ಬನವಾಸಿ ದೇಶದ ಜಾಲತಾಣದೋಳ್‌!

‘ಯಾರ ಜಪ್ತಿಗೂ ಸಿಗದ ನವಿಲು’ -ದೇವನೂರ ಮಹಾದೇವ ಅವರು ಕನ್ನಡದ ಸಾಹಿತ್ಯಕ್ಕೆ, ದಲಿತ ಸಂವೇದನೆಗೆ, ನಾಡಿನ ಬದುಕಿಗೆ ಹೊಸ ಜೀವಕಳೆ ತುಂಬಿದ ಚೇತನ. ಇವತ್ತಿಗೂ ವರ್ತಮಾನದ ತಲ್ಲಣ, ದುರಿತಗಳಿಗೆ ಸಮರ್ಥ ನೈತಿಕ ದನಿಯಾಗಿ ಸ್ಪಂದಿಸುತ್ತಿರುವುದು, ಮುಕ್ಕಿಲ್ಲದಂತೆ ಅವರು ಕಾಯ್ದುಕೊಂಡು ಬಂದ ಘನ ವ್ಯಕ್ತಿತ್ವಕ್ಕೆ ಸಾಕ್ಷಿ. ಅಂತಹ ಅಪರೂಪದ ಬಹುಮುಖಿ ಚಿಂತನೆಯ ವ್ಯಕ್ತಿತ್ವದ ಕುರಿತು ಅಷ್ಟೇ ಸೂಕ್ಷ್ಮವಾಗಿ ಮತ್ತು ಅಷ್ಟೇ ವಿವರವಾಗಿ ಕಲೆಹಾಕಿ ದಾಖಲಿಸುವ ಹೊಣೆಯನ್ನು ಸದ್ದಿಲ್ಲದೇ ನಿರ್ವಹಿಸುತ್ತಿರುವ ಜಾಲತಾಣವೇ ‘ನಮ್ಮ ಬನವಾಸಿ.ಕಾಂ’(www.nammabanavasi.com). ಹೆಸರು ಹೇಳಲಿಚ್ಛಿಸದ ‘ಬನವಾಸಿಗರು’ ಎಂದು ತಮ್ಮನ್ನು ಕರೆದುಕೊಳ್ಳುವ ಮೈಸೂರಿನ ಗೆಳೆಯರ ಬಳಗವೊಂದು ತೆರೆಮರೆಯಲ್ಲಿದ್ದು ಈ ಕೆಲಸ ಮಾಡುತ್ತಾ ಬಂದಿದೆ. 2014ರ ಡಿಸೆಂಬರ್ 29ರಂದು ಆರಂಭವಾದ ‘ನಮ್ಮ ಬನವಾಸಿ’ಗೆ ಈಗ ಐದು ವರ್ಷ! ಕುವೆಂಪು ಜನ್ಮದಿನದಂದು ಆರಂಭವಾಗಿರುವ ಈ ಜಾಲತಾಣ, ರಸಋಷಿ ಕುವೆಂಪು ಅವರ ಚೇತನದ ಮುಂದುವರಿಕೆಯಾಗಿ ದೇವನೂರರನ್ನು ಕಾಣುತ್ತದೆ ಎಂದರೂ ತಪ್ಪಿಲ್ಲ. ದೇವನೂರರ ಬಲು ಮೆಚ್ಚಿನ ಕವಿ ಪಂಪ. ‘ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೋಳ್’ ಎಂದು ಆಶಿಸಿದ ಪಂಪನ ‘ಬನವಾಸಿ’ ಎಂಬುದು ಮುಪ್ಪುರಿಗೊಂಡ ನಮ್ಮ ಇಡೀ ನಾಡಿನ ಸಂಕೇತವೂ ಹೌದು. ಮಹಾದೇವ ಅವರ ತೋಟದ ಹೆಸರೂ ಹೌದು. ಬಹುಶಃ ಈ ಕಾರಣಕ್ಕೇ ಇರಬಹುದು ಸಾಂಕೇತಿಕವಾಗಿ ಈ ಜಾಲತಾಣಕ್ಕೆ ‘ನಮ್ಮ ಬನವಾಸಿ’ ಎಂದು ಹೆಸರಿಡಲಾಗಿದೆ! ಜಾಲತಾಣವು ವ್ಯಕ್ತಿ ಕೇಂದ್ರಿತವಾಗದೆ ಸಮಷ್ಟಿಯ ಗುರಿಯನ್ನಿಟ್ಟುಕೊಂಡು ದೇವನೂರರ ವ್ಯಕ್ತಿತ್ವಕ್ಕೆ ಯಾವ ವೈಭವೀಕರಣವನ್ನೂ ಆರೋಪಿಸದೇ ಅವರ ಅಪರೂಪದ ಸಾಹಿತ್ಯ ಕಲಾಕೃತಿಗಳನ್ನು, ಅವರು ನಿಜ ಮನಸ್ಸಿನಿಂದ ನಾಡಿನ ಹಿತಕ್ಕಾಗಿ ತುಡಿಯುವ ಚಿಂತನೆಗಳನ್ನು, ಯಥಾವತ್ತಾಗಿ ದಾಖಲಿಸುತ್ತಾ ಬಂದಿದೆ. ವಿಷಯ ನಿಷ್ಠುರತೆ, ನಿಷ್ಠತೆಯೊಂದಿಗೆ ದೇವನೂರರ ಬದುಕಿನೊಂದಿಗೆ ಬೇರ್ಪಡಿಸದಂತೆ ಬೆರೆತು ಹೋದ ಆಳವಾದ ಅಂತಃಕರಣ, ಜಗತ್ತಿನ ಜೀವಿಗಳ ಬಗೆಗೆಲ್ಲ ಸಮಾನವಾಗಿ ಮಿಡಿವ ಕಾರುಣ್ಯ, ಸಮಾನತೆಗಾಗಿ, ಶೋಷಣೆರಹಿತ ಬದುಕಿಗಾಗಿ ಅವಿರತ ದನಿಯೆತ್ತುವ ಅವರ ಹೋರಾಟದ ಬನಿಯನ್ನು ನಮ್ಮ ಬನವಾಸಿಯ ಪುಟ ಪುಟವೂ ಅರಿವಿಲ್ಲದಂತೆ ನಮ್ಮೊಳಗೆ ಇಳಿಸುತ್ತಾ ಹೋಗುತ್ತದೆ ‘ನಮ್ಮ ಬನವಾಸಿ’ ಜಾಲತಾಣದಲ್ಲಿ ಅಂಗಳ, ಹೆಜ್ಜೆಗುರುತು, ಜೀವತಂತು, ಒಡಲಾಳ, ಭಾವಪರದೆ, ಮರುರೂಪಗಳು, ಕುಸುಮಬಾಲೆ ಕಂಡವರು, ಜೊತೆಜೊತೆಗೆ, ಸಹಪಯಣ ಎಂಬ ವಿಭಾಗಗಳಿವೆ. ಎಲ್ಲವೂ ನಮ್ಮನ್ನು ವಿಭಿನ್ನ ಲೋಕಕ್ಕೆ ಕರೆದೊಯ್ದುಬಿಡುತ್ತವೆ. ‘ಅಂಗಳ’ದಲ್ಲಿ ಜಾಲತಾಣದ ಉದ್ದೇಶವನ್ನು ಮನೋಜ್ಞವಾಗಿ ಮತ್ತು ನವಿರಾಗಿ ಕಟ್ಟಿಕೊಡಲಾಗಿದೆ. ‘ಹೆಜ್ಜೆಗುರುತು’ ಪುಟವು ದೇವನೂರ ಅವರ ಬದುಕು, ಸಾಹಿತ್ಯ, ಪ್ರಶಸ್ತಿ, ಗೌರವಗಳ ಕುರಿತ ಸಂಕ್ಷಿಪ್ತ ಪರಿಚಯವನ್ನು ಒಳಗೊಂಡಿದೆ. ‘ಜೀವತಂತು’ ವಿಭಾಗವಂತೂ ನಿಜಕ್ಕೂ ಜಾಲತಾಣದ ಅತ್ಯಂತ ಮಹತ್ವದ ವಿಭಾಗವಾಗಿದೆ. ‘ಕುಸುಮಬಾಲೆ’, ‘ದ್ಯಾವನೂರು’, ‘ಒಡಲಾಳ’, ‘ಎದೆಗೆ ಬಿದ್ದ ಅಕ್ಷರ’ ಹೀಗೆ ಅವರ ನಾಲ್ಕು ಕೃತಿಗಳ ಪೂರ್ಣಪಠ್ಯದ ಪಿಡಿಎಫ್ ಪ್ರತಿ ಮತ್ತು ಇತರ ಬಿಡಿಬರಹಗಳು ಇಲ್ಲಿವೆ. ಇಂಗ್ಲಿಷಿಗೆ ಅನುವಾದವಾದ ಅವರ ಕೆಲ ಬರಹಗಳೂ ಇಲ್ಲಿವೆ. ಹೀಗೆಂದೇ ದೇವನೂರರ ಚಿಂತನೆಗಳನ್ನು ಅರಿಯಲು ಬಯಸುವ ಕನ್ನಡ ಅರಿಯದ ಆಸಕ್ತರೂ ಇದರೊಳ ಹೊಕ್ಕು ಸಿಕ್ಕಿದ್ದನ್ನು ಹೆಕ್ಕುತ್ತಾರೆ! ‘ಒಡಲಾಳ’ ವಿಭಾಗದಲ್ಲಿ ದೇವನೂರ ಅವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿಗಳನ್ನು ಹೆಕ್ಕಿ ಕಟ್ಟಿಕೊಡಲಾಗಿದೆ. ಅವರ ಹಲ ವಿಶೇಷ ಸಂದರ್ಶನಗಳೂ ಈ ವಿಭಾಗದಲ್ಲಿದೆ. ‘ಭಾವಪರದೆ’ ವಿಭಾಗದಲ್ಲಿ ಅವರ ಭಾಷಣಗಳ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ವಿವಿಧ ಸಂದರ್ಭದ ಸ್ಥಿರಚಿತ್ರಗಳ ಸಮ್ಮಿಲನವಿದೆ. ನಿಜಕ್ಕೂ ಇದೊಂದು ನೋಡುಗರ ಬಹುಮೆಚ್ಚಿನ ತಾಣ. ಏಕೆಂದರೆ ಇದರಲ್ಲಿ ಮಹಾದೇವರ ಅಪರೂಪದ ಸಂದರ್ಭದ ಫೋಟೊಗಳು ದಾಖಲಾಗಿವೆ. ‘ಮರುರೂಪಗಳು’ ವಿಭಾಗದಲ್ಲಿ ಇತರರು ಅವರ ಕೃತಿಗಳನ್ನು ಹೊಸ ರೂಪದಲ್ಲಿ ಕಂಡುಕೊಂಡ ವಿವರಗಳಿವೆ. ವಿಮರ್ಶೆಗಳಿವೆ. ಕಟುವಿಮರ್ಶೆಗಳೂ ಇವೆಯೆಂಬುದು ಇನ್ನೂ ವಿಶೇಷ! ‘ಜೊತೆಜೊತೆಗೆ’ ವಿಭಾಗದಲ್ಲಿ ದೇವನೂರ ಮಹಾದೇವ ಅವರನ್ನು ಸಮಕಾಲೀನರು ಬಗೆ ಬಗೆಯಲ್ಲಿ ಕಂಡ ದಾಖಲೀಕರಣವಿದೆ. ನಾಡಿನ ತವಕ, ತಲ್ಲಣ, ಕನಸುಗಳನ್ನು ಸಮಸಂವೇದನೆಯ ಬರಹಗಾರರು ಕಟ್ಟಿಕೊಟ್ಟಿರುವ ದಾಖಲೀಕರಣವಾಗಿ ‘ಸಹಪಯಣ’ ವಿಭಾಗ ನಮ್ಮನ್ನು ಆಕರ್ಷಿಸುತ್ತದೆ. ಸಮಕಾಲಿನ ಕಾಲಘಟ್ಟದ ಸಮಸ್ಯೆಗಳಿಗೆ ತುಡಿಯುವ ಲೇಖನಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಈ ಜಾಲತಾಣವನ್ನು ದೇಶ, ವಿದೇಶದ ಕನ್ನಡಿಗರು ಪ್ರೀತಿಯಿಂದ ಸಂದರ್ಶಿಸುತ್ತಿದ್ದು ಇದುವರೆಗೆ ಎರಡು ಲಕ್ಷಕ್ಕೂ ಅಧಿಕ ನೋಡುಗರು ಇದರ ಒಳಹೊಕ್ಕಿರುವ ದಾಖಲೆ, ನಮ್ಮ ಬನವಾಸಿಯ ಗರಿಮೆಯನ್ನು ಹೆಚ್ಚಿಸಿದೆ. ಮಹಾದೇವ ಅವರ ಪತ್ನಿ ಪ್ರೊ.ಕೆ.ಸುಮಿತ್ರಬಾಯಿ ಅವರ ಆತ್ಮಕಥೆ ‘ಸೂಲಾಡಿ ಬಂದೋ ತಿರುತಿರುಗೀ’ಯ ಕೆಲ ಪುಟಗಳನ್ನು ಇಲ್ಲಿ ದಾಖಲಿಸಲಾಗಿದ್ದು, ಇವುಗಳಲ್ಲಿ ದೇವನೂರರ ವ್ಯಕ್ತಿತ್ವದ ಆಕರ್ಷಕ ಎಳೆಗಳು ಆಪ್ತವಾಗಿ ನೇಯ್ಗೆಯಾಗಿವೆ. ಪ್ರಶಸ್ತಿ, ಗೌರವಗಳನ್ನು ಹಿಂದಿರುಗಿಸಿದ ಸಂದರ್ಭದಲ್ಲಿ ದೇವನೂರರು ಸರ್ಕಾರಕ್ಕೆ ಬರೆದ ಪತ್ರಗಳು, ಪತ್ರಿಕಾಗೋಷ್ಠಿಯ ವಿವರಗಳು ಮುಂತಾದ ಮಹತ್ವದ ದಾಖಲೆಗಳಿದ್ದು, ಸೂಕ್ಷ್ಮ ಸಂವೇದನೆಯ ಬರಹಗಾರರೊಬ್ಬರು ಕಾಲದ ಕರೆಗೆ ಸ್ಪಂದಿಸುವ ದಿಟ್ಟ ನಿಲುವನ್ನು ಅರ್ಥೈಸಿಕೊಳ್ಳುವ ಸಾಧ್ಯತೆಯಾಗಿ ಇದು ನಮಗೆ ಗೋಚರಿಸುತ್ತದೆ. ದೇವನೂರ ಅವರದೇ ಸಾಲುಗಳು….‘ಭೂಮಿಗೆ ಬಿದ್ದ ಬೀಜ/ ಎದೆಗೆ ಬಿದ್ದ ಅಕ್ಷರ/ ಇಂದಲ್ಲ ನಾಳೆ ಫಲಕೊಡುವುದು’. ದೇವನೂರರ ನಿಷ್ಠುರ, ನಿಖರ ಅಭಿಪ್ರಾಯಗಳು, ಚಿಂತನೆಗಳು, ಬದುಕು ಬರಹಗಳ ಬದ್ಧತೆ… ಎದೆಯೊಳಗೆ ಇಳಿದು, ಗಾಢ ಪ್ರತಿರೂಪವೊಂದನ್ನು ನಮ್ಮಲ್ಲಿ ಮರುಸೃಷ್ಟಿಸಬಲ್ಲ ಶಕ್ತಿ ಈ ‘ನಮ್ಮ ಬನವಾಸಿ’ ಜಾಲತಾಣಕ್ಕಿದೆ ಎಂಬುದೇ ಅದರ ವಿಶೇಷತೆ.

author- ವಿಜಯಶ್ರೀ ಹಾಲಾಡಿ

courtsey:prajavani.net

https://www.prajavani.net/artculture/art/nammabanavasi-literature-693512.html

Leave a Reply