ಉತ್ತರ ಭಾರತದಲ್ಲಿ ತುಳಸಿ ದಾಸರ ರಾಮಾಯಣ ರಾಮಚರಿತ ಮಾನಸವೂ ಅತಂತ್ಯ ಜನಪ್ರಿಯ ಕೃತಿ. ಶ್ರೀ ಕೃಷ್ಣನ ಬಾಲ ಲೀಲೆಗಳಂತೆ, ರಾಮನ ಬಾಲ ಲೀಲೆಗಳು ಅಷ್ಟಾಗಿ ಪ್ರಚಲಿತವಿಲ್ಲ.
ಭಾಗವತದ ದಶಮಸ್ಕಂದದಲ್ಲಿ ಶ್ರೀ ಕೃಷ್ಣನ ಸಂಪೂರ್ಣ ಬಾಲ ಲೀಲೆಯ ವರ್ಣನೆಯಂತೆ, ಗೊಸ್ವಾಮಿ ತುಳಸಿದಾಸರ ರಾಮಚಂದ್ರ ಮಾನಸದಲ್ಲಿ ಅಂತ್ಯಂತ ಮನ ಮುಟ್ಟುವಂತೆ ಪುಟ್ಟ ರಾಮನ, ಮಾತಾ ಕೌಶಲ್ಯಾಳ, ತಂದೆ ದಶರಥನ ತಮ್ಮಂದಿರಾದ ಲಕ್ಷ್ಮಣ ಭರತ ಶತ್ರುಘ್ನರ ಜೊತೆ ಅಯೋಧ್ಯಯ ಅಂತಃಪುರದಲ್ಲಿ ಆಟ ಆಡುವ, ಅಳುವ, ನಗುವ ಹಠ ಮಾಡಿ ಯಾರ ಕೈಗೆ ಸಿಗದೆ ಓಡುವ ರಾಘವನ ಬಾಲ್ಯವನ್ನು ಬಹಳ ಪ್ರೀತಿ ಉಂಟಾಗುವಂತೆ ರಚಿಸಿದ್ದಾರೆ.
ತುಳಸಿ ದಾಸರು ಹೇಳುತ್ತಾರೆ….
ಚಿಕ್ಕಂದಿನಿಂದ ಲಕ್ಷ್ಮಣನಿಗೆ ಅಣ್ಣ ರಾಮನೆಂದರೆ ಬಲು ಪ್ರೀತಿಯಂತೆ, ಭರತ ಶತ್ರುಘ್ನರ ಸ್ವಾಮಿ ರಾಮನ ಹಿಂದೆ ಮುಂದೆ ಓಡಾಡುತ್ತಿದ್ದರು . ನಾಲ್ಕೂ ರಾಜಕುವರರು ಗುಣಶೀಲರಾಗಿದ್ದರು, ರೂಪವಂತರಾಗಿದ್ದರೂ ಸಹ ರಾಮನ ಮುಖದ ತೇಜ ಅಲೌಕಿಕವಾಗಿತ್ತು.
ರಾಮನ ತಾಯಿ ಕೌಶಲ್ಯಾ, ಮಗು ರಾಮನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಮುದ್ದಾಡುತಿದ್ದಳಂತೆ, ಮಗು ಕಿರಿ ಕಿರಿ ಮಾಡಿದ ತಕ್ಷಣ ಎತ್ತಿ ಬೆಳ್ಳಿಯ, ಕಲಾಕುಸುರಿಯ ತೊಟ್ಟಿಲಿಗೆ ಹಾಕಿ ‘ಪ್ಯಾರೆ ಲಲ್ಲಾ’ ಎನ್ನುತ್ತಾ, ಮುದ್ದು ಮುಖವನ್ನೇ ದಿಟ್ಟಿಸುತ್ತ ಮಾತೃತ್ವದ ಉತ್ಕಟ ಪ್ರೇಮದಿಂದ ಜೋಗುಳ ಹಾಡುತ್ತಾ ತೂಗುತಿದ್ದಳು. ಇಲ್ಲಿ ತುಳಿಸಿ ದಾಸರು ರಾಮನ ಈ ಲೇಲೆ ನೋಡುತ್ತಾ ಚಕಿತರಾಗುತ್ತಾರೆ, ಯಾವ ಶ್ರೀ ರಾಮನು ಜಗದ್ದವ್ಯಾಪಕನು, ನಿರ್ಗುಣನು, ವಿನೋದ ರಹಿತನು, ಹುಟ್ಟು- ಸಾವು ಇರದ ಅಜನ್ಮಿ ಅವನನ್ನು ಕೌಶಲ್ಯೆ ತನ್ನ ಪ್ರೇಮ ಪಾಶದಲ್ಲಿ ಸುತ್ತಿ, ತೊಟ್ಟಿಲ್ಲಲ್ಲಿ ಮಲಗಿಸಿ ತೂಗುತ್ತಿರುವಳಲ್ಲ ಎಂದು ಸಂತಸದ ಜೊತೆಗೆ ವಿಸ್ಮಯಗೊಳ್ಳುತ್ತ ಹೇಳುತ್ತಾರೆ.
ತೊಟ್ಟಿಲ್ಲಲ್ಲಿ ಆಡುವ ಮುದ್ದು ಮುಖದ ರಾಮನು ನೋಡಲು ಹೇಗಿದ್ದಾ ಎಂದು ವರ್ಣಿಸುತ್ತಾ, ಮಗುವಿನ ಕರ್ಣಗಳು ಹಾಗು ಕೆನ್ನೆ ಬಹಳ ಸುಂದರವಾಗಿದ್ದವಂತೆ.
श्री रामचन्द्र कृपालु भजुमन हरण भवभय दारुणं
नव कंज लोचन कंज मुख कर कंज पद कंजारुणं ॥
ತುಳಸಿದಾಸರ ಪ್ರಸಿದ್ದ ಕೀರ್ತನೆಯಲ್ಲಿಯೂ, ರಾಮನ ರೂಪವನ್ನು ವರ್ಣಿಸಿದ್ದಾರೆ, ಅವನ ಕಣ್ಣುಗಳು ಕಮಲದಂತೆ, ಮುಖ ಹಾಗು ಪಾದ ಹಸ್ತಗಳು ಕೆಂಪು ಕಮಲದಂತೆ ಸುಕೋಮಲವಾಗಿದ್ದವು ಎಂದು ಹೇಳುತ್ತಾರೆ.
ಕೆಂಪಾದ ತುಟಿಗಳ ಒಳಗೆ ಎರಡೇ ಎರಡು ಪುಟ್ಟ ಹಲ್ಲುಗಳು, ಆ ನೀಳ ಮೂಗು ಹಾಗು ಹಣೆಯ ತಿಲಕದ ವರ್ಣನೆಯಂತೂ ನನಗಲ್ಲ ಯಾರಿಗೂ ಮಾಡಲು ಶಕ್ಯವಿಲ್ಲ ಎಂದು ಕವಿ ಸೋತು ಹೇಳುತ್ತಾರೆ. ಪುಟ್ಟ ಕಂದ ರಾಮನಿಗೆ ಗುಂಗುರು ಕೇಶ , ಅವರ ಅಮ್ಮ ಆ ಕೇಶಗಳನ್ನು ಹಿಡಿದು ವಿಧ ವಿಧವಾಗಿ ಹೆಣೆದು, ಅವನ ಮುಖಕ್ಕೆ ಇನ್ನಷ್ಟು ಮುದ್ದಾಗಿ ಕಾಣುವಂತೆ ಮಾಡಿದ್ದಳು ಎನ್ನುತ್ತಾರೆ. ಮಗು ಪೀತಾಂಬರ ಹಾಕಿ ಅಂಬೆಗಾಲು ಇಡುತ್ತಾ ನೆಲದ ಮೇಲೆಲ್ಲಾ ಅಡ್ಡಾಡುತ್ತಿದ್ದ ದೃಶ್ಯ ಎಷ್ಟು ಮನಮೋಹಕವಾಗಿತ್ತೆಂದರೆ ಅದನ್ನು ವೇದಗಳು ವರ್ಣಿಸಲು ಅಸಾಧ್ಯ ಎಂದು ಹೇಳುತ್ತಾರೆ.
ಒಂದು ಸಾರಿ ತಾಯಿ ಕೌಶಲ್ಯ, ತನ್ನ ಪುಟ್ಟ ರಾಮನಿಗೆ ಸ್ನಾನ ಮಾಡಿಸಿ, ಅಲಂಕಾರ ಮಾಡಿ ತೊಟ್ಟಿಲ್ಲಲ್ಲಿ ಮಲಗಿಸಿ, ತಮ್ಮ ಕುಲದೇವರ ಪೂಜೆ ಯಲ್ಲಿ ತೊಡಗಿದ್ದಳು. ನೈವೇದ್ಯವನ್ನು ಇಟ್ಟು, ಅಡುಗೆಮನೆಯತ್ತ ನಡೆದಳು, ಸ್ವಲ್ಪ ಸಮಯದ ನಂತರ ಬಂದು ನೋಡಿದಾಗ, ಪುಟ್ಟ ಮಗು, ಇಷ್ಟದೇವರಿಗೆ ಇಟ್ಟ ನೈವಿದ್ಯವನ್ನು ತಿನ್ನುತ್ತಿದೆ. ಈ ದೃಶ್ಯ ನೋಡಿ ತಾಯಿಗೆ ಗಾಬರಿಯಾಯಿತು, ಇದೇನು ಮಗುವನ್ನು ತೊಟ್ಟಿಲಿನಿಂದ ಯಾರು ಕೆಳಗೆ ಇಳಿಸಿದ್ದು ಎಂದು ತೊಟ್ಟಿಲಿನತ್ತ ನೋಡಿದರೆ, ಅಲ್ಲಿ ಮಗು ರಾಮ ನಿದ್ರಿಸುತ್ತಿದ್ದಾನೆ, ಮತ್ತೆ ದೇವರ ಕೋಣೆಯಲ್ಲಿ ನೈವೇದ್ಯ ನೆಕ್ಕುತ್ತಿದ್ದಾನೆ. ಇದೇನು ಮಾಯೆ, ನನಗೆ ಎಲ್ಲಿ ನೋಡಿದರೂ ರಾಮನೆ ಕಾಣುತ್ತಿದ್ದಾನೆಯೇ, ಇದು ನನ್ನ ಭ್ರಮೆಯೇ ಎಂದು ದಿಗ್ಬ್ರಮೆಯಾಗಿ ಓಡಾಡುತ್ತಾಳೆ. ಇವಳ ಅವಸ್ಥೆ ನೋಡಿ ರಾಮನು ಮುದ್ದಾದ ಮುಗುಳುನಗೆ ಬೀರಿ , ತನ್ನ ವಿಶ್ವರೂಪ ದರ್ಶನ ತೋರುತ್ತಾನೆ . ಆ ರೂಪದಲ್ಲಿ ತುಳಸಿದಾಸರು ಹೇಳುವಂತೆ ಒಂದೊಂದು ರೋಮದಲ್ಲಿ ಕೋಟಿ ಬ್ರಹ್ಮಾಂಡಗಳಿದ್ದವು, ಅಗಣಿತ ಸೂರ್ಯ ಚಂದ್ರರು,, ಅಸಂಖ್ಯ ಪರ್ವತ ಶ್ರೇಣಿ, ಹಲವಾರು ನದಿಗಳು, ಭೂಮ್ಯಾಕಾಶ, ಪಾತಾಳವೆಲ್ಲ ಅವನಲ್ಲಿ ಕಂಡಿತು. ಮಗುವಿನ ಈ ವಿರಾಟ ರೂಪ ನೋಡಿ ತಾಯಿ ಗಾಬರಿಯಿಂದ ಕೈ ಮುಗಿದು ನಿಂತಳು, ಅವಳ ದೇಹ ಪುಳಕಗೊಂಡು, ಮುಚ್ಚಿದ ಕಂಗಳಲ್ಲಿ ನೀರು ಹರಿಯುತ್ತಿತ್ತು. ಅಮ್ಮನನ್ನು ನೋಡಿ, ಮತ್ತೆ ಪುಟ್ಟ ಬಾಲಕನಾಗಿ ನಿಂತ.” ಏನಿದು ನಿನ್ನ ಮಾಯೆ ಸ್ವಾಮಿ” ಎಂದು ಹೇಳುತ್ತಿದ್ದ ತಾಯಿಯ ಕೈ ಮಗು ಹಿಡಿದಾಗ, ನೋಡಿದ್ದನ್ನ ಮರೆತು ಮತ್ತೆ ವಾಸ್ತವಕ್ಕೆ ಬಂದಳು.
ಮಗು ದೊಡ್ಡದಾದಂತೆ, ಅದಕ್ಕೆ ಚೌಲ ಶಾಸ್ತ್ರ( ಚೂಡಾಕರ್ಮ )ಮಾಡಿಸಿದರು, ಗುರಿಹಿರಿಯರಿಗೆ ದಾನ ದಕ್ಷಿಣೆ ಕೊಟ್ಟರು. ನಾಲ್ಕು ಮುದ್ದು ಮಕ್ಕಳು ತಮ್ಮ ಬಾಲಪರಾಕ್ರಮ ತೋರಿಸುತ್ತ ಬೆಳೆದರು. ತುಳಸಿದಾಸರು ರಾಮಾಯಣದ ಬಾಲಕಾಂಡವನ್ನು ವರ್ಣಿಸುತ್ತಾ, ತಂದೆ ದಶರಥನ ವೃತಾಂತವನ್ನು ಬಲು ಸುಂದರವಾಗಿ ಕಣ್ಣಿಗೆ ಕಟ್ಟುವಂತೆ ಹಾಡಿದ್ದಾರೆ
मन क्रम बचन अगोचर जोई। दसरथ अजिर बिचर प्रभु सोई॥ भोजन करत बोल जब राजा। नहिं आवत तजि बाल समाजा ॥ ॥ कौसल्या जब बोलन जाई। ठुमुकु ठुमुकु प्रभु चलहिं पराई ॥ निगम नेति सिव अंत न पावा। ताहि धरै जननी हठि धावा ॥
ತಂದೆ ದಶರಥನು ಮಗು ರಾಮನನ್ನು ನೋಡದೆ ಎಂದೂ ಊಟ ಮಾಡುತ್ತಿರಲಿಲ್ಲವಂತೆ.” ಎಲ್ಲಿ ನನ್ನ ಮುದ್ದು ರಾಮ ಅವನನ್ನು ಕರೆದುತಾ” ಎಂದು ರಾಣಿ ಕೌಶಲ್ಯಗೆ ಹೇಳಿದರೆ, ತಾಯಿ ಅಸಹಾಯಕಳಾಗಿ,” ರಾಮ ತನ್ನ ಗೆಳೆಯ ವೃಂದದ ಜೊತೆಗೆ ಆಟದಲ್ಲಿ ಮಗ್ನನಾಗಿದ್ದಾನೆ ಮಹಾರಾಜ ಕರೆದರೂ’ ಓ’ಗೋಡುತ್ತಿಲ್ಲ, ಬೆನ್ನಟ್ಟಿ ಹಿಡಿದುತರಲು ಹೋದರೆ ಓಡಿ ಹೋಗಿ ನನ್ನನ್ನು ಸತಾಯಿಸುತ್ತಿದ್ದಾನೆ ಎಂದು ಹೇಳುತ್ತಾಳೆ. ಆಗ ದಶರಥನೇ ಸ್ವಯಂ, ಪುಟ್ಟ ರಾಮನನ್ನು…ಹೆ, ರಾಘವ….ಹೆ, ರಾಘವ್ ಎಂದು ಕೂಗುತ್ತಾನೆ, ತಂದೆಯ ಮಾತನ್ನು ಗಮನಿಸದೆ ‘ಠುಮಕ’, ‘ಠುಮಕ’ ಎಂದು ಹೆಜ್ಜೆ ಇಡುತ್ತಾ, ಗೆಜ್ಜೆಯ ಮುದ್ದಾದ ಸದ್ದು ಮಾಡುತ್ತಾ ಮುಂದೆ ಮುಂದೆ ಹೋಗುತ್ತಾನೆ, ಕೌಶಲ್ಯೆಗಂತೂ ರಾಮ ಲಲ್ಲಾನ ಮೇಲೆ ಮುನಿಸು, ಅವಳು ಹಿಡಿಯಲು ಹೋದರೆ, ಪುಟ್ಟ ರಾಮ ದೂರ ದೂರ ಓಡುತ್ತಾನೆ.
ಈ ದೃಶ್ಯವನ್ನು ರಚಿಸುತ್ತ ತುಳಸಿ ದಾಸರು ಹೇಳುತ್ತಾರೆ, ಯಾವ ಶ್ರೀ ರಾಮ ಚಂದ್ರನ ವೇದಗಳು ನೇತಿ ( ಇಷ್ಟೇ ಅಲ್ಲ ) ಎಂದು ನಿರೂಪಿಸುತ್ತವೆಯೋ, ಸ್ವತಃ ಶಿವನಿಗೇ ಶ್ರೀರಾಮನ ಆದಿ ಅಂತ್ಯದ ಅರಿವಿಲ್ಲ ಎನ್ನುವಾಗ ಅಂತಹ ಶ್ರೀರಾಮನನ್ನು ಕೌಶಲ್ಯೆ ಬೆನ್ನಟ್ಟಿ ಹಿಡಿಯಲು ಹೊರಟಿಹಳಲ್ಲ ಎಂದು ನಗುತ್ತಾರೆ.
ಕೊನೆಗೆ ತಾಯಿಯ ಕೈಗೆ ಸಿಕ್ಕ ರಾಮ ಮಣ್ಣಿನಲ್ಲಿ ಆಡಿದ ಕಾರಣ ಧೂಳ ಮಣ್ಣು ಮೆತ್ತಿಕೊಂಡು ಬಂದ ತುಂಟ ರಾಮನನ್ನು ಎತ್ತಿ ಮುದ್ದಾಡುತ್ತಾ, ಆಯೋಧ್ಯೆಯ ಮಹಾರಾಜಾ ತನ್ನ ಮಡಿಲಲ್ಲಿ ಕೂರಿಸಿಕೊಂಡು ಊಟ ಮಾಡುತ್ತಾರೆ ಎಂದು ತಂದೆ ಮಗನ ಮುದ್ದಾಟದ ವೈಖರಿಯನ್ನು, ಅವರಲ್ಲಿದ್ದ ಸಲುಗೆಯನ್ನು ಹೇಳುತ್ತಾರೆ.
धूसर धूरि भरें तनु आए। भूपति बिहसि गोद बैठाए ॥
ಊಟ ಮಾಡುವಾಗ ರಾಮನ ಮುಖಕ್ಕೆ ಮೆತ್ತಿದ ಅನ್ನ, ಎಳೆ ತುಟಿಗಳಿಂದ ಮಮ್ಮು ಉಣ್ಣುವಾಗ ಕೈಬಾಯಿಗೆ ಸವರಿದ ಅನ್ನದ ಆಗಳುಗಳು, ಅವನ ಮುಖಾರವಿಂದಕೆ ಇನ್ನಷ್ಟು ಅಕ್ಕರೆ ಬರುವಂತೆ ಮಾಡಿದ್ದವು ಎಂದು ಸಚಿತ್ರವಾಗಿ ತಮ್ಮ ಪದವಿಲಾಸದಿಂದ ಹೇಳುತ್ತಾರೆ.
ಮುಂದೆ ರಾಮ ಕಿಶೋರನಾದಂತೆ ಅವನ ಹಾಗು ತಮ್ಮಂದಿರ ಉಪನಯನ ಸಂಸ್ಕಾರ ಮಾಡುತ್ತಾರೆ ಮತ್ತು ವಿದ್ಯಾಭ್ಯಾಸಕ್ಕೆ ಗುರುಕುಲಕ್ಕೆ ಕಳುಹಿಸಿಕೊಡುತ್ತಾರೆ. ಶ್ರೀರಾಮನಿಗೆ ಕೆಲವೇ ದಿನಗಳಲ್ಲಿ ಸಕಲ ವಿದ್ಯಗಳಲ್ಲಿ ಪಾರಂಗತನಾದ ಎಂದು ತುಳಸಿ ದಾಸರನ್ನುತ್ತಾರೆ,
जाकी सहज स्वास श्रुति चारी। सो हरि पढ़ यह कौतुक भारी ॥
ಇದರಲ್ಲೇನು ಆಶ್ಚರ್ಯ, ಯಾವ ಸ್ವಾಮಿಯ ಶ್ವಾಸದಿಂದ ವೇದಗಳ ಉತ್ಪತ್ತಿ ಆಗುತ್ತವೆ ಅಂತಹ ರಾಮನಿಗೆ ವಿದ್ಯೆ, ಓದು,ಅಧ್ಯಯನ ಬೇಕೆ, “ಭಲಾ ಭಗವಾನ್ ಕೋ ಕೌನ್ ಪಡಾಸಕ್ತಾ ಹೈ “ ಎಂದು ಉದ್ಗಾರ ಮಾಡುತ್ತಾರೆ.
ಶ್ರೀರಾಮನು ಬಿಲ್ಲು ಬಾಣ ಹಿಡಿದ ರೂಪವನ್ನು ನೋಡಿ ಆಯೋಧ್ಯಯ ಪ್ರಜೆಗಳು ಸಂತೋಷ ಹೇಳ ತೀರದಂತೆ, ಅವನ ರೂಪ ಯಾರನ್ನಾದರೂ ಮೊಹಗೊಳಿಸುವಂತಿತ್ತು. ಶ್ರೀರಾಮನು ಅಷ್ಟು ಸಣ್ಣ ವಯಸ್ಸಿನಲ್ಲಿಯೇ ಗುರುಮುಖೇನ ಮನಸ್ಸುಗೊಟ್ಟು ವೇದ ಪುರಾಣಗಳನ್ನು ಆಲಿಸುತ್ತಿದ್ದನಂತೆ , ಅದನ್ನೇ ವಿವರವಾಗಿ ತಮ್ಮಂದಿರಿಗೆ ಉಪದೇಶಿಸುತ್ತಿದ್ದನಂತೆ.
ದಿನನಿತ್ಯದ ತಮ್ಮ ಕರ್ತವ್ಯಕ್ಕೆ ಹೋಗುವ ಮುಂಚೆ, ನಸುಕಿನಲ್ಲಿ ಎದ್ದು, ತಂದೆ ತಾಯಿಗೆ, ಗುರುಹಿರಿಯರಿಗೆ ನಮಸ್ಕರಿಸುತ್ತಿದ್ದರಂತೆ, ತುಳಸಿದಾಸರು ಹೇಳುತ್ತಾರೆ, ಶ್ರೀರಾಮನು ಸ್ವರ್ವವಂದ್ಯ ಆದರೆ ಅವನು ಮನುಷ್ಯರಿಗೆ ವಿಹಿತ ಕರ್ಮಾಚರಣೆಗಳನ್ನು ಕಲಿಸಲು ತಾನೇ ಮಾಡಿ ತೋರಿಸುತ್ತಿದ್ದಾನೆ, ಇದೆ ಭಗವಂತನ ಲೇಲೆ. ಪ್ರಪಂಚದಲ್ಲಿನ ಸುಖ, ತಂದೆತಾಯಿ ಗುರುಗಳ ಪಾದದಡಿಯಲ್ಲಿ ಇರುತ್ತದೆ, ಯಾರು ಹಿರಿಯರನ್ನು ಗೌರವದಿಂದ ಕಾಣುತ್ತಾರೋ ಅವರಿಗೆ ಆಯುಷ್ಯ, ಆರೋಗ್ಯ, ವಿದ್ಯಾ, ಬಲ, ಯಶಸ್ಸು ವೃದ್ಧಿಸುತ್ತವೆ ಎಂದು ತುಳಸಿ ದಾಸರು, ರಾಮನ ಜೈಜೈಕಾರ ಮಾಡುತ್ತಾ ಅವನ ಬಾಲ ರಾಮನ ಬಾಲ್ಯದ ಸುಂದರ ಚಿತ್ರಣವನ್ನು ತಮ್ಮ ಆಪೋರಕ್ಷ ಜ್ಞಾನದಿಂದ ವರ್ಣಿಸುತ್ತಾರೆ.