ಬಾಪು ಬೆಂಗಳೂರು ನೆನಪು

ನೀನು ದೇಶದ ಸಲುವಾಗಿ ಮಹತ್ಕಾರಗಳನ್ನು ಸಾಧಿಸಬೇಕಾಗಿದೆ. ಹಾಗಾಗಿ ಮೊದಲು ಒಂದು ವರ್ಷ ಇಡೀ ಭಾರತ ಪ್ರವಾಸ ಮಾಡಿ, ದೇಶದ ಪರಿಸ್ಥಿತಿ ಅರಿತುಕೊ. ನಂತರ ದೇಶಸೇವೆ, ಸಾರ್ವಜನಿಕ ಕಾರ್ಯಗಳನ್ನು ಆರಂಭಿಸು’ ಇದು ಎರಡು ದಶಕಗಳ ಕಾಲ ದಕ್ಷಿಣ ಆಫ್ರಿಕಾದಲ್ಲಿದ್ದು ಭಾರತಕ್ಕೆ ವಾಪಾಸದ ಮೋಹನದಾಸ್‌ ಕರಮಚಂದ್ ಗಾಂಧಿ ಅವರಿಗೆ ಗೋಪಾಲಕೃಷ್ಣ ಗೋಖಲೆ ನೀಡಿದ ಸಲಹೆ. ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದ ಗಾಂಧಿ ಅವರು ದೇಶಪರ್ಯಟನೆ ಆರಂಭಿಸುತ್ತಾರೆ. ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುನ್ನುಡಿ ಬರೆದ ಆ ಐತಿಹಾಸಿಕ ಪರ್ಯಟನೆ ಆರಂಭವಾದದ್ದು ಬೆಂಗಳೂರಿನಿಂದ ಎನ್ನುವುದು ವಿಶೇಷ.ಮೇ 8, 1915ರಂದು ಮದ್ರಾಸ್‌ನಿಂದ ರೈಲಿನಲ್ಲಿ ಪತ್ನಿ ಕಸ್ತೂರಬಾ ಅವರೊಂದಿಗೆ ಗಾಂಧೀಜಿ ಮೊದಲ ಬಾರಿಗೆ ರೈಲಿನಲ್ಲಿ ಬೆಂಗಳೂರಿಗೆ ಬಂದಿಳಿದರು. ನಿಲ್ದಾಣದಲ್ಲಿದ್ದ ಯುವಕರು ಗಾಂಧೀಜಿ ಕೂರುವ ಸಾರೋಟ ಎಳೆಯಲು ಮುಂದಾದರು. ಇದನ್ನು ನಯವಾಗಿ ನಿರಾಕರಿಸಿದ ಅವರು ಕಸ್ತೂರಬಾ ಜತೆ ಸಮೀಪದಲ್ಲಿಯೇ ವಾಸ್ತವ್ಯಕ್ಕೆ ಏರ್ಪಾಟು ಮಾಡಲಾದ ಮನೆಯತ್ತಕಾಲ್ನಡಿಯಲ್ಲಿಯೇ ಹೊರಟರು. ಅಲ್ಲಿ ವಿಶ್ರಾಂತಿ ಪಡೆದು ಗೌರ್ಮೆಂಟ್ ಹೈಸ್ಕೂಲ್ ಸಭಾಭವನಕ್ಕೆ ತೆರಳಿ ಭಾಷಣ ಮಾಡಿದರು. ಅದು ಈಗ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಆಗಿದೆ. ಅಲ್ಲಿಂದ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಗೆ ತೆರಳಿ ಗೋಪಾಲಕೃಷ್ಣ ಗೋಖಲೆ ಭಾವಚಿತ್ರ ಅನಾವರಣಗೊಳಿಸಿದರು. ಬಳಿಕ ಲಾಲ್‌ಬಾಗ್‌ನಲ್ಲಿ ನಡೆದ ಬಹಿರಂಗಸಭೆಯಲ್ಲಿ ಮಾತನಾಡಿದರು. ಈ ಭೇಟಿ ಗಾಂಧೀಜಿ ಅವರ ಬೆಂಗಳೂರು ಒಡನಾಟಕ್ಕೆ ನಾಂದಿಯಾಯಿತು. ಹೀಗೆ ಬೆಂಗಳೂರು ಜತೆ ಶುರುವಾದ ಗಾಂಧೀಜಿ ಅವರ ನಂಟು ಅವರ ಹೆಸರಿನಲ್ಲಿ ಅನೇಕ ಸಂಘ, ಸಂಸ್ಥೆ, ಶಿಕ್ಷಣ ಸಂಸ್ಥೆ, ಶಾಲೆ, ಕಾಲೇಜು,ಅಧ್ಯಯನ ಕೇಂದ್ರ ಆರಂಭವಾಗಲು ಪ್ರೇರಣೆಯಾಯಿತು. ಹಲವು ಪ್ರದೇಶ, ರಸ್ತೆಗಳಿಗೆ ಗಾಂಧೀಜಿ ಅವರ ಹೆಸರಿಡಲಾಯಿತು. ಗಾಂಧಿ ನಗರ ಮತ್ತು ಗಾಂಧಿ ಬಜಾರ್‌ಗೆ ಆ ಹೆಸರು ಬರಲು ಬಾಪು ಪ್ರೇರಣೆ. ಈ ಪ್ರದೇಶಗಳು ಇಲ್ಲದೆ ಬೆಂಗಳೂರನ್ನು ನೆನಪಿಸಿಕೊಳ್ಳುವುದು ಅಸಾಧ್ಯ. ಮಹಾತ್ಮ ಗಾಂಧಿ ರಸ್ತೆಯು ಎಂ.ಜಿ. ರೋಡ್‌ ಎಂದು ಪ್ರಸಿದ್ಧವಾಗಿದೆ. ಬದಲಾದ ಗಾಂಧಿ ಮಾರ್ಗ: ನಗರದಲ್ಲಿ ಅನಿಲ್‌ ಕುಂಬ್ಳೆ ವೃತ್ತದಿಂದ ಟ್ರಿನಿಟಿ ವೃತ್ತದವರೆಗೆ ಸುಮಾರು 2 ಕಿಲೋಮೀಟರ್‌ ಉದ್ದದ ಮಹಾತ್ಮಾ ಗಾಂಧಿ ರಸ್ತೆ ಇದೆ. ಸೌತ್‌ ಪರೇಡ್‌ ರಸ್ತೆ ಎಂದು ಹೆಸರಿದ್ದ ಈ ಮಾರ್ಗಕ್ಕೆ 1948ರ ಫೆ.26ರಂದು ಮಹಾತ್ಮಾ ಗಾಂಧಿ ರಸ್ತೆ ಎಂದು ಮರು ನಾಮಕರಣ ಮಾಡಲಾಯಿತು. ನಗರದ ಪ್ರಮುಖ ವಾಣಿಜ್ಯ ಕೇಂದ್ರವಿದು. ಗಾಂಧಿ ಚಿಂತನೆ ವೈರುಧ್ಯಗಳೇ ಈ ಮಾರ್ಗದುದ್ದಕ್ಕೂ ಕಾಣಸಿಗುತ್ತವೆ. (ಮಾಹಿತಿ: ವಿವಿಧ ಮೂಲಗಳಿಂದ) ನಂದಿ ಬೆಟ್ಟದ ನಂಟು ಗಾಂಧೀಜಿ ಆರೋಗ್ಯ ಸುಧಾರಿಸಿಕೊಳ್ಳಲು ಎರಡು ಬಾರಿ ಪ್ರಸಿದ್ಧ ಪ್ರವಾಸಿ ತಾಣ ನಂದಿ ಗಿರಿಧಾಮಕ್ಕೆ ಭೇಟಿ ನೀಡಿದ್ದರು. ಮೊದಲ ಬಾರಿಗೆ 1927ರಲ್ಲಿ ಭೇಟಿ ನೀಡಿದ್ದ ಅವರು 45 ದಿನ ತಂಗಿದ್ದರು. 1936ರಲ್ಲಿ ಎರಡನೇ ಬಾರಿ ಭೇಟಿ ನೀಡಿದ್ದ ಅವರು 20 ದಿನ ವಿಶ್ರಾಂತಿ ತೆಗೆದುಕೊಂಡರು. ಮಹಾತ್ಮ ಗಾಂಧೀಜಿ ಅವರ ವಿಶ್ರಾಂತಿಗೆ ನಂದಿ ಗಿರಿಧಾಮದಲ್ಲಿದ್ದ ಕನ್ನಿಂಗ್ ಹ್ಯಾಮ್ ಭವನದಲ್ಲಿ ಗಾಂಧೀಜಿ ಅವರ ವಾಸ್ತವ್ಯಕ್ಕೆ ಸಕಲ ಏರ್ಪಾಡು ಮಾಡುವಂತೆ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅಧಿಕಾರಿಗಳಿಗೆ ಸೂಚಿಸುತ್ತಾರೆ. ಅಂಬೋಲಿಯಿಂದ ಗಾಂಧೀಜಿ ಅವರು ರೈಲಿನ ಮೂಲಕ ಏಪ್ರಿಲ್ 20ರಂದು ನಂದಿ ಬೆಟ್ಟದ ತಪ್ಪಲಿನಲ್ಲಿರುವ ಸುಲ್ತಾನ್‌ ಪೇಟೆಗೆ ಬಂದಿಳಿದರು. ಅವರೊಂದಿಗೆ ಕಸ್ತೂರಬಾ ಮತ್ತು ಕಿರಿಯ ಪುತ್ರ ದೇವದಾಸ್‌ ಸಹ ಇದ್ದರು. ಆದರೆ, ಗಾಂಧೀಜಿ ನಂದಿ ಗಿರಿಧಾಮದ ಎರಡು ತಿಂಗಳು ವಿಶ್ರಾಂತಿ ಅವಧಿಯನ್ನು ದಿಢೀರ್ ಮೊಟಕುಗೊಳಿಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸುತ್ತಾರೆ. ಅವಿಸ್ಮರಣೀಯ ಭೇಟಿ ಮಹಾತ್ಮಾ ಗಾಂಧಿ ಅವರು 1915, 1920, 1927, 1934 ಮತ್ತು 1936ರಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದರು. ಬಾಪುವಿನ ಪ್ರತಿ ಭೇಟಿಯೂ ಕನ್ನಡಿಗರ ಪಾಲಿಗೆ ಅವಿಸ್ಮರಣೀಯ.

author- ಶರತ್‌ ಹೆಗ್ಡೆ

courtsey:prajavani.net

https://www.prajavani.net/artculture/article-features/bengaluru-memories-bapu-668860.html

Leave a Reply