ಬದುಕು ಜಟಕಾ ಬಂಡಿ… ವಿಧಿಯದರ ಸಾಹೇಬ….”
“ನಾನೊಬ್ಬ ವಿಫಲ ಉದ್ಯಮಿ…. ಯೌವುದೂ ನನ್ನ plan ನಂತೆ ನಡೆಯಲಿಲ್ಲ. ಇದಕ್ಕೆ ಕೇವಲ ನಾನೇ ಹೊಣೆ ನನ್ನಾಸ್ತಿ ವಿವರ ಕೊಟ್ಟಿದ್ದೇನೆ. ಅದನ್ನು ಮಾರಿ ತಲುಪಿಸಬೇಕಾದವರಿಗೆ ಹಣ ತಲುಪಿಸಿ”
ಇದು ಸಾಯುವ ಮುನ್ನ ಉದ್ಯಮಿ ಸಿದ್ಧಾರ್ಥ ಬರೆದರು ಎನ್ನಲಾದ ಪತ್ರ… ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಉದ್ಯಮಿಯೊಬ್ಬರ ಈ ದುರಂತ ಬದುಕು ದೈವದ ಮುಂದೆ ಮನುಷ್ಯ ಎಷ್ಟೊಂದು ದುರ್ಬಲ ಎನ್ನುವದನ್ನು ನೆನಪಿಸುತ್ತದೆ. ಯಕ್ಷ ಯಮನಿಗೆ ಕೇಳಿದ “ಜಗತ್ತಿನಲ್ಲಿ ಅತ್ಯಂತ ಆಶ್ಚರ್ಯಕರ ಸಂಗತಿ ಯಾವುದು” ಎಂಬ ಪ್ರಶ್ನೆಗೆ ಧರ್ಮರಾಯ ಕೊಟ್ಟ ಉತ್ತರ ಪದೇ ಪದೇ ನೆನಪಾಗುತ್ತದೆ.” ಪ್ರತಿದಿನ ಯಮನ ಮನೆಗೆ ಸಾಲುಸಾಲಾಗಿ ಮನುಷ್ಯರು ಹೋಗುತ್ತಲೇ ಇರುತ್ತಾರೆ. ಆದರೆ ಮನುಷ್ಯ ಮಾತ್ರ ತಾನು ಹಾಗೂ ತನ್ನದೆಲ್ಲವೂ ಇಲ್ಲಿ ಶಾಶ್ವತ ಎಂಬಂತೆ ಬದುಕಿರುತ್ತಾನೆ. ಇದೊಂದು ಮಹದಚ್ಚರಿಯ ಸಂಗತಿ.” ಇದು ಎಲ್ಲರಿಗೂ ಗೊತ್ತಿರುವ ಸತ್ಯವೇ. ಆದರೆ ಮನುಷ್ಯನ ಅಹಂ ಅದನ್ನು ಮರೆಸುತ್ತದೆ.
ಸಿದ್ದಾರ್ಥ ಶ್ರೀಮಂತ ಹಿನ್ನೆಲೆಯಿಂದ ಬಂದವರು. ಸಾಕಷ್ಟು ಪ್ರಾಮಾಣಿಕ ಪ್ರಯತ್ನದಿಂದ ಸಾಮ್ರಾಜ್ಯ ಕಟ್ಟಿಕೊಂಡವರು… ಅನ್ಯಾಯದ ದಾರಿ ಹಿಡಿದು ಗಳಿಸಿದ ಹಿನ್ನೆಲೆಯಿಲ್ಲ. ಆದರೂ ಅವರನ್ನು ಎಲ್ಲಿ ದಾರಿ ತಪ್ಪಿಸಿತು ಹೇಳಲು ಅವರಿಲ್ಲ… ಗಳಿಸಿದ ಸಂಪತ್ತು ಸಾಲವನ್ನು ಮೀರಿ ಇದ್ದಾಗ ಇನ್ನೂ 60 ಆಸುಪಾಸು ಇರುವ ಉದ್ಯಮಿಗೆ ಮತ್ತೊಂದು ಅವಕಾಶಕ್ಕೆ ಹಲವಾರು ದಾರಿಗಳಿದ್ದವು. ಬೆಂಬಲಕ್ಕೆ ತುಂಬು ಸಂಸಾರವಿತ್ತು ಆದರೂ ದೈವದ ಕೈ ಮೇಲಾಗಿ ದುರಂತದಲ್ಲಿ ಕೊನೆಕೊಂಡದ್ದು ಮಾತ್ರ ಅನ್ಯಾಯದ ಪರಮಾವಧಿ.
ಉಳಿದುದೆಲ್ಲವನ್ನೂ ಇದ್ದಲ್ಲಿಯೇ ಬಿಟ್ಟು ಬದುಕಿನ ಬಗ್ಗೆ ಯೋಚಿಸಿದಾಗ ಅಚ್ಚರಿಯಾಗುತ್ತದೆ. ಹಣವೇ ಎಲ್ಲವೂ ಅಲ್ಲ ಎಂಬುದು ಪದೇ ಪದೇ ಬದುಕು ಸಾಬೀತಾ ಪಡಿಸುತ್ತಲೇ ಇರುತ್ತದೆ. ಅಧಿಕಾರ, ಆಡಳಿತವೂ ಅಂತಿಮವಲ್ಲ ಎಂಬುದನ್ನು ಬಹು ದಿನದ ಆಶೆಯ ಕಳಿಂಗ ಯುದ್ಧ ಗೆದ್ದ ಮೇಲೂ ಎಲ್ಲತೊರೆದು ಸನ್ಯಾಸಿಯಾದ ಅಶೋಕ ಹೇಳಿದ್ದಾನೆ. ಹೆಂಡತಿಯ ರೂಪ, ಮುದ್ದಾದ ಮಗೂವೂ, ಯಾವ ಸಾಂಸಾರಿಕ ಬಂಧನಗಳೂ ವೈರಾಗ್ಯ ಗೆಲ್ಲಲಾರವು ಎಂಬುದನ್ನು ರಾಜಕುಮಾರ ಸಿದ್ಧಾರ್ಥ ತೋರಿಸಿದ್ದಾನೆ. ಎಲ್ಲರ ಕನಸಾಗಿರಬಹುದಾದ ಇಂಗ್ಲಂಡಿನ ಅರಸೊತ್ತಿಗೆಯೂ, ವೈಯಕ್ತಿಕ ಸ್ವಾತಂತ್ರ್ಯದ ಮುಂದೆ ನಗಣ್ಯ ಎಂಬುದನ್ನು ಪ್ರಿನ್ಸೆಸ್ ಡಯಾನಾ ಅರಮನೆ ತೊರೆದು ಧೃಡಪಡಿಸಿದ್ದಾಳೆ. ತನ್ನ ಒಂದು ಕುಡಿನೋಟದಿಂದಲೇ ಇತಿಹಾಸ ಸೃಷ್ಟಿಸಿದ ಮರ್ಲಿನ್ ಮನ್ರೋಳ ಬದುಕಿನ ದುರಂತ ದೈವದ ಮುಂದೆ ಯಾರೂ ನಿಲ್ಲಲಾರರು ಎಂಬುದನ್ನು ನೆನಪಿಸುತ್ತಲೇ ಇರುತ್ತದೆ… ಎಷ್ಟೋ ದಶಕಗಳ ಕಾಲ ಬಾಲಿವುಡ್
ಆಳಿದ ಅಸಂಖ್ಯಾತ ಚಲುವೆಯರ ಚಲುವೂ ಬಯಸಿದ್ದನ್ನು ಬದುಕಿನಲ್ಲಿ ಕೊಡಲಾರದೆಂಬುದನ್ನು ಒತ್ತಿ ಒತ್ತಿ ಹೇಳುತ್ತಲೇ ಇರುತ್ತದೆ.
ಹಾಗಾದರೆ ಬದುಕಿನ ಸತ್ಯವಾವುದು…? “ದೇವರು ಮನುಷ್ಯನಿಗೆ ಎಲ್ಲವನ್ನೂ ಕೊಟ್ಟ…. ತೃಪ್ತಿಯೊಂದನ್ನು ಮರೆತುಬಿಟ್ಟ” ಎಂದು ಹೇಳುವ ಇಂಗ್ಲಿಷ ಕವಿತೆಯೊಂದು ಇದೆ. ಅದೇ ನಿಜ ಎನಿಸುತ್ತದೆ. ಎನೆಲ್ಲ ಇದ್ದರೂ. ಇದ್ದುದೆಲ್ಲವ ಬಿಟ್ಟು ಇರದೇ ಇರುವದರ ಕಡೆಗೆ ತುಡಿಯುವುದೇ ಜೀವನ ಎಂದು ಕವಿವಾಣಿಯೊಂದು ಹೇಳುತ್ತದೆ. ಅದೇ ನಿತ್ಯ ಸತ್ಯ ವಿರಬಹುದೇನೋ! ಎಲ್ಲೋ ಅಪರೂಪಕ್ಕೊಬ್ಬರಿಗೆ ತಮ್ಮ ಮನಸ್ಸಿಗೊಪ್ಪಿದ ಕನಸಿನ ಜೀವನ ಸಿಗಬಹುದು…. ಉಳಿದವರ ಕಥೆ ಕಂಡಂತೆ ಇರುವದೇಯಿಲ್ಲ…
ಮನುಷ್ಯನೊಬ್ಬ ವರ್ಷವೊಂದರಲ್ಲಿ ಅಂದಾಜು ಹತ್ತು ಸಾವಿರ ಸುಳ್ಳುಗಳನ್ನು ಹೇಳುತ್ತಾನಂತೆ ಅವುಗಳಲ್ಲಿ ಒಂಬತ್ತು ಸಾವಿರಕ್ಕೂ ಒಂಬತ್ತು ಸಾವಿರಕ್ಕೂ ಮಿಕ್ಕಿ ಒಂದೇ ಸುಳ್ಳು ಪನರಾವರ್ತಿತವಾಗುತ್ತಿರುತ್ತದಂತೆ. ‘ನಾನು ಅತ್ಯಂತ ಆರಾಮಾಗಿದ್ದೇನೆ…. ಸಂತೋಷದಿಂದಿದ್ದೇನೆ’ ಎಂಬುಂದೊಂದು ಮಾತಿದೆ…. ಮುಖ ನೋಡಲು ಕನ್ನಡಿಯಿದ್ದಂತೆ, ಮನಸ್ಸು ನೋಡಲೂ ಒಂದು ಕನ್ನಡಿ ಇರಬಾರದಿತ್ತೇ?