ಭಗವದ್ಗೀತೆಯ ಸಾರಸರ್ವಸ್ವ ಭಾಗ-೧
ನಮ್ಮ ಭಾರತೀಯ ಚಿಂತನೆಯ ಮೂಲಾಧಾರ ವೇದ, ಉಪನಿಷತ್ತು, ಭಗವದ್ಗೀತೆಗಳು. ಇವುಗಳ ಪಾರಮ್ಯವನ್ನು ಒಪ್ಪಿಕೊಳ್ಳಲೀ ಒಪ್ಪಿಕೊಳ್ಳದಿರಲೀ ಅವು ಪ್ರತಿಪಾದಿಸುವ ಚಿಂತನೆಯ ಸಾರವನ್ನು ತಮ್ಮದೇ ಆದ ರೀತಿಯಲ್ಲಿ ಅಳವಡಿಸಿಕೊಳ್ಳದಿರುವ ಭಾರತೀಯ ಚಿಂತನಾ ಪ್ರಕಾರ ಇಲ್ಲವೆಂದೇ ಹೇಳಬೇಕು. ಭಾರತದಲ್ಲಿ ತತ್ತ್ವಶಾಸ್ತ್ರವನ್ನು ಎತ್ತಿ ಹಿಡಿದುದು ಜ್ಞಾನಕ್ಕಾಗಿ ಅಲ್ಲ. ಮನುಷ್ಯ ಈ ಬದುಕಿನಲ್ಲಿ ಸಾಧಿಸಬಹುದಾದ ಅತ್ಯುನ್ನತ ಗುರಿಯನ್ನು ತಲುಪುವುದಕ್ಕಾಗಿ. ಇಲ್ಲಿ ತತ್ತ್ವಶಾಸ್ತ್ರವು ಆಶ್ಚರ್ಯ, ಕುತೂಹಲಗಳಿಂದಾಗಿ ರೂಪುಗೊಂಡಿಲ್ಲ, ಬದಲಿಗೆ ಅದು ರೂಪುಗೊಂಡಿರುವುದು ಬದುಕನ್ನು ಸುಂದರಗೊಳಿಸಿಕೊಳ್ಳುವುದಕ್ಕಾಗಿ. ಇಲ್ಲಿ ತತ್ತ್ವಾನುಸಂಧಾನವು ಕೇವಲ ಬೌದ್ಧಿಕ ಜಿಜ್ಞಾಸೆ ಅಲ್ಲ. ಅದು ಕೇವಲ ಆಚರಣೆ ಪ್ರಧಾನವಾದ ನೈತಿಕತೆಯೂ ಅಲ್ಲ. ಭಾರತೀಯ ಚಿಂತಕರ ಮನಸ್ಸನ್ನು ಕಲಕಿದುದು ಬದುಕಿನ ಇತಿಮಿತಿಗಳೇ. ಇವುಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದೇ ಅವರ ಮುಖ್ಯ ಕಾಳಜಿ.
ಆಧ್ಯಾತ್ಮಿಕತೆ–
ವಿಚಾರವಂತರ ಒಂದು ಮುಖ್ಯ ಸಂದೇಹ ತಾತ್ತ್ವಿಕತೆ, ಆಧ್ಯಾತ್ಮಿಕತೆ ಎಂಬುದು ಬರಿಯ ಶಬ್ದಜಾಲ, ಮೋಸದ ಮಾಯಾಜಾಲ ಯಾಕಾಗಿರಬಾರದು?! ಈ ಪ್ರಶ್ನೆ ಭಗವದ್ಗೀತೆಯದೂ ಹೌದು. ಅಧ್ಯಾತ್ಮದ ಒಂದು ಪರಿಕಲ್ಪನೆ ಆತ್ಮ. ಇದರ ಬಗೆಗಿನ ಜಿಜ್ಞಾಸೆ ತಾತ್ತ್ವಿಕತೆ. ಆತ್ಮ ಎಂಬುದು ದೇಹದ ಸಂಗಡ ಇರುವಂತಹುದು. ಆತ್ಮವನ್ನು ಗ್ರಹಿಸುವವನು ದೇಹಭಾವ ಮತ್ತು ದೇಹಭಾವ ಪ್ರಕಟಿಸುವ ಪ್ರಾಪಂಚಿಕತೆ ಇವೆರಡನ್ನು ಕೈಬಿಟ್ಟು ಆತ್ಮದ ಬಗ್ಗೆ ಏನನ್ನೂ ಗ್ರಹಿಸಲಾರ. ಗ್ರಹಿಸುವ ವಾಸ್ತವಿಕತೆಗೆ ಜೈವಿಕ, ಅಜೈವಿಕ ಇತ್ಯಾದಿ ದ್ವೈತಾತ್ಮಕ ಅಥವಾ ಬಹುತ್ವಸೂಚಕ ಸಂಜ್ಞೆಗಳಿಲ್ಲ; ಅದಕ್ಕೆ ಇರುವುದು ಎಲ್ಲವನ್ನೂ ಅವು ಇರುವಂತೆ ಮೊದಲು ಸ್ವೀಕರಿಸು; ನಂತರ ಅದಕ್ಕೆ ಅನುಗುಣವಾಗಿ ಕೆಲಸ ಮಾಡು ಎನ್ನುವ ಸೂಚನಾತ್ಮಕ ಲಕ್ಷಣ ಮಾತ್ರ. ಇಂಥ ಆಧ್ಯಾತ್ಮಿಕತೆ ಅನುಭವಾತ್ಮಕವೇ ಆಗಿರುವಾಗ ಅದು ಹೇಗೆ ಬರಿಯ ಶಬ್ದಜಾಲ ಆದೀತು? ಮೋಸಮಾಡುವ ತಂತ್ರಗಾರಿಕೆ, ವ್ಯೂಹಜಾಲ ಹೇಗೆ ಆದೀತು ಎಂದು ಭಗವದ್ಗೀತೆ ಮರುಪ್ರಶ್ನಿಸುತ್ತದೆ. ಅಣು ತತ್ತ್ವವಾಗಿ ವ್ಯಕ್ತಿಯನ್ನು, ಬೃಹತ್ ತತ್ತ್ವವನ್ನಾಗಿ ವಿಶ್ವವನ್ನೊಳಗೊಂಡ ಬ್ರಹ್ಮಾಂಡವನ್ನು ಕಲ್ಪಿಸಿಕೊಳ್ಳದ ಹೊರತೂ ಯಾವುದೇ ಕಾರ್ಯಯೋಜನೆ ಅರ್ಥಪೂರ್ಣವಾಗದು ಎಂದು ವೈಜ್ಞಾನಿಕವಾಗಿ ಯೋಚಿಸುವವರೂ ತಿಳಿಯುತ್ತಿರುವ ಕಾಲವಿದು. ಹೀಗಿರುವಾಗ ದೇಹ–ಆತ್ಮಗಳುಳ್ಳ ವ್ಯಕ್ತಿ ಅಣುತತ್ತ್ವ, ಬ್ರಹ್ಮಾಂಡ ವಿಶ್ವವನ್ನೊಳಗೊಂಡ ಪರಮಾತ್ಮ ‘ಬೃಹತ್ ತತ್ತ್ವ’ ಎಂದು ವಾಸ್ತವಿಕತೆಯನ್ನು ಪರಿಕಲ್ಪಿಸುತ್ತಿರುವ ಅಧ್ಯಾತ್ಮವನ್ನು ಬರಿಯ ಶಬ್ದಜಾಲ, ಕುತಂತ್ರ–ಕುತರ್ಕಗಳ ವ್ಯೂಹ ಜಾಲ ಎಂದು ಹೇಗೆ ತಿರಸ್ಕರಿಸಲು ಸಾಧ್ಯ? ಎಂದು ಕೇಳುತ್ತದೆ.
ದೈನಂದಿನ ಬದುಕು–
ಭಗವದ್ಗೀತೆಗೆ ವೈಯಕ್ತಿಕ ಬದುಕು ಮತ್ತು ಸಾಮುದಾಯಿಕ ಬದುಕುಗಳ ಮಧ್ಯೆ ಸಾಮರಸ್ಯತೆ ಇರುವುದು, ವ್ಯಕ್ತಿ ಮತ್ತು ಸಮಾಜ ಆರೋಗ್ಯದಿಂದಿರಲು ಮತ್ತು ಬದುಕಿನ ಇತಿಮಿತಿಗಳನ್ನು ಮೀರಲು ಸಾಧ್ಯವಾಗುವುದು ಅತ್ಯಂತ ಮುಖ್ಯವಾದದ್ದು. ವ್ಯಕ್ತಿಯನ್ನು ಸಮಾಜದಿಂದ ಪ್ರತ್ಯೇಕಿಸಿ ಅಥವಾ ಸಮಾಜವನ್ನು ವ್ಯಕ್ತಿಯಿಂದ ಪ್ರತ್ಯೇಕಿಸಿ ವ್ಯಕ್ತಿಯ ಮತ್ತು ಸಮಾಜದ ಅಗತ್ಯಗಳನ್ನಾಗಲೀ, ಕೆಲಸಕಾರ್ಯಗಳನ್ನಾಗಲೀ ಅರ್ಥಮಾಡಿಕೊಳ್ಳ ಬಯಸಿದರೆ ಅದಕ್ಕೆ ಯಾವ ಬೆಲೆಯೂ ಇಲ್ಲ. ವ್ಯಕ್ತಿಯ ಮತ್ತು ಸಮಾಜದ ಆರೋಗ್ಯವು ದಿನನಿತ್ಯದ ಬದುಕನ್ನು ವ್ಯಕ್ತಿ ಹೇಗೆ ನಡೆಸುತ್ತಾನೆ ಎಂಬುದನ್ನು ಅವಲಂಬಿಸಿರುತ್ತದೆ ಎನ್ನುತ್ತದೆ ಭಗವದ್ಗೀತೆ. ಭಾರತೀಯರಿಗೆ ತಾತ್ತ್ವಿಕ ಬದುಕು ಮತ್ತು ದೈನಂದಿನ ಧಾರ್ಮಿಕ ನೈತಿಕ ಬದುಕು ಎಂಬುದು ಬೇರೆ ಬೇರೆ ಅಲ್ಲ, ಅವೆರಡೂ ಒಂದೇ. ಅವು ಪ್ರವೃತ್ತಿ ಮತ್ತು ನಿವೃತ್ತಿ ಮಾರ್ಗಗಳ ಸಮನ್ವಯತೆಯೇ ಆಗಿವೆ ಎನ್ನುತ್ತದೆ ಭಗವದ್ಗೀತೆ.
ಅ) ಪ್ರವೃತ್ತಿ ಮಾರ್ಗ–
ನಮಗೆ ಸಾಮಾನ್ಯವಾಗಿ ಬೇಕಾಗುವ ವಿಷಯಗಳಿಗೆ ಪ್ರಥಮ ಪ್ರಾಶಸ್ತ್ಯ ಕೊಟ್ಟು ಅವುಗಳನ್ನು ಸಂಪಾದಿಸಲು ಸಮಾಜ ಒಪ್ಪಿಕೊಂಡ ರೀತಿಯಲ್ಲಿ ಕೆಲಸ ಮಾಡುವುದು ಪ್ರವೃತ್ತಿಮಾರ್ಗ. ಈ ಮಾರ್ಗದಲ್ಲಿ ನಾವು ಏನು ಕೆಲಸ ಮಾಡಬೇಕು, ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ಯೋಚಿಸಿ ಕೆಲಸ ಮಾಡುತ್ತೇವೆ. ಬೇಕಾಬಿಟ್ಟಿಯಾಗಿ ಏನನ್ನೂ ಮಾಡುವುದಿಲ್ಲ. ನಮ್ಮ ಆಸೆಗಳ ಮೇಲೆ, ಅವುಗಳನ್ನು ಪೂರೈಸಿಕೊಳ್ಳುವುದರ ಮೇಲೆ ಸಹಜವಾಗಿ ಹಿಡಿತ ಇರುತ್ತದೆ. ನಾವು ಸಂಯಮಿಗಳಾಗಿರಬೇಕು ಎಂದೇನೂ ಪ್ರತ್ಯೇಕವಾಗಿ ಯೋಚಿಸುವುದಿಲ್ಲ.
ಇಲ್ಲಿ ವ್ಯಕ್ತಿ ಸಂಪೂರ್ಣವಾಗಿ ನಿಸ್ವಾರ್ಥಿ ಆಗಿರುವುದಿಲ್ಲ. ಸಮಷ್ಟಿಯ ಹಿತಕ್ಕಾಗಿ ತನ್ನ ಹಿತವನ್ನು ತ್ಯಾಗ ಮಾಡುವ ಮನಸ್ಸು ಇರಬೇಕು ಎಂದುಕೊಂಡಿರುವುದಿಲ್ಲ. ತನ್ನ ಸುಖ ಸಂತೋಷ ಎನ್ನುವ ಚೌಕಟ್ಟನ್ನು ಬಿಟ್ಟುಕೊಡುವುದಕ್ಕೆ ಸಿದ್ಧ ಇರುವುದಿಲ್ಲ. ಆದರೂ ಅವನು ಸಮಾಜಮುಖಿ. ತನ್ನ ಜೊತೆಗೆ ಮನೆಯಲ್ಲಿ ಇರುವವರನ್ನು ನಿರ್ಲಕ್ಷಿಸಲಾರ. ಸಮಾಜವನ್ನು ಮೀರಿ ತನ್ನ ಸುಖ ಸಂತೋಷ ಸಂತೃಪ್ತಿ ಸಮಾಧಾನಗಳಿಗೆ ಅವನು ಸ್ಥಾನ ಕೊಡಲಾರ.
ಆ) ನಿವೃತ್ತಿ ಮಾರ್ಗ–
ನಿವೃತ್ತಿ ಮಾರ್ಗದಲ್ಲಿ ವ್ಯಕ್ತಿ ತನ್ನ ದೇಹ, ಕುಟುಂಬ, ಊರು, ರಾಜ್ಯ, ದೇಶ ಕೋಶ ಇತ್ಯಾದಿ ಎಲ್ಲ ಪ್ರಾಪಂಚಿಕ ಚೌಕಟ್ಟುಗಳನ್ನು ಮೀರುವುದಕ್ಕೆ ಸಿದ್ಧ ಇರುತ್ತಾನೆ. ಕಾಯಾ ವಾಚಾ ಮನಸಾ ಸಂಯಮವನ್ನು ಸಾಧಿಸಬೇಕು ಎಂದುಕೊಳ್ಳುತ್ತಾನೆ. ಸಮಷ್ಟಿಗಾಗಿ ವ್ಯಷ್ಟಿಯನ್ನು ಪಕ್ಕಕ್ಕೆ ಸರಿಸುತ್ತಾನೆ. ಮೊದಲಿಗೆ ತನ್ನ ಅಂತಸ್ಸತ್ವವನ್ನು ವಿಕಾಸ ಪಡಿಸಿಕೊಳ್ಳುತ್ತಾನೆ. ಆನಂತರ ಇದೇ ದಿಕ್ಕಿನಲ್ಲಿ ಇರುವ ಇತರ ಸಾಮಾಜಿಕರಿಗೆ ಮಾರ್ಗದರ್ಶನ ನೀಡಬಯಸುತ್ತಾನೆ. ಇದು ನಿವೃತ್ತಿಮಾರ್ಗದ ಒಂದು ಮುಖ್ಯ ಆಶಯ. ಈ ಮಾರ್ಗವೂ ಸಮಾಜಮುಖಿಯೇ. ನಿವೃತ್ತಿ ಮಾರ್ಗದಲ್ಲಿ ಇರುವವರೂ ಸಮಾಜದ ಸದಸ್ಯರೇ. ಸಮಾಜದಲ್ಲಿ ಎಲ್ಲರೊಂದಿಗೆ ಇದ್ದೂ ಎಲ್ಲಾ ಚೌಕಟ್ಟುಗಳನ್ನು ಮೀರುವುದು ಮತ್ತು ಹಾಗೆ ಮೀರುವುದರಲ್ಲೇ ಸಂತೃಪ್ತನಾಗುವುದು ನಿವೃತ್ತಮಾರ್ಗಿಯ ಸಲ್ಲಕ್ಷಣ.
ಇ) ಪ್ರವೃತ್ತಿ ನಿವೃತ್ತಿಗಳ ಸಮನ್ವಯತೆ–
ಪ್ರವೃತ್ತರಾಗಿರಲೀ, ನಿವೃತ್ತರಾಗಿರಲೀ ಎಲ್ಲರಿಗೂ ಪ್ರಾಪಂಚಿಕವಾದ ಆವರಣವೊಂದು ಸಹಜವಾಗಿ ಇರುತ್ತದೆ. ಅದಕ್ಕೆ ಅನುಗುಣವಾಗಿ ಕೆಲಸ ಕಾರ್ಯ, ಕರ್ತವ್ಯ ಜವಾಬ್ದಾರಿಗಳ ನಿರ್ವಹಣೆಯೂ ಇರುತ್ತದೆ. ಅದರಿಂದ ಉಂಟಾಗುವ ಫಲಗಳ ಪರಿಣಾಮಗಳನ್ನು ಮಾತ್ರ ಮಾನಸಿಕವಾಗಿ ತ್ಯಾಗ ಮಾಡಿದರೆ ಅವರು ತಮ್ಮನ್ನು ನಿರ್ಬಂಧಿಸುವ ಎಲ್ಲ ರೀತಿಯ ಚೌಕಟ್ಟುಗಳನ್ನು ನಿರಾಕರಿಸಿದಂತೆಯೇ. ಪ್ರವೃತ್ತರಾದರೂ ನಿವೃತ್ತರಾದಂತೆಯೇ. ನಿವೃತ್ತರಾದರೂ ಪ್ರವೃತ್ತರಾದಂತೆಯೇ. ಪ್ರವೃತ್ತಿ ಮತ್ತು ನಿವೃತ್ತಿ ಮಾರ್ಗಗಳೆರಡನ್ನೂ ಸಮನ್ವಯಗೊಳಿಸಿದಂತೆಯೇ. ವ್ಯಕ್ತಿಯ ಈ ರೀತಿಯ ಬದುಕು ಅವನ ಬದುಕಿಗೆ, ಪ್ರಪಂಚದಲ್ಲಿಯ ಅವನ ಅಸ್ತಿತ್ವಕ್ಕೆ ಪ್ರಾಮುಖ್ಯತೆಯನ್ನು ಒದಗಿಸಿಕೊಡುತ್ತದೆ, ಅದನ್ನು ಅರ್ಥಪೂರ್ಣವಾಗಿಸುತ್ತದೆ ಎಂದು ಭಗವದ್ಗೀತೆ ಪ್ರವೃತ್ತಿ ನಿವೃತ್ತಿಗಳ ಪರಿಕಲ್ಪನೆಗೆ ಹೊಸ ಆಯಾಮವನ್ನು ಕೊಡುತ್ತದೆ.
ಈ) ಪರಮ ಪುರುಷಾರ್ಥಗಳು–
ಜೊತೆಗಾರರನ್ನು ಭಾವಿಸದೆ ಒಬ್ಬ ತಾನೊಬ್ಬನೇ ಊಟ ಮಾಡಿದರೆ ಪಾಪವನ್ನು ಊಟ ಮಾಡಿದವನು ಆಗುತ್ತಾನೆ ಎನ್ನುವ ಭಗವದ್ಗೀತೆಗೆ ದಿನನಿತ್ಯದ ಬದುಕಿನಲ್ಲಿ ವ್ಯಕ್ತಿ ಮತ್ತು ಅವನ ಸಮುದಾಯದ ಆಸೆ ಆಕಾಂಕ್ಷೆಗಳ ನಡುವೆ ಸಾಮರಸ್ಯತೆ ಇರಬೇಕು. ಅವು ಸಮನ್ವಯಗೊಂಡಿರಬೇಕು. ಇಂಥ ಬದುಕನ್ನು ನಮ್ಮದನ್ನಾಗಿಸಿಕೊಳ್ಳಲು ಪರಮ ಪುರುಷಾರ್ಥಗಳು ಅಥವಾ ಪರಮ ಮೌಲ್ಯಗಳು, ಮಾನದಂಡ ಅಥವಾ ಮಾರ್ಗೋಪಾಯಗಳು ಯಾವುವು ಎಂಬ ಪ್ರಶ್ನೆಗೆ ಭಾರತೀಯ ಚಿಂತಕರು ಧರ್ಮಾರ್ಥಕಾಮಮೋಕ್ಷಗಳು ಎಂದು ಉತ್ತರಿಸಿದ್ದಾರೆ. ಇದನ್ನೂ ಭಗವದ್ಗೀತೆ ತನ್ನದೇ ಆದ ರೀತಿಯಲ್ಲಿ ವಿವರಿಸುತ್ತದೆ.
ಪ್ರತಿಯೊಬ್ಬರಿಗೂ ಅವರವರದೇ ಆದ ಸ್ವಭಾವ ಅಂದರೆ ಸ್ವಧರ್ಮ ಇದೆ; ಅದಕ್ಕೆ ಅನುಗುಣವಾಗಿ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಯೋಗ್ಯರೀತಿಯಿಂದ ವೃತ್ತಿ ನಿರ್ವಹಣೆ ಮತ್ತು ಜೀವನ ನಿರ್ವಹಣೆ ಮಾಡಿದರೆ ಧರ್ಮ ಮತ್ತು ಅರ್ಥಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಂತೆಯೇ. ವೈಯಕ್ತಿಕ ಮತ್ತು ಸಾಮುದಾಯಿಕ ಹಿತಕ್ಕೆ ಧಕ್ಕೆ ಬಾರದಂತೆ ಕಾಮನೆಗಳನ್ನು ಭಾವಿಸಿ ಈಡೇರಿಸಿಕೊಂಡರೆ ಕಾಮ ಮೌಲ್ಯವನ್ನು ಬದುಕಿನಲ್ಲಿ ಅಳವಡಿಸಿಕೊಂಡಂತೆಯೇ, ಮೋಕ್ಷ ಮೌಲ್ಯವನ್ನು ಬದುಕಿನ ಅವಿಭಾಜ್ಯ ಅಂಗವಾಗಿಸಿಕೊಳ್ಳುವ ಹಾದಿಯಲ್ಲಿ ನಡೆಯಲಾರಂಭಿಸಿದಂತೆಯೇ ಎಂದು ಭಗವದ್ಗೀತೆ ಪುರುಷಾರ್ಥಗಳನ್ನು ಸರಳವಾಗಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ರೀತಿಯನ್ನು ಗಮನಕ್ಕೆ ತರುತ್ತದೆ.
ಅರ್ಥಪೂರ್ಣ ಬದುಕು–
ಅ) ಆತ್ಮ ಕಲ್ಯಾಣ–
ಭಗವದ್ಗೀತೆಗೆ ವರ್ತಮಾನದಲ್ಲಿ ನಾವು ಹೇಗೆ ಬದುಕುತ್ತೇವೆ ಎಂಬುದನ್ನು ಅವಲಂಬಿಸಿ ನಮಗೆ ಮೋಕ್ಷ ದೊರೆಯುತ್ತದೆಯೋ ಇಲ್ಲವೋ ಎಂಬುದು ನಿರ್ಧಾರವಾಗುತ್ತದೆ. ಮೋಕ್ಷ ಎಂದರೆ ಅರ್ಥಪೂರ್ಣ ಬದುಕು ಎಂದು ಅರ್ಥೈಸುವ ಭಗವದ್ಗೀತೆ ಬದುಕಿರುವಾಗಲೇ ಪಡೆಯಬಹುದಾದ ಜೀವನ್ಮುಕ್ತಿಯನ್ನು ಎತ್ತಿಹಿಡಿಯುತ್ತದೆ. ಬಹುಪಾಲು ಉಪನಿಷತ್ತುಗಳು, ಮೂರೂ ವೇದಾಂತ ಶಾಖೆಗಳೂ, ಬೌದ್ಧ ಹಾಗೂ ಜೈನ ಸಿದ್ದಾಂತಗಳೂ ಮರಣೋತ್ತರ ಮೋಕ್ಷದ ಸಾಧ್ಯತೆಯನ್ನೇ ನಮ್ಮ ಅರ್ಥಪೂರ್ಣ ಬದುಕಿನ ಸಾಧ್ಯತೆಯನ್ನಾಗಿ ನಮ್ಮ ಮುಂದಿಡುವುದು. ಇವುಗಳಿಗಿಂತ ವಿಭಿನ್ನವಾಗಿ ವಸ್ತುಸ್ಥಿತಿಯನ್ನು ಪರಿಶೀಲಿಸುತ್ತದೆ ಭಗವದ್ಗೀತೆ.
ಅದು ಸಾವು ಎಂಬುದೇ ಇಲ್ಲ; ಎಲ್ಲರೂ ಅನಾದಿ ಕಾಲದಿಂದಲೂ ಇದ್ದಾರೆ; ಸಾಯುವುದು ಕೇವಲ ಭೌತಿಕ ಶರೀರ ಮಾತ್ರ ಎಲ್ಲರಲ್ಲೂ ಇರುವ ಆತ್ಮ ಶಾಶ್ವತವಾದದ್ದು; ಮಾನವ ಜೀವನ ಅಖಂಡವಾದದ್ದು. ಅವನ ಇಂದಿನ ಮತ್ತು ಮುಂದಿನ ಜೀವನಗಳ ನಡುವೆ (ಬದುಕು ಮತ್ತು ಸಾವಿನ ನಡುವೆ) ಘರ್ಷಣೆ ಇಲ್ಲ. ಈ ಐಹಿಕ ಜೀವನವು ತಾತ್ಕಾಲಿಕ ವಸತಿ ತಾಣವಾಗಿ, ಮಾಯಾತ್ಮಕವಾಗಿ ಕಂಡುಬಂದರೂ ಉದಾರಿ ದೇವತೆಗಳ ರಕ್ಷಣೆಯಲ್ಲಿ ಒಳ್ಳೆಯ ಬದುಕನ್ನು ನಡೆಸಲು ಆಶಿಸುವ ಸಜ್ಜನರಿಗೆ ಈ ಲೌಕಿಕ ಬದುಕು ಆತ್ಮಕಲ್ಯಾಣದ ಹಾದಿಯಲ್ಲಿ ಒಂದು ಮುಖ್ಯವಾದ ಘಟ್ಟವೇ ಎನ್ನುತ್ತದೆ.
(ಮುಂದುವರಿದಿದೆ).