್ನು ಹೊಂದಿರುತ್ತವೆ. ಆ ಸೀಮಿತತೆಯೇ ಅವನ ಬಂಧನ. ಅವನೇ ನಿರ್ಮಿಸಿಕೊಂಡದ್ದು.
ಇ) ಬಿಡುಗಡೆ–
ವ್ಯಕ್ತಿಗೆ ಅವನ ಬಂಧನವೇ ಸುಖಕಾರಿ ಆಗಿರಬಹುದು. ಅವನು ಹೇಗೆ ಯೋಚಿಸಿದರೆ ಹಾಗೆ, ಅವನು ಹೇಗೆ ಭಾವಿಸಿದರೆ ಹಾಗೆ. ಅವನ ಸುಖ ದುಃಖ, ಸಂತೋಷ ಅಸಂತೋಷ, ಸಮಾಧಾನ ಅಸಮಾಧಾನಗಳಿಗೆ ಅವನ ಮನಸ್ಸೇ ಕಾರಣ. ಅವನು ಸ್ವ–ದೃಷ್ಟಿಕೋನವನ್ನು ಕೈ ಬಿಟ್ಟರೆ ಎಲ್ಲವನ್ನು ಅವು ಇರುವಂತೆಯೇ ಒಪ್ಪಿಕೊಂಡರೆ ಅವನ ಗ್ರಹಿಕೆ ಕರ್ಮಗಳು ವ್ಯಾಪಕತೆಯನ್ನು ಪಡೆಯುತ್ತಾ ಹೋಗುತ್ತವೆ. ಅವನ ಬಂಧನದ ವ್ಯಾಪ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಇದೂ ಅವನೇ ನಿರ್ಮಿಸಿಕೊಂಡದ್ದು.
ಈ) ಪ್ರಪಂಚ, ಪ್ರಾಪಂಚಿಕ ವ್ಯಕ್ತಿ–
ವ್ಯಕ್ತಿ ಅಲ್ಲ್ಲದ, ಅವನು ಇಲ್ಲದ ಜಗತ್ತು ಯಾವಾಗಲೂ ಇದ್ದೇ ಇರುತ್ತದೆ. ಅದು ಅವನನ್ನು ಕಟ್ಟಿಹಾಕುವುದೂ ಇಲ್ಲ, ಅವನು ಅದರಿಂದ ಬಿಡಿಸಿಕೊಳ್ಳುವುದೂ ಇಲ್ಲ. ಅವನು ಸ್ವೇಚ್ಛೆಯಾಗಿರಲೂ ಅದು ಬಿಡುವುದಿಲ್ಲ, ಅದರ ಪಾಡಿಗೆ ಅದು, ನನ್ನ ಪಾಡಿಗೆ ನಾನು ಎಂದು ಅದರಿಂದ ಪ್ರತ್ಯೇಕಿತನಾಗಿ ಇರಲೂ ಅದು ಬಿಡುವುದಿಲ್ಲ. ಅವನು ಅದನ್ನು ಕುರಿತು ಭಾವಿಸಿ ಅರಿವನ್ನು ಪಡೆಯುತ್ತಲೇ ಇರುತ್ತಾನೆ, ಆ ಅರಿವಿಗೆ ಅನುಗುಣವಾಗಿ ಪ್ರಪಂಚದಲ್ಲಿ ಕೆಲಸ, ಕರ್ಮ ಮಾಡುತ್ತಲೇ ಇರುತ್ತಾನೆ, ಆ ಕರ್ಮಫಲವನ್ನು ಅನುಭವಿಸುತ್ತಲೇ ಇರುತ್ತಾನೆ.
ಕಾರ್ಯ ಕಾರಣಾತ್ಮಕವಾದ ವಿಶ್ವದ ಸಂಗತಿಗಳನ್ನು ಪರಿಶೀಲಿಸಿದಾಗ ಅವೆಲ್ಲವೂ ಅತ್ಯುಚ್ಚ ಮೌಲ್ಯವೂ, ಸಕಲ ಚರಾಚರಗಳ ಸೃಷ್ಟಿ ಸ್ಥಿತಿ ಲಯ ಕರ್ತೃವೂ, ಎಲ್ಲದರ ಕ್ರಿಯಾತ್ಮಕ ತತ್ತ್ವವೂ ಮತ್ತು ಅವೆಲ್ಲವುಗಳಿಗಿಂತ ಮಿಗಿಲಾದ, ಅವೆಲ್ಲವುಗಳಿಗೆ ಅತೀತವಾಗಿ ಇರುವ ಭಗವಂತನ, ಪರಮ ವಾಸ್ತವಿಕತೆಯ ಕಡೆಗೆ ನಿರ್ದೇಶಿತವಾಗಿವೆ ಎಂಬ ಅರಿವು ಹೃದಯವನ್ನು ತುಂಬುತ್ತದೆ. ವಿಶ್ವವನ್ನು ಕುರಿತು ಒಂದು ವಿಲಕ್ಷಣವಾದ ಭರವಸೆ ಉಂಟಾಗುತ್ತದೆ. ಜೀವನವನ್ನು ಅದರ ಎಲ್ಲಾ ಸಂಕೀರ್ಣತೆ, ವ್ಯಾಪಕತೆಯೊಂದಿಗೆ ಶಾಂತಿಯುತವಾಗಿ ಒಪ್ಪಿಕೊಳ್ಳುವ ಮನಸ್ಥಿತಿ ಉಂಟಾಗುತ್ತದೆ ಮತ್ತು ಮೋಕ್ಷಸಾಧನೆಯ ಪಥದಲ್ಲಿ ವ್ಯಕ್ತಿ ಸದೃಢ ಹೆಜ್ಜೆ ಇರಿಸುತ್ತಾನೆ, ಮಾನವೀಯವಾಗಿರುತ್ತಾನೆ ಎಂದು ಭಗವದ್ಗೀತೆ ಭರವಸೆ ನೀಡುತ್ತದೆ.