ಬಾಹ್ಯಸಂಕೇತಗಳು ಯೋಗಕ್ಕೆ ಕೇವಲ ಪ್ರೇರಕ
ಡಾ. ಆರತೀ ವಿ. ಬಿ.
‘‘ಆಂತರಿಕ ಸಂನ್ಯಾಸ ಅಥವಾ ಕರ್ಮಫಲತ್ಯಾಗ ಮಾಡಿ ಕರ್ಮವೆಸಗುವುದು ‘ಯೋಗ’. ಕರ್ಮಸಂಕಲ್ಪಗಳನ್ನು ತ್ಯಾಗ ಮಾಡದೆ ಇರುವವನು ಯೋಗಿ ಆಗಲಾರ’’ (ಭ.ಗೀ.: 6.2) ಎನ್ನುತ್ತಾನೆ ಕೃಷ್ಣ.
ಯೋಗವು ಕೇವಲ ಬಾಹ್ಯದ ತ್ಯಾಗ-ಯೋಗಗಳ ಲಾಂಛನಗಳಿಂದ ಸಿದ್ಧಿಸುವಂತಹದ್ದಲ್ಲ. ಅಂತರಂಗದ ಕರ್ಮ‘ಸಂಕಲ್ಪ’ಗಳು ಅಳಿದಾಗ ಮಾತ್ರ ಸಿದ್ಧಿಸುವಂತಹದ್ದು. ಹಾಗಾದರೆ ತ್ಯಾಗದ ಲಾಂಛನಗಳಾದ ಕಾವಿಬಟ್ಟೆಗಾಗಲಿ, ಧರ್ಮಸಂಕೇತಗಳಾದ ತ್ರಿಪುಂಡ್ರ, ತಿಲಕ, ಮಾಲೆಗಳಿಗಾಗಲಿ, ವಿಗ್ರಹ, ಪೂಜೆ, ಉತ್ಸವಾದಿಗಳಿಗಾಗಲಿ ಅರ್ಥವೇ ಇಲ್ಲವೆ? ಕೃಷ್ಣನ ಉದ್ದೇಶವು ಆಂತರಿಕ ಸಂನ್ಯಾಸದ ಮಹತ್ವವನ್ನು ಒತ್ತಿ ಹೇಳುವುದೇ ಆಗಿದೆಯೇ ಹೊರತು, ಬಾಹ್ಯಾಚಾರಗಳನ್ನು ‘ತಿರಸ್ಕರಿಸುವುದಲ್ಲ’. ಇದೇ ಗೀತೆಯಲ್ಲೇ ಕೃಷ್ಣನು ಶಾಸ್ತ್ರೋಕ್ತ ಆಚಾರಸಂಹಿತೆಯನ್ನು ಮಹತ್ವವನ್ನು ಎತ್ತಿಹೇಳುವಂತಹ ಶ್ಲೋಕಗಳೂ ಇವೆ. ಅಭಿಪ್ರಾಯವೇನೆಂದರೆ, ‘ಆಂತರಿಕ ತ್ಯಾಗವು ಸರ್ಮಪ್ರಮುಖ, ಬಾಹ್ಯಲಾಂಛನಗಳೇನಿದ್ದರೂ ಇದಕ್ಕೆ ಪೂರಕವಾಗಿ ಇರಬೇಕು’ ಎನ್ನುವುದು.
ಬಾಹ್ಯಲಾಂಛನಗಳಿರುವುದು ನಮ್ಮ ಗಮನವನ್ನು ತ್ಯಾಗ-ಯೋಗಗಳತ್ತ ಪ್ರೇರೇಪಿಸುವುದಕ್ಕಾಗಿ. ಭೌತಿಕ ನೆಲೆಯಲ್ಲೇ ಆಲೋಚಿಸುವ ಮನುಷ್ಯನಿಗೆ ಅಮೂರ್ತತತ್ವವು ಸುಲಭಗ್ರಾಹ್ಯವಲ್ಲ. ಹಾಗಾಗಿ ಮೂರ್ತಸಂಕೇತಗಳನ್ನು ಆಶ್ರಯಿಸುವುದು ಅವನಿಗೆ ಅನಿವಾರ್ಯ. ಉದಾಹರಣೆಗೆ, ಕಾಲವೆನ್ನುವುದು ಅಮೂರ್ತ. ಆದರೂ ಭೂತ-ವರ್ತಮಾನ-ಭವಿಷ್ಯಕಾಲಗಳ, ಕ್ಷಣ, ನಿಮಿಷ, ಘಂಟೆ, ದಿನ, ವಾರ, ತಿಂಗಳು, ವರ್ಷಗಳ ಲೆಕ್ಕಾಚಾರಗಳನ್ನಿಟ್ಟುಕೊಂಡೇ ವ್ಯವಹರಿಸುತ್ತೇವಷ್ಟೆ? ಗಣಿತದ ಆಲ್ಜಿಬ್ರಾದಲ್ಲಿ ‘ಇದರ ಮೌಲ್ಯ ಎಕ್ಸ್ ಎಂದು ಇಟ್ಟುಕೊಳ್ಳೋಣ’’ ಎಂದೇ ಲೆಕ್ಕ ಪ್ರಾರಂಭವಾಗುತ್ತದೆ. ಎಕ್ಸ್ ಎನ್ನುವ ಅಕ್ಷರಕ್ಕೆ ಸ್ವತಃ ‘ಮೌಲ್ಯ’ವೇನೂ ಇಲ್ಲ. ಆದರೂ ಅದಿಲ್ಲದೆ ಲೆಕ್ಕವೇ ಮುಂದುವರಿಯದು!
ಕಲಾವಿದನು ಸಂಗೀತವನ್ನು ಪ್ರಸ್ತುತಪಡಿಸುವಾಗ, ಅಮೂರ್ತ ಶ್ರುತಿ-ಲಯಗಳನ್ನು ಆಧಾರಶ್ರುತಿಯಲ್ಲೂ, ನಿರ್ದಿಷ್ಟ ರಾಗ ತಾಳಗಳಲ್ಲೂ ಕಟ್ಟಿ ಮಂಡಿಸುವುದಿಲ್ಲವೆ? ಹಾಗೆ ಮಾಡದೆ ಆತನ ಸಂಗೀತ ಶ್ರಾವ್ಯವಾಗುವುದಾದರೂ ಹೇಗೆ? ಹೀಗೆ ಸಂಕೇತಗಳು ಮಹತ್ವದ ಪಾತ್ರ ವಹಿಸುತ್ತವೆ. ನಾಮರೂಪಾತೀತ ಪರಮಾತ್ಮನ ಅನುಸಂಧಾನಕ್ಕೂ ಮೂರ್ತಸಂಕೇತಗಳು ಪ್ರೇರಕಗಳು. ಮಾನವಮತಿಗೆ ಸಂಕೇತಗಳ ಅನಿವಾರ್ಯತೆ ಎಂತಹದ್ದೆಂದರೆ ‘ಮೂರ್ತಿ’ಯನ್ನು ವಿರೋಧಿಸುವವರೂ ಮಕ್ಕಾಗೋ, ಶಿಲುಬೆಗಳಂತಹ ಸಂಕೇತಗಳಿಗೋ ನಿಷ್ಠೆ ತೋರುತ್ತಾರೆ! ಒಟ್ಟಿನಲ್ಲಿ ತತ್ವದ ನೆಲೆಗೇರುವ ತನಕ ಸಂಕೇತಗಳು ನಮ್ಮನ್ನು ಧ್ಯೇಯದತ್ತ ಗಮನ ಹರಿಸುವಂತೆ ಪ್ರೇರೇಪಿಸುತ್ತವೆ. ಈ ತಥ್ಯ ಅರಿತ ಸನಾತನ ಧರ್ಮದಲ್ಲಿ ಸಂಕೇತಗಳಿಗೆ ಸ್ವಾತಂತ್ರ್ಯ ಹೆಚ್ಚು.
ವಿಗ್ರಹ, ಶಾಲಗ್ರಾಮ, ಲಿಂಗ ಮುಂತಾದವು ಭಗವಂತನ ದೃಶ್ಯಸಂಕೇತಗಳಾದರೆ; ಬೀಜಾಕ್ಷರಗಳು, ಮಂತ್ರ, ಸ್ತೋತ್ರಾದಿಗಳು ಶಬ್ದಸಂಕೇತಗಳು. ಕಾವಿ, ಬಿಳಿ, ರೇಷ್ಮೆ ಬಟ್ಟೆಗಳು ಸಾಂಕೇತಿಕ ವೇಷಗಳಾದರೆ; ತ್ರಿಪುಂಡ್ರ, ತಿಲಕ, ವಿಭೂತಿ, ಮಾಲೆಗಳು ಸಾಂಕೇತಿಕ ಭೂಷಗಳು. ಉಪವಾಸ, ಬ್ರಹ್ಮಚರ್ಯ, ಜಾಗರಣೆ ಮುಂತಾದವು ಆತ್ಮನಿಗ್ರಹಕ್ಕೆ ಸ್ಮಾರಕಗಳು. ಹೀಗೆಯೇ ಸಂನ್ಯಾಸದೀಕ್ಷೆಗೂ ಕಾವಿಬಟ್ಟೆ, ಮುಂಡನ, ತ್ರಿಪುಂಡ್ರ, ತಿಲಕ, ರುದ್ರಾಕ್ಷ, ತುಳಸೀಮಾಲೆಗಳು, ಏಕಾಂತವಾಸ, ಮಠದಲ್ಲಿ ವಾಸ ಮುಂತಾದ ತ್ಯಾಗದ ಕೆಲವು ಬಾಹ್ಯಲಾಂಛನಗಳು ವಿಹಿತವಾಗಿವೆ. ಇವೆಲ್ಲ ಪ್ರತಿಕ್ಷಣವೂ ‘ತಾನು ತ್ಯಾಗಿ, ಕಾವಿಬಣ್ಣದ ಅಗ್ನಿಯಂತೆ ಪವಿತ್ರವಾಗಿರಬೇಕು’ ಎನ್ನುವುದನ್ನು ಸಂನ್ಯಾಸಿಗೆ ನೆನಪಿಸುತ್ತವೆ. ಜಪ ಮಾಡುವಾಗ ಅಲ್ಲಿಲ್ಲಿ ಸಂಚರಿಸುವ ಮನಸ್ಸು, ಕೈಯಲ್ಲಿನ ಜಪಮಾಲೆಯನ್ನು ಕಂಡಾಗ ಎಚ್ಚರಗೊಂಡು ಮತ್ತೆ ಧ್ಯೇಯದತ್ತ ಮರುಕಳಿಸುತ್ತದಲ್ಲ! ಇವೆಲ್ಲದರಿಂದ ಸಂನ್ಯಾಸಿಯ ಅಂತರಂಗವು ಪ್ರಖರವೈರಾಗ್ಯವನ್ನು ಹೊಂದಿ ಆತ್ಮಸಂಸ್ಥಿತಿಗೇರಬೇಕು ಎನ್ನುವುದು ಉದ್ದೇಶ. ಸಂನ್ಯಾಸಿಯು ಜನ-ಧನ ಸಂಗದಲ್ಲಿ ಧ್ಯೇಯ ಮರೆತರೆ, ಸಂನ್ಯಾಸಕ್ಕೇ ಅರ್ಥವುಳಿಯದು. ಯೋಗಸಿದ್ಧಿ ದೂರದ ಮಾತು. ಅದಲ್ಲದೆ ಪೂಜಿಸುವ ಅದೇ ಜನರೇ ಕಾವಿಯುಟ್ಟವನನ್ನು ತೀವ್ರವಾಗಿ ಗಮನಿಸುತ್ತಲೂ ಇರುತ್ತಾರೆ ಎನ್ನುವುದನ್ನು ಮರೆಯಬಾರದು! ಒಟ್ಟಿನಲ್ಲಿ ‘ಸಂಕೇತವು ಮುಖ್ಯವಾದರೂ, ಅದಕ್ಕಿಂತ ಅದು ಪ್ರತಿನಿಧಿಸುವ ತತ್ವವು ಅದಕ್ಕಿಂತ ಮುಖ್ಯ’ ಎನ್ನುವುದು ತಾತ್ಪರ್ಯ.
ಸಮಸ್ಯೆಯಾಗುವುದು ಸಂಕೇತಗಳ ಬಗ್ಗೆ ಅತೀವ ಮಮಕಾರ ಬೆಳೆಸಿಕೊಂಡು ಅದು ಲಕ್ಷಿಸುವ ತತ್ವವನ್ನೇ ಮರೆತಾಗ! ಜಶಾಲಗ್ರಾಮಪೂಜಕರು ವಿಷ್ಣುಧ್ಯಾನಕ್ಕಿಂತ ವೈಷ್ಣವೇತರರ ದ್ವೇಷದಲ್ಲೇ ಮೈಮರೆತಾಗ! ಲಿಂಗಪೂಜಕರು ಶಿವಧ್ಯಾನಕ್ಕಿಂತ ಶೈವೇತರರ ನಿಂದೆಯಲ್ಲೇ ಕಾಲ ಕಳೆದಾಗ! ಕಾವಿಯುಟ್ಟವರು ತತ್ವಚಿಂತನೆಯಲ್ಲಿ ಮುಳುಗದೆ ಜನ-ಧನಸಂಗದಲ್ಲಿ ಮೈಮರೆತಾಗ! ಕಾಮಕ್ರೋಧಾದಿಗಳಿಗೆ ವಶವಾಗಿ ಸಾಮಾನ್ಯರಂತೆ ವರ್ತಿಸಿದಾಗ! ಡಿಗ್ರಿಯನ್ನು ಗಿಟ್ಟಿಸಿಕೊಂಡೂ ಜ್ಞಾನವನ್ನು ಸಂಪಾದಿಸದ ಢೋಂಗಿಗಳಂತೆ ಇವರು! ಹಾಗಾಗಿ ಬಾಹ್ಯಸಂಕೇತಗಳು ಸಾಧನೆಗೆ ಉತ್ತಮ ಉಪಕರಣಗಳೇ ಆದರೂ, ‘ಅಷ್ಟಕ್ಕೇ ಎಲ್ಲ ಸಿದ್ಧಿಸದು’ ಎನ್ನುವುದನ್ನು ಮರೆಯಬಾರದು. ಅವು ಸಂಕೇತಿಸುವ ತತ್ವವೇ ಪ್ರಮುಖ. ತತ್ವವನ್ನೇ ಮರೆತರೆ ಸಂಕೇತವು ಅರ್ಥಹೀನ. ಹಾಗಾಗಿ ಆಂತರ್ಯದಲ್ಲಿ ‘ಕರ್ಮಫಲಾಸಕ್ತಿಯನ್ನು ತ್ಯಾಗ ಮಾಡುವುದೇ ನಿಜವಾದ ಸಂನ್ಯಾಸ, ನಿಜವಾದ ಯೋಗಸಿದ್ಧಿ’ ಎಂದು ಗೀತಾಚಾರ್ಯನು ಒತ್ತಿಹೇಳುತ್ತಿದ್ದಾನೆ.
(ಲೇಖಕರು ಸಂಶೋಧಕರು, ಸಂಸ್ಕೃತಿ ಚಿಂತಕರು)