ಬೆಚ್ಚಿಸಿದ ಬೆಂಕಿಯುಂಡೆ
ಕಲ್ಲಾರೆ ಏರು…! ಹೀಗೆಂದರೆ ಎಂಥಾ ಧೈರ್ಯಸ್ಥನ ಎದೆಯಲ್ಲೂ ಭತ್ತ ಕುಟ್ಟಿದ ಅನುಭವ, ಪೇಟೆಗೆ ಹೋಗುವ ಏರು ದಾರಿ; ಸುತ್ತ ಕಲ್ಲು ಬಂಡೆಯ ಹಾಸಿನಿಂದ ಕೂಡಿ ಕಲ್ಲಾರೆ ಏರು ಎಂದೇ ಹೆಸರಾಯಿತು. ಇದು ಪ್ರಸಿದ್ಧಿಗೆ ಬಂದದ್ದು ತನ್ನ ವಿಶಿಷ್ಟ ಕಲ್ಲು ಬಂಡೆಯ ಹಾಸಿನಿಂದಲ್ಲ; ಬದಲಿಗೆ ತನ್ನ ಒಡಲಿಗೆ ಅಡಗಿಸಿಕೊಂಡಿದ್ದ ಭೂತ-ದೆವ್ವಗಳ ರೋಚಕ ಕಥೆಗಳಿಂದ ಜೊತೆಗೆ ಒಬ್ಬೊಬ್ಬರಿಗೆ ಒಂದೊಂದು ತೆರನಾದ ವಿನೋದ ಹಾಗೂ ವಿಚಿತ್ರ ಎನ್ನಿಸುವ ಅನುಭವ ಅಲ್ಲಿ ಉಂಟಾದ್ದರಿಂದ ಎಂದರೆ ಅದು ಸುಳ್ಳಲ್ಲ.
ನೆರಳಿಗೆ ಅಂಜುವ ಅಲ್ಲೆದೆಯ ಇಲಿ ಹೋದರೆ ಹುಲಿ ಹೋಯಿತೆಂಬ ಅಂತೆ ಕಂತೆಗಳ ಮಾತು ಬಿಡಿ, ಗಟ್ಟಿಗುಂಡಿಗೆಯ ಭಟ್ಟರೇ ಒಮ್ಮೆ ತಮಗಾದ ಅನುಭವ ಬಿಚ್ಚಿಟ್ಟಾಗ ನಂಬದೆ ಇರುವುದಾದರೂ ಹೇಗೆ…? ಇನ್ನು ಅವರದೇ ಮಾತು ಕೇಳಿಸಿಕೊಳ್ಳುವುದಕ್ಕೂ ಮುನ್ನ ಆಗಿನ ಪರಿಸ್ಥಿತಿ ಕೊಂಚ ಕೇಳಿ, ಒಂದು ಬೆಂಕಿಕಡ್ಡಿ ಸೇರಿದಂತೆ ಚಿಕ್ಕಪುಟ್ಟ ವಸ್ತುಗಳಿಗೂ ಎಂಟೋ, ಹತ್ತೋ ಕಿಲೋಮೀಟರ್ ದೂರದ ಪೇಟೆಯನ್ನೇ ನಂಬಿಕೊಳ್ಳುವ ಸ್ಥಿತಿ, ಹಾವು ಹರಿದಂತಿದ್ದ ಕಾಡು ದಾರಿ. ಬೈಸಿಕಲ್ಲೇ ಅಲ್ಲೊಂದು ಇಲ್ಲೊಂದು ಎಂಬಂತೆ ಇದ್ದ ಹೊತ್ತಿನಲ್ಲಿ ಎಲ್ಲರಿಗೂ ಕಾಲೇಶ್ವರಾ ಏಕ್ಸ್ ಪ್ರೆಸ್ಸೇ ಗತಿ.
ಬೇಸಿಗೆ ಕಾಲದ ಒಂದು ದಿನ. ಕಾರ್ಐನಿಮ್ಮಿತ್ತ ಪೇಟೆಗೆ ಬಂದ ಭಟ್ಟರು ಕೆಲಸ ಮುಗಿಸಿ ಮನೆಯತ್ತ ಮುಖಮಾಡುವಲ್ಲಿಗೆ ಕೈ ಗಡಿಯಾರದ ಮುಳ್ಲು ಹತ್ತರ ಹದ್ದು ಮೀರಿ ನಡೆದಿತ್ತ. ಅಮಾವಾಸ್ಯೆಯ ಹತ್ತಿರದ ದಿನಗಳವು. ಹೆಪ್ಪು ಹಾಕಿದಂತಹ ಕಡು ಕತ್ತಲು. ಒಬ್ಬರ ಮುಖ ಒಬ್ಬರಿಗೆ ಕಾಣಿಸದಷ್ಟು ದಟ್ಟ. ದೂರದ ಹಳ್ಳಿಯಿಂದ ಕ್ಷೀಣವಾಗಿ ಆಗೊಮ್ಮೆ ಈಗೊಮ್ಮೆ ಕೇಳಿ ಬರುವ ನಾಯಿಯ ಕೂಗು. ಆ ನೀರವ ರಾತ್ರಿಯಲ್ಲಿ ಚಿರಿ ಚಿರಿ ಎನ್ನುವ ರಾತ್ರಿ ಹುಳುಗಳ ಶಬ್ದ ಬಿಟ್ಟರೆ, ಮೌನ ತಾನೇ ತಾನಾಗಿತ್ತು.
ಏಕಾಂಗಿಯಾಘಿ ಮನೆ ಕಡೆ ಹೊರಟ ಭಟ್ಟರೆ ತಲೆಯಲ್ಲಿ ಯಾವುದೋ ವ್ಯವಹಾರದ ಲೆಕ್ಕಾಚಾರವೊಂದು ಗರಕಿ ಹೊಡೆಯುತ್ತಲೇ ಇತ್ತು. ಪರಿಚಿತ ದಾರಿಯಾದ್ದರಿಂದ ಹಾದಿ ಸಾಗಿದ್ದು ತಿಳಿಯಲೇ ಇಲ್ಲ. ಕಾಲುಮಾತ್ರ ಕಲ್ಲಾರೆ ಏರು ತುಳಿಯುತ್ತಲೇ ಸಾಗಿತ್ತು. ಹಾಘೆ ಅನ್ಯಮನಸ್ಕರಾಗಿ ಸಾಗುತ್ತಿದ್ದ.
ಭಟ್ಟರ ಬಾಯಿಂದ ಅವರಿಗರಿವಿಲ್ಲದೆ ‘ಆ’…! ಎಂಬ ಉದ್ಗಾರ. ಕಾರಣ ರಸ್ತೆ ಪಕ್ಕ ಕೇವಲ ಕೆಲವೇ ಅಡಿ ದೂರದಲ್ಲಿ ಆಳೆತ್ತರ ಉರಿವ ಬೆಂಕಿ…!
ಆತಕ್ಷಣಕ್ಕೆ ಅವರಲ್ಲಿ ‘ಛೆ…,! ಯಾರೋ ಬೀಡಿ ಸೇದಿ ಎಸೆದದ್ದರಿಂದ ಒಣಹುಲ್ಲು, ದರಕೆಲೆಗಳಿಗೆ ಬೆಂಕಿ ಹತ್ತಿಕೊಂಡಿತಾ…! ಇಲ್ಲವೇ ಪುಂಡು -ಪೋಕರಿಗಳೇನಾದರೂ ಮೋಜಿಗೆ ಬೆಂಕಿ ಇಟ್ಟರಾ…?’ ಹೀಗೊಂದು ವಿಚಾರ ಹಣಕಿ ಹಾಕತೊಡಗಿದಂತೆ ಬೆಂಕಿ ಆರಿಸಿಯೇ ಹೋಗೋಣ ಅಂತ ಕಪಾಲಿನ ಇಂದ್ರ ಜಾಲದೊಳಗೆ ಸಿಲುಕಿದವರಂತೆ ಅತ್ತ ನಡೆದರು, ಏನಾಶ್ಚರ್ಯ…! ಭಟ್ಟರು ಬೆಂಕಿಯೆಡೆಗೆ ಸಾಗಿದಂತೆ ಬೆಂಕಿ ಕೂಡಾ ಮುಂದೆ ಮುಂದೆ ಸಾಗುತ್ತಲೇ ಇತ್ತು ಹೀಗೆ ಬೆಂಕಿಯನ್ನು ಹಿಂಬಾಲಿಸಿ ಕೆಲ ಹೆಜ್ಜೆ ಹಾಕಿದ ಭಟ್ಟರಿಗೆ ಥಟ್ಟನೆ ತಾವಿರುವ ಜಾಗದ ಅರಿವಾಯಿತು .ಥೂ… ಇದರಾ… ನಾಶನ ಬಡಿಲಿ…! ಅಂದವರೇ ಕೊಂಚ ಸಾವರಿಸಿಕೊಂಡು ಮನೆ ದಾರಿ ತುಳಿದರೋ ಇಲ್ಲವೋ ; ಆ ಕ್ಷಣಕ್ಕೆ ಹತ್ತಿರದ ಮರದೆತ್ತರಕ್ಕೆ ಬೆಂಕಿ ಉಂಡೆಯೊಂದು ನೆಗೆದು ಚಿಮ್ಮಿ ಇಡೀ ಮರ ಭಗ್ಗನೆ ಹತ್ತಿಕೊಂಡು ಕ್ಷಣ ಕಾಲ ಧಗಧಗನೆ ಉರಿದು ಕಣ್ಮರೆಯಾಗಿ ಬಿಟ್ಟಿತು. ಮಂದ ವಿದ್ಯುತ್ತಿನ ಪ್ರವಾಹವೊಂದು ಮೈಯಲ್ಲೆಲ್ಲ ಸಂಚರಿಸಿದ ಅನುಭವ.
ಆ ಕಗ್ಗತ್ತಲಲ್ಲಿ ಎದೆ ಝಲ್ ಎನ್ನಿಸುವ ಈ ಸನ್ನಿವೇಶದಿಂದ ಅಳ್ಳೆದೆಯವರಾಗಿದ್ದರೆ ಆ ಹೊತ್ತಿಗೆ ಏನಾಗಿಬಿಡುತ್ತಿತ್ತೋ; ಭಟ್ಟರಿಗೋ ದೆವ್ವ-ಭೂತಗಳ ಆಟ ಹೊಸದೇನು ಅಲ್ಲ. ಜೊತೆಗೆ ಅಪ್ರತಿಮ ಧೈರ್ಯಶಾಲಿ , ಹಾಗಾಗಿ ಅಂಥಾ ಆಘಾತವೇನೂ ಘಟಿಸಲಿಲ್ಲವೆನ್ನಿ.
ಕೂತೂಹಲಕ್ಕೆಂದು ಮರುದಿನ ಹಗಲು ಹೊತ್ತಿನಲ್ಲಿ ಹೋಗಿ ನೋಡಿದ ಅವರಿಗೆ ಅಲ್ಲಿ ಕಂಡದ್ದೇನು…? ಮಣ್ಣಂಗಟ್ಟಿ..! ಬೆಂಕಿ ಹತ್ತಿದ ಕುರುಹೂ ಇಲ್ಲ. ಮರ ಮಾತ್ರ ಹಿಂದಿನ ರಾತ್ರಿಯ ಆ ಘಟನೆಗೆ ಸಾಕ್ಷಿ ಅಲ್ಲವೆಂಬಂತೆ ಎಂದಿನ ಹಸುರಿನಿಂದ ನಳನಳಿಸುತ್ತಲೇ ಇತ್ತು. ಈ ವಿಶಿಷ್ಟ ಅನುಭವದ ವೆಂಕಟಗಿರಿ ಭಟ್ಟರು ಇಂದು ಇಲ್ಲ; ಅದರೊಟ್ಟಿಗೆ ಕಲ್ಲಾರೆ ಏರಿನ ದೆವ್ವ ಭೂತಗಳ ಭಯವೂ ಕಾರಣ ಭರದಿಂದ ಬೀಸಿದ ನಗರೀಕರಣಕ್ಕೆ ಕಲ್ಲಾರೆ ಏರು ಕೂಡಾ ಹೊರತಾಗಿಲ್ಲ. ಜನಸಂಖ್ಯಾ ಸ್ಪೋಟದಿಂದ ಕಲ್ಲಾರೆಯು ಸುತ್ತಮುತ್ತ ಮನೆಗಳಾಗಿವೆ. ಅಂದೆಂದೋ ಕಾಡಿನಿಂದಾವೃತ್ತವಾಗಿ ಗವ್ ಎನ್ನುತ್ತಿದ್ದ ಜಾಗವೀಗ ಬಟ್ಟಾಂಬಯಲು ಜನರ ಗೌಜಿಗೆ ಹೆದರಿ ದೆವ್ವ ಭೂತಗಳೇ ಕಾಲಿಗೆ ಬುದ್ಧಿ ಹೇಳಿಬಿಟ್ಟವು. ಈಗ ಕಲ್ಲಾರೆಯ ದೆವ್ವ ಭೂತಗಳ ಕಥೆಯೊಟ್ಟಿಗೆ ಹಂದಿಗೋಡು ವೆಂಕಟಗಿರಿಭಟ್ಟರೂ ನೆನಪಲ್ಲಿ ಚಿರಸ್ಥಾಯಿ.
ಹೊಸ್ಮನೆ ಮುತ್ತು